ಕಾರವಾರ: 500ರೂ. ಮುಖಬೆಲೆಯ ನಕಲಿ ನೋಟುಗಳು ಪತ್ತೆ; ಪ್ರಕರಣ ದಾಖಲು

ಸಾಂದರ್ಭಿಕ ಚಿತ್ರ
ಕಾರವಾರ: ದಾಂಡೇಲಿ ತಾಲೂಕಿನ ಗಾಂಧಿನಗರದ ಬಾಡಿಗೆ ಮನೆಯೊಂದರಲ್ಲಿ 500 ರೂ. ಮುಖಬೆಲೆಯ ಕಂತೆ ಕಂತೆಯ ನಕಲಿ ನೋಟುಗಳು ಪತ್ತೆಯಾಗಿರುವ ಘಟನೆ ಮಂಗಳವಾರ ನಡೆದಿದೆ.
ಖಚಿತ ಮಾಹಿತಿ ಮೇಲೆ ನಗರ ಠಾಣೆಯ ಪೊಲೀಸರು ದಾಳಿ ನಡೆಸಿ ನಕಲಿ ನೋಟುಗಳು ಹಾಗೂ ಹಣ ಏಣಿಕೆ ಯಂತ್ರವನ್ನು ವಶಕ್ಕೆ ಪಡೆದಿದ್ದಾರೆ.
ಗಾಂಧಿನಗರದಲ್ಲಿರುವ ನೂರಜಾನ್ ಜುಂಜುವಾಡ್ಕರ ಎಂಬವರ ಮನೆಯೊಂದರಲ್ಲಿ ಗೋವಾ ಮೂಲದ ಅರ್ಷದ್ ಖಾನ್ ಎಂಬಾತ ಬಾಡಿಗೆ ಪಡೆದು ವಾಸವಿದ್ದ. ಕಳೆದ ಒಂದು ತಿಂಗಳಿನಿಂದ ಈತ ಆ ಮನೆಯಲ್ಲಿ ಇಲ್ಲದೇ ಇರುವುದನ್ನು ಗಮನಿಸಿ, ಆ ಮನೆಯ ಹಿಂಬದಿಯ ಬಾಗಿಲು ಸರಿಯಾಗಿ ಹಾಕಿಲ್ಲ ಎಂದು ಸ್ಥಳೀಯರು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಪೊಲೀಸರು ಬಂದು ಪರಿಶೀಲನೆ ನಡೆಸಿದಾಗ 500 ರೂ. ಮುಖಬೆಲೆಯ ರಿವರ್ಸ್ ಬ್ಯಾಂಕ್ ಆಫ್ ಇಂಡಿಯಾ ಎಂಬ ಬರಹ ಇರುವ ಮತ್ತು ಗವರ್ನರ್ ಸಹಿ ಇಲ್ಲದೆ ಇರುವ ನೋಟು ಪತ್ತೆಯಾಗಿದೆ. ನಕಲಿ ನೋಟುಗಳು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿ ಪತ್ತೆ ಕಾರ್ಯಾಚರಣೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.