ಭಟ್ಕಳ| ರೌಡಿಶೀಟರ್ ಪರೇಡ್ ವಿವಾದ: ಹಿಂದುತ್ವ ಕಾರ್ಯಕರ್ತರ ವಿರುದ್ಧ ಎರಡು ಎಫ್‌ಐಆರ್ ದಾಖಲು

ಪ್ರತಿಭಟನೆಯ ಫೋಟೊ
ಭಟ್ಕಳ: ಶಿರಸಿಯಲ್ಲಿ ರೌಡಿಶೀಟರ್ ಪರೇಡ್ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ ಅವರು ಸಂಘಪರಿವಾರದ ಕಾರ್ಯಕರ್ತ ಶ್ರೀನಿವಾಸ ನಾಯ್ಕ ಎಂಬಾತನ ಮೇಲೆ ಹಲ್ಲೆ ನಡೆಸಿದ್ದಾರೆಂಬ ಆರೋಪದಿಂದ ಉಂಟಾದ ವಿವಾದಕ್ಕೆ ಸಂಬಂಧಿಸಿದಂತೆ, ಭಟ್ಕಳದಲ್ಲಿ ಸಂಘಪರಿವಾರಕ್ಕೆ ಸೇರಿದ ವಿವಿಧ ಸಂಘಟನೆಗಳ ಕಾರ್ಯಕರ್ತರ ವಿರುದ್ಧ ಎರಡು ಪ್ರತ್ಯೇಕ ಎಫ್‌ಐಆರ್‌ಗಳು ದಾಖಲಾಗಿವೆ.
ಈ ಘಟನೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಡಿದ್ದರಿಂದ, ಕಾರ್ಯಕರ್ತರು ರಾತ್ರಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದರು. ಮರುದಿನ ಭಟ್ಕಳ ಶಹರ ಪೊಲೀಸ್ ಠಾಣೆ ಎದುರು ಜಮಾಯಿಸಿ ಪ್ರತಿಭಟನೆ ಮಾಡಿದ್ದಕ್ಕೆ ಎಫ್ ಐ ಆರ್ ದಾಖಲಾಗಿವೆ.
ಎ. 8ರಂದು ಶಿರಸಿಯಲ್ಲಿ ರೌಡಿಶೀಟರ್ ಪರೇಡ್ ಸಂದರ್ಭ ಎಸ್‌ಪಿ ಎಂ. ನಾರಾಯಣ ಅವರು ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದಂತೆ ಶ್ರೀನಿವಾಸ ನಾಯ್ಕ ಸೇರಿದಂತೆ ಹತ್ತು ಮಂದಿಯನ್ನು ವಿಚಾರಣೆಗೆ ಕರೆಸಿದ್ದರು. ಶ್ರೀನಿವಾಸ ನಾಯ್ಕನಿಗೆ ಎಸ್‌ಪಿ ನಾರಾಯಣ ಹಲ್ಲೆ ಮಾಡಿದ್ದಾರೆಂದು ಆರೋಪಿಸಲಾಗಿತ್ತು. ಈ ಸುದ್ದಿ ಹರಡಿದ ಕಾರಣ, ಕಾರ್ಯಕರ್ತರು ಎ. 8ರ ರಾತ್ರಿ ಸುಮಾರು 2 ತಾಸು ಹೆದ್ದಾರಿಯಲ್ಲಿ ಸಂಚಾರಕ್ಕೆ ಅಡ್ಡಿಪಡಿಸಿ ಪ್ರತಿಭಟನೆ ನಡೆಸಿದ್ದರು. ಮರುದಿನ ಎ. 9ರ ಬೆಳಿಗ್ಗೆ 11 ಗಂಟೆಗೆ ಶಹರ ಪೊಲೀಸ್ ಠಾಣೆ ಎದುರು ಜಮಾಯಿಸಿ ಮತ್ತೊಂದು ಪ್ರತಿಭಟನೆ ನಡೆಸಿದ್ದರು.
