ಭಟ್ಕಳ | ಎಸ್ಪಿ ವಿರುದ್ಧ ಆಕ್ರೋಶ: ಸಂಘ ಪರಿವಾರದಿಂದ ಹೆದ್ದಾರಿ ತಡೆ

ಭಟ್ಕಳ: ಶಿರಸಿಯಲ್ಲಿ ರೌಡಿ ಶೀಟರ್ ಪಟ್ಟಿಯಲ್ಲಿರುವ ಸಂಘ ಪರಿವಾರದ ಕಾರ್ಯಕರ್ತನೊಬ್ಬನನ್ನು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕರೆಸಿ ಥಳಿಸಿದ್ದಾರೆ ಎಂದು ಆರೋಪಿಸಿ, ಭಟ್ಕಳದ ಬಿಜೆಪಿ ಮತ್ತು ಸಂಘಪರಿವಾರ ಕಾರ್ಯಕರ್ತರು ಮಂಗಳವಾರ ರಾತ್ರಿ 11 ಗಂಟೆ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ರಸ್ತೆ ತಡೆ ನಡೆಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯ ವೇಳೆ ಕಾರ್ಯಕರ್ತರು ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ ವಿರುದ್ಧ ಘೋಷಣೆಗಳನ್ನು ಕೂಗಿದರು.
ರಸ್ತೆ ತಡೆ ನಡೆಸಿದ್ದರಿಂದ ಹೆದ್ದಾರಿಯ ಎರಡೂ ಬದಿಗಳಲ್ಲಿ ಸುಮಾರು 2 ಕಿಲೋಮೀಟರ್ ಗೂ ಹೆಚ್ಚು ದೂರದವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಏಕಾಏಕಿ ನಡೆದ ರಸ್ತೆ ತಡೆಯಿಂದಾಗಿ ದೂರದ ಊರುಗಳಿಗೆ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ತೀವ್ರ ತೊಂದರೆಗೀಡಾದರು.
ಸ್ಥಳಕ್ಕಾಗಮಿಸಿದ ಭಟ್ಕಳ ಡಿವೈಎಸ್ಪಿ ಮಹೇಶ್ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿ, ಅವರನ್ನು ಮನವೊಲಿಸುವ ಪ್ರಯತ್ನ ಮಾಡಿದರು. ಅವರ ಮಧ್ಯಸ್ಥಿಕೆಯಿಂದ ರಸ್ತೆ ತಡೆಯನ್ನು ತೆರವುಗೊಳಿಸಲಾಯಿತು.