ಮಲ್ಲಾರಿಯಲ್ಲಿ ಕಲ್ಲುಕ್ವಾರಿ: ಸ್ಥಳಿಯರ ಆಕ್ರೋಶ, ಹೂವು ಕಟ್ಟುವ ಮೂಲಕ ವಿನೂತನ ಪ್ರತಿಭಟನೆ

Update: 2024-03-27 16:10 GMT

ಭಟ್ಕಳ: ಸ್ಥಳೀಯರ ಭಾರಿ ಪ್ರತಿರೋಧದ ನಡುವೆಯೂ ಭಟ್ಕಳ ತಾಲೂಕಿನ ಬೆಂಗ್ರೆ ಪಂಚಾಯಿತಿ ವ್ಯಾಪ್ತಿಯ ಮಲ್ಲಾರಿಯ ಶಿಲೆಕಲ್ಲು ಕ್ವಾರಿ ಅವ್ಯಹತವಾಗಿ ಮುಂದುವರೆದಿದ್ದು ಈ ಕುರಿತಂತೆ ಸ್ಥಳೀಯ ಮಹಿಳೆಯರು ಹೂವು ಕಟ್ಟುವ ಮೂಲಕ ವಿನೂತನ ಮಾದರಿಯಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗ್ರೆಯಲ್ಲಿ ಈ ಹಿಂದೆಯೂ ಕ್ವಾರಿ ನಡೆಸಲು ಸ್ಥಳೀಯರು ವಿರೋಧ ವ್ಯಕ್ತಪಡಿಸಿ, ಭಟ್ಕಳ ಉಪವಿಭಾಗಾಧಿಕಾರಿಗಳ ಮೂಲಕ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದರು.

ಆದರೂ ಬೇಂಗ್ರೆಯಲ್ಲಿನ ಕ್ವಾರಿಯಲ್ಲಿ ಚಟುವಟಿಕೆ ನಡೆಯುತ್ತಿತ್ತು. ಈ ಹಿನ್ನೆಲೆಯಲ್ಲಿ ಸ್ಥಳೀಯ ಪಂಚಾಯಿತಿ ಸದಸ್ಯೆ ಮೇಘನಾ ನಾಯ್ಕ ಕಾರವಾರಕ್ಕೆ ತೆರಳಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ದೂರು ನೀಡಿದ್ದರು. ಪಂಚಾಯಿತಿ ವತಿಯಿಂದ ನಾವು ಇಲ್ಲಿ ಕ್ವಾರಿ, ಕ್ರಶರ್ ನಡೆಸಲು ಅನುಮತಿ ನೀಡಿಲ್ಲ. ಇಲ್ಲಿ ಕ್ವಾರಿ ನಡೆಸುತ್ತಿರುವವರ ಕುರಿತು ನಮಗೆ ಮಾಹಿತಿ ಇಲ್ಲ. ಸ್ಥಳೀಯಾಡಳಿತಕ್ಕೆ ಮಾಹಿತಿ ಇಲ್ಲದೆ ನೀವು ಪರವಾನಿಗೆ ನೀಡಿದ್ದು ಸ್ಥಳೀಯರು ಪಂಚಾಯಿತಿ ಸದಸ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸೂಕ್ತ ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದ್ದರು. ಇದಕ್ಕುತ್ತರಿಸಿದ್ದ ಕಾರವಾರದ ಗಣಿ ಮತ್ತು ಭೂ ವಿಜ್ಞಾನಿ ಆಶಾ, ಬೆಂಗ್ರೆಯಲ್ಲಿನ ಕ್ವಾರಿ ಪ್ರದೇಶ ಇರುವ ಸ್ಥಳ ಅದು ಸೇಫ್ ಜೋನ್ ಆಗಿ ಪರಿವರ್ತನೆ ಗೊಂಡಿದೆ. ಅದಕ್ಕೆ ಸ್ಥಳೀಯಾಡಳಿತದ ಅನುಮತಿ ಪಡೆಯುವ ಅಗತ್ಯ ಇಲ್ಲ. ನಾವು ಇಲ್ಲಿಯ ಪರೀಶೀಲನೆ ನಡೆಸಿ ಪರವಾ ನಿಗೆ ನೀಡುತ್ತೇವೆ. ಒಂದು ವೇಳೆ ಸ್ಥಳೀಯರ ವಿರೋಧ ಇದ್ದರೆ ನಾವು ಸ್ಥಳಕ್ಕೆ ಬಂದು ಪರೀಶೀಲನೆ ನಡೆಸುತ್ತೇವೆ ಎಂದು ಹೇಳಿದ್ದರು.

