ಭಟ್ಕಳದ ಐಮನ್ ಚಾಮುಂಡಿಗೆ ರಾಷ್ಟ್ರೀಯ ಕಿಕ್ ಬಾಕ್ಸಿಂಗ್ ಚಾಂಪಿಯನ್ಶಿಪ್ ನಲ್ಲಿ ಚಿನ್ನದ ಪದಕ

Update: 2023-08-31 14:05 GMT

ಭಟ್ಕಳ: ಭಟ್ಕಳದ ಟೀಮ್ ಅಲಯನ್ಸ್ ಮಾರ್ಷಲ್ ಆರ್ಟ್ಸ್ ಅಕಾಡೆಮಿಯ ಮಾರ್ಗದರ್ಶನದಲ್ಲಿ ತರಬೇತಿ ಪಡೆದ 15 ವರ್ಷದ ಪ್ರಾಯದ ಯೂಷಾ ಐಮನ್ ಚಾಮುಂಡಿ ಜಾರ್ಖಂಡ್‌ನ ರಾಂಚಿಯಲ್ಲಿ ನಡೆದ ವಾಕೋ ಇಂಡಿಯಾ ಕಿಕ್ ಬಾಕ್ಸಿಂಗ್ ಫೆಡರೇಶನ್ ಪ್ರಸ್ತುತಪಡಿಸಿದ ಜೂನಿಯರ್ ಲೆವೆಲ್ ಕಿಕ್ ಬಾಕ್ಸಿಂಗ್ ರಾಷ್ಟ್ರೀಯ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದಕ ಪಡೆಯುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ.

ಪ್ರಸ್ತುತ ಭಟ್ಕಳದ ಆನಂದಾಶ್ರಮ ಕಾನ್ವೆಂಟ್ ಶಾಲೆಯಲ್ಲಿ 10ನೆ ತರಗತಿ ಯಲ್ಲಿ ಓದುತ್ತಿರುವ ಯೂಷಾ ಚಾಮುಂಡಿ, ಸೆಪ್ಟೆಂಬರ್ ತಿಂಗಳು ಉಜ್ಬೇಕಿಸ್ತಾನ್‌ನಲ್ಲಿ ನಡೆಯಲಿರುವ ಮುಂಬರುವ ಅಂತಾರಾಷ್ಟ್ರೀಯ ಕಿಕ್‌ಬಾಕ್ಸಿಂಗ್ ಚಾಂಪಿಯನ್‌ ಶಿಪ್ ನಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶವನ್ನು ಪಡೆದುಕೊಂಡಿದ್ದಾರೆ.

ಯುಷಾ ಅವರ ಈ ಸಾಧನೆಯ ಪಯಣ ಭಟ್ಕಳದಲ್ಲಿ ನಡೆದ ಜಿಲ್ಲಾ ಮಟ್ಟದ ಕಿಕ್ ಬಾಕ್ಸಿಂಗ್ ಕಾರ್ಯಕ್ರಮದಲ್ಲಿ ವಿಜಯೋತ್ಸವದೊಂದಿಗೆ ಆರಂಭವಾಯಿತು. ಜುಲೈ 16 ರಂದು ಮೈಸೂರಿನಲ್ಲಿ ನಡೆದ ರಾಜ್ಯ ಮಟ್ಟದ ಕಿಕ್ ಬಾಕ್ಸಿಂಗ್ (ಜೂನಿಯರ್ ಲೆವೆಲ್, 57 ಕೆಜಿ ಒಳಗಿನವರು) ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ಮುಡಿಗೇರಿಸುವ ಮೂಲಕ ಅವರ ಅದ್ಭುತ ಪ್ರದರ್ಶನ ಮುಂದುವರೆಯಿತು. ಯುವ ಪ್ರತಿಭೆಯ ಗಮನಾರ್ಹ ಸ್ಥಿರತೆಯು ಅವರನ್ನು ರಾಷ್ಟ್ರಮಟ್ಟಕ್ಕೆ ಮುನ್ನಡೆ ಸಿತು, ಆಗಸ್ಟ್ 23 ರಿಂದ 27 ರವರೆಗೆ ರಾಂಚಿಯಲ್ಲಿ ನಡೆದ ಚಾಂಪಿಯನ್‌ಶಿಪ್‌ನಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕನ್ನು ಮುಡಿಗೇರಿಸಿಕೊಂಡಿದ್ದಾರೆ.

