ದ್ವೇಷ ಭಾಷಣಗಳ ಮಧ್ಯೆ ನೆಮ್ಮದಿಯ ಮಾತು ಕೇಳಲು ದೇಶ ಹಾತೊರೆಯುತ್ತಿದೆ : ಮುಹಮ್ಮದ್ ಕುಂಞಿ

Update: 2023-08-05 14:11 GMT

ಭಟ್ಕಳ: ದೇಶದಲ್ಲೀಗ ದ್ವೇಷ ಭಾಷಣೆಗಳು ಸದ್ದು ಮಾಡುತ್ತಿವೆ. ಇದರಿಂದಾಗಿ ದೇಶದ ತುಂಬೆಲ್ಲ ಕಲಹ, ಗಲಭೆಗಳು ಸೃಷ್ಟಿಯಾಗುತ್ತಿವೆ. ಇವುಗಳ ನಡುವೆ ದೇಶದ ಜನತೆ ನಮ್ಮೆದಿಯ ಮತ್ತು ಸಾಂತ್ವಾನದ ಮಾತುಗಳನ್ನು ಆಲಿಸಲು ಹಾತೊರೆಯುತ್ತಿದೆ ಎಂದು ಸದ್ಭಾವನಾ ಮಂಚ್ ಮತ್ತು ಜಮಾಅತೆ ಇಸ್ಲಾಮಿ ಹಿಂದ್ ಕರ್ನಾಟಕ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಕುಂಞಿ ಹೇಳಿದರು.

ಅವರು ಶುಕ್ರವಾರ ಸಂಜೆ ನವಾಯತ್ ಕಾಲೋನಿಯ ರಾಬಿತಾ ಸಭಾಂಗಣದಲ್ಲಿ ಸದ್ಭಾವನಾ ಮಂಚ್ ಹಾಗೂ ಜಮಾಅತೆ ಇಸ್ಲಾಮಿ ಹಿಂದ್ ಭಟ್ಕಳ ಶಾಖೆ ಆಯೋಜಿಸಿದ್ದ ಸದ್ಭಾವನಾ ಪ್ರಶಸ್ತಿ ಮತ್ತು ಸ್ನೇಹಾ ಸಮ್ಮಿಲನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬಾಂಬುಗಳಿಗಿಂತಲೂ ಹೆಚ್ಚು ವಿನಾಶಕಾರಿಯಾಗಿರುವ ದ್ವೇಷದ ಮಾತುಗಳು. ದೆಹಲಿಯಲ್ಲಿ ಯಾರೋ ಮಾಡಿದ ದ್ವೇಷ ಭಾಷಣಗಳು ಕರ್ನಾಟಕ ಸೇರಿದಂತೆ ದೇಶದ ನಾನಾ ರಾಜ್ಯಗಳಲ್ಲಿ ವಿವಿಧ ಜನಸಮುದಾಯಗಳ ನಡುವೆ ಕಿಚ್ಚನ್ನು ಹಚ್ಚುವ ಕೆಲಸ ಮಾಡುತ್ತದೆ. ಹಾಗೆಯೆ ಉಡುಪಿ, ಮಂಗಳೂರಿನಲ್ಲಿ ಮಾಡಿದ ದ್ವೇಷ ಭಾಷಣದ ಪರಿಣಾಮ ದೇಶದ ಉತ್ತರ ಭಾಗದಲ್ಲಿ ಕೋಮುಗಲಭೆ ಸೃಷ್ಟಿಯಾಗಲು ಕಾರಣವಾಗುತ್ತದೆ. ಮಾತು ಬಾಂಬುಗಳಿಗಿಂತಲೂ ಅಪಾಯಕಾರಿಯಾಗಿದೆ ಎಂದ ಅವರು ನಾವು ಇನ್ನೋಬ್ಬರನ್ನು ನೋಯಿಸುವ ದ್ವೇಷಿಸುವ ಮಾತುಗಳನ್ನು ಆಡುವುದನ್ನು ನಿಲ್ಲಿಸಬೇಕು ಎಂದು ಕರೆ ನೀಡಿದರು.

ನಿಮಗೆ ದೇವರ ಮೇಲೆ ನಂಬಿಕೆ ಇದ್ದರೆ, ದೇಶಕ್ಕೆ, ಸಮುದಾಯಕ್ಕೆ, ಸಮಾಜಕ್ಕೆ ಒಳಿತಾಗುವ ಮಾತನ್ನೇ ಆಡಬೇಕು. ನೀವು ಅತ್ಯಂತ ನೇರವಾದ, ಗೌರವಾರ್ಹವಾದ, ಸರಳವಾದ ಮಾತುಗಳನ್ನೇ ಆಡಬೇಕು ಎಂದು ಪವಿತ್ರ ಕುರ್‌ಆನ್ ಕಲಿಸಿಕೊಟ್ಟಿದೆ ಎಂದ ಅವರು ನಮಗೆಲ್ಲ ಬಹಳ ದೊಡ್ಡ ಶ್ರೀಮಂತ ಇತಿಹಾಸವಿದೆ. ಸಹೋದರತೆಯ, ಸಹಬಾಳ್ವೆಯ, ಪ್ರೀತಿಯ, ಸಹಿಷ್ಣುತೆಯ, ಪರಸ್ಪರ ಒಗ್ಗಟ್ಟಿನ ಪರಂಪರೆ ನಮ್ಮದು. ಇಂತಹ ಮಹಾನ್ ಪರಂಪರೆಗೆ ಇಂದು ದಕ್ಕೆ ತರು ವಂತಹ ದ್ವೇಷ ಭಾಷಣಗಳ ಸದ್ದು ಎಲ್ಲೆಡೆ ಕೇಳಿಸತೊಡಗಿದೆ. ಗೂಂಡಾಗಳು, ಅಪರಾಧಿಗಳು ಸಮಾಜದಲ್ಲಿ ಲೀಡರ್ ಆಗುತ್ತಿದ್ದಾರೆ ಅದಕ್ಕಾಗಿ ಸಮಾಜವನ್ನು ತಿದ್ದುವ, ಬದಾಯಿಸುವ ಹೆಚ್ಚೆಚ್ಚು ಕೆಲಸ ಕಾರ್ಯಗಳು ಮಾನುಷ್ಯಪ್ರೇಮಿಗಳಿಂದ ನಡೆಬೇಕು ಎಂದು ಕರೆ ನೀಡಿದರು.

