ಸಂವಿಧಾನ ಬದಲಿಸುತ್ತೇವೆನ್ನುವ ಬಿಜೆಪಿಗರಿಗೆ ಚುನಾವಣೆಗೆ ಸ್ಪರ್ಧಿಸುವ ನೈತಿಕ ಹಕ್ಕಿಲ್ಲ: ಆರ್.ವಿ.ದೇಶಪಾಂಡೆ

Update: 2024-04-03 17:14 GMT

ಸಿದ್ದಾಪುರ: ಸಂವಿಧಾನ ಬದಲಾಯಿಸುವ ಬಗ್ಗೆ ಹೇಳಿಕೆ ನೀಡುವ ಬಿಜೆಪಿಗರಿಗೆ ಸಂವಿಧಾನದಡಿ ನಡೆಯುವ ಚುನಾವಣೆಗೆ ಸ್ಪರ್ಧಿಸುವ ನೈತಿಕತೆಯೇ ಇಲ್ಲ ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರೂ ಆದ ಶಾಸಕ ಆರ್.ವಿ.ದೇಶಪಾಂಡೆ ಹೇಳಿದರು.

ಸಿದ್ದಾಪುರದಲ್ಲಿ ಹಮ್ಮಿಕೊಂಡಿದ್ದ ಉತ್ತರಕನ್ನಡ ಲೋಕಸಭಾ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ಬಲಪಡಿಸುವ ಕಾರ್ಯವಾಗಬೇಕಿದೆ. ಆದರೆ ಪ್ರಜಾಪ್ರಭುತ್ವಕ್ಕೆ ಪ್ರಶ್ನೆಯೊಡ್ಡುವ ಬಗ್ಗೆ ಕೆಲವು ಬಿಜೆಪಿ ಸ್ನೇಹಿತರು ಮಾತನಾಡುತ್ತಾರೆ. 400ಕ್ಕೂ ಅಧಿಕ ಸೀಟು ಬಂದರೆ ಸಂವಿಧಾನ ಬದಲಾವಣೆ ಮಾಡುತ್ತೇವೆನ್ನುತ್ತಾರೆ. ಹೀಗೆ ಹೇಳುವ ಅವರು ಮೂರ್ಖರು. ಮತ ಕೇಳುವ ಅಧಿಕಾರ ಇದೆಯಾ ಇವರಿಗೆ? ಚುನಾವಣೆ ನಡೆಯುತ್ತಿರುವುದೇ ಸಂವಿಧಾನದ ಮೇಲೆ‌. ಸಂವಿಧಾನ ಬದಲಾವಣೆ ಬಗ್ಗೆ ಮಾತನಾಡುವವವರಿಗೆ ಚುನಾವಣೆಗೆ ನಿಲ್ಲುವ ನೈತಿಕ ಹಕ್ಕಿಲ್ಲ. ಒಂದುವೇಳೆ ಎನ್.ಡಿ.ಎ. ಸರ್ಕಾರದ ಗುರಿ ಇದೇಯಾದರೆ ಮುಂದೆ ಬಹಳ ದೊಡ್ಡ ಗಂಡಾಂತರ ಕಾದಿದೆ. ಮತ್ತೆ ಚುನಾವಣೆ ನಡೆಯಲಿಕ್ಕಿಲ್ಲ, ಇದೇ ಕೊನೆಯ ಚುನಾವಣೆ ಆಗಲೂಬಹುದು. ಆದರೆ ರಾಷ್ಟ್ರದ ಜನ ಪ್ರಜ್ಞಾವಂತರು. ಜವಾಬ್ದಾರಿಯಿಂದ ಮತ ಚಲಾಯಿಸಲಿದ್ದಾರೆ‌ಂಬ ನಂಬಿಕೆ ಇದೆ ಎಂದರು.

ನಮ್ಮ ಜಿಲ್ಲೆಯ ಇತಿಹಾಸದಲ್ಲಿ ಮಹಿಳೆಯರಿಗೆ ಅವಕಾಶ ಸಿಕ್ಕಿರುವುದು ಕಡಿಮೆ. ಮಾರ್ಗರೇಟ್ ಆಳ್ವಾ ಬಳಿಕ ಓರ್ವ ಮಹಿಳೆಗೆ ಅವಕಾಶ ಸಿಕ್ಕಿರುವುದು ಡಾ.ಅಂಜಲಿ ನಿಂಬಾಳ್ಕರ್ ಅವರಿಗೆ. ಹೀಗಾಗಿ ಮಹಿಳೆಯರ ಜವಾಬ್ದಾರಿ ಹೆಚ್ಚಿದೆ. ಮನೆಮನೆಗೆ ತೆರಳಿ ನಮ್ಮ ಅಭ್ಯರ್ಥಿಯನ್ನ ಗೆಲ್ಲಿಸುತ್ತೇವೆಂದು ಕಂಕಣಬದ್ಧರಾಗಬೇಕಿದೆ ಎಂದರು.

