ಸಮುದ್ರದಲ್ಲಿ ಈಜಿ ಆಶ್ಚರ್ಯ ಮೂಡಿಸಿದ ಮೀನುಗಾರಿಕಾ ಸಚಿವ ಮಂಕಾಳ ವೈದ್ಯ

Update: 2024-03-10 10:51 GMT

ಭಟ್ಕಳ: ಬೆಳ್ಕೆಯಲ್ಲಿ ಕೃತಕ ಬಂಡೆಗಳ ಅಳವಡಿಕೆ ಉದ್ಘಾಟನೆ ವೇಳೆ ಮೀನುಗಾರಿಕಾ ಸಚಿವ ಮಂಕಾಳ ವೈದ್ಯ ಅವರು ಯಾವುದೇ ಭದ್ರತೆಯಿಲ್ಲದೆ ಅರಬ್ಬಿ ಸಮುದ್ರಕ್ಕೆ ಹಾರಿ, ಆಳ ಸಮುದ್ರದಲ್ಲಿ ಈಜುವ ಮೂಲಕ ತಮ್ಮ ಶೌರ್ಯ ಪ್ರದರ್ಶಿಸಿ ಎಲ್ಲರನ್ನೂ ಬೆಚ್ಚಿ ಬೀಳುವಂತೆ ಮಾಡಿದರು. ಸಚಿವರ ಈ ದಿಢೀರ್ ವರ್ತನೆಯಿಂದ ಅಧಿಕಾರಿಗಳು ಹಾಗೂ ಮೀನುಗಾರರು ಅಚ್ಚರಿಗೊಂಡಿದ್ದಾರೆ.

ಶನಿವಾರ ಸುಮಾರು 5 ನಾಟಿಕಲ್ ಮೈಲು ದೂರದ ಆಳ ಸಮುದ್ರದಲ್ಲಿ ಕೃತಕ ಬಂಡೆಗಳ ಅಳವಡಿಕೆಗೆ ಚಾಲನೆ ನೀಡಲಾಯಿತು. ಅಧಿಕಾರಿಗಳು ಮತ್ತು ಮೀನುಗಾರರೊಂದಿಗೆ ದೋಣಿ ಮೂಲಕ ಸ್ಥಳಕ್ಕೆ ಆಗಮಿಸಿದ ಸಚಿವರು ಬಂಡೆಗಳನ್ನು ಸಮುದ್ರಕ್ಕೆ ತೆಗೆದರು. ಆ ಬಳಿಕ ಪತ್ರಕರ್ತರು, ಮೀನುಗಾರರು, ಅಧಿಕಾರಿಗಳ ಸಮ್ಮುಖದಲ್ಲೇ ಏಕಾಏಕಿ ಸಮುದ್ರಕ್ಕೆ ಹಾರಿ ಈಜಲು ಆರಂಭಿಸಿದರು. ಅಲೆಗಳ ಮೇಲೆ ಅರ್ಧ ಗಂಟೆಗೂ ಹೆಚ್ಚು ಕಾಲ ಸಮುದ್ರದಲ್ಲಿ ತೇಲುತ್ತಾ ವಿಭಿನ್ನ ಈಜು ತಂತ್ರಗಳನ್ನು ಪ್ರದರ್ಶಿಸಿದರು.

ಈ ಪ್ರತಿಕ್ರಿಯಿಸಿರುವ ಬಗ್ಗೆ  ಮೀನುಗಾರ ಮುಖಂಡ ಭಾಸ್ಕರ್ ಮೊಗೇರ್, ಬಹಳ ದಿನಗಳ ನಂತರ ಮೀನುಗಾರಿಕೆ ಇಲಾಖೆಗೆ ಈಜು ಬಲ್ಲ ಸಚಿವರು ಸಿಕ್ಕಿದ್ದಾರೆ. ಮೀನುಗಾರಿಕಾ ಸಚಿವರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಸಚಿವ ಮಂಕಾಳ ವೈದ್ಯ ಮೀನುಗಾರ ಸಮುದಾಯಕ್ಕೆ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಸಮುದ್ರಯಾನ ಮಾಡುವ ಮೀನುಗಾರರಿಗೆ ಹಲವು ಸೌಲಭ್ಯಗಳನ್ನು ನೀಡಿದ್ದಾರೆ ಎಂದು ಹೇಳಿದರು.

ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಮಂಕಾಳ ವೈದ್ಯ, ಬಾಲ್ಯದಲ್ಲಿ ನಾವು ಪ್ರತಿದಿನ ಸಮುದ್ರದಲ್ಲಿ ಈಜುತ್ತಿದ್ದೆವು. ಆದರೆ ನಂತರ ನಮಗೆ ಈಜುವ ಅವಕಾಶ ಸಿಗಲಿಲ್ಲ. ಇಂದು ಬಹಳ ಸಮಯದ ನಂತರ ನಮಗೆ ಅವಕಾಶ ಸಿಕ್ಕಿದೆ ಎಂದರು.








 


 



 


 



Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News