ಕುಮಟಾದ ಮಿರ್ಜಾನ್ ಖಬರ್‌ಸ್ತಾನ ಭೂಮಿ; ಸಂಘಪರಿವಾರದಿಂದ ಅನಗತ್ಯ ವಿವಾದ: ಜಮಾಅತುಲ್ ಮುಸ್ಲಿಮೀನ್ ಆರೋಪ
ಕುಮಟಾ: ತಾಲೂಕಿನ ಮಿರ್ಜಾನ್ ಪಂಚಾಯತ್ ವ್ಯಾಪ್ತಿಯಲ್ಲಿರುವ ಸರ್ವೇ ನಂ.238ರಲ್ಲಿನ 9.12 ಎಕರೆ ಖಬರ್‌ಸ್ತಾನ ಭೂಮಿಯ ಮೇಲೆ ಕಣ್ಣಿಟ್ಟಿರುವ ಸಂಘಪರಿವಾರ ಪಂಚಾಯತ್ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಕೆಲವು ಸಮಾಜ ಘಾತುಕ ಶಕ್ತಿಗಳನ್ನು ಬಳಸಿಕೊಂಡು ಪ್ರಚೋದಿಸುತ್ತಿದ್ದಾರೆ. ಇದು ಮುಂಬರುವ ಲೋಕಸಭೆ ಚುನಾವಣೆಯ ಪೂರ್ವ ಸಿದ್ಧತೆಯಂತೆ ಕಾಣುತ್ತಿದೆ ಎಂದು ಮಿರ್ಜಾನ್ ಜಮಾಅತುಲ್ ಮುಸ್ಲಿಮೀನ್ ಅಧ್ಯಕ್ಷ ಇಬ್ರಾಹೀಮ್ ಬದ್ರುದ್ದೀನ್ ಶೇಕ್ ಆರೋಪಿಸಿದ್ದಾರೆ.
ಈ ಕುರಿತು ಪತ್ರಿಕೆಗೆ ಮಾಹಿತಿ ನೀಡಿದ ಜಮಾಅತುಲ್ ಮುಸ್ಲಿಮೀನ್ ಅಧ್ಯಕ್ಷ ಇಬ್ರಾಹೀಮ್ ಬದ್ರುದ್ದೀನ್ ಶೇಕ್, 1932ರಿಂದಲೂ ಸ.ನಂ 238 ರಲ್ಲಿನ 9 ಎಕರೆ 12 ಗುಂಟೆ ಜಾಗದಲ್ಲಿ ಮುಸ್ಲಿಮರ ದಫನಭೂಮಿ ಹಾಗೂ ದರ್ಗಾ ಇದ್ದು, ಅಲ್ಲಿ ಪ್ರತಿ ವರ್ಷ ಉರೂಸ್ ಮತ್ತಿತರ ಧಾರ್ಮಿಕ ಕಾರ್ಯಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಆ ಸಮಯದಲ್ಲಿ ಕಂದಾಯ ಅಧಿಕಾರಿಗಳು ಖಬರ್‌ಸ್ತಾನ ಬದಲು ‘ಗೋರಸ್ತಾನ’ ಎಂಬ ಪದವನ್ನು ನಮೂದಿಸಿದ್ದರು. 2003ರಲ್ಲಿ ಆಗಿನ ಜಿಲ್ಲಾಧಿಕಾರಿಯವರು ಖಬರ್‌ಸ್ತಾನಕ್ಕೆ ಸುತ್ತಲೂ ಕಾಂಪೌಂಡ್ ಕಟ್ಟಲು ಪರವಾನಿಗೆಯನ್ನು ನೀಡಿದ್ದಾರೆ. ಅಂದಿನಿಂದ ಇಲ್ಲಿಯ ತನಕ ಯಾವುದೇ ಸಮಸ್ಯೆ ಉಂಟಾಗಿಲ್ಲ.
