ಲೋಕಸಭಾ ಚುನಾವಣೆ| ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯನ್ನು 2 ದಿನದಲ್ಲಿ ಬಿಡುಗಡೆ ಮಾಡುತ್ತೇವೆ: ಸಿಎಂ ಸಿದ್ದರಾಮಯ್ಯ

Update: 2024-03-06 13:32 GMT

ಮುಖ್ಯಮಂತ್ರಿ ಸಿದ್ದರಾಮಯ್ಯ

ಶಿರಸಿ: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯನ್ನು 2 ದಿನದಲ್ಲಿ ಬಿಡುಗಡೆ ಮಾಡುತ್ತೇವೆ. ಪಟ್ಟಿ ಅಂತಿಮವಾಗುವ ಮೊದಲು ಕೇಂದ್ರ ಚುನಾವಣೆ ಸಮಿತಿಯನ್ನು ಭೇಟಿ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಅವರು ಬುಧವಾರ ನಗರದ ಹೊಟೆಲ್ ಸುಪ್ರಿಯಾ ಇಂಟರ್ ನ್ಯಾಶನಲ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಾಸ್ತವಿಕ ನೆಲೆಗಟ್ಟಿನಲ್ಲಿ, ಚಿಂತಕ, ಹಿರಿಯ ಸಾಹಿತಿ ನಾ.ಡಿಸೋಜಾ ಅವರಿಗೆ ಈ ಬಾರಿಯ ಪಂಪ ಪ್ರಶಸ್ತಿ ನೀಡಲಾಗಿದ್ದು, ಬೆಂಗಳೂರಿನಲ್ಲಿ ಕೊಟ್ರು ಒಂದೇ, ಉತ್ತರಕನ್ನಡ ಜಿಲ್ಲೆಯಲ್ಲಿ ಕೊಟ್ರು ಒಂದೇ, ಪ್ರಶಸ್ತಿಗೆ ಅದರದ್ದೇ ಆದ ಗೌರವವಿದೆ ಎಂದರು.

ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಐವರನ್ನು ಈಗಾಗಲೇ ಬಂಧಿಸಲಾಗಿದ್ದು, ಪೊಲೀಸ್ ಇಲಾಖೆಯ ಎಫ್.ಎಸ್.ಎಲ್ ವರದಿ ಆಧಾರ ಮೇಲೆ ತನಿಖೆ ಮಾಡುತ್ತೇವೆ. ಬಿಜೆಪಿ ನೀಡಿದ ಖಾಸಗಿ ಎಫ್.ಎಸ್.ಎಲ್ ವರದಿ ಒಪ್ಪುವುದಿಲ್ಲ ಎಂದರು.

ಕಾಂಗ್ರೆಸ್ ನಲ್ಲಿ ಹಣ ತೆಗೆದುಕೊಂಡು ಟಿಕೆಟ್ ಪದ್ಧತಿ ಇಲ್ಲ. ರಾಜಕೀಯ ನಿಂತ ನೀರಲ್ಲ. ಹೆಬ್ಬಾರ್ ಕಾಂಗ್ರೆಸ್ ಸೇರ್ಪಡೆಯ ಕುರಿತು ನನ್ನ ಜತೆ ಮಾತನಾಡಿಲ್ಲ. ಕಾಂಗ್ರೆಸ್ ಗೆ ಯಾರೂ ಬಂದರೂ ಮುಕ್ತ ಸ್ವಾಗತವಿದ್ದು, ಆದರೆ ಕಾಂಗ್ರೆಸ್ ತತ್ವ ಸಿದ್ಧಾಂತ ಒಪ್ಪಿ ಬರಬೇಕು. ಜಿಲ್ಲಾ ಕಾಂಗ್ರೆಸ್ ಅಭಿಪ್ರಾಯ ಪಡೆದು ಪಕ್ಷಕ್ಕೆ ತೆಗೆದುಕೊಳ್ಳುತ್ತೇವೆ ಎಂದು ಪ್ರತಿಕ್ರಿಯಿಸಿದರು.

ಬಿಜೆಪಿಯವರು ಆಫರೇಷನ್ ಕಮಲ ಮಾಡಲು ನಿಸ್ಸಿಮರು. ಜನರ ಆಶೀರ್ವಾದ ಇಲ್ಲದೇ ಅಧಿಕಾರಕ್ಕೆ ಬರುತ್ತಾರೆ. ಬಿಜೆಪಿಯವರಿಗೆ ಪ್ರಜಾಪ್ರಭುತ್ವ, ಸಂವಿಧಾನದ ಮೇಲೆ ನಂಬಿಕೆ ಇಲ್ಲ. ಬಾಯಿಗೆ ಬಂದ ಹಾಗೇ ಮಾತನಾಡುವುದು ಬಿಜೆಪಿ ಸಂಸ್ಕೃತಿ ಎಂದು ಕಿಡಿಕಾರಿದರು.

ಕುಡಿಯುವ ನೀರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. 854 ಕೋಟಿ ರೂ.‌ ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿದೆ. ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಸಹಾಯವಾಣಿ ತೆರೆದಿದ್ದೇವೆ. ವಾರಕ್ಕೊಮ್ಮೆ ಗ್ರಾಮ ಲೆಕ್ಕಾಧಿಕಾರಿ, ಅಭಿವೃದ್ಧಿ ಅಧಿಕಾರಿ ಸಭೆ ನಡೆಸಬೇಕು ಎಂದು ಹೇಳಿದ್ದೇನೆ. ಲೋಪವಾದರೆ ಜಿಲ್ಲಾಧಿಕಾರಿ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಕರ್ನಾಟಕದಲ್ಲಿ 4 ಲಕ್ಷದ 30 ಸಾವಿರ ಕೋಟಿ ರೂ. ತೆರಿಗೆ ಸಂಗ್ರಹವಾಗುತ್ತದೆ. ತೆರಿಗೆ ಹಣದಲ್ಲಿ ಕರ್ನಾಟಕಕ್ಕೆ ಬಹಳ ದೊಡ್ಡ ಅನ್ಯಾಯವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಹಣ ಪ್ರಿಂಟ್ ಹಾಕ್ತಾರ. ನಮ್ಮ ತೆರಿಗೆ ನಮಗೆ ನೀಡಲಿ. ಅದು ನಮ್ಮ ಹಕ್ಕು. 100 ತೆರಿಗೆ ಪಾವತಿ ಮಾಡಿದರೆ ಕೇವಲ 13 ರೂ. ನೀಡುತ್ತಿದ್ದಾರೆ. ಇದು ಕನ್ನಡಿಗರಿಗೆ ಮಾಡುತ್ತಿರುವ ಅನ್ಯಾಯ. ಕೇಂದ್ರ ಸರ್ಕಾದ ಧೋರಣೆಯನ್ನು ಕನ್ನಡಿಗರಾದ ನಾವು ವಿರೋಧಿಸಬೇಕು ಎಂದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News