ಭಟ್ಕಳ: ಅತಿಕ್ರಮಣ ಹೋರಾಟಗಾರರ ಸಭೆ

ಭಟ್ಕಳ: ತಾಲೂಕಿನ ಹೇರೂರು ಸಭಾ ಭವನದಲ್ಲಿ ಭಟ್ಕಳ ತಾಲೂಕು ಅತಿಕ್ರಮಣ ಹೋರಾಟಗಾರರ ಸಭೆಯನ್ನು ಹಿರಿಯರಾದ ಅತಿಕ್ರಮಣ ಹೋರಾಟ ಸಮಿತಿಯ ತಾಲೂಕಾ ಅಧ್ಯಕ್ಷ ರಾಮಾ ಮೊಗೇರ ಅವರ ನೇತೃತ್ವದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ರಾಮಾ ಮೊಗೇರ ಅವರು ಅತಿಕ್ರಮಣದಾರರು ಎಲ್ಲೋ ಹೊರಗಿನಿಂದ ಬಂದು ಜಮೀನು ಕಬಳಿಸಿದವರಲ್ಲ, ಇಲ್ಲಿಯ ಹುಟ್ಟಿ ಇಲ್ಲಿಯೇ ಬೆಳೆದು ತಮ್ಮ ಅಗತ್ಯಕ್ಕೋಸ್ಕರ ಸರಕಾರಿ ಜಮೀನಿನಲ್ಲಿ ಮನೆ ಕಟ್ಟಿ, ಕೃಷಿ ಮಾಡಿ ಬಂದಿದ್ದಾರೆ. ಅವರನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಬಾಹ್ಯ ವ್ಯಕ್ತಿಗಳಂತೆ ಯಾವುದೋ ಕೃತ್ಯ ಎಸಗಿದ ಅಪರಾಧಿಗಳಂತೆ ಕಾಣುವುದು ತಪ್ಪು ಎಂದರು.
ಈಗಾಗಲೇ ಸಚಿವ ಮಂಕಾಳ ವೈದ್ಯ, ಶಾಸಕ ಆರ್.ವಿ.ದೇಶಪಾಂಡೆ ಸೇರಿದಂತೆ ಹಿರಿಯರೆಲ್ಲಾ ಸೇರಿ ಅತಿಕ್ರಮಣದಾರರು ಇರುವಲ್ಲಿ ಜಿ.ಪಿ.ಎಸ್. ಮಾಡಿಕೊಡುವಂತೆ ಸೂಚಿಸಿದಂತೆ ಅನೇಕರಿಗೆ ಜಿ.ಪಿ.ಎಸ್. ಆಗಿದೆ, ಇನ್ನೂ ಅನೇಕರಿಗೆ ಜಿ.ಪಿ.ಎಸ್. ಮಾಡಿಕೊಡಬೇಕಾಗಿದೆ. ಈ ಬಗ್ಗೆ ಸಚಿವ ಮಂಕಾಳ ವೈದ್ಯ, ಜಿಲ್ಲಾಧಿಕಾರಿಗಳ ಗಮನಕ್ಕೆ ನಾವು ತಂದಿದ್ದು ಜಿ.ಪಿ.ಎಸ್. ಮಾಡಿಕೊಡುವ ಭರವಸೆ ದೊರೆತಿರುವುದು ಅನೇಕರಿಗೆ ಅನುಕೂಲವಾಗಲಿದೆ. ಅರಣ್ಯ ಅತಿಕ್ರಮಣದಾರರಿಗೆ ತೀವ್ರ ತೊಂದರೆಯನ್ನು ಅರಣ್ಯಾಧಿಕಾರಿ ಗಳು ಕೊಡುತ್ತಿದ್ದಾರೆ. ಮೇಲಾಗಿ ಕಸ್ತೂರಿ ರಂಗನ್ ವರದಿಯಿಂದ ಅರಣ್ಯವಾಸಿಗಳಿಗೆ, ಜನವಸತಿ ಇರುವ ಪ್ರದೇಶದಲ್ಲಿ ವಾಸ ಮಾಡುವವರಿಗೂ ತೀವ್ರ ತೊಂದರೆಯಾಗಲಿದೆ. ಈಗಾಗಲೇ ಕಸ್ತೂರಿ ರಂಗನ್ ವರದಿ ಯನ್ನು ತಿರಸ್ಕರಿಸಲು ನಾವು ಮನವಿ ಮಾಡಿದಂತೆ ಕೇಂದ್ರ ಸರಕಾರಕ್ಕೆ ಈಗಾಗಲೇ ರಾಜ್ಯ ಸರಕಾರ ದಿಂದ ವರದಿ ಹೋಗಿದೆ. ಈ ಬಗ್ಗೆ ಜನರಿಗೆ ಅನುಕೂಲವಾಗುವಂತೆ ವರದಿಯನ್ನು ತಿರಸ್ಕರಿಸಲು ಕೇಂದ್ರದ ಮೇಲೆ ಒತ್ತಡ ತರುವಂತೆ ಈಗಾಗಲೇ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಕಂಡು ಮನವಿ ಮಾಡಿದ್ದೇವೆ ಎಂದರು.
