ಆಟೋ ರಿಕ್ಷಾ - ಟಾಟಾ ಎಸ್ ಮಿನಿ ಟ್ರಕ್ ನಡುವೆ ಅಪಘಾತ; ಇಬ್ಬರಿಗೆ ಗಂಭೀರ ಗಾಯ
Update: 2024-02-15 11:05 GMT
ಭಟ್ಕಳ: ಟಾಟಾ ಎಸ್ ಮಿನಿ ಟ್ರಕ್ ಮತ್ತು ಆಟೋ ರಿಕ್ಷಾ ನಡುವೆ ಡಿಕ್ಕಿ ಸಂಭವಿಸಿ ಇಬ್ಬರು ಗಂಭೀರವಾಗಿ ಗಾಯ ಗೊಂಡಿರುವ ಘಟನೆ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಸರ್ಪನಕಟ್ಟೆಯಲ್ಲಿ ಗುರುವಾರ ಬೆಳಿಗ್ಗೆ ನಡೆದಿದೆ.
ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಮಂಜಮ್ಮ ಮೊಗೇರ್ (40) ಮತ್ತು ವೆಂಕಟ್ ರಾಮನ್ ನಾಯ್ಕ್ (52) ಎಂಬುವವರನ್ನು ಭಟ್ಕಳ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.
ರಿಕ್ಷಾ ಚಾಲಕ ಪಾಂಡು ಮಾಸ್ತಪ್ಪ ನಾಯ್ಕ (38) ಹಾಗೂ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಮಂಜುನಾಥ್ ಭಂಡಾರಿ(53) ಎನ್ನುವವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅಪಘಾತದ ನಂತರ ಮಿನಿ ಟ್ರಕ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.