ಮುಂಗಾರು ಆರಂಭ: ಉತ್ತರ ಕನ್ನಡದ ಹೆದ್ದಾರಿಗಳಲ್ಲಿ ಮತ್ತೆ ಗುಡ್ಡ ಕುಸಿತದ ಭೀತಿ

Update: 2024-06-23 08:54 GMT

ಕಾರವಾರ: ಮಳೆ ಆರಂಭಗೊಂಡಿದ್ದರಿಂದ ಉತ್ತರ ಕನ್ನಡ ಜಿಲ್ಲೆಯ ಗ್ರಾಮೀಣ ಪ್ರದೇಶ, ಗುಡ್ಡಗಾಡು ವ್ಯಾಪ್ತಿ, ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ವಿವಿಧ ರಾಜ್ಯ ರಸ್ತೆಗಳಲ್ಲಿ ಪ್ರಯಾಣಕ್ಕೆ ಜನರಲ್ಲಿ ಗುಡ್ಡ ಕುಸಿತದ ಆತಂಕ ಸೃಷ್ಟಿಸಿದೆ.

ಜಿಲ್ಲೆಯ ಕರಾವಳಿಯಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ಚತುಷ್ಪಥವನ್ನಾಗಿ ಮಾಡುತ್ತಿರುವ ಐಆರ್‌ಬಿ ಕಾಮಗಾರಿಯಿಂದಾಗಿ ಅನೇಕ ಕಡೆಗಳಲ್ಲಿ ಈ ಹಿಂದೆ ಗುಡ್ಡ ಕುಸಿತ ಉಂಟಾಗಿದೆ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಪಕ್ಕದ ಗುಡ್ಡಗಳನ್ನೇ ಅಗೆದಿದ್ದರಿಂದ ಮಳೆಗಾಲದ ಸಂದರ್ಭದಲ್ಲಿ ಕುಸಿತವಾಗಿ ಸಾವು-ನೋವು ಸಂಭವಿಸಿತ್ತು. ಸದ್ಯ ಮಳೆಗಾಲ ಆರಂಭಗೊಂಡಿದ್ದರಿಂದ ಜನರು ಮತ್ತೆ ಆತಂಕದಲ್ಲಿದ್ದಾರೆ.

ಕಾರವಾರದಲ್ಲಿ ನಿರ್ಮಾಣ ಮಾಡಲಾಗಿರುವ ಟನಲ್ ಒಳಭಾಗದಲ್ಲಿ ಮಳೆ ನೀರು ಸೋರಿಕೆ ಹಾಗೂ ಗುಡ್ಡ ಕುಸಿತದ ಭೀತಿಯೂ ಜನರಲ್ಲಿದೆ. ಕಳೆದ ವರ್ಷ ಕುಸಿತದ ಭೀತಿಯಿಂದ ಟನಲ್ ಮೂಲಕ ಸಂಚಾರ ಬಂದ್ ಮಾಡಲಾಗಿತ್ತು. ತಜ್ಞರ ತಂಡ ಬಂದು ಪರಿಶೀಲನೆ ಕೈಗೊಂಡ ಬಳಿಕ ಹಾಗೂ ವಿವಿಧ ಸಂಘಟನೆಯ ಹೋರಾಟದ ಬಳಿಕ ಟನಲ್ ಮಾರ್ಗದ ಸಂಚಾರವನ್ನು ಜಿಲ್ಲಾಡಳಿತ ಆರಂಭಿಸಿತ್ತು. ಅದರಂತೆ ಕಳೆದ ವರ್ಷ ಮಳೆಗಾಲದಲ್ಲಿ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ ಹಾಗೂ ಭಟ್ಕಳದಲ್ಲಿ ಕಳೆದ ವರ್ಷ ಅಲ್ಲಲ್ಲಿ ಗುಡ್ಡ ಕುಸಿತವಾದ ಬಗ್ಗೆ ವರದಿಯಾಗಿತ್ತು.

ಜಿಯಾಲಜಿಕಲ್ ಸರ್ವೇ ಆಫ್ ಇಂಡಿಯಾದ ತಜ್ಞ ಅಧಿಕಾರಿಗಳು ನೀಡಿದ ಪ್ರಾಥಮಿಕ ವರದಿಯಂತೆ ಉತ್ತರ ಕನ್ನಡ ಜಿಲ್ಲೆಯಲ್ಲಿ 439 ಗುಡ್ಡ ಕುಸಿತ ಪ್ರದೇಶಗಳಿವೆ ಎಂದು ಪಟ್ಟಿ ಮಾಡಲಾಗಿತ್ತು. ಅದನ್ನಾಧರಿಸಿ ತುರ್ತು ಪರಿಹಾರ ಕಾರ್ಯ ಕೈಗೊಳ್ಳಲು ಅನುದಾನ ಬೇಕು ಎಂದು ಜಿಲ್ಲಾಡಳಿತ ಸರಕಾರಕ್ಕೆ ಪತ್ರ ಬರೆದಿದೆ. ಆದರೆ, ಸರಕಾರ ಅನುದಾನ ಬಿಡುಗಡೆ ಮಾಡಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ.

