ಮಣಿಪಾಲದ ಮಾಹೆಯಲ್ಲಿ ವಿಶ್ವ ಫಿಸಿಯೋಥೆರಪಿ ದಿನಾಚರಣೆ: ಡಾ.ಯು.ಟಿ.ಇಫ್ತಿಕರ್ ಫರೀದ್‌ಗೆ ಅಭಿನಂದನೆ

Update: 2024-09-09 15:57 GMT

ಮಣಿಪಾಲ, ಸೆ.9:ರಾಜ್ಯ ಸರಕಾರದಿಂದ ಇತ್ತೀಚೆಗೆ ಕರ್ನಾಟಕ ರಾಜ್ಯ ಅಲೈಡ್ ಆ್ಯಂಡ್ ಹೆಲ್ತ್‌ಕೇರ್ ಮಂಡಳಿಯ ಅಧ್ಯಕ್ಷರಾಗಿ ನಿಯುಕ್ತಿಗೊಂಡ ಡಾ.ಯು.ಟಿ. ಇಫ್ತಿಕರ್ ಫರೀದ್ ಅವರನ್ನು ಫಿಸಿಯೋಥೆರಪಿ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆ ಮತ್ತು ಕರ್ನಾಟಕದ ಆರೋಗ್ಯ ವ್ಯವಸ್ಥೆಯಲ್ಲಿ ಅವರ ಸಮರ್ಥ ನಾಯಕತ್ವಕ್ಕಾಗಿ ಮಾಹೆ ವತಿಯಿಂದ ಇಂದು ಸನ್ಮಾನಿಸಲಾಯಿತು.

ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ)ನ ಘಟಕವಾಗಿರುವ ಮಣಿಪಾಲ್ ಕಾಲೇಜ್ ಆಫ್ ಹೆಲ್ತ್ ಪ್ರೊಫೆಶನಲ್ಸ್ (ಎಂಸಿಎಚ್‌ಪಿ)ನ ಫಿಸಿಯೋಥೆರಪಿ ವಿಭಾಗವು ಇಂದು ವಿಶ್ವ ಫಿಸಿಯೋಥೆರಪಿ ದಿನವನ್ನು ಆಚರಿಸಿದ್ದು ಈ ಸಂದರ್ಭದಲ್ಲಿ ಡಾ.ಇಫ್ತಿಕರ್ ಅವರನ್ನು ಅವರ ಸಾಧನೆಗಾಗಿ ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಗೌರವ ಅತಿಥಿಯಾಗಿ ಭಾಗವಹಿಸಿದ್ದ ಮಾಹೆಯ ಸಹ ಕುಲಪತಿ (ಆರೋಗ್ಯ ವಿಜ್ಞಾನ) ಡಾ. ಶರತ್ ಕೆ.ರಾವ್, ಡಾ.ಇಫ್ತಿಕರ್ ರನ್ನು ಈ ಸ್ಥಾನಕ್ಕೆ ನೇಮಕ ಮಾಡಿರುವುದಕ್ಕೆ ಅಭಿನಂದಿಸಿದಲ್ಲದೇ, ಈ ವೃತ್ತಿಯನ್ನು ಮುನ್ನಡೆಸುವಲ್ಲಿ ಅವರ ಅವಿರತ ಪ್ರಯತ್ನಗಳನ್ನು ಶ್ಲಾಘಿಸಿದರು.

ಡಾ. ಇಫ್ತಿಕರ್ ಫಿಸಿಯೋಥೆರಪಿ ಮತ್ತು ಅಲೈಡ್ ಹೆಲ್ತೆಕೇರ್ ಕ್ಷೇತ್ರದ ಉನ್ನತಿಗೆ ಕಾರಣರಾಗಿದ್ದಾರೆ. ಅಧ್ಯಕ್ಷರಾಗಿ ಅವರ ನೇಮಕವು ಈ ವೃತ್ತಿಯನ್ನು ಉತ್ತೇಜಿಸುವಲ್ಲಿ ಅವರ ಅವಿರತ ಪ್ರಯತ್ನಗಳ ಪ್ರತಿಬಿಂಬವಾಗಿದೆ. ಅವರ ಹೊಸ ಪಾತ್ರದಲ್ಲಿ ಅವರು ಕರ್ನಾಟಕದಾದ್ಯಂತ ಆರೋಗ್ಯ ರಕ್ಷಣೆಯ ಗುಣಮಟ್ಟವನ್ನು ಹೆಚ್ಚಿಸುವ ಮಹತ್ವದ ಬದಲಾವಣೆಗಳನ್ನು ತರುತ್ತಾರೆ ಎಂಬ ಬಗ್ಗೆ ನನಗೆ ವಿಶ್ವಾಸವಿದೆ ಎಂದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಡಾ.ಯು.ಟಿ. ಇಫ್ತಿಕರ್ ಫರೀದ್, ಕರ್ನಾಟಕದಾದ್ಯಂತ ಆರೋಗ್ಯ ಸೇವೆಯನ್ನು ವಿಸ್ತರಿಸುವ ತಮ್ಮ ದೃಷ್ಟಿಕೋನ ವನ್ನು ಹಂಚಿಕೊಂಡರು. ಅಧ್ಯಕ್ಷರಾಗಿ ತಮ್ಮ ಮೇಲೆ ಇಟ್ಟಿರುವ ನಂಬಿಕೆಯನ್ನು ಹುಸಿಗೊಳಿಸದೇ, ರಾಜ್ಯದ ಹೆಲ್ತ್‌ಕೇರ್ ಕ್ಷೇತ್ರದಲ್ಲಿ ಸುಧಾರಣೆ ಗಳನ್ನು ತರಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಹೇಳಿದರು.