ಅರಣ್ಯ ಅಧಿಕಾರಿಗಳು ಅತಿಕ್ರಮಣದಾರರ ಮೇಲೆ ದಬ್ಬಾಳಿಕೆ ಮಾಡಿದರೆ ನಾವು ಸುಮ್ಮನಿರುವುದಿಲ್ಲ ಎಂದು ಎಚ್ಚರಿಕೆ ನೀಡಿದ ಅವರು ರೈತರಿಗೆ ಕಾಡು ಪ್ರಾಣಿಗಳಿಂದ ಆಗುತ್ತಿರುವ ತೊಂದರೆಗೆ ಅರಣ್ಯಾಧಿ ಕಾರಿಗಳು ಸ್ಪಂದಿಸಬೇಕು, ನವಿಲು, ಮಂಗ, ಹಂದಿ, ಚಿರತೆ ಸೇರಿದಂತೆ ಅನೇಕ ಕಾಡು ಪ್ರಾಣಿಗಳು ಹಾವಳಿ ಮಾಡುತ್ತಿದ್ದು ರೈತರು ಬೆಳೆದ ಬೆಳೆ ಕೈಗೆ ಸಿಗುತ್ತಿಲ್ಲ ಎಂದೂ ದೂರಿದರು. ಈಗಾಗಲೇ ಸಿಂಗಳೀಕ ಪ್ರದೇಶ ಎಂದು ಗುರುತು ಮಾಡಲಾಗಿದ್ದು, ಸಿಂಗಳೀಕದ ಸಂಖ್ಯೆ ಅತಿ ವಿರಳವಾಗಿರುವಾಗ ಈ ರೀತಿ ಪ್ರದೇಶಗಳನ್ನು ಗುರುತಿಸುವ ಅಗತ್ಯವಿತ್ತೇ ಎಂದು ಪ್ರಶ್ನಿಸಿದ ಅವರು ಅದನ್ನೂ ತಕ್ಷಣ ತೆಗೆದುಹಾಕಬೇಕು ಎಂದು ಆಗ್ರಹಿಸಿದರು.
ಅರಣ್ಯ ಹಕ್ಕು ಕಾನೂನಿನಲ್ಲಿ ಪರಿಶಿಷ್ಟ ಜಾತಿಯವರಿಗೆ ಒಂದು ತಲೆಮಾರು (25 ವರ್ಷ)ದ ದಾಖಲೆಯ ಮೇಲೆ ಮಂಜೂರಿ ಮಾಡುವ ಅಧಿಕಾರ ಇರುವುದನ್ನು ಇತರೇಯವರಿಗೂ ಕೂಡಾ ವಿಸ್ತರಣೆ ಮಾಡಿ ಮಂಜೂರಿ ಮಾಡಿಕೊಡಬೇಕು ಎಂದೂ ಅವರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕೃಷಿಕ ಸಮಾಜದ ಅಧ್ಯಕ್ಷ ಶ್ರೀಧರ ಹೆಬ್ಬಾರ್, ಭಾಸ್ಕರ ಮೊಗೇರ, ಸುಲೇಮಾನ್ ಸಾಬ್, ಗಣಪತಿ ನಾಯ್ಕ ಜಾಲಿ ಇವರು ಮಾತನಾಡಿದರು. ಪ್ರಮುಖರಾದ ಖಯ್ಯೂಮ್ ಸಾಬ್, ನಾಗೇಶ ದೇವಡಿಗ, ಮಂಜುನಾಥ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.