ಭಟ್ಕಳ: ಐತಿಹಾಸಿಕ ಸರಾಬಿ ನದಿ ರಕ್ಷಿಸುವಂತೆ ಆಗ್ರಹಿಸಿ ಬೃಹತ್ ಪ್ರತಿಭಟನೆ
ಭಟ್ಕಳ: ಭಟ್ಕಳದ ಐತಿಹಾಸಿಕ ಸರಾಬಿ ನದಿ ಪುರಸಭೆಯ ಒಳಚರಂಡಿ ಸಂಸ್ಕರಣ ಘಟಕದಿಂದಾಗಿ ಕಲುಷಿತಗೊಂಡಿದ್ದು ಒಂದು ತಿಂಗಳ ಒಳಗೆ ಒಳಚರಂಡಿ ಘಟಕವನ್ನು ಸ್ಥಳಾಂತರಿಸಬೇಕು ಮತ್ತು ಜೀವನದಿಯಾಗಿರುವ ಸರಾಬಿ ನದಿಯಲ್ಲಿ ತುಂಬಿರುವ ಹೂಳನ್ನು ತೆಗೆದು ಅದನ್ನು ಸ್ವಚ್ಚಗೊಳಿಸುವಂತೆ ಆಗ್ರಹಿಸಿ ಸರಾಬಿ ನದಿ ಹೋರಾಟ ಸಮಿತಿ ಭಟ್ಕಳ ಪುರಸಭೆ ಮುಖ್ಯಾಧಿಕಾರಿ ಹಾಗೂ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿತು.
ನೂರಾರು ಪ್ರತಿಭಟನಾಕಾರರು, ಮೊದಲು ಹಳೆ ಬಸ್ ನಿಲ್ದಾಣದ ಬಳಿ ಇರುವ ಪುರಸಭಾ ಕಚೇರಿ ಎದರು ಸರಾಬಿ ನದಿಯ ಗತವೈಭವ ಮರಳಿ ತನ್ನಿ, ಸರಾಬಿ ನದಿಯನ್ನು ರಕ್ಷಿಸಿ ಎಂಬ ಘೋಷಣೆಗಳನ್ನು ಕೂಗುತ್ತ ಪ್ಲೆಕಾರ್ಡ್ ಪ್ರದರ್ಶಿಸಿ ಮುಖ್ಯಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು. ನಂತರ ಹಳೆ ಬಸ್ ನಿಲ್ದಾಣ ಮಾರ್ಗವಾಗಿ ಶಮ್ಸುದ್ದೀನ್ ವೃತ್ತದಿಂದ ತಾಲೂಕಾ ಆಡಳಿತ ಸೌಧದ ಬಳಿ ಸೇರಿ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ತಂಝೀಮ್ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ ಹಾಗೂ ತಂಝಿಮ್ ಮಾಜಿ ಪ್ರಧಾನ ಕಾರ್ಯದರ್ಶಿ ಡಾ. ಹನೀಫ್ ಶಬಾಬ್ ಗತವೈಭವ ಹೊಂದಿರುವ ಸರಾಬಿ ನದಿ ಪುರಸಭೆಯ ಅವೈಜ್ಞಾನಿಕ ನಿರ್ಧಾರದಿಂದಾಗಿ ಇಂದು ಚರಂಡಿಯಾಗಿ ಪರಿವರ್ತನೆಯಾಗಿದೆ. ವರ್ಷಪೂರ್ತಿ ತುಂಬಿ ಹರಿಯುವ ಈ ನದಿ ಇಂದು ಒಣಗಿ ಹೋಗಿದ್ದು ಇದರ ರಕ್ಷಣೆಯ ಹೊಣೆ ಸರ್ಕಾರ ಮತ್ತು ಸಾರ್ವಜನಿಕರದ್ದಾಗಿದೆ ಎಂದರು.