2021ರ ಜುಲೈನಲ್ಲಿ ಮಹಾ ಮಳೆಗೆ ಯಲ್ಲಾಪುರದ ಕಳಚೆ ಗ್ರಾಮದಲ್ಲಿ ಭಾರೀ ಭೂ ಕುಸಿತವಾಗಿತ್ತು. ಇದರಿಂದ 300 ಕುಟುಂಬಗಳು ನಿರಾಶ್ರಿತವಾಗಿದ್ದವು. 268 ಹೆಕ್ಟೇರ್ ಕೃಷಿ ಭೂಮಿ ನಾಶವಾಗಿತ್ತು. 1,953 ಹೆಕ್ಟೇರ್ ಅರಣ್ಯ ಮಣ್ಣಿನಡಿ ಸಿಲುಕಿತ್ತು. ಘಟನೆ ನಡೆದ ಕೆಲವೇ ದಿನಗಳಲ್ಲಿ ಅಂದಿನ ಸಿಎಂ ಬಸವರಾಜ ಬೊಮ್ಮಾಯಿ ಸ್ಥಳಕ್ಕೆ ಭೇಟಿ ನೀಡಿದ್ದರು. ಗುಡ್ಡ ಕುಸಿತದ ಕಾರಣ ತಿಳಿಯಲು ವಿಶೇಷ ಅಧ್ಯಯನ ನಡೆಸುವ ಘೋಷಣೆ ಮಾಡಿದ್ದರು. ಅದರಂತೆ ಅದೇ ವರ್ಷ ಜಿಐಎಸ್ ತಂಡ ಭೇಟಿ ನೀಡಿ, ಪ್ರಾಥಮಿಕ ವರದಿ ನೀಡಿತ್ತು. 2023ರಲ್ಲಿ ತಂಡ ಇನ್ನೊಮ್ಮೆ ಭೇಟಿ ನೀಡಿದೆ. ಆದರೆ, ಇದುವರೆಗೂ ಅಧ್ಯಯನ ವರದಿ ಜಿಲ್ಲಾಡಳಿತದ ಕೈ ಸೇರಿಲ್ಲ ಎಂದು ತಿಳಿದು ಬಂದಿದೆ.

ಕಳಚೆ ಪ್ರದೇಶದಲ್ಲಿ ಗುಡ್ಡ ಕುಸಿತದಿಂದ ಅಲ್ಲಿನ ಜನ ಭಯಗೊಂಡಿದ್ದರು. ಊರಿಗೆ ಕಡಿತವಾಗಿದ್ದ ರಸ್ತೆ, ವಿದ್ಯುತ್ ಸಂಪರ್ಕ ನೀಡಲಾಗಿತ್ತು. ಮನೆ ಹಾನಿ, ಬೆಳೆ ಹಾನಿಗೆ ಅಲ್ಪ ಪರಿಹಾರ ನೀಡಲಾಗಿತ್ತು. ಮತ್ತೊಮ್ಮೆ ಭೂ ಕುಸಿತ ಉಂಟಾಗಬಹುದು ಎನ್ನುವ ಭೀತಿಯಿಂದ ಕಳಚೆ ಗ್ರಾಮದ 657 ಕುಟುಂಬಗಳು ಸ್ಥಳಾಂತರಕ್ಕೆ ಸರಕಾರಕ್ಕೆ ಮನವಿ ಮಾಡಿದ್ದವು. ಸೂಕ್ತ ಪರಿಹಾರ ನೀಡುವಂತೆ ವಿನಂತಿಸಿದ್ದವು. ಕಳಚೆ ಗ್ರಾಮ ಸ್ಥಳಾಂತರಕ್ಕೆ ಸುಮಾರು 100 ಕೋಟಿ ರೂ. ವಿಶೇಷ ಪ್ಯಾಕೇಜ್ ಬೇಕು ಎಂದು ಅಂದಾಜಿಸಲಾಗಿತ್ತು. ಆದರೆ ಸರಕಾರ ಈ ಬಗ್ಗೆ ಗಮನ ಹರಿಸಿಲ್ಲ ಎಂದು ಜನರು ಆರೋಪಿಸುತ್ತಿದ್ದಾರೆ.

ಕಾಳಿ ಜಲವಿದ್ಯುತ್ ಯೋಜನೆಯ ಭಾಗವಾಗಿರುವ ಕೊಡಸಳ್ಳಿ ಅಣೆಕಟ್ಟೆಯ ಪ್ರದೇಶದಲ್ಲಿ ಮಳೆಗಾಲದ ಸಂದರ್ಭದಲ್ಲಿ ಭೂ ಕುಸಿತವಾಗುತ್ತಿದೆ. ಆದರೆ ಈ ಬಗ್ಗೆ ಕ್ರಮಕೈಗೊಳ್ಳಲು ಸರಕಾರ ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದೆ ಎನ್ನುವ ಆರೋಪವೂ ಇದೆ. ಜಿಲ್ಲಾಡಳಿತ ಈ ಬಗ್ಗೆ ಗಮನ ಹರಿಸಬೇಕು ಎನ್ನುವುದು ಜನರ ಒತ್ತಾಯವಾಗಿದೆ.

