ಅ.21ರಂದು ವಿಧಾನಪರಿಷತ್ ಉಪಚುನಾವಣೆ: ಉಡುಪಿ ಜಿಲ್ಲೆಯಲ್ಲಿ ಕಸ್ತೂರಿರಂಗನ್ ವರದಿಗೆ ವಿರೋಧದ ಸದ್ದು
ಉಡುಪಿ: ಕರ್ನಾಟಕ ವಿಧಾನಪರಿಷತ್‌ನ ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರದ ದ್ವೈವಾರ್ಷಿಕ ಚುನಾವಣಾ ಕ್ಷೇತ್ರಕ್ಕೆ ಉಪಚುನಾವಣೆ ಅ.21ರಂದು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ ನಡೆಯಲಿದ್ದು, ಶಾಂತಿಯುತ ಮತದಾನಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಉಡುಪಿ ಜಿಲ್ಲಾ ಮಟ್ಟದಲ್ಲಿ ಕೈಗೊಳ್ಳಲಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿಯಾಗಿರುವ ಅಪರ ಜಿಲ್ಲಾಧಿಕಾರಿ ಮಮತಾದೇವಿ ಜಿ.ಎಸ್. ತಿಳಿಸಿದ್ದಾರೆ.
ಪ್ರಸ್ತುತ ಉಡುಪಿ ಜಿಲ್ಲೆಯ ಕೆಲವು ಗ್ರಾಮ ಪಂಚಾಯತ್‌ಗಳ ಸದಸ್ಯರು ರಾಜ್ಯದಲ್ಲಿ ಕಸ್ತೂರಿ ರಂಗನ್ ವರದಿಯಿಂದ ತಮ್ಮ ಗ್ರಾಮಗಳನ್ನು ಕೈಬಿಡುವಂತೆ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕೋರಿ, ಇಲ್ಲದಿದ್ದರೆ ಉಪಚುನಾವಣೆಯಲ್ಲಿ ಮತದಾನವನ್ನು ಬಹಿಷ್ಕರಿಸುವುದಾಗಿ ಮನವಿಗಳನ್ನು ನೀಡಿದ್ದಾರೆ ಎಂದು ಮಮತಾದೇವಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪ್ರಸ್ತುತ ಚುನಾವಣಾ ಪ್ರಕ್ರಿಯೆ ನಡೆಯುತಿದ್ದು, ಚುನಾವಣಾ ಪ್ರಕ್ರಿಯೆ ಮುಗಿದ ನಂತರದಲ್ಲಿ ಕಸ್ತೂರಿ ರಂಗನ್ ವರದಿ ಬಗ್ಗೆ ಹಾಗೂ ತಮ್ಮ ವಿವಿಧ ಬೇಡಿಕೆಗಳನ್ನು ಸರಕಾರದ ಗಮನಕ್ಕೆ ತರಲಾಗುವುದು. ಆದ್ದರಿಂದ ಚುನಾವಣಾ ಬಹಿಷ್ಕಾರವನ್ನು ಕೈಬಿಡುವಂತೆ ಹಾಗೂ ಸೋಮವಾರ ನಡೆಯುವ ಮತದಾನದ ವೇಳೆ ತಮ್ಮ ತಮ್ಮ ಮತಗಟ್ಟೆಗಳಿಗೆ ತೆರಳಿ ಮತದಾನ ಮಾಡುವಂತೆ ಸಂಬಂಧಪಟ್ಟ ಗ್ರಾಪಂಗಳ ಸದಸ್ಯ ಮತದಾರರಲ್ಲಿ ಮನವಿ ಮಾಡಿದ್ದಾರೆ.
ಜಿಲ್ಲೆಯಲ್ಲಿ ಕುಂದಾಪುರ, ಬೈಂದೂರು, ಕಾರ್ಕಳ, ಹೆಬ್ರಿ ತಾಲೂಕುಗಳ ಸುಮಾರು 37 ಗ್ರಾಮಗಳು ಕಸ್ತೂರಿರಂಗನ್ ವರದಿಯಲ್ಲಿ ಬಾಧಿತವಾಗುವ ಪಟ್ಟಿಯಲ್ಲಿವೆ. ಇವುಗಳಲ್ಲಿ ಹಲವು ಗ್ರಾಪಂಗಳು ತಮ್ಮ ಗ್ರಾಮಗಳನ್ನು ವರದಿಯ ಪಟ್ಟಿಯಿಂದ ಕೈಬಿಡುವಂತೆ ಒತ್ತಾಯಿಸಿದ್ದು, ಇಲ್ಲದಿದ್ದರೆ ಮತದಾನವನ್ನು ಬಹಿಷ್ಕರಿಸುವುದಾಗಿ ತಿಳಿಸಿವೆ. ಇವುಗಳಲ್ಲಿ ಮುಧೂರು, ಗೋಳಿಹೊಳೆ, ಜಡ್ಕಲ್, ಹಳ್ಳಿಹೊಳೆ, ಆಲೂರು, ಚಿತ್ತೂರು, ಎಡಮೊಗೆ, ವಂಡ್ಸೆ, ಅಮಾಸೆಬೈಲು, ಶೇಡಿಮನೆ, ಮಡಾಮಕ್ಕಿ, ಬೆಳ್ವೆ ಗ್ರಾಪಂಗಳು ಸೇರಿವೆ.
