ಲೋಕಸಭಾ ಚುನಾವಣೆ| ಹಳಿಯಾಳದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ
ಹಳಿಯಾಳ: ನಮ್ಮ ಪಕ್ಷದ ರಾಹುಲ್ ಗಾಂಧಿಯವರು ಘೋಷಿಸಿದ ಪಂಚ ನ್ಯಾಯದಲ್ಲಿ ಅತಿಕ್ರಮಣದಾರರಿಗೆ ಹಕ್ಕು ಕೂಡ ಸೇರಿದೆ. ನೀವೆಲ್ಲ ಆಶೀರ್ವಾದ ಮಾಡಿದರೆ ಸಂಸತ್ ನ ಮೊದಲ ಅಧಿವೇಶನದಲ್ಲೇ ಈ ಸಮಸ್ಯೆ ಬಗ್ಗೆ ಮಾತನಾಡಿ ಅತಿಕ್ರಮಣದಾರರ ಧ್ವನಿಯಾಗುವೆ ಎಂದು ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಭರವಸೆ ನೀಡಿದರು.
ಹಳಿಯಾಳದಲ್ಲಿ ಹಮ್ಮಿಕೊಂಡಿದ್ದ ಲೋಕಸಭಾ ಚುನಾವಣಾ ಪೂರ್ವಭಾವಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ 10 ವರ್ಷಗಳಿಂದ ಕೇವಲ ಸುಳ್ಳಿನಿಂದಲೇ ನಡೆದಿದೆ. ಹೀಗಾಗಿ ಸುಳ್ಳು ಭರವಸೆಗಳ ವಿರುದ್ಧ ಈ ಚುನಾವಣೆ ನಡೆಯುತ್ತಿದೆ. ಬಡವರಿಗಾಗಿ, ರೈತರಿಗೆ ನ್ಯಾಯ ಕೊಡಿಸಲು, ಮಹಿಳಾ ಸನ್ಮಾನಕ್ಕಾಗಿ ಈ ಚುನಾವಣೆ ನಡೆಯುತ್ತಿದೆ. 10 ವತಷಗಳಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ಏನೂ ಮಾಡಿಲ್ಲವೆಂಬುದು ಜನರಿಗೂ ಗೊತ್ತಿದೆ. ಕಳೆದ ಒಂಬತ್ತು ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ಏನು ಮಾಡಿದೆ ಎಂಬುದೂ ಗೊತ್ತಿದೆ. ಆಪರೇಷನ್ ಮಾಡಿ, ಸುಳ್ಳು ಭರವಸೆ ನೀಡಿ ಮಾಡಿದ ಸರ್ಕಾರ ನಮ್ಮದಲ್ಲ. ನುಡಿದಂತೆ ನಡೆದ ಸರ್ಕಾರವಿದ್ದರೆ ಅದು ಕಾಂಗ್ರೆಸ್ ಎಂದರು.
ಪ್ರತಿ ಕುಟುಂಬಕ್ಕೆ ಐದು ಗ್ಯಾರಂಟಿಯ ಮೂಲಕ ಐದು ಸಾವಿರ ನೀಡಲಾಗುತ್ತಿದೆ. ದೇವಸ್ಥಾನ ಕಟ್ಟುತ್ತೇವೆಂದು ರಾಜಕೀಯ ಮಾಡುವವರು ಬಿಜೆಪಿ. ಜಾತಿ, ಧರ್ಮ ರಾಜಕಾರಣ ಮಾಡುವವರು ಅವರು. ಛತ್ರಪತಿ ಶಿವಾಜಿ ಮಹಾರಾಜರ ಹೆಸರನ್ನ ದುರುಪಯೋಗಪಡಿಸಿಕೊಂಡು ಅವಮಾನ ಮಾಡುತ್ತಿದ್ದಾರೆ. ನಾವು ಶಿವಾಜಿಯವರ ಹೆಸರನ್ನ ರಾಜಕೀಯಕ್ಕೆ ಬಳಸಲ್ಲ; ಆದರೆ ಅವರ ದಾರಿಯಲ್ಲಿ ನಾವು ನಡೆಯುತ್ತೇವೆ. ನಮ್ಮದು ಎಲ್ಲಾ ಜಾತಿಯನ್ನು ಒಗ್ಗೂಡಿಸಿಕೊಂಡು ಹೋಗುವ ಪಕ್ಷ. ಶಿವಾಜಿಯಂತೆ ಮತ್ತೆ ಹಿಂದವಿ ಸ್ವರಾಜ್ಯ ಕಟ್ಟುವ ಕಾಲ ಬಂದಿದೆ ಎಂದರು.
ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರೂ, ಶಾಸಕರೂ ಆದ ಆರ್.ವಿ.ದೇಶಪಾಂಡೆ ಮಾತನಾಡಿ, ಉತ್ತರಕನ್ನಡ ಲೋಕಸಭಾ ಕ್ಷೇತ್ರ ಭೌಗೋಳಿಕವಾಗಿ ವಿಶಾಲ ಕ್ಷೇತ್ರ. ಅಭ್ಯರ್ಥಿಯೇ ಎಲ್ಲೆಡೆ ಪ್ರಚಾರಕ್ಕೆ ತೆರಳಲು ಸಾಧ್ಯವಾಗದ ಕಾರಣ ತಾವೇ ಅಭ್ಯರ್ಥಿ ಎಂದು ಕಾರ್ಯಕರ್ತರು ಮನೆಮನೆಗೆ ಹೋಗಬೇಕು. ಗ್ಯಾರಂಟಿ ಎಂದಾಗ ಮೋದಿ ನಮ್ಮ ಮೇಲೆ ಟೀಕೆ ಮಾಡಿದ್ದರು. ಆದರೀಗ ಅವರೇ 'ಯೇ ಮೋದಿ ಕೀ ಗ್ಯಾರಂಟಿ' ಎನ್ನುತ್ತಾರೆ. ಅವರು ನಮ್ಮ ಗ್ಯಾರಂಟಿ ಶಬ್ದವನ್ನ ಕಳವು ಮಾಡಿದ್ದಾರೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮೋದಿ ಜಾಗೃತರಾಗಿದ್ದಾರೆ. ಎರಡು ಕೋಟಿ ಉದ್ಯೋಗ ಕೊಡುತ್ತೇವೆ ಎಂದ ಬಿಜೆಪಿಯಿಂದ ಈಗ ನಿರುದ್ಯೋಗ ಬೆಳೆದುಬಿಟ್ಟಿದೆ. ರಾಜ್ಯ, ರಾಷ್ಟ್ರಕ್ಕೆ, ಜನರಿಗೆ ಕಾಂಗ್ರೆಸ್ ನ ಅವಶ್ಯಕತೆ ಇದೆ. ಬಡತನ, ಅನಕ್ಷರತೆ, ನಿರುದ್ಯೋಗ ನಿವಾರಣೆ ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ. ಹೀಗಾಗಿ ಈ ಬಾರಿ ಡಾ.ಅಂಜಲಿ ನಿಂಬಾಳ್ಕರ್ ಅವರಿಗೆ ಆಶೀರ್ವದಿಸಿ ಗೆಲ್ಲಿಸಬೇಕಿದೆ. ಪ್ರಾಮಾಣಿಕವಾಗಿ, ನಿಷ್ಠೆಯಿಂದ ಅವರು ಕೆಲಸ ಮಾಡಲಿದ್ದಾರೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಮಾತನಾಡಿ, ಬಿಜೆಪಿಗರ ಸುಳ್ಳು, ಅವರ ದಬ್ಬಾಳಿಕೆಯಿಂದಾಗಿ ನಮಗೆ ಕಳೆದ 30 ವರ್ಷಗಳಿಂದ ನಮ್ಮ ಪಕ್ಷದಿಂದ ಸಂಸದರನ್ನಾಗಿಸಲು ಸಾಧ್ಯವಾಗಿಲ್ಲ. ಅದೇ ಸುಳ್ಳುಗಳು ಅವರಿಗೀಗ ಮುಳ್ಳಾಗಿದೆ. ಪ್ರತಿ ಬಾರಿಯೂ ಹೇಳುವ ಸುಳ್ಳನ್ನು ಜಿಲ್ಲೆಯ ಜನ ನಂಬಲ್ಲ. ಆದರೂ ಈ ಬಾರಿ ಮತ್ತೆ ಯಾವುದಾದರೂ ಸುಳ್ಳನ್ನ ತೆಗೆದುಕೊಂಡು ಚುನಾವಣೆಗೆ ಮತ ಕೇಳಲು ನಿಮ್ಮ ಬಳಿ ಬರುತ್ತಾರೆ. ಅವರು ಮಾಡಿದ್ದೇನೂ ಇಲ್ಲ, ಏನು ಮಾಡಬೇಕೆಂಬುದೂ ಗೊತ್ತಿಲ್ಲ ಎಂದರು.