ಗ್ರಾಮ ಪಂಚಾಯಿತಿ ವತಿಯಿಂದ ದೂರು ನೀಡಿದರೂ, ಸ್ಥಳೀಯರ ವಿರೋಧ ಇದ್ದರೂ ಕ್ವಾರಿ ಚಟುವಟಿಕೆ ಮುಂದುವರೆ ಯುತ್ತಿದೆ. ಇದರಿಂದ ಆಕ್ರೋಶಗೊಂಡ ಸ್ಥಳೀಯರು ಮತ್ತೆ ಪ್ರತಿಭಟನೆಗೆ ಮುಂದಾಗಿದ್ದಾರೆ. ಮಲ್ಲಿಗೆ ತೋಟದಿಂದ ಹೂವನ್ನು ಕಿತ್ತು ಕ್ವಾರಿಯಲ್ಲಿ ತೆರಳಿ ಹೂವು ಕಟ್ಟುವ ಮೂಲಕ ಪ್ರತಿಭಟನೆ ನಡೆಸಿದ್ದಾರೆ.

ಸ್ಥಳಕ್ಕೆ ತಹಸೀಲ್ದಾರ ನಾಗರಾಜ ನಾಯ್ಕಡ್ ಭೇಟಿ ನೀಡಿ ಪರೀಶೀಲನೆ ನಡೆಸಿದ್ದಾರೆ. ಕಾರವಾರದ ಗಣಿ ಮತ್ತು ಭೂ ವಿಜ್ಞಾನಿ ಆಶಾ ಸೇರಿದಂತೆ ಇತರ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ಹಿಂದೆ ಕ್ವಾರಿ ನಡೆಸಿ ಬೃಹತ್ ಹೊಂಡ ಗಳನ್ನು ಮುಚ್ಚದೆ ಹಾಗೆ ಬಿಟ್ಟಿರುವದು, ಪರವಾನಿಗೆ ಇಲ್ಲದೆ ಬ್ಲಾಸ್ಟಿಂಗ್ ನಡೆಸುತ್ತಿರುವದು ಎಲ್ಲವನ್ನೂ ಅಧಿಕಾರಿಗಳಿಗೆ ಸ್ಥಳೀಯ ಪಂಚಾಯಿತಿ ಸದಸ್ಯರು ಗಮನಕ್ಕೆ ತಂದಿದ್ದಾರೆ. ಚುನಾವಣಾ ಪ್ರಕ್ರಿಯೆ ಮುಗಿಯವರೆಗೂ ಯಥಾಸ್ಥಿತಿ ಕಾಯ್ದು ಕೊಳ್ಳುವಂತೆ ಗಣಿ ಮತ್ತು ಭೂ ವಿಜ್ಞಾನಿ ಸೂಚಿಸಿದ್ದು ಬಳಿಕ ಜಿಲ್ಲಾಧಿಕಾರಿ ಸಮಕ್ಷಮ, ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದು ಕೊಂಡು ಮುಂದಿನ ನಿರ್ಣಯ ಕೈಗೊಳ್ಳಲಾಗುವದು ಎಂದು ಪ್ರತಿಭಟನಾಕಾರರ ಮನವೊಲಿಸಿದ್ದಾರೆ.

ಈ ಸಂದರ್ಭ ಬೇಂಗ್ರೆ ಗ್ರಾ.ಪಂ ಅಧ್ಯಕ್ಷೆ ಪ್ರಮೀಳಾ ಡಿಕೋಸ್ತಾ, ಮೇಘನಾ ನಾಯ್ಕ, ಜನಾರ್ಧನ ನಾಯ್ಕ, ಪಿಡಿಒ ಉದಯ ಬೋರಕರ, ಇತರರು ಇದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News