2019ರಲ್ಲಿ ಕೊಡಸಳ್ಳಿ ಅಣೆಕಟ್ಟೆಯ ಬಲ ಭಾಗದ ರಸ್ತೆ ಬಿರುಕು ಉಂಟಾಗಿತ್ತು. 2021 ಜುಲೈ 22 ಹಾಗೂ 23ರಂದು ಸುರಿದ ಭಾರೀ ಮಳೆಗೆ ಕೊಡಸಳ್ಳಿ ಅಣೆಕಟ್ಟೆಯ ಇಕ್ಕೆಲಗಳಲ್ಲಿ ಭಾರೀ ಪ್ರಮಾಣದ ಭೂ ಕುಸಿತವಾಗಿತ್ತು. ಅಣೆಕಟ್ಟೆಯ ನೂರು ಮೀಟರ್ ಅಂತರದಲ್ಲಿ ಇಡೀ ಗುಡ್ಡವೇ ಜರಿದು ಬಂದಿತ್ತು. 100 ಎಕರೆ ಅರಣ್ಯ ನಾಶವಾಗಿ, ಕೆಲ ದಿನ ಅಣೆಕಟ್ಟೆಗೆ ರಸ್ತೆಯೂ ಬಂದ್ ಆಗಿತ್ತು.ಆಗ ಸರಕಾರದ ಮನವಿಯಂತೆ ಜಿಯಾಲಜಿಕಲ್ ಸರ್ವೇ ಆಫ್ ಇಂಡಿಯಾದ ತಜ್ಞರು ಬಂದು ಭೇಟಿ ನೀಡಿ, ಪ್ರಾಥಮಿಕ ಅಧ್ಯಯನ ವರದಿಯನ್ನು 2022ರಲ್ಲಿ ಸಲ್ಲಿಸಿದ್ದರು. ಅದನ್ನಾಧರಿಸಿ ಅಧ್ಯಯನ ವರದಿ ನೀಡುವಂತೆ ಜಿಲ್ಲಾಡಳಿತ ಒತ್ತಾಯಿಸಿತ್ತು. ಆದರೆ ಜಿಯಾಲಜಿಕಲ್ ಸರ್ವೇ ಆಫ್ ಇಂಡಿಯಾದ ತಜ್ಞರು ಕೊಡಸಳ್ಳಿ ಬಗ್ಗೆ ಅಧ್ಯಯನವನ್ನು ಇದುವರೆಗೆ ನಡೆಸಿಲ್ಲ ಎಂದು ತಿಳಿದು ಬಂದಿದೆ. ಆ ಭಾಗದಲ್ಲಿ ಕೆಪಿಸಿ ತಾತ್ಕಾಲಿಕ ನಿರ್ವಹಣೆ ಮಾಡಿದ್ದಾರೆ. ಆದರೆ ಬೇರೆ ಅಗತ್ಯ ಕ್ರಮ ಈವರೆಗೆ ಕೈಗೊಂಡಿಲ್ಲ ಎಂದು ತಿಳಿದುಬಂದಿದೆ.

ಕೊಡಸಳ್ಳಿ ಅಣೆಕಟ್ಟೆಯ ಕೆಳಗೆ ಕದ್ರಾ ಅಣೆಕಟ್ಟೆ ಇದೆ. ಕಾಳಿ ನದಿ ಇಕ್ಕೆಲಗಳಲ್ಲಿ 50ಕ್ಕೂ ಹೆಚ್ಚು ಹಳ್ಳಿಗಳಿವೆ. ಸಾವಿರಾರು ಜನಸಂಖ್ಯೆ ಇದೆ. ಕೊಡಸಳ್ಳಿ ಅಣೆಕಟ್ಟೆಗೆ ಅಪಾಯ ಎದುರಾದಲ್ಲಿ ಸಮಸ್ಯೆ ಉಂಟಾಗಲಿದೆ ಎನ್ನುವ ಭೀತಿ ಜನರದ್ದಾಗಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಗಾಲದ ಸಂದರ್ಭದಲ್ಲಿ ಗುಡ್ಡ ಕುಸಿತವಾಗುವಂತಹ ಭೀತಿ ಇರುವ ಪ್ರದೇಶದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ನಡೆಸಲು ಅನುದಾನ ಬೇಕು. ಈ ಬಗ್ಗೆ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಅನುದಾನ ಬಂದ ಮೇಲೆ ಕಾಮಗಾರಿ ನಡೆಸಲಾಗುವುದು.

-ಗಂಗೂಬಾಯಿ ಮಾನಕರ, ಜಿಲ್ಲಾಧಿಕಾರಿ

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News