ಪದವಿ ಪರೀಕ್ಷೆ: ಅಂಜುಮನ್ ವಿದ್ಯಾರ್ಥಿನಿಯರಿಗೆ ನಾಲ್ಕು ರ‍್ಯಾಂಕ್
ಭಟ್ಕಳ: ಭಟ್ಕಳದ ಅಂಜುಮನ್ ಮಹಿಳಾ ಮಹಾವಿದ್ಯಾಲಯದ ವಿದ್ಯಾರ್ಥಿಗಳು ವಿಶ್ವವಿದ್ಯಾನಿಲಯ ಮಟ್ಟದಲ್ಲಿ ನಾಲ್ಕು ರ‍್ಯಾಂಕ್ ಗಳಿಸುವುದರ ಮೂಲಕ ಉತ್ತರ ಕನ್ನಡ ಜಿಲ್ಲೆ ಹಾಗೂ ಭಟ್ಕಳಕ್ಕೆ ಕೀರ್ತಿಯನ್ನು ತಂದಿದ್ದಾರೆ.
ಈ ಕುರಿತಂತೆ ಪ್ರಕಟಣೆಯನ್ನು ನೀಡಿರುವ ಅಂಜುಮನ್ ಮಹಿಳಾ ಮಹಾವಿದ್ಯಾಲಯದ ಪ್ರಾಂಶುಪಾಲೆ ರಯೀಸಾ ಶೇಖ್, ಕರ್ನಾಟಕ ರಾಜ್ಯ ಹೊರಡಿಸಿದ ಟಾಪರ್‌ಗಳ ಪಟ್ಟಿಯಲ್ಲಿ ಅಂಜುಮನ್ ಮಹಿಳಾ ಕಾಲೇಜಿನಲ್ಲಿ ಬಿಕಾಂ ವಿಭಾಗದಲ್ಲಿ ಮೂವರು ಮತ್ತು ಬಿಎ ವಿಭಾಗದ ಒಬ್ಬ ವಿದ್ಯಾರ್ಥಿನಿ ರ‍್ಯಾಂಕ್ ಗಳಿಸಿದ್ದಾರೆ ಎಂದು ತಿಳಿಸಿದ್ದಾರೆ.
ನದೀಮ್ ಅಹ್ಮದ್ ಶಾಬಂದ್ರಿ ಅವರ ಪುತ್ರಿ ನಿಮ್ರಾ, ಬಿಕಾಂನಲ್ಲಿ 96.34% ಅಂಕ ಪಡೆಯುವುದರ ಮೂಲಕ ವಿಶ್ವವಿದ್ಯಾನಿಲಯದಲ್ಲಿ ಅಗ್ರಸ್ಥಾನಗಳಿಸಿದ್ದಾರೆ. ಅಮೀರ್ ಅವರ ಪುತ್ರಿ ಸುಮನ್ 93.30% ಅಂಕಗಳೊಂದಿಗೆ ಏಳನೇ ರ‍್ಯಾಂಕ್ ಪಡೆದರೆ, ಮೊಹಿದ್ದೀನ್ ದಾಮ್ದಾ ಅವರ ಪುತ್ರಿ ಫಾತಿಮಾ ಸಬಾಹಾ ಶೇ 92.65 ಅಂಕಗಳೊಂದಿಗೆ ಹತ್ತನೇ ರ‍್ಯಾಂಕ್ ಗಳಿಸಿದ್ದಾರೆ. ಬಿಎ ವಿಭಾಗದಲ್ಲಿ ಅಲ್ತಾಫ್ ಹುಸೇನ್ ಕೊಬಟ್ಟೆಯವರ ಪುತ್ರಿ ನುಸೈನಾ ವಿಶ್ವವಿದ್ಯಾನಿಲಯ ಮಟ್ಟ ದಲ್ಲಿ ಶೇ.88.62 ಅಂಕ ಪಡೆದು 8ನೇ ರ‍್ಯಾಂಕಿನಲ್ಲಿ ತೇರ್ಗಡೆ ಹೊಂದಿದ್ದಾರೆ.
ಅಂಜುಮನ್ ಶಿಕ್ಷಣ ಸಂಸ್ಥೆಯ ಪೋಷಕ ಡಾ. ಎಸ್ ಎಂ ಸೈಯದ್ ಖಲೀಲುರ್ ರೆಹಮಾನ್, ಅಂಜುಮನ್ ಅಧ್ಯಕ್ಷ ಅಡ್ವೊಕೇಟ್ ಮುಝಮ್ಮಿಲ್ ಕಾಜಿಯಾ, ಪ್ರಧಾನ ಕಾರ್ಯದರ್ಶಿ ಸಿದ್ದಿಕ್ ಇಸ್ಮಾಯಿಲ್, ಹೆಚ್ಚುವರಿ ಕಾರ್ಯದರ್ಶಿ ಇಶಾಕ್ ಶಾಬಂದ್ರಿ, ಮತ್ತು ಅಂಜುಮನ್ ಮಂಡಳಿಯ ಯುಜಿ ಮತ್ತು ಪಿಜಿ ಕಾರ್ಯದರ್ಶಿ ಡಾ. ಎಸ್ ಎಂ ಸೈಯದ್ ಸಲೀಂ, ಇತರ ಆಡಳಿತ ಸದಸ್ಯರು ಮತ್ತು ಪದಾಧಿಕಾರಿಗಳು ರ‍್ಯಾಂಕ್ ವಿಜೇತ ನಾಲ್ವರು ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ. ವಿದ್ಯಾರ್ಥಿಗಳ ಯಶಸ್ಸಿಗೆ ಕಾರಣೀಕರ್ತರಾದ ಅಂಜುಮನ್ ಮಹಿಳಾ ಕಾಲೇಜಿನ ಪ್ರಾಂಶುಪಾಲರು ಮತ್ತು ಸಮಸ್ತ ಶಿಕ್ಷಕ ವೃಂದವನ್ನು ಅವರು ಶ್ಲಾಘಿಸಿದ್ದಾರೆ.