ಈ ಗ್ರಾಪಂಗಳ ಸದಸ್ಯರು ತಮ್ಮ ನಿಲುವಿಗೆ ಗಟ್ಟಿಯಾಗಿ ನಿಂತರೆ, ಈಗಾಗಲೇ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್‌ಗಳಿಗೆ ಚುನಾಯಿತ ಸದಸ್ಯರಿಲ್ಲದೇ ಸೊರಗಿರುವ ಈ ಚುನಾವಣೆ, ಗ್ರಾಪಂ ಸದಸ್ಯರ ಬೆದರಿಕೆಯಿಂದ ಇನ್ನಷ್ಟು ಸೊರಗುವುದು ಗ್ಯಾರಂಟಿ. ಕೊನೆಯ ಕ್ಷಣದಲ್ಲಿ ರಾಜಕೀಯ ಪಕ್ಷಗಳು ಸದಸ್ಯರ ಮನ ಒಲಿಸಲಿವೆ ಎಂಬುದರ ಮೇಲೆ ಇದು ನಿಂತಿದೆ.
ಈ ಚುನಾವಣೆಯಲ್ಲಿ ಮತ ಚಲಾಯಿಸುವ ಅರ್ಹತೆ ಹೊಂದಿರುವ ಮತದಾರರ ಒಟ್ಟು ಸಂಖ್ಯೆ 6032. ಇವರಲ್ಲಿ ಉಡುಪಿ ಜಿಲ್ಲೆಯಲ್ಲಿ 2480 ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 3552 ಮತದಾರರಿದ್ದಾರೆ. ಉಡುಪಿ ಜಿಲ್ಲೆಯ 158 ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ 234 ಮತಗಟ್ಟೆಗಳಲ್ಲಿ ಸೋಮವಾರ ಮತದಾನ ನಡೆಯಲಿವೆ.
ಜಿಲ್ಲೆಯಲ್ಲಿ 30 ಸೂಕ್ಷ್ಯ ಮತಗಟ್ಟೆಗಳು: ಉಡುಪಿ ಜಿಲ್ಲೆಯ 158 ಮತಗಟ್ಟೆಗಳಲ್ಲಿ 30ನ್ನು ಸೂಕ್ಷ್ಮಮತಗಟ್ಟೆಗಳೆಂದು ಗುರುತಿಸಲಾಗಿದೆ. ಅದೇ ರೀತಿ ದಕ್ಷಿಣ ಕನ್ನಡದ 234 ಮತಗಟ್ಟೆಗಳಲ್ಲಿ 23ನ್ನು ಸೂಕ್ಷ್ಮ ಮತಗಟ್ಟೆಯಾಗಿ ಗುರುತಿಸಲಾಗಿದೆ.
ಉಡುಪಿ ಜಿಲ್ಲಾ ವ್ಯಾಪ್ತಿಯ 158 ಮತಗಟ್ಟೆ ಕೇಂದ್ರಗಳಿಗೆ ಕಾದಿರಿಸಿದ ಸಿಬ್ಬಂದಿಗಳು ಸೇರಿದಂತೆ ಒಟ್ಟು 165 ತಂಡಗಳಲ್ಲಿ 660 ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಗೂ ಮೈಕ್ರೋ ವೀಕ್ಷಕರಾಗಿ 14 ಅಧಿಕಾರಿಗಳನ್ನು ನಿಯೋಜನೆಗೊಳಿಸಲಾಗಿದೆ. ಕ್ಷಿಣ ಕನ್ನಡ ಜಿಲ್ಲೆಗೆ ಸಂಬಂಧಪಟ್ಟಂತೆ 234 ಮತಗಟ್ಟೆ ಕೇಂದ್ರಗಳಿಗೆ 243 ತಂಡಗಳಲ್ಲಿ 972 ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಗೂ ಮೈಕ್ರೋ ವೀಕ್ಷಕರಾಗಿ 32 ಅಧಿಕಾರಿಗಳನ್ನು ನಿಯೋಜಿಸಲಾಗಿದೆ.