ಈ ಎರಡು ಘಟನೆಗಳಿಗೆ ಸಂಬಂಧಿಸಿದಂತೆ ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ದೂರುಗಳು ದಾಖಲಾಗಿವೆ. ಮೊದಲ ದೂರನ್ನು ಪಿಎಸ್‌ಐ ನವೀನ ಎಸ್. ನಾಯ್ಕ ದಾಖಲಿಸಿದ್ದು, ಹೆದ್ದಾರಿ ತಡೆಗೆ ಸಂಬಂಧಿಸಿದಂತೆ 11 ಜನರನ್ನು ಹೆಸರಿಸಲಾಗಿದೆ.
ಈ ಪಟ್ಟಿಯಲ್ಲಿ ಜಾಲಿ ತಲಗೇರಿಯ ನಾಗರಾಜ ವೆಂಕಟಪ್ಪ ನಾಯ್ಕ, ಹನುಮಾನ ನಗರದ ಅಭಿಷೇಕ ತಿಮ್ಮಪ್ಪ ನಾಯ್ಕ, ಹೊನ್ನೆಗದ್ದೆಯ ನಾಗೇಶ ನಾರಾಯಣ ನಾಯ್ಕ, ಹೆರೂರ ಎಳೆಬಾರದ ನಾಗೇಂದ್ರ ಶಂಕರ ನಾಯ್ಕ, ಮುಂಡಳ್ಳಿಯ ಲೋಕೇಶ ರವಿ ದೇವಾಡಿಗ, ಸೋನಾರಕೇರಿಯ ರವಿಕುಮಾರ ಶಶಿಕಾಂತ ಶೇಟ, ತಲಾಂದ ಅಪ್ಪುಮನೆಯ ಈಶ್ವರ ದುರ್ಗಪ್ಪ ನಾಯ್ಕ, ಕರಿಕಲ್ ಗ್ರಾಮದ ಜಗದೀಶ ನಾರಾಯಣ ನಾಯ್ಕ, ಮುಟ್ಟಳ್ಳಿಯ ಕೃಷ್ಣ ಮಾದೇವ ನಾಯ್ಕ, ಕರಿಕಲ್ ಜಕಣಿಮನೆಯ ನಾಗರಾಜ ಮಾದೇವ ಮೊಗೇರ, ಬೆಣಂದೂರಿನ ಜಗದೀಶ ಸೋಮಯ್ಯಾ ನಾಯ್ಕ ಸೇರಿದಂತೆ 25-30 ಗುರುತು ತಿಳಿಯದ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ಎರಡನೇ ದೂರನ್ನು ಪಿಎಸ್‌ಐ ತಿಮ್ಮಪ್ಪ ಬೇಡುಮನೆ ದಾಖಲಿಸಿದ್ದು, ಎ. 9ರಂದು ಪೊಲೀಸ್ ಠಾಣೆ ಎದುರು ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ 10 ಜನರನ್ನು ಹೆಸರಿಸಲಾಗಿದೆ. ಈ ಪಟ್ಟಿಯಲ್ಲಿ ಜಾಲಿ ತಲಗೇರಿಯ ನಾಗರಾಜ ವೆಂಕಟಪ್ಪ ನಾಯ್ಕ, ಹನುಮಾನ ನಗರದ ಅಭಿಷೇಕ ತಿಮ್ಮಪ್ಪ ನಾಯ್ಕ, ಹೊನ್ನೆಗದ್ದೆಯ ನಾಗೇಶ ನಾರಾಯಣ ನಾಯ್ಕ, ಹೆರೂರ ಎಳೆಬಾರದ ನಾಗೇಂದ್ರ ಶಂಕರ ನಾಯ್ಕ, ಮುಂಡಳ್ಳಿಯ ಲೋಕೇಶ ರವಿ ದೇವಾಡಿಗ, ಸೋನಾರಕೇರಿಯ ರವಿಕುಮಾರ ಶಶಿಕಾಂತ ಶೇಟ, ತಲಾಂದ ಅಪ್ಪುಮನೆಯ ಈಶ್ವರ ದುರ್ಗಪ್ಪ ನಾಯ್ಕ, ಕಂಡೆಕೋಡ್ಲುವಿನ ದೇವೇಂದ್ರ ಮಾಸ್ತಪ್ಪ ನಾಯ್ಕ, ಕೋಕ್ತಿ ನಗರದ ನಾರಾಯಣ ಗೊಂಡ, ಮುರ್ಡೇಶ್ವರ ಕಾಯ್ಕಿಣಿಯ ರಾಜೇಂದ್ರ ಸೂರ್ಯಕಾಂತ ನಾಯ್ಕ ಸೇರಿದಂತೆ 30-35 ಗುರುತು ತಿಳಿಯದ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ಇನ್ನಷ್ಟು ಆರೋಪಿಗಳ ಹೆಸರುಗಳು ಆರೋಪ ಪಟ್ಟಿಯಲ್ಲಿ ಸೇರ್ಪಡೆಯಾಗುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸಂಸದ ಕಾಗೇರಿ ಖಂಡನೆ
ಪ್ರತಿಭಟನೆಗೆ ಸಂಬಂಧಿಸಿದಂತೆ ಕಾರ್ಯಕರ್ತರ ವಿರುದ್ಧ ಎಫ್‌ಐಆರ್ ದಾಖಲಿಸಿರುವುದನ್ನು ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತೀವ್ರವಾಗಿ ಖಂಡಿಸಿದ್ದಾರೆ.