ಕಿಕ್ ಬಾಕ್ಸಿಂಗ್‌ನ ಹೊರತಾಗಿ, ಯುಷಾ ವಾಲಿಬಾಲ್ ಮತ್ತು ಕಬಡ್ಡಿಯಲ್ಲಿ ಪ್ರಾವೀಣ್ಯತೆಯನ್ನು ಹೊಂದಿದ್ದಾರೆ, ಆಗಾಗ್ಗೆ ಶಾಲಾ-ಮಟ್ಟದ ಸ್ಪರ್ಧೆಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುತ್ತಾರೆ. ಅವರ ಸಾಧನೆಗಳು ಕರಾಟೆ ಕ್ಷೇತ್ರಕ್ಕೆ ವಿಸ್ತರಿಸು ತ್ತವೆ, ಅಲ್ಲಿ ಅವರು ಸತತವಾಗಿ ಉತ್ತಮ ಸಾಧನೆ ಮಾಡಿದ್ದಾರೆ. ತಮ್ಮ ಮೆಟ್ರಿಕ್ಯುಲೇಷನ್ ಮುಗಿದ ನಂತರ ಚಾರ್ಟರ್ಡ್ ಅಕೌಂಟೆಂಟ್ ಆಗುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ.

ಅಲಯನ್ಸ್ ಮಾರ್ಷಲ್ ಆರ್ಟ್ಸ್ ಅಕಾಡೆಮಿಯ ಮೊಹಮ್ಮದ್ ಇಸ್ಮಾಯಿಲ್ ರಾಜಾ ಮತ್ತು ಮೊಹಮ್ಮದ್ ಶಮ್ಮಾಸ್ ಅವರ ಮಾರ್ಗದರ್ಶನದ ಹಾಗೂ ದಿವಂಗತ ಚಿಕ್ಕಪ್ಪ ಅಥರ್ ಅರ್ಮಾರ್ ಅವರ ಪ್ರೋತ್ಸಾಹದೊಂದಿಗೆ ಈ ಮಟ್ಟಕ್ಕೆ ಬೆಳೆಯಲು ಕಾರಣ ಎಂದು ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

ರಾಂಚಿಯ ಅದ್ಭುತ ಗೆಲುವಿನ ನಂತರ ಭಟ್ಕಳಕ್ಕೆ ಹಿಂತಿರುಗಿದ್ದು, ಅವರ ಕುಟುಂಬ ಹಾಗೂ ಸಮುದಾಯದವರು ಸಂಭ್ರಮದಿಂದ ಸ್ವಾಗತಿಸಿದರು. ಅವರ ವಸತಿ ಪ್ರದೇಶವಾದ ಮದೀನಾ ಕಾಲನಿ ಮತ್ತು ಮೊಹಿಯುದ್ದೀನ್ ಸ್ಟ್ರೀಟ್‌ನ ಯುವಕರು ಅವರನ್ನು ಸ್ವಾಗತಿಸಿ, ಅವರ ಸಾಧನೆಯ ಸಂಭ್ರಮದಲ್ಲಿ ಹೂಮಾಲೆಗಳಿಂದ ಅಲಂಕರಿಸಿದರು. ಸ್ನೇಹಿತರು, ಕುಟುಂಬದವರು, ಹಿತೈಷಿಗಳು ಅವರ ಮನೆಗೆ ಭೇಟಿ ನೀಡಿ, ತಮ್ಮ ಹೆಮ್ಮೆ ಮತ್ತು ಅಭಿಮಾನವನ್ನು ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಭಟ್ಕಳ ಮುಸ್ಲಿಂ ಯೂತ್ ಫೆಡರೇಶನ್ ಅಧ್ಯಕ್ಷ ಅಝೀಝುರ್ ರಹ್ಮಾನ್ ರುಕ್ನುದ್ದೀನ್ ನದ್ವಿ ಯುಷಾ ಅವರಿಗೆ ಪುಷ್ಪ ಮಾಲೆಯನ್ನು ಅರ್ಪಿಸಿ, ಅವರ ಕುಟುಂಬಕ್ಕೆ ಶುಭ ಹಾರೈಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News