ಅದೇ ರೀತಿ ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ 328 ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನೂ, ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ 540 ಮಂದಿಯನ್ನು ನಿಯೋಜಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಸೋಮವಾರ ಮತದಾನಕ್ಕೆ ಅರ್ಹರಾದ 6032 ಮತದಾರರು ಮತಗಟ್ಟೆಗೆ ಬರುವಾಗ ಮತದಾರರ ಗುರುತಿನ ಪುರಾವೆ ಬಗ್ಗೆ ಮತದಾರರ ಗುರುತು ಚೀಟಿ (ಓಟರ್ ಐಟಿ) ಅಥವಾ ಸ್ಥಳೀಯ ಪ್ರಾಧಿಕಾರದ ಸದಸ್ಯರು ಎಂಬ ಬಗ್ಗೆ ವಿತರಿಸಲಾದ ಗುರುತಿನ ಚೀಟಿಯನ್ನು ಮಾತ್ರ ದಾಖಲೆಯಾಗಿ ಪರಿಗಣಿಸಲಾಗುವುದು. ಆದ್ದರಿಂದ ಎಲ್ಲರೂ ಕಡ್ಡಾಯವಾಗಿ ಈ ಎರಡು ದಾಖಲೆಗಳನ್ನು ಮಾತ್ರ ಮತದಾನದ ವೇಳೆ ಹಾಜರು ಪಡಿಸುವಂತೆ ಸೂಚಿಸಲಾಗಿದೆ. ಇತರ ಯಾವುದೇ ದಾಖಲೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಮತ ಚಲಾಯಿಸಲು ಮತಗಟ್ಟೆ ಅಧಿಕಾರಿಗಳು ಮತಪತ್ರದೊಡನೆ ನಿಮಗೆ ನೀಡುವ ನೇರಳೆ ಬಣ್ಣದ ಪೆನ್ನನ್ನು ಮಾತ್ರ ಬಳಸಿ ಮತ ಚಲಾಯಿಸಲು ಅವಕಾಶವಿದೆ. ಬೇರೆ ಇತರೆ ಯಾವುದೇ ಪೆನ್ನು ಅಥವಾ ಗುರುತು ಮಾಡುವ ಸಾಧನವನ್ನು ಬಳಸಿ ಮತ ಚಲಾಯಿಸಿದರೆ ಅದನ್ನು ಅಸಿಂಧು ಮತ ಎಂದು ಪರಿಗಣಿಸಲಾಗುವುದು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಮತದ ಪ್ರಾಶಸ್ತ್ಯವನ್ನು ಅಭ್ಯರ್ಥಿಯ ಹೆಸರಿನ ಮುಂದೆ 1,2,3 ಇತ್ಯಾದಿ ಕ್ರಮದಲ್ಲಿ ಅಂಕಿಗಳ ಮೂಲಕ ಮಾತ್ರ ಗುರುತು ಹಾಕಬೇಕು. ಇದರ ಬದಲಾಗಿ ಒಂದು, ಎರಡು, ಮೂರು ಇತ್ಯಾದಿ ಅಕ್ಷರಗಳ ಮೂಲಕ ಬರೆಯುವಂತಿಲ್ಲ ಎಂದು ಮತದಾರರಿಗೆ ಸೂಚನೆಯನ್ನೂ ನೀಡಲಾಗಿದೆ.
ಹಳ್ಳಿಹೊಳೆ, ಎಡಮೊಗೆಯಲ್ಲಿ ಅತಿ ಕಡಿಮೆ, ಶಿರೂರಿನಲ್ಲಿ ಅತ್ಯಧಿಕ ಮತದಾರರು
ಉಡುಪಿ ಜಿಲ್ಲೆಯಲ್ಲಿ ಶಿರೂರು ಗ್ರಾಪಂನಲ್ಲಿ ಅತ್ಯಧಿಕ ಹಾಗೂ ಹಳ್ಳಿಹೊಳೆ ಮತ್ತು ಎಡಮೊಗೆ ಗ್ರಾಪಂನಲ್ಲಿ ಅತಿಕಡಿಮೆ ಮತದಾರರಿದ್ದಾರೆ. ಈ ಚುನಾವಣೆಯಲ್ಲಿ ಲೋಕಸಭಾ ಸದಸ್ಯರು, ವಿಧಾನಸಭಾ ಸದಸ್ಯರು, ವಿಧಾನ ಪರಿಷತ್ ಸದಸ್ಯರು, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್ ಹಾಗೂ ಗ್ರಾಮ ಪಂಚಾಯತ್ ಸದಸ್ಯರು ಮಾತ್ರ ಮತ ಚಲಾಯಿಸುವ ಅರ್ಹತೆಯನ್ನು ಹೊಂದಿದ್ದಾರೆ.