ಪ್ರತಿಭಟನೆಯ ಬಳಿಕ ಪೊಲೀಸ್ ಅಧಿಕಾರಿಗಳು, ಬಿಜೆಪಿ ಮುಖಂಡರು ಹಾಗೂ ಹಿಂದುತ್ವ ಸಂಘಟನೆಯ ಮುಖಂಡರ ಸಮ್ಮುಖದಲ್ಲಿ ಸಭೆ ನಡೆಸಿ, ಈ ವಿಷಯವನ್ನು ಸಮಗ್ರವಾಗಿ ಚರ್ಚಿಸಲಾಗಿತ್ತು. ಸಭೆಯಲ್ಲಿ, ಸಾಮಾಜಿಕ ಮತ್ತು ರಾಜಕೀಯ ಹೋರಾಟಗಾರರ ವಿರುದ್ಧ ಕಾನೂನಿನ ವ್ಯಾಪ್ತಿಯನ್ನು ಮೀರಿ ಪ್ರಕರಣ ಗಳನ್ನು ದಾಖಲಿಸುವುದು ಸರಿಯಲ್ಲ ಎಂದು ಮುಖಂಡರು ಒತ್ತಿ ಹೇಳಿದ್ದರು. ಕೆಳಹಂತದ ಅಧಿಕಾರಿ ಗಳಿಂದ ಬರುವ ಮಾಹಿತಿಯನ್ನು ಸೂಕ್ಷ್ಮವಾಗಿ ಪರಿಶೀಲಿಸುವ ಅಗತ್ಯವಿದೆ ಎಂದೂ ಸಲಹೆ ನೀಡಿದ್ದರು. ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ ಅವರು, ಈ ವಿಷಯವನ್ನು ಪರಿಶೀಲಿಸುವುದಾಗಿ ಭರವಸೆ ನೀಡಿದ್ದರು.
ಪ್ರತಿಭಟನೆ ನಡೆಸಿದ ಕಾರ್ಯಕರ್ತರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿರುವುದಕ್ಕೆ ಸಂಸದ ಕಾಗೇರಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. "ಶಾಂತಿಯುತ ಪ್ರತಿಭಟನೆಯಲ್ಲಿ ತೊಡಗಿದ್ದ ಕಾರ್ಯಕರ್ತರ ಮೇಲೆ ದಾಖಲಾದ ಪ್ರಕರಣವನ್ನು ತಕ್ಷಣ ವಾಪಸ್ ತೆಗೆದುಕೊಳ್ಳಬೇಕು. ವಿನಾಕಾರಣ ಪ್ರಕರಣಗಳನ್ನು ದಾಖಲಿಸುವ ಪೊಲೀಸರ ಧೋರಣೆಯನ್ನು ಕೈಬಿಡಬೇಕು ಎಂದು ಆಗ್ರಹಿಸುತ್ತೇನೆ" ಎಂದು ಅವರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.