ಭಟ್ಕಳ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಅಸ್ತವ್ಯಸ್ತ ಆರೋಪ: ಪಾಲಕರ ಆಕ್ರೋಶ
ಭಟ್ಕಳ: ತಾಲೂಕಿನಲ್ಲಿ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟಗಳ ಆಯೋಜನೆಯಾಗುತ್ತಿದ್ದು ಮಂಗಳವಾರ ಇಲ್ಲಿನ ತಾಲೂಕು ಕ್ರಿಡಾಂಗಣದಲ್ಲಿ ಭಟ್ಕಳ ವಲಯಮಟ್ಟದ ಕ್ರೀಡಾ ಕೂಟ ನಡೆಯಿತು.
ಕ್ರೀಡಾಕೂಟದಲ್ಲಿ ಮಕ್ಕಳಿಗೆ ಸರಿಯಾದ ಸೌಲಭ್ಯವನ್ನು ಕಲ್ಪಿಸಿಲ್ಲ ಎಂದು ಕೆಲ ಪಾಲಕರು ಆಕ್ರೋಶ ವ್ಯಕ್ತಪಡಿಸಿದರು. ಬಿಸಿಲಿನ ಬೇಗೆಯಿಂದ ರಕ್ಷಿಸಿಕೊಳ್ಳಲು ಮಕ್ಕಳಿಗೆ ಸೂರಿನ ವ್ಯವಸ್ಥೆ ಮಾಡಿಲ್ಲ, ಸರಿಯಾದ ಕುಡಿಯುವ ನೀರಿನ ವ್ಯವಸ್ಥೆಯಿಲ್ಲ ಎಂದು ಪಾಲಕರು ಆರೋಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಂಘಟಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಇಲಾಖೆಯಿಂದ ವಲಯ ಮಟ್ಟಕ್ಕೆ ಯಾವುದೇ ಹಣ ಬಿಡುಗಡೆ ಮಾಡಿಲ್ಲ. ಪ್ರತಿ ಶಾಲೆಗಳಿಂದ 600 ರಂತೆ ದೇಣಿಗೆ ಸಂಗ್ರಹಿಸಿದ್ದು ಬಂದ ಹಣದಲ್ಲೆ ಎಲ್ಲ ವ್ಯವಸ್ಥೆಗಳನ್ನು ಮಾಡಲಾಗಿದೆ. ವೇದಿಕೆ ನಿರ್ಮಾಣ, ಮಕ್ಕಳಿಗೆ ಊಟದ ವ್ಯವಸ್ಥೆ ಸೇರಿದಂತೆ ಎಲ್ಲ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ತಿಳಿಸಿದ್ದು ಮೈದಾನದಲ್ಲಿ ಶಾಮಿಯಾನ ಹಾಕುವ ವ್ಯವಸ್ಥೆಯನ್ನು ಹಣಕಾಸಿನ ತೊಂದರೆಯಿಂದಾಗಿ ಮಾಡಲಾಗಿಲ್ಲ ಎಂದರು.
ಭಟ್ಕಳ ವಲಯಮಟ್ಟದ ಕ್ರೀಡಾ ಕೂಟದಲ್ಲಿ 26 ಪ್ರಾಥಮಿಕ ಶಾಲೆಗಳು ಭಾಗವಹಿಸಿದ್ದವು. ವೈಯಕ್ತಿಕ ವಿಭಾಗದಲ್ಲಿ 100, 200 ಮೀ. ಓಟ, ಉದ್ದ ಜಿಗಿತ, ಎತ್ತರ ಜಿಗಿತ, ಗುಂಡು ಎಸೆತ ಹಾಗೂ ಗುಂಪು ವಿಭಾಗದಲ್ಲಿ ಕಬ್ಬಡ್ಡಿ, ಖೋಖೊ, ವಾಲಿಬಾಲ್ ಮುಂತಾದ ಕ್ರೀಡೆಗಳು ಜರಗಿದವು.