ನಮ್ಮ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಅವರು ಐದು ವರ್ಷ ಶಾಸಕರಾಗಿ, ವಿರೋಧ ಪಕ್ಷದಲ್ಲಿದ್ದೂ ಅವರ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ಕಿತ್ತೂರು, ಖಾನಾಪುರವೂ ನಮ್ಮ ಕ್ಷೇತ್ರಕ್ಕೇ ಬರುವುದರಿಂದ ಅವರೂ ನಮ್ಮ ಜಿಲ್ಲೆಯವರೇ. ಡಾ.ಅಂಜಲಿ ಒಳ್ಳೆ ಕೆಲಸಗಾರರು. ರಾಜಕೀಯ ಜೀವನದಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದವರು. ಇಂದಿರಾ ಗಾಂಧಿಯವರಂತೆ ಜಿಲ್ಲೆಯಲ್ಲಿ ಕೆಲಸ ಮಾಡಲು ಡಾ.ಅಂಜಲಿ ಇಲ್ಲಿಗೆ ಬಂದಿದ್ದಾರೆ. ಅವರಿಗೆ ಅವಕಾಶ ನೀಡಬೇಕಿದೆ. ಬಿಜೆಪಿಯವರಿಗೆ ಅವಕಾಶ ಕೊಟ್ಟಿದ್ದಕ್ಕೆ ದೇಶವನ್ನೇ ಮಾರಲು ಹೊರಟಿದ್ದಾರೆ. ಸಂವಿಧಾನ ಬದಲಾವಣೆಯೆಂಬ ಕೊನೆಯ ಆಸೆ ಮಾತ್ರ ಅವರದ್ದು ಬಾಕಿ ಇದೆ. ನಾವೆಲ್ಲ ಇಲ್ಲಿ ನಿಂತಿರಲು ಸಂವಿಧಾನ ಕಾರಣ. ಅಂಥ ಕೆಲಸಕ್ಕೆ ನಾವು ಅವರಿಗೆ ಅವಕಾಶ ಮಾಡಿಕೊಡಬಾರದು ಎಂದರು.
ಸಾಮಾನ್ಯ ಜನರಿಗೆ ಕೊಟ್ಟ ಆಶ್ವಾಸನೆಗಳನ್ನ ಬಿಜೆಪಿಗರು ಈಡೇರಿಸಲ್ಲ. ಈಗ ಸುಳ್ಳು ಗ್ಯಾರಂಟಿ ಹಿಡಿದುಕೊಂಡು ಬಂದಿದ್ದಾರೆ. 10 ವರ್ಷಗಳಿಂದ ಸುಳ್ಳು ಹೇಳುತ್ತಲೇ ಇದ್ದಾರೆ. 100 ದಿನ ಕೊಡಿ, ಬದಲಾವಣೆ ತರುತ್ತೇವೆ ಎಂದು ಹಿಂದಿನ ಚುನಾವಣೆಯಲ್ಲಿ ಹೇಳಿದ್ದರು. ನಾವು 60 ವರ್ಷದಲ್ಲಿ ಮಾಡಿದ್ದನ್ನ ಅವರು ಈ 10 ವರ್ಷದಲ್ಲಿ ಬದಲು ಮಾಡಿದ್ದಾರೆ. ಕಾಂಗ್ರೆಸ್ ಮಾಡಿಟ್ಟ ದೇಶದ ಆಸ್ತಿಗಳನ್ನೆಲ್ಲ ಮಾರಿಬಿಟ್ಟಿದ್ದಾರೆ ಎಂದ ಅವರು, ಕಾಂಗ್ರೆಸ್ ನ ಪ್ರತಿಯೊಬ್ಬರೂ ಕೆಲಸ ಮಾಡುವವರು, ಸಾಮಾನ್ಯ ಜನರಿಗೆ ಸ್ಪಂದಿಸುವವರು. ನುಡಿದಂತೆ ನಾವು ನಡೆದಿದ್ದೇವೆ. ಜಿಲ್ಲೆಯ ಅತಿಕ್ರಮಣ ಸಮಸ್ಯೆ ಪರಿಹರಿಸಲು ಕೆಲಸ ಮಾಡಿದ್ದೇವೆ. ಆದರೆ ೨೦೧೮ರಿಂದ ೨೩ರವರೆಗೆ ಒಂದೇ ಒಂದು ಸಭೆ ಆಗಿಲ್ಲ. ಈ ಸಮಸ್ಯೆಗೆ ಅಂತ್ಯ ಕಾಣಿಸಲು, ಅರಣ್ಯ ಅತಿಕ್ರಣದಾರರಿಗೆ ಹಕ್ಕುಪತ್ರ ಕೊಡಲು ಡಾ.ಅಂಜಲಿ ಬಂದಿದ್ದಾರೆ ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಾಯಿ ಗಾಂವ್ಕರ್ ಪ್ರಾಸ್ತಾವಿಕ ಮಾತನಾಡಿ, ಸಾಮಾಜಿಕ ಸೇವೆಗಾಗಿ ರಾಜಕೀಯ ರಂಗ ಪ್ರವೇಶಿಸಿ, ಖಾನಾಪುರ ಶಾಸಕಿಯಾಗಿ ಆಯ್ಕೆಯಾಗಿದ್ದ ಡಾ.