ಆರು ಬಾರಿ ಆಯ್ಕೆಯಾದ ಲೋಕಸಭಾ ಸಂಸದರು ಜಿಲ್ಲೆಗಾಗಿ ಏನು ಮಾಡಿದ್ದಾರೆ? ಮೂರು ದಶಕಗಳಲ್ಲಿ ಕೇಂದ್ರದ ಯಾವ ಯೋಜನೆ ಜಿಲ್ಲೆಗೆ ಬಂದಿದೆ? ತಾಳಗುಪ್ಪ- ಸಿದ್ದಾಪುರ ರೈಲ್ವೆ ಬಂತಾ? ಅರಣ್ಯ ಭೂಮಿ ಅತಿಕ್ರಮಣ ಸಮಸ್ಯೆ ಪರಿಹಾರವಾಯಿತಾ? ಎಂದು ಪ್ರಶ್ನಿಸಿದ ಅವರು, ಸೀಬರ್ಡ್, ಕೈಗಾ ಸ್ಥಾವರ, ಕೊಂಕಣ ರೈಲ್ವೆ ಯೋಜನೆ ಬಂದಿದ್ದು ನಮ್ಮ ಸರ್ಕಾರದ ಅವಧಿಯಲ್ಲಿ. ೩೦ ವರ್ಷದಲ್ಲಿ ಅಗಿರುವ ಒಂದೇ ಒಂದು ಯೋಜನೆ ಇದ್ದರೆ ತೋರಿಸಲಿ ಎಂದು ಸವಾಲೆಸೆದರು.

ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಮಾತನಾಡಿ, ಸುಳ್ಳು ಹೇಳಿಕೊಂಡೇ 10 ವರ್ಷ ಅಧಿಕಾರ ಮಾಡಿದ ಬಿಜೆಪಿಗರಿಗೆ ಮತ ಕೇಳುವ ನೈತಿಕತೆ ಇಲ್ಲ. ಅಂದು ಸಿಲಿಂಡರ್ ದರ 400 ರೂ. ಇದ್ದಾಗ ಬೀದಿಗಿಳಿದು ಅಡುಗೆ ಮಾಡುತ್ತಿದ್ದ ಬಿಜೆಪಿಗರು, ಇದೀಗ ಅಗತ್ಯ ವಸ್ತುಗಳ ಬೆಕೆ ಗಗನಕ್ಕೇರಿದರೂ ನಾಪತ್ತೆಯಾಗಿದ್ದಾರೆ. ಜಿಲ್ಲೆಯ ಸಮಸ್ಯೆಗಳ ಬಗ್ಗೆ ಒಂದೇ ಒಂದು ದಿನ ಸಂಸತ್ ನಲ್ಲಿ ಧ್ವನಿ ಎತ್ತಿಲ್ಲ. ಡಾ.ಅಂಜಲಿ ನಿಂಬಾಳ್ಕರ್ ಸಂಸತ್ ನಲ್ಲಿ ಜಿಲ್ಲೆಯ ಜನರ ಧ್ವನಿಯಾಗಲಿದ್ದಾರೆ. ಅರಣ್ಯ ಅತಿಕ್ರಮಣ ಸಕ್ರಮಾತಿ ಮಾಡಲು ಬೇಕಾದ ಅಗತ್ಯ ಕಾನೂನು ತಿದ್ದುಪಡಿ ಮಾಡಿ ಎಂದರೆ ಬಿಜೆಪಿಗರು ಸಂವಿಧಾನ ತಿದ್ದುಪಡಿ ಮಾಡುತ್ತೇವೆನ್ನುತ್ತಾರೆ. ಹೀಗಾಗಿ ಈ ಬಾರಿ ಒಂದು ಅವಕಾಶ ನಮ್ಮ ಅಭ್ಯರ್ಥಿಗೆ ನೀಡಬೇಕಿದೆ ಎಂದು ಮನವಿ ಮಾಡಿದರು.

