ಹುಲೇಕಲ್: ಕಾಂಗ್ರೆಸ್ ಪ್ರಚಾರ ಸಭೆ

Update: 2024-04-27 15:18 GMT

ಶಿರಸಿ: ಗ್ಯಾರಂಟಿ ಜಾರಿಯಾದ ಮೇಲೆ ಬಿಜೆಪಿ ಹಾಗೂ ಮೋದಿಯ ನೆಲ ಅಲುಗಾಡಲು ಶುರುವಾಗಿದೆ. ನಮ್ಮ ಗ್ಯಾರಂಟಿ ಬಗ್ಗೆ ಟೀಕೆ ಮಾಡಿದ ಮೋದಿಯವರು ಯಾಕೆ ನಮ್ಮ ಗ್ಯಾರಂಟಿ ನಕಲು ಮಾಡಿದಿರಿ ? ಬಿಜೆಪಿಯವರನ್ನ ಟೀಕಿಸಿ ಮತ ಕೇಳುವ ಅನಿವಾರ್ಯತೆ ನಮಗಿಲ್ಲ. ನಾವು ಮಾಡಿದ ಅಭಿವೃದ್ಧಿ, ಜಾರಿಗೊಳಿಸಿದ ಗ್ಯಾರಂಟಿಗಳ ಹೆಸರಿನಲ್ಲಿ ಮತ ಕೇಳುತ್ತೇವೆ ಎಂದು ಸಚಿವ ಎಚ್.ಕೆ.ಪಾಟೀಲ್ ಹೇಳಿದರು.

ಹುಲೇಕಲ್ ಜಿ.ಪಂ. ವ್ಯಾಪ್ತಿಯ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಸಂವಿಧಾನದ ಮೌಲ್ಯ, ಪ್ರಜಾ ಪ್ರಭುತ್ವದ ಉಳಿವು ಇಂದಿನ ದಿನಗಳಲ್ಲಿ ಪ್ರಶ್ನಾರ್ಹವಾಗುತ್ತಿದೆ. ಹಿಂದಿನ ಚುನಾವಣೆಗಳಿಗೂ ಈ ಬಾರಿಯ ಚುನಾವಣೆಗೂ ಬಹಳ ವ್ಯತ್ಯಾಸವಿದೆ. ಪ್ರಜಾಪ್ರಭುತ್ವದ ಅಳಿವು ಉಳಿವಿನ ಪ್ರಶ್ನೆ ಈ ಚುನಾವಣೆಯಲ್ಲಿದೆ. ಬಿಜೆಪಿ ಗೆದ್ದರೆ ಸಂವಿಧಾನ ಉಳಿಯಲು ಸಾಧ್ಯವೇ ಇಲ್ಲ ಎಂಬಂತಾಗಿದೆ. ಜನರ ಬದುಕಿನ ಅಳಿವು- ಉಳಿವಿನ ಪ್ರಶ್ನೆಯೂ ಈ ಚುನಾವಣೆಯಲ್ಲಿದೆ ಎಂದ ಅವರು, ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆಂದು ಅವರ ಖರ್ಚು ಹೆಚ್ಚು ಮಾಡಿದ್ದಾರೆ. ಯುವಕರಿಗೆ ಎರಡು ಕೋಟಿ ವಾರ್ಷಿಕ ಉದ್ಯೋಗ ಸೃಷ್ಟಿಸುತ್ತೇವೆಂದು ಜೈಕಾರ ಕೂಗಲು ಬಳಸಿಕೊಂಡರು. ಹತ್ತು ವರ್ಷಗಳಿಂದ ಸುಳ್ಳು, ಮೋಸದಿಂದ ನಡೆದ ಸರ್ಕಾರ ಈಗ ಯಾವ ಮುಖವಿಟ್ಟುಕೊಂಡು ಮತ ಕೇಳಲು ಬರುತ್ತಿದ್ದಾರೆ ಎಂದು ಪ್ರಶ್ನಿಸಿದರು.

ಶಿರಸಿ ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಬಡ ಅತಿಕ್ರಮಣದಾರರಿಗೆ ಜಮೀನಿನ ಹಕ್ಕು ನೀಡಬೇಕೆಂಬ ಇಚ್ಛಾಶಕ್ತಿ ಬಿಜೆಪಿಗರಿಗಿಲ್ಲ. ಕಸ್ತೂರಿ ರಂಗನ್ ವರದಿ ಸೇರಿದಂತೆ ಜಿಲ್ಲೆಯ ದೊಡ್ಡ ದೊಡ್ಡ ಸಮಸ್ಯೆಗಳು ಪರಿಹಾರವಾಗಲು ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಬರಬೇಕಿದೆ. ಅದಕ್ಕಾಗಿ ಕಾರ್ಯಕರ್ತರೆಲ್ಲರೂ ತಾವೇ ಅಭ್ಯರ್ಥಿ ಎನ್ನುವಂತೆ ಪ್ರಚಾರ ನಡೆಸಿ‌ ಡಾ.ಅಂಜಲಿ ನಿಂಬಾಳ್ಕರ್ ಅವರನ್ನು ಗೆಲ್ಲಿಸಬೇಕಿದೆ ಎಂದರು.

ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಮಾತನಾಡಿ, ಹಿಂದು- ಮುಸ್ಲಿಂ ಎನ್ನುತ್ತಾ, ರಾಮ- ಶಿವಾಜಿಯವರನ್ನ ರಾಜಕೀಯಕ್ಕೆ ತಂದು ಯುವಕರನ್ನ ತಪ್ಪುದಾರಿಗೆ ಎಳೆಯುವುದಷ್ಟೇ ಬಿಜೆಪಿಗರ ಕೆಲಸ. ನಾವು ಜನಸೇವೆ ಮಾಡಲು ಮತ ಕೇಳುತ್ತಿದ್ದೇವೆ. ೩೦ ವರ್ಷಗಳಿಂದ ಆಯ್ಕೆಯಾದ ಸಂಸದರು ಕ್ಷೇತ್ರದ ಜನರ ಬಗ್ಗೆ ಮಾತನಾಡಿಲ್ಲ ಎಂದರು.

ಜಿ.ಪಂ‌.‌ಮಾಜಿ ಸದಸ್ಯ ಜಿ.ಎನ್.ಹೆಗಡೆ ಮುರೇಗಾರ್, ಅರಣ್ಯ ಹಕ್ಕು ಕಾಯ್ದೆ ತಿದ್ದುಪಡಿಯಾಗಲು ಕಾಂಗ್ರೆಸ್ ಸರ್ಕಾರ ಕೇಂದ್ರದಲ್ಲಿ ಬರಲೇಬೇಕು. ಅದಕ್ಕಾಗಿ ಡಾ.ಅಂಜಲಿ ನಿಂಬಾಳ್ಕರ್ ಅವರನ್ನು ಸಂಸತ್‌ಗೆ ಆಯ್ಕೆ ಮಾಡಿ ಕಳುಹಿಸಿಕೊಡಬೇಕಿದೆ ಎಂದರು‌.

ಈ ಸಂದರ್ಭದಲ್ಲಿ ಕಾಂಗ್ರೆಸ್ ಸಮಿತಿ ಜಿಲ್ಲಾಧ್ಯಕ್ಷ ಸಾಯಿ ಗಾಂವ್ಕರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಶ ಗೌಡ್ರು, ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಬಸವರಾಜ ಗುರಿಕಾರ, ಯೂತ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಶೆಟ್ಟಿ, ಪ್ರಚಾರ ಸಮಿತಿ ಅಧ್ಯಕ್ಷ ವೆಂಕಟೇಶ್ ಹೆಗಡೆ ಹೊಸಬಾಳೆ, ಯಲ್ಲಾಪುರ ಪ್ರಚಾರ ಸಮಿತಿ ಅಧ್ಯಕ್ಷ ಸಿ.ಬಿ.ಗೌಡ, ಜಿ.ಪಂ ಮಾಜಿ ಸದಸ್ಯ ಜಿ.ಎನ್.ಹೆಗಡೆ, ಜ್ಯೋತಿ ಪಾಟೀಲ್, ಶ್ರೀನಿವಾಸ ನಾಯ್ಕ, ಹುಲಿಕಲ್ ಗ್ರಾ.ಪಂ ಅಧ್ಯಕ್ಷ ಖಾಸಿಂ ಸಾಬ್ ಮುಂತಾದವರು ಉಪಸ್ಥಿತರಿದ್ದರು.

ಆಸ್ಪತ್ರೆಯ ಅನಿವಾರ್ಯತೆ ಖುದ್ದು ಅರಿವಾಯಿತು...

ಈ ಜಿಲ್ಲೆಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಅನಿವಾರ್ಯತೆ ಯಾಕಿದೆ ಎನ್ನುವುದು ಖುದ್ದು ನನ್ನ ಅನುಭವಕ್ಕೂ ಬಂದಿದೆ ಎಂದು ಡಾ.ಅಂಜಲಿ ನಿಂಬಾಳ್ಕರ್ ಹೇಳಿದರು.

ಪ್ರಚಾರ ಮುಗಿಸಿ ಶುಕ್ರವಾರ ಯಲ್ಲಾಪುರದಿಂದ ಶಿರಸಿಗೆ ಬರುವ ಮಾರ್ಗಮಧ್ಯದಲ್ಲಿ ಬೈಕ್ ಸ್ಕಿಡ್ ಆಗಿ ಬಿದ್ದು ಯುವಕ ನೋರ್ವ ಗಂಭೀರನಾಗಿದ್ದ. ಸ್ಥಳದಲ್ಲಿ ಅಂಬ್ಯುಲೆನ್ಸ್‌ಗೆ ಕರೆ ಮಾಡಲು ಮೊಬೈಲ್ ನೆಟ್ವರ್ಕ್ ಇಲ್ಲ. ಆಸ್ಪತ್ರೆಗೆ ಕರೆದೊಯ್ದರೆ ಆಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನ್ ಇಲ್ಲ. ತಲೆಗೆ ಗಾಯವಾದರೆ ಅದನ್ನ ತಪಾಸಿಸಲು ಗಾಯಾಳುವನ್ನ ಮಣಿಪಾಲ, ಮಂಗಳೂರಿಗೆ ಕಳುಹಿಸಲೇಬೇಕು ಎನ್ನುತ್ತಾರೆ. ಇದರಿಂದ ಈ ಜಿಲ್ಲೆಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಅವಶ್ಯಕತೆ ಏನಿದೆ ಎಂಬುದು ನನಗೆ ಖುದ್ದು ಅರ್ಥವಾಯಿತು ಎಂದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News