ಆದರೆ, ಎರಡು-ಮೂರು ವರ್ಷಗಳ ಹಿಂದೆ ಕೆಲವು ಸಮಾಜಘಾತುಕರು ‘ಗೋರಸ್ತಾನ’ ಅಂದರೆ ಗೋರಕ್ಷಣೆಯ ಸ್ಥಾನ ಎಂದು ಜನರಲ್ಲಿ ಬಿಂಬಿಸಿ ತಗಾದೆಯನ್ನು ತೆಗೆದು ಸಹಾಯಕ ಆಯುಕ್ತರ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಎಲ್ಲ ದಾಖಲೆಗಳನ್ನು ಪರಿಶೀಲಿಸಿದ ಅಧಿಕಾರಿಗಳು 1966ರ ಪೂರ್ವದಲ್ಲಿ ವಕ್ಫ್ ಬೋರ್ಡ್ನಲ್ಲಿ ಖಬರ್‌ಸ್ತಾನ ಎಂದು ನಮೂದಿಸಿದ್ದು, 1976-77 ರ ಗೆಜೆಟ್ನಲ್ಲಿ ಇದು ಪ್ರಕಟಗೊಂಡಿದೆ ಎಂದು ತಿಳಿಸಿ ಇದು ಮುಸ್ಲಿಮರಿಗೆ ಸೇರಿದ ಸ್ಥಳವೆಂದು ಆದೇಶಿಸಿ ಅರ್ಜಿಯನ್ನು ವಜಾಗೊಳಿಸಿದ್ದರು. ಇದು ಸರಕಾರದ ಜಮೀನು ಅಲ್ಲ, ಇದು ಮುಸ್ಲಿಮರ ಖಬರ್‌ಸ್ತಾನಕ್ಕೆ ಸೇರಿದ ಆಸ್ತಿ. ಇದರ ಕಾಂಪೌಂಡ್ ನಿರ್ಮಾಣಕ್ಕೆಂದು 2 ಲಕ್ಷ ರೂ. ಬಿಡುಗಡೆಗೊಂಡಿದೆ. ಆದರೆ, ಈಗ ಲೋಕಸಭೆ ಚುನಾವಣೆಯ ಪೂರ್ವದಲ್ಲಿ ಇಂತಹ ವಿವಾದ ಹುಟ್ಟುಹಾಕಿ ರಾಜಕೀಯ ಲಾಭ ಪಡೆಯಲು ಸಂಘಪರಿವಾರ ಹುನ್ನಾರ ನಡೆಸಿದೆ ಎಂದು ಆರೋಪಿಸಿದರು.
ಕೆಲವು ದಿನಗಳ ಹಿಂದೆ ಗೋರಿಗಳನ್ನು ಅಗೆಯುವಾಗ ಬಿಜೆಪಿ ಸಂಘಪರಿವಾರದ ಮುಖಂಡರು ಜನರನ್ನು ಸೇರಿಸಿ ವಿರೋಧ ವ್ಯಕ್ತಪಡಿಸಿ ಘರ್ಷಣೆಗೆ ಕಾರಣರಾಗಿದ್ದಾರೆ. ನಾವು ಎಲ್ಲ ದಾಖಲೆಗಳೊಂದಿಗೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸು ತ್ತೇವೆ. ಮತ್ತೆ ಮುಂದೆ ಇಂತಹ ಘರ್ಷಣೆಗೆ ಸರಕಾರ ಅವಕಾಶ ಮಾಡಿಕೊಡಬಾರದು. ಇಲ್ಲಿನ ಹಿಂದೂ-ಮುಸ್ಲಿಮರ ಸೌಹಾರ್ದತೆಗೆ ಧಕ್ಕೆ ತರುವಂತಹ ಸಮಾಜಘಾತುಕರಿಗೆ ತಕ್ಕ ಪಾಠ ಕಲಿಸಬೇಕೆಂದು ಇಬ್ರಾಹೀಮ್ ಬದ್ರುದ್ದೀನ್ ಒತ್ತಾಯಿಸಿದರು.
‘ಮುಸ್ಲಿಮರು ಯಾವುದೇ ಅತಿಕ್ರಮಣ ಮಾಡಿಲ್ಲ’ ಮಿರ್ಜಾನ್ ಖಬರ್‌ಸ್ತಾನ ಭೂಮಿಯು ಮುಸ್ಲಿಮರ ಅಧೀನದಲ್ಲಿದೆ. ಮೂಲ ದಾಖಲೆಗಳಲ್ಲಿ ‘ಗೋರಸ್ತಾನ’ ಎಂದು ನಮೂದಾಗಿದೆ. ಇದನ್ನು ವಿರೋಧಿಸುವವರು ಇದು ಗೋರಕ್ಷಣೆ ಸ್ಥಳ ಎಂದು ಹೇಳುತ್ತಿದ್ದಾರೆ. ಆದರೆ, ಇದು ಸರಿಯಲ್ಲ. ಗೋರಸ್ತಾನ ಎಂದರೆ ಖಬರ್‌ಸ್ತಾನ ಎಂದು ಅರ್ಥ. ಮುಸ್ಲಿಮರು ಯಾವುದೇ ಅತಿಕ್ರಮಣ ಮಾಡಿಲ್ಲ. ವಕ್ಫ್ ಬೋರ್ಡ್ ನಿಂದ ಮಂಜೂರಾಗಿರುವ 9 ಎಕರೆ 12 ಗುಂಟೆಯ ಒಳಗೆ ಇದ್ದಾರೆ. ಇದನ್ನು ಸರ್ವೇ ಮಾಡಿ ಗಡಿ ಗುರುತಿಸುವ ಕಾರ್ಯ ಆಗಬೇಕು. ಈಗ ಪ್ರಕರಣ ಕೋರ್ಟ್ನಲ್ಲಿರುವುದರಿಂದ ವಿಳಂಬವಾಗಿದೆ. ಇಲ್ಲಿ ಯಾವುದೇ ಅತಿಕ್ರಮಣ ನಡೆದಿಲ್ಲ.
-ಸತೀಶ್ ಗೌಡ, ತಹಶೀಲ್ದಾರ್, ಕುಮಟಾ