ತಂಝೀಮ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ ಮಾತನಾಡಿ, ಸರಾಬಿ ಹೊಳೆ ಈಗ ಸಂಪೂರ್ಣವಾಗಿ ಹೂಳು ತುಂಬಿ ಬತ್ತಿಹೋಗಿದ್ದು ಕಸಕಡ್ಡಿ ಕೆಸರು ತುಂಬಿ ಕಲುಷಿತಗೊಂಡಿದೆ. ಇದರಿಂದಾಗಿ ಮಳೆಗಾಲದಲ್ಲಿ ನೆರೆಯ ಸ್ಥಿತಿ ನಿರ್ಮಾಣವಾಗಿ ಹೊಳೆ ದಂಡೆಯ ನಿವಾಸಿಗಳಲ್ಲಿ ಆತಂಕದ ಸ್ಥಿತಿ ಉಂಟಾಗಿದೆ ಎಂದ ಅವರು, ಸರಾಬಿ ನದಿಯು ಕಲುಷಿತಗೊಂಡು ಸ್ಥಳೀಯ ನಿವಾಸಿಗರಲ್ಲಿ ಅನಾರೋಗ್ಯ ಸಮಸ್ಯೆ ಕಾಡುತ್ತಿದೆ. ಕಳೆದ ವರ್ಷ ಇಲ್ಲಿ ಸಾಕಷ್ಟು ಡೆಂಗ್ಯೂ ಪ್ರಕರಣಗಳು ವರದಿಯಾಗಿದ್ದು 4-5 ಸಾವುಗಳು ಕೂಡ ಸಂಭವಿಸಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಸರಾಬಿ ನದಿ ಹೋರಾಟ ಸಮಿತಿಯ ಸಂಚಾಲಕ ಮುಸ್ತಫಾ ಅಸ್ಕರಿ ಪ್ರತಿಭಟನಾ ಮೆರವಣೆಗೆಯ ನೇತೃತ್ವ ವಹಿಸಿದ್ದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಮಿತಿ ಸದಸ್ಯ ಕೈಸರ್ ಮೋಹತೆಶಮ್, ತಾಲೂಕು ಆಡಳಿತಕ್ಕೆ ಎಚ್ಚರಿಕೆ ನೀಡಿ ಸಮಸ್ಯೆ ಬಗೆಹರಿಸಲು ವಿಳಂಬ ಮಾಡಿದರೆ ಮುಂದಿನ ಬಾರಿ ವಿಧಾನ ಸೌಧ ಚಲೋ ಪ್ರತಿಭಟನೆಗೆ ಹೋರಾಟ ಸಮಿತಿ ಹಿಂದೆ ಸರಿಯುವುದಿಲ್ಲ ಎಂದರು.
ಸಮಿತಿಯ ಪದಾಧಿಕಾರಿಗಳಾದ ಮೌಲ್ವಿ ಅಂಜುಮ್ ಗಂಗಾವಳಿ ನದ್ವಿ, ಮೌಲ್ವಿ ನಾಯ್ತೆ ನದ್ವಿ, ಶಮೂನ್ ಹಾಜಿ ಫಖಿಹ್, ಮುಬಾಷರ್ ಹುಸೇನ್ ಹಲ್ಲಾರೆ, ಅಶ್ಫಾಕ್ ಕೆ.ಎಂ, ಮೌಲ್ವಿ ಜವಾದ್ ರುಕ್ನುದ್ದೀನ್, ಜುಬೈರ್ ರ‍್ಮಾರ್, ಅಬ್ದುಲ್ ಸಮಿ ಮೆಡಿಕಲ್, ಫಯಾಝ್ ಮುಲ್ಲಾ, ಇಮ್ತಿಯಾಝ್ ಉದ್ಯಾವರ, ಅಸ್ಲಂ ವಲ್ಕಿ, ಮೊಹಮ್ಮದ್ ಗೌಸ್, ನಜೀರ್ ಖಾಸಿಮ್ಜಿ, ಮೊಹತೆಶಮ್ ಜಾನ್ ಅಬ್ದುಲ್ ರಹಮಾನ್, ನಯೀಮ್ ಮೊಟಿಯಾ, ಜಿಲಾನಿ ಶಾಬಂದ್ರಿ, ಅಡ್ವೊಕೇಟ್ ಇಮ್ರಾನ್ ಲಂಕಾ, ಸಿಟಿ ಮೆಡಿಕಲ್ ಇಕ್ಬಾಲ್, ಮೊಹಮ್ಮದ್ ಹುಸೇನ್ ಮುಅಲಿಮ್, ಸಾಜಿದ್ ಮಿಸ್ಬಾ, ಮೊಹತೆಶಮ್ ಹಾಶಿಮ್, ಎಮ್ ಅಬ್ದುಲ್ ಅಮೀರ್, ಎಮ್ ಅಬ್ದುಲ್ ಅಮೀರ್ ಹಮ್ಜಾ, ಸವೂದ್ ಲಂಕಾ, ಹಾರೂನ್ ಸೈಯದ್, ಅಬ್ದುಲ್ ರಶೀದ್ ಐದ್ರುಸಾ, ರ‍್ಷಾದ್ ಸಾದ, ಜಮೀರ್, ರಾಯಿಸ್ ರುಕ್ನುದ್ದೀನ್, ಅಬ್ದುಲ್ ಬಾಸಿತ್ ಗೊಲ್ಟೆ ಸೇರಿದಂತೆ ಹಲವರು ಭಾಗವಹಿಸಿದ್ದರು.