ಶಿರಸಿ ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಕೇಂದ್ರದ ಬಿಜೆಪಿ ಸರ್ಕಾರ 10 ವರ್ಷಗಳಲ್ಲಿ ಮಾಡಿದ್ದೇನಿದೆ? ಬಡವರು, ಜನಸಾಮಾನ್ಯರು, ರೈತರಿಗಾಗಿ ಯಾವ ಯೋಜನೆ ತಂದಿದ್ದಾರೆ? ಕಾಂಗ್ರೆಸ್ ಸರ್ಕಾರ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಮಾಡಿದ ಅಭಿವೃದ್ಧಿ ಕಾರ್ಯಕ್ರಮಗಳಿಂದಲೇ ದೇಶ‌ ಮುನ್ನಡೆಯುತ್ತಿದೆ. ರಾಜ್ಯ ಸರ್ಕಾರ ಘೋಷಿಸಿದ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿ ನುಡಿದಂತೆ ನಡೆದಿದೆ. ದೇಶದ ಏಳ್ಗೆಯ ಕನಸನ್ನ ನನಸು ಮಾಡಿರುವುದು ಕಾಂಗ್ರೆಸ್ ಎಂದರು.

ಅಧಿಕಾರಕ್ಕಾಗಿ ಜಾತಿ, ಧರ್ಮಗಳ ನಡುವೆ ಬಿಜೆಪಿ ಕಿಚ್ಚು ಹಚ್ಚಿದಂತೆ ಕಾಂಗ್ರೆಸ್ ಯಾವತ್ತೂ ಮಾಡಿಲ್ಲ. ಅತಿಕ್ರಮಣ ಸಕ್ರಮಾತಿ ಮಾಡಲು ಜಿಪಿಎಸ್ ಮಾಡಲು ಮುಂದಾಗಿದ್ದು ಕಾಂಗ್ರೆಸ್ ಸರ್ಕಾರ. ಪ್ರಧಾನಿ ಮೋದಿ ಸರ್ಕಾರಕ್ಕೆ ಬಡವರ ಮೇಲೆ ಕಿಂಚಿತ್ತೂ ಕನಿಕರವಿಲ್ಲ. ರಾಜ್ಯದಿಂದ ಆಯ್ಕೆಯಾದ ಸಂಸದರುಗಳಲ್ಲೂ ಯಾರೂ ಸಂಸತ್ ನಲ್ಲಿ ಅತಿಕ್ರಮಣ, ಕಸ್ತೂರಿ ರಂಗನ್ ವರದಿ ಬಗ್ಗೆ ಧ್ವನಿ ಎತ್ತಿಲ್ಲ ಎಂದರು.

ಸಂವಿಧಾನ ಬದಲು ಮಾಡುತ್ತೇವೆಂಬ ಹುಚ್ಚು ಕನಸು ಬಿಜೆಪಿಯದ್ದು. ಇಡೀ‌ ಜಗತ್ತೇ ಮೆಚ್ಚಿದ ಸಂವಿಧಾನವನ್ನ ಬದಲಿಸು ತ್ತೇವೆನ್ನುವ ಬಿಜೆಪಿಗೆ ಮತ ನೀಡಬೇಕೆ? ನಮ್ಮ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಅವರ ಆಯ್ಕೆ ನಮ್ಮೆಲ್ಲರ ಜವಾಬ್ದಾರಿ. ಅವರನ್ನ ಗೆಲ್ಲಿಸುವ ಮೂಲಕ ಕೇಂದ್ರದಲ್ಲೂ ಕಾಂಗ್ರೆಸ್ ಸರ್ಕಾರವನ್ನ ಅಧಿಕಾರಕ್ಕೆ ತರುವ ಕೆಲಸ ಮಾಡೋಣ ಎಂದು ಕರೆ ನೀಡಿದರು.

ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಮಾತನಾಡಿ, ಕಾಂಗ್ರೆಸ್ ಇವತ್ತು, ನಿನ್ನೆ ಹುಟ್ಟಿದ ಪಕ್ಷವಲ್ಲ; ನೂರಾರು ವರ್ಷಗಳ ಇತಿಹಾಸವಿದೆ. ೬೦ ವರ್ಷ ಕಾಂಗ್ರೆಸ್ ಏನು ಮಾಡಿದೆ ಎಂದು ಬಿಜೆಪಿಗರು ಕೇಳುತ್ತಾರೆ. ಬಿಜೆಪಿ ನಾಯಕರು ಹುಟ್ಟಿದ ಆಸ್ಪತ್ರೆಗಳನ್ನ ಕಟ್ಟಿಸಿದ್ದು, ಅವರು ಕಲಿತ ಹಳ್ಳಿಯ ಶಾಲೆಗಳು ನಿರ್ಮಾಣವಾಗಿದ್ದು ಕಾಂಗ್ರೆಸ್ ಆಡಳಿತದಲ್ಲಿ. ಸುಳ್ಳು ಘೋಷಣೆ ಮಾಡಿ, ಚುನಾವಣೆ ಬಂದಾಗ ಕೈಕಾಲು ಹಿಡಿದು ನಮಸ್ಕರಿಸುವವರು ನಾವಲ್ಲ. ಕೊಟ್ಟ ಭರವಸೆಯಂತೆ ಗ್ಯಾರಂಟಿ ಯೋಜನೆಗಳನ್ನ ಈಡೇರಿಸಿದ ಪಕ್ಷ ಕಾಂಗ್ರೆಸ್. ಬಿಜೆಪಿಗರ 10 ವರ್ಷದ ಸುಳ್ಳನ್ನೂ ನೋಡಿ, 10 ತಿಂಗಳ ಗ್ಯಾರಂಟಿ ಯೋಜನೆಗಳನ್ನೂ ನೋಡಿ ಮತ ಚಲಾಯಿಸಿ ಎಂದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಾಯಿ ಗಾಂವ್ಕರ್, ಭೀಮಣ್ಣ ತಮ್ಮ ಐದು ವರ್ಷಗಳ ಅವಧಿಯಲ್ಲಿ ಮಾಡುವ ಕೆಲಸ ವಿಶ್ವೇಶ್ವರ ಹೆಗಡೆ ಕಾಗೇರಿಯವರು ತಮ್ಮ ೪೦ ವರ್ಷಗಳ ಆಡಳಿತದಲ್ಲಿ ಮಾಡಿರಲಿಕ್ಕಿಲ್ಲ. ಕಾಂಗ್ರೆಸ್ ಅಧಿಕಾರದ ಲಾಲಸೆಗೆ ಹುಟ್ಟಿದ್ದಲ್ಲ. ದೇಶದ ಸ್ವಾತಂತ್ರ್ಯಕ್ಕಾಗಿ ಹುಟ್ಟಿದ ಪಕ್ಷ. ಡಾ.ಅಂಜಲಿ ನಿಂಬಾಳ್ಕರ್ ಅವರು ಎಲ್ಲಾ ರೀತಿಯಿಂದಲೂ ಸಮರ್ಥ ಅಭ್ಯರ್ಥಿಯಾಗಿದ್ದು, ಅವರಿಗೆ ಬಹುಮತ ನೀಡಿ ಆರಿಸಿ ತರಬೇಕಿದೆ ಎಂದು ಮನವಿ ಮಾಡಿದರು.

ಬ್ಲಾಕ್ ಕಾಂಗ್ರೆಸ್ ನಿಂದ ಡಾ.ಅಂಜಲಿ ನಿಂಬಾಳ್ಕರ್, ಆರ್.ವಿ.ದೇಶಪಾಂಡೆ, ಮಂಕಾಳ ವೈದ್ಯ, ಭೀಮಣ್ಣ ನಾಯ್ಕ, ಸಾಯಿ ಗಾಂವ್ಕರ್ ಅವರನ್ನು ಸನ್ಮಾನಿಸಲಾಯಿತು.

ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸತೀಶ್ ನಾಯ್ಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ ಮನ್ಮನೆ, ವಿ.ಎನ್.ನಾಯ್ಕ, ಬಿ.ಆರ್.ನಾಯ್ಕ, ಆರ್.ಎಂ.ಹೆಗಡೆ, ಸೀಮಾ ಹೆಗಡೆ, ಇಂದಿರಾ ನಾಯ್ಕ, ಪ್ರಶಾಂತ ನಾಯ್ಕ, ಲಂಬೋದರ ಹೆಗಡೆ, ಅಬ್ದುಲ್, ವೆಂಕಟ್ರಮಣ ಹಸ್ಲರ್, ಶಿವಾನಂದ್, ಸಿ.ಆರ್.ನಾಯ್ಕ, ಸಂತೋಷ್ ಶೆಟ್ಟಿ, ವಿಶ್ವ ಗೌಡ, ಎನ್.ಟಿ.ನಾಯ್ಕ, ಬಾಲಕೃಷ್ಣ ನಾಯ್ಕ, ಎಸ್.ಆರ್.ಹೆಗಡೆ, ನಾಸೀರ್ ವಲ್ಲಿಖಾನ್, ಗಾಂಧೀಜಿ, ಪಾಂಡುರಂಗ ನಾಯ್ಕ, ಗಂಗಾಧರ ಮಡಿವಾಳ, ಮನೋಹರ್ ಗುರಿಕಾರ್, ರಾಜೇಶ್ ಕತ್ತಿ, ಜಯರಾಮ್ ನಾಯ್ಕ, ಪದ್ಮಾಕರ, ಕೆ.ಜಿ.ನಾಯ್ಕ, ಲೀನಾ ಫರ್ನಾಂಡೀಸ್ ಮುಂತಾದವರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News