ಸರಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸುವುದು ಸ್ಥಳೀಯ ಜನಪ್ರತಿನಿಧಿಗಳ ಕೆಲಸ: ಯು ಟಿ ಖಾದರ್

Update: 2024-08-29 08:31 GMT

ಉಳ್ಳಾಲ : ಕಡಿಮೆ ಅನುದಾನದಲ್ಲಿ ಅತಿ ಹೆಚ್ಚು ಸವಲತ್ತುಗಳೊಂದಿಗೆ ರಾಜ್ಯಕ್ಕೆ ಮಾದರಿಯಾಗಿ ಜಲಾಲ್ ಬಾಗ್ ಅಂಗನವಾಡಿ ಕೇಂದ್ರ ನಿರ್ಮಾಣಗೊಂಡಿದ್ದು, ಇದು ಊರಿನ ಜನರ ಗೌರವ ಹಾಗೂ ಸ್ವಾಭಿಮಾನದ ಸಂಕೇತ ಎಂದು ವಿಧಾನಸಭಾ ಅಧ್ಯಕ್ಷ ಯು.ಟಿ ಖಾದರ್ ಹೇಳಿದರು.

ಅವರು ಕೋಟೆಕಾರು ಪಟ್ಟಣ ಪಂಚಾಯತ್ ವ್ಯಾಪ್ತಿಯ ವಾಡ್೯ ಸಂಖ್ಯೆ 12 ರ ಜಲಾಲ್ ಬಾಗ್ 2 ನೇ ಅಡ್ಡ ರಸ್ತೆ ಬಳಿ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ (ಮುನ್ಸಿಪಾಲಿಟಿ) ಯೋಜನೆಯ ರೂ.10 ಲಕ್ಷ ಅನುದಾನದಡಿ ನಿರ್ಮಿಸಿದ ಅಂಗನವಾಡಿ ಕಟ್ಟಡದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಹಲವು ವರ್ಷಗಳಿಂದ ಬಾಡಿಗೆ ಮನೆಯನ್ನು ರಚಿಸಿ ಮಕ್ಕಳಿಗಾಗಿ ಊರವರೇ ಸೇರಿಕೊಂಡು ಅಂಗನವಾಡಿ ನಿರ್ಮಿಸಿ, ಅವರಾಗಿಯೇ ಬಾಡಿಗೆಯನ್ನು ಪಾವತಿಸಿ ಬಳಿಕ ಸರಕಾರದಡಿ ತಂದೊಪ್ಪಿಸಿ ಅಧಿಕೃತ ಅಂಗನವಾಡಿಯನ್ನಾಗಿ ರಚಿಸಿದ್ದಾರೆ. ತದನಂತರ ಅಂಗನವಾಡಿ ಕಟ್ಟಡಕ್ಕೆ ಅನುದಾನಕ್ಕೆ ಬೇಡಿಕೆಯಿಟ್ಟು, ಇದೀಗ ಸುಸಜ್ಜಿತ ಕಟ್ಟಡದ ನಿರ್ಮಾಣವಾಗಿದೆ. ಸ್ಥಳದಾನ ನೀಡಿದ ವಕೀಲರಾದ ಮಹಮ್ಮದ್ ಆಲಿ ಹಾಗೂ ಉತ್ತಮ ಗುಣಮಟ್ಟವನ್ನು ಕಾಪಾಡಿಕೊಂಡು ಕಟ್ಟಡ ರಚಿಸಿದ ಗುತ್ತಿಗೆದಾರರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.ಪ್ರಾಮಾಣಿಕತೆ ಬದ್ಧತೆಯಿಂದ ಕೆಲಸ ಮಾಡಿದಾಗ ಜನರಿಗೆ ಮೋಸವೂ ಆಗದು, ಗುತ್ತಿಗೆದಾರನಿಗೆ ನಷ್ಟವೂ ಆಗದು. ಸರಕಾರದ ಕನಸಿನ ಯೋಜನೆಗಳನ್ನು ಅನುಷ್ಠಾನಗೊಳಿಸುವುದು ಸ್ಥಳೀಯ ಜನಪ್ರತಿನಿಧಿಗಳ ಕೆಲಸ ಎಂದರು.

ಈ ಸಂದರ್ಭ ಸ್ಪೀಕರ್ ಯು.ಟಿ.ಖಾದರ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೈಲಾ ಕೆ.ಕಾರಿಗಿ, ಸ್ಥಳದಾನಿ ವಕೀಲರಾದ ಯು.ಮೊಹಮ್ಮದಾಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ಸೀತಾ ಕೆ.ಇವರನ್ನು ಸನ್ಮಾನಿಸಲಾಯಿತು.

ಈ ವೇಳೆ ಮುಡಾ ಅಧ್ಯಕ್ಷ ಸದಾಶಿವ್ ಉಳ್ಳಾಲ, ಕೋಟೆಕಾರು ಪ.ಪಂ ಸದಸ್ಯೆ ಆಯಿಷಾ ಡಿ ಅಬ್ಬಾಸ್, ಡಿ.ಎಂ ಮೊಹಮ್ಮದ್, ಕೋಟೆಕಾರು ಪ.ಪಂ ಮುಖ್ಯಾಧಿಕಾರಿ ಮಾಲಿನಿ, ಬೆಳ್ಮ ಪಂ.ಮಾಜಿ ಅಧ್ಯಕ್ಷ ಹರ್ಷರಾಜ್ ಮುದ್ಯ, ಅರಫಾ ಮಸೀದಿ ಅಧ್ಯಕ್ಷರಾದ ಹೈದರ್ ಪರ್ತಿಪ್ಪಾಡಿ , ಗುತ್ತಿಗೆದಾರ ಮಹಮ್ಮದ್, ಉದ್ಯಮಿಗಳಾದ ಅನ್ವಿತ್ ಇಲೆಕ್ಟ್ರಾನಿಕ್ ನ ಪ್ರಕಾಶ್, ಇಬ್ರಾಹಿಂ ಕತಾರ್ ಉಪಸ್ಥಿತರಿದ್ದರು.

ಶೈಲಾ ಕೆ. ಕಾರಿಗಿ ಸ್ವಾಗತಿಸಿದರು. ಹಮೀದ್ ಪಜೀರು ಕಾರ್ಯಕ್ರಮ ನಿರೂಪಿಸಿದರು. ಹಸನ್ ಅಲಿ ವಂದಿಸಿದರು.


Delete Edit


Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News