ಸದ್ಭಾವನಾ ಸಿರಿ-2023 ಪಶಸ್ತಿ ಪುರಸ್ಕೃತ ಶ್ರೀಗುರು ವಿದ್ಯಾಧಿರಾಜ ನ್ಯೂ ಇಂಗ್ಲಿಷ್ ಪಿಯು ಕಾಲೇಜಿನ ಪ್ರಾಂಶುಪಾಲ ಡಾ.ವೀರೇಂದ್ರ ಶಾನಭಾಗ ಮಾತನಾಡಿ, ಸಧ್ಯದ ಪರಿಸ್ಥಿತಿಯಲ್ಲಿ ದೇಶಕ್ಕೆ ಸದ್ಭಾವನೆ ಬೇಕಾಗಿದೆ. ಭಟ್ಕಳದಲ್ಲಿ ಯಾವಾ ಗಲೂ ಶಾಂತಿ, ಸೌಹಾರ್ದತೆ ಇದೆ. ಇಂತಹ ಸದ್ಭಾವನೆ ವೇದಿಗಳ ಮೂಲಕ ದೇಶದಲ್ಲಿ ಪ್ರೀತಿ ಪ್ರೇಮ ಮೂಡುವಂತಾಗಲಿ ಎಂದರು. ಸದ್ಬಾವನಾ ಸೇವಾ-2023 ಗೌರವ ಪುರಸ್ಕೃತ ಭಟ್ಕಳ ತಾಲೂಕು ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಸವಿತಾ ಕಾಮಾತ್, ಮುಖ್ಯ ಅತಿಥಿ ರಾಬಿತಾ ಸಂಸ್ಥೆಯ ಅಧ್ಯಕ್ಷ ಉಮರ್ ಫಾರೂಖ್ ಮುಸ್ಬಾ, ಪ್ರಧಾನ ಕಾರ್ಯದರ್ಶಿ ಡಾ. ಅತಿಕುರ‍್ರಹ್ಮಾನ್ ಮುನಿರಿ, ಭಟ್ಕಳ ಡಿ.ವೈ.ಎಸ್.ಪಿ ಶ್ರೀಕಾಂತ್ ಪಿ., ತಂಝೀಮ್ ಸಂಸ್ಥೆಯ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ ಮಾತನಾಡಿದರು.

ಸದ್ಭಾವನಾ ಸೇವಾ -2023 ಗೌರವ ಪುರಸ್ಕೃತ ಹಿರಿಯ ಸಮಾಜ ಸೇವಕ ನಝೀರ್ ಕಾಶಿಮಜಿ, ಸದ್ಭಾವನಾ ಮಂಚ್ ಗೌರವ ಅಧ್ಯಕ್ಷ ಮೌಲಾನ ಮುನವ್ವರ್ ಪೇಶಮಾಮ್, ಜಮಾಅತೆ ಇಸ್ಲಾಮಿ ಹಿಂದ್ ಉತ್ತರಕನ್ನಡ ಜಿಲ್ಲಾ ಸಂಚಾಲಕ ಅಬ್ದುಲ್ ಮನ್ನಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸದ್ಭಾವನಾ ಮಂಚ್ ಅಧ್ಯಕ್ಷ ಸತೀಶ್ ಕುಮಾರ್ ಪ್ರಸ್ತಾವಿಕವಾಗಿ ಮಾತನಾಡಿ ಎಲ್ಲರನ್ನೂ ಸ್ವಾಗತಿಸಿದರು. ಕಾರ್ಯದರ್ಶಿ ಎಂ.ಆರ್. ಮಾನ್ವಿ ಕಾರ್ಯಕ್ರಮ ನಿರೂಪಿಸಿದರು. ಜ.ಇ.ಹಿಂದ್ ಭಟ್ಕಳ ಶಾಖೆಯ ಕಾರ್ಯದರ್ಶಿ ಅಬ್ದುಲ್ ರವೂಫ್ ಸವಣೂರು ಸದ್ಭಾವನಾ ಮಂಚ್ ಕಾರ್ಯವನ್ನು ಪರಿಚಯಿಸಿದರು. ಅಧ್ಯಕ್ಷ ಮೌಲಾನ ಸೈಯ್ಯದ್ ಝುಬೇರ್ ಎಸ್.ಎಂ. ಧನ್ಯವಾದ ಅರ್ಪಿಸಿದರು.





Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News