ಅಂಜಲಿ ನಿಂಬಾಳ್ಕರ್ ಅವರು ಈಗ ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ವಿನಯಶೀಲ, ಸುಶಿಕ್ಷಿತ, ಸರಳರಾಗಿರುವ ಅವರು, ವೃತ್ತಿಯಿಂದ ವೈದ್ಯರು. ಡಾ.ನಿಂಬಾಳ್ಕರ್ ಅವರು ನಮ್ಮ ಜಿಲ್ಲೆಯ ಧ್ವನಿಯಾಗಿ ಈ ಬಾರಿ ಸಂಸತ್ ಪ್ರವೇಶಿಸುವುದು ಖಂಡಿತ. ಮಾರ್ಗರೇಟ್ ಆಳ್ವಾ ಐದು ವರ್ಷ ಸಂಸದರಾಗಿ ಮಾಡಿದ ಕೆಲಸ 30 ವರ್ಷಗಳಲ್ಲಿ ಅನಂತಕುಮಾರ್ ಹೆಗಡೆಯಿಂದಾಗಿಲ್ಲ. ಮಾತು ಹೆಚ್ಚು, ಕೆಲಸ ಕಡಿಮೆ ಅವರದ್ದು. ಸಂವಿಧಾನ ತಿದ್ದುಪಡಿ ಮಾಡುತ್ತೇವೆ ಎಂದು ಉದ್ಧಟತನ ಮೆರೆಯುವುದು, ಸಿಎಂ ಸಿದ್ದರಾಮಯ್ಯನವರನ್ನೇ ಏಕವಚನದಿಂದ ಹೀಗಳೆದಿದ್ದನ್ನ ಸ್ವತಃ ಅವರದೇ ಪಕ್ಷ ಖಂಡಿಸಿ ಟಿಕೆಟ್ ತಿರಸ್ಕಿಸಿದೆ. ವಿಶ್ವೇಶ್ವರ ಹೆಗಡೆ ಕಾಗೇರಿಯವರದ್ದು ಮಾತೂ ಕಡಿಮೆ, ಕೆಲಸನೂ ಕಡಿಮೆ. ಹೀಗಾಗಿ ಈ ಬಾರಿ ಅವಕಾಶ ನಮ್ಮ ಪಾಲಿಗಿದೆ, ಜನತೆ ನಮ್ಮ ಅಭ್ಯರ್ಥಿ ಡಾ.ಅಂಜಲಿಯವರಿಗೆ ಆಶೀರ್ವದಿಸುವ ವಿಶ್ವಾಸವಿದೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪಾಟೀಲ ಸ್ವಾಗತಿಸಿ ಮಾತನಾಡಿ, ಪ್ರಾಮಾಣಿಕವಾಗಿ ಬೂತ್ ಕಮಿಟಿ ಸದಸ್ಯರು ಕಾರ್ಯನಿರ್ವಹಿಸಬೇಕು. ಗ್ಯಾರಂಟಿ ಯೋಜನೆಗಳ ಬಗ್ಗೆ ಮನೆ ಮನೆಗೆ ಭೇಟಿ ನೀಡಿ ತಿಳಿವಳಿಕೆ ನೀಡುವ ಕಾರ್ಯ ಮಾಡಿದರೆ ನಮ್ಮ ಅಭ್ಯರ್ಥಿಯ ಗೆಲುವು ಕಷ್ಟವೇನಲ್ಲ ಎಂದರು.
ತಾಲೂಕು ಕಾಂಗ್ರೆಸ್ ಮಹಿಳಾ ಘಟಕದಿಂದ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಅವರಿಗೆ ಸನ್ಮಾನಿಸಲಾಯಿತು.
ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸತೀಶ್ ನಾಯ್ಕ, ಕೆಪಿಸಿಸಿ ಸದಸ್ಯ ಸುಭಾಷ್ ಕೊರ್ವೇಕರ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಡಿ.ಚೌಗುಲೆ, ಶಂಕರ್, ತಾಲೂಕು ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಮಾಲಾ, ವಕ್ತಾರ ಉಮೇಶ್ ಬೋಳಶೆಟ್ಟಿ, ಯುವ ಘಟಕದ ಅಧ್ಯಕ್ಷ ರವಿ ತೋರಣಗಟ್ಟಿ ಮುಂತಾದವರಿದ್ದರು.