ಭಟ್ಕಳ: ಅಂಬೇಡ್ಕರ್ ಜಯಂತಿ ಕಾರ್ಯಕ್ರಮದ ವೇಳೆ ದಲಿತ ಮುಖಂಡು ಮತ್ತು ತಹಶೀಲ್ದಾರ್ ನಡುವೆ ವಾಗ್ವಾದ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನಲ್ಲಿ ದಲಿತ ಸಮುದಾಯಕ್ಕೆ ಸಂಬಂಧಿಸಿದ ಸೌಲಭ್ಯ ಗಳ ವಿತರಣೆಯಲ್ಲಿ ಆರ್.ಡಿ ಸಂಖ್ಯೆಯಿಲ್ಲದ ಜಾತಿ ಪ್ರಮಾಣ ಪತ್ರ ಹೊಂದಿರುವವರಿಗೆ ಸೌಲಭ್ಯ ನೀಡದಿರುವ ಕುರಿತು ದಿನಾಂಕ 24-02-2025ರಂದು ನಡೆದ ಅನುಸೂಚಿತ ಜಾತಿ/ಬುಡಕಟ್ಟು ಕುಂದು ಕೊರತೆ ಸಮಿತಿಯ ಸಭೆಯ ನಡಾವಳಿಯನ್ನು ಸಹಾಯಕ ಆಯುಕ್ತರು ಏಕಾಏಕಿ ಬದಲಾಯಿಸಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಭಟ್ಕಳದ ಆಡಳಿತ ಸೌಧದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಬಾಬು ಜಗಜೀವನರಾಂ ಜಯಂತಿ ಕಾರ್ಯಕ್ರಮದ ಸಂದರ್ಭದಲ್ಲಿ ದಲಿತ ಮುಖಂಡ ಕಿರಣ ಶಿರೂರು ನೇತೃತ್ವದಲ್ಲಿ ಹತ್ತಾರು ದಲಿತ ಸಮುದಾಯದವರು ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು, ಸಭಾಧ್ಯಕ್ಷರಾದ ಸಹಾಯಕ ಆಯುಕ್ತರು ಯಾವುದೇ ಸದಸ್ಯರ ಅಭಿಪ್ರಾಯವನ್ನು ಪಡೆಯದೇ, ತಮ್ಮ ಅಧಿಕಾರದ ದುರ್ಬಳಕೆ ಮಾಡಿಕೊಂಡು ನಡಾವಳಿಯನ್ನು ಪರಿಷ್ಕರಿಸಿರುವುದು ಕಾನೂನು ಕರ್ತವ್ಯದ ಉಲ್ಲಂಘನೆ ಎಂದು ಆರೋಪಿಸಿದರು. ಈ ಕುರಿತು ಶಿರಾಲಿ ಗ್ರಾಮ ಪಂಚಾಯತ್ ನಲ್ಲಿ ಆರ್.ಡಿ ಸಂಖ್ಯೆ ಇಲ್ಲದವರಿಗೂ ಸೌಲಭ್ಯ ನೀಡಲಾಗುತ್ತಿದೆ ಎಂದು ನಡಾವಳಿಯಲ್ಲಿ ತಿಳಿಸಿದ್ದನ್ನು, ಸರ್ಕಾರದ ಮಟ್ಟದಲ್ಲಿ ತೀರ್ಮಾನವಾಗಬೇಕು ಎಂಬ ಮಾತಿಗೆ ವಿರುದ್ಧವಾಗಿ ಬದಲಾಯಿಸಲಾಗಿದೆ ಎಂದು ದೂರಿದರು. ಇದು ಭಟ್ಕಳ ತಾಲೂಕಿನ ನೈಜ ಪರಿಶಿಷ್ಟ ಜಾತಿ/ಪಂಗಡದವರಿಗೆ ಅನ್ಯಾಯವೆಸಗಿದೆ ಎಂದು ಪ್ರತಿಭಟನಾಕಾರರು ಆಕ್ಷೇಪಿಸಿದರು.
ಕಾರ್ಯಕ್ರಮದ ವೇಳೆ, ಪ್ರತಿಭಟನಾಕಾರರು ಕೈಗೆ ಕಪ್ಪು ಪಟ್ಟಿಗಳನ್ನು ಧರಿಸಿ, “ಜೈ ಭೀಮ್” ಘೋಷಣೆ ಗಳನ್ನು ಕೂಗುತ್ತ, ಸಭಾಂಗಣದ ಹೊರಗೆ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಪೊಲೀಸರು ಅವ ರನ್ನು ತಡೆಯಲು ಯತ್ನಿಸಿದ್ದರಿಂದ ಸಣ್ಣ ಪ್ರಮಾಣದ ಗೊಂದಲ ಉಂಟಾಯಿತು. ನಂತರ, ತಹಸಿಲ್ದಾರ್ ನಾಗೇಂದ್ರ ಕೋಳಶೆಟ್ಟಿ ದಲಿತ ಮುಖಂಡರೊಂದಿಗೆ ಮಾತನಾಡಿ, ಸಮಸ್ಯೆಯನ್ನು ಸಮಾಧಾನ ಗೊಳಿಸಲು ಪ್ರಯತ್ನಿಸಿದರು.
ದಲಿತ ಮುಖಂಡರು, ಆರ್.ಡಿ ಸಂಖ್ಯೆಯುಳ್ಳ ಜಾತಿ ಪ್ರಮಾಣ ಪತ್ರ ಹೊಂದಿರುವವರಿಗೆ ಮಾತ್ರ ಮೀಸಲಾತಿ ಸೌಲಭ್ಯಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ. ಅಲ್ಲದೇ, ಸಹಾಯಕ ಆಯುಕ್ತರ ವಿರುದ್ಧ ಇಲಾಖಾ ವಿಚಾರಣೆ ನಡೆಸಿ, ಬದಲಾಯಿಸಲಾದ ನಡಾವಳಿಯನ್ನು ತಡೆಹಿಡಿಯುವಂತೆ ಆಗ್ರಹಿಸಿದ್ದಾರೆ.