ಅಲೈಡ್ ಹೆಲ್ತ್‌ಕೇರ್ ವ್ಯವಸ್ಥೆಯನ್ನು ಬಲಪಡಿಸುವ ಮತ್ತು ರಾಜ್ಯದ ಆರೋಗ್ಯ ರಕ್ಷಣೆಯಲ್ಲಿ ಫಿಸಿಯೋಥೆರಪಿ ವಿಶೇಷ ಪಾತ್ರ ವಹಿಸುವುದನ್ನು ಖಚಿತಪಡಿಸುವ ಭರವಸೆಯನ್ನು ನೀಡಿದರು. ಫಿಸಿಯೋಥೆರಪಿಸ್ಟ್‌ಗಳು ತಮ್ಮ ವೃತ್ತಿಯಲ್ಲಿ ಅಭಿವೃದ್ಧಿ ಸಾಧಿಸಲು ತಾವು ಹಾಕಿಕೊಂಡ ಯೋಜನೆಗಳನ್ನು ಅವರು ವಿವರಿಸಿದರು. ಇದಕ್ಕಾಗಿ ಆಧುನೀಕ ತರಬೇತಿ ಕಾರ್ಯಕ್ರಮ ಗಳನ್ನು ಪರಿಚಯಿಸಲು ಮತ್ತು ಶೈಕ್ಷಣಿಕ ಸಂಸ್ಥೆಗಳು ಮತ್ತು ಆರೋಗ್ಯ ಪೂರೈಕೆದಾರರ ನಡುವೆ ಸಹಯೋಗದ ಯೋಜನೆಗಳನ್ನು ವಿವರಿಸಿದರು.

ಮಾಹೆ ಕುಲಪತಿ ಲೆ.ಜ. ಡಾ. ಎಂ. ಡಿ. ವೆಂಕಟೇಶ್ ಮಾತನಾಡಿ, ಕರ್ನಾಟಕ ರಾಜ್ಯ ಅಲೈಡ್ ಮತ್ತು ಹೆಲ್ತ್‌ಕೇರ್ ಕೌನ್ಸಿಲ್‌ಗೆ ಡಾ.ಇಫ್ತಿಕರ್ ಅವರ ನೇಮಕ ಪ್ರತಿಷ್ಠಿತ ಸಾಧನೆಯಾಗಿದೆ. ಇದನ್ನು ಮುನ್ನಡೆಸುವ ಮತ್ತು ಸಕಾರಾತ್ಮಕ ಬದಲಾವಣೆಯನ್ನು ತರುವ ಅವರ ಸಾಮರ್ಥ್ಯವು ಕರ್ನಾಟಕದಲ್ಲಿ ಅಲೈಡ್‌ಕೇರ್ ಸೇವೆಗಳ ಗುಣಮಟ್ಟ ಮತ್ತು ಪ್ರವೇಶ ವನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.

ಮಾಹೆಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್ ಮಾತನಾಡಿ, ಡಾ. ಯು. ಟಿ. ಇಫ್ತಿಕರ್ ಫರೀದ್, ಫಿಸಿಯೋಥೆರಪಿ ಕ್ಷೇತ್ರಕ್ಕೆ ಸಲ್ಲಿಸಿರುವ ವಿಶೇಷ ಕೊಡುಗೆಗಳಿಂದಾಗಿ ಸರಕಾರ ಅವರನ್ನು ಗುರುತಿಸಿ ಸೂಕ್ತ ಸ್ಥಾನಮಾನ ನೀಡಿದೆ. ಅಧ್ಯಕ್ಷರಾಗಿ ಅವರ ನೇಮಕ, ಫಿಸಿಯೋಥೆರಪಿ ಕ್ಷೇತ್ರಕ್ಕೆ ಮಹತ್ವದ ಸಾಧನೆಯಾಗಿದೆ. ಅವರ ಅಧಿಕಾರಾವಧಿಯಲ್ಲಿ ಮಾಹೆ ಅವರಿಗೆ ನಿರಂತರ ಬೆಂಬಲ ನೀಡಲಿದೆ ಎಂದರು.

ವಿಶ್ವ ಫಿಸಿಯೋಥೆರಪಿ ದಿನಾಚರಣೆಯ ಪ್ರಯುಕ್ತ ಆಯೋಜಿಸಿದ ಈ ಕಾರ್ಯಕ್ರಮದಲ್ಲಿ ಮಾಹೆ-ಮಂಗಳೂರು ಕ್ಯಾಂಪಸ್‌ನ ಪ್ರೊ ವೈಸ್ ಚಾನ್ಸಲರ್ ಡಾ. ದಿಲೀಪ್ ನಾಯಕ್, ಮಾಹೆಯ ಬೋಧಕ ಆಸ್ಪತ್ರೆಯ ಮುಖ್ಯ ನಿರ್ವಹಣಾಧಿಕಾರಿ ಡಾ ಆನಂದ್ ವೇಣುಗೋಪಾಲ್, ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಅಲ್ಲದೇ ಮಣಿಪಾಲ್ ಕಾಲೇಜ್ ಆಫ್ ಹೆಲ್ತ್ ಪ್ರೊಫೆಶನ್ಸ್‌ನ ಪ್ರಮುಖರು ಉಪಸ್ಥಿತರಿದ್ದರು.

ಎಂಸಿಎಚ್‌ಪಿಯ ಡೀನ್ ಡಾ. ಜಿ.ಅರುಣ್ ಮಯ್ಯ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಡಾ. ಜಾನ್ ಸೋಲೋಮನ್ ವಂದಿಸಿ, ಡಾ.ಅಬ್ರಹಾಂ ಸಾಮ್ಯುವೆಲ್ ಬಾಬು ಕಾರ್ಯಕ್ರಮ ನಿರೂಪಿಸಿದರು.



 


Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News