ಮಂಗಳಸೂತ್ರದ ಬಗ್ಗೆ ಮಾತನಾಡುವ ಪ್ರಧಾನಿಗೇನು ಗೊತ್ತು ಅದರ ಮಹತ್ವ?: ಡಾ.ಅಂಜಲಿ ನಿಂಬಾಳ್ಕರ್

Update: 2024-04-28 17:26 GMT

ಸಿದ್ದಾಪುರ: ಹುಟ್ಟಿದ್ದೀನಿ ತಾಯಿ ಹೊಟ್ಟೆಯಲ್ಲಿ, ಬದುಕುತ್ತಿದ್ದೀನಿ ಕನ್ನಡ ನಾಡಿನಲ್ಲಿ, ಹಿಂದೂ ಧರ್ಮದಿಂದ ಮಂಗಳಸೂತ್ರ ಹಾಕಿದ್ದೇನೆ. ದೇಶಕ್ಕಾಗಿ ಸೋನಿಯಾ ಗಾಂಧಿ ಮಂಗಳಸೂತ್ರವನ್ನೇ ಬಲಿದಾನ ನೀಡಿದರು. ಮಂಗಳಸೂತ್ರದ ಬಗ್ಗೆ ಮಾತನಾಡುವ ಪ್ರಧಾನಿಗೆ ಏನು ಗೊತ್ತು ಅದರ ಮಹತ್ವ ಎಂದು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಪ್ರಶ್ನಿಸಿದ್ದಾರೆ.

ಹೊಸುರ ಜನತಾ ಕಾಲೋನಿಯಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ನಮ್ಮ ದೇಶದ ಪ್ರಧಾನಿ ಎಂಬ ಅಭಿಮಾನ ಇದೆ. ಆದರೆ ಇವರ ಹೇಳಿಕೆಯಿಂದ ನೋವಾಗುತ್ತಿದೆ. ರಾಜೀವ್ ಗಾಂಧಿ, ಇಂದಿರಾಗಾಂಧಿ, ನರಸಿಂಹ ರಾವ್, ಮನಮೋಹನ್ ಸಿಂಗ್ ರಂಥ ಪ್ರಧಾನಿಗಳನ್ನ ನೋಡಿದ್ದೇವೆ. ಇವರ ವಾಟ್ಸಪ್ ಯೂನಿವರ್ಸಿಟಿಗೆ ಬಳಸೋ ಮೊಬೈಲ್ ಕೊಟ್ಟಿದ್ದು ನಮ್ಮ ರಾಜೀವ್ ಗಾಂಧಿ. ಗರೀಬಿ ಹಠಾವೋ ಘೋಷಣೆಯನ್ನ ಇಂದಿರಾಗಾಂಧಿ ಅವತ್ತೇ ಕೊಟ್ಟಿದ್ದಕ್ಕೇ ಈಗ ಎಲ್ಲರೂ ಹಾಫ್ ಚಡ್ಡಿಯಿಂದ ಫುಲ್ ಚಡ್ಡಿಗೆ ಬಂದಿದ್ದಾರೆ ಎಂದರು.‌

ಹತ್ತು ವರ್ಷದಿಂದ ಕೇವಲ ನಾನೇ ನಾನೇ ಎಂಬುದು ದೇಶದಲ್ಲಿ ನಡೆಯುತ್ತಿದೆ. ಅಯೋಧ್ಯೆಯಲ್ಲಿ ರಾಮ ಮಂದಿರ ಆಗಬೇಕೆಂದು ಸುಪ್ರೀಂ ಕೋರ್ಟ್‌ನಿಂದ ರಾಜೀವ್ ಗಾಂಧಿ ಪ್ರಧಾನಿಯಾಗಿದ್ದ ಸಮಯದಲ್ಲೇ ತೀರ್ಪು ಬಂದಿತ್ತು. ಅಂದು ಗಲಾಟೆಗಳು ನಡೆದು ಈಗ ಸುಪ್ರೀಂ ಮರು ತೀರ್ಪು ನೀಡಿ ಅಲ್ಲಿ ರಾಮ ಮಂದಿರವೂ ಆಗಬೇಕು, ಸ್ವಲ್ಪ ಜಾಗ ಮುಸ್ಲಿಮರಿಗೂ ಕೊಡಬೇಕು ಎಂದಿತು. ನನಗಿನ್ನೂ ನೆನಪಿದೆ, ಎಲ್.ಕೆ.ಅಡ್ವಾಣಿ ಕರೆ ಕೊಟ್ಟಾಗ ಖಾನಾಪುರದಿಂದ ಇಟ್ಟಿಗೆ ತೆಗೆದುಕೊಂಡು ನಮ್ಮ ಜನ ಅಯೋಧ್ಯೆಗೆ ಹೋಗಿದ್ದರು. ಆದರೆ ಪ್ರಧಾನಿ ಮಂದಿರ ಕಟ್ಟಿದ್ದು ನಾನೇ ಎನ್ನುತ್ತಾರೆ ಎಂದು ಕಿಡಿಕಾರಿದರು.

ಚುನಾವಣೆಗಾಗಿ ಅರ್ಧಂಬರ್ಧ ಮಂದಿರ ತೆರೆದಿದ್ದಾರೆಂದು ಹೋಗಿ ಬಂದವರು ಹೇಳುತ್ತಿದ್ದಾರೆ. ಪೋಸ್ಟರ್‌ಗಳಲ್ಲಿ ಪ್ರಧಾನಿಯದ್ದು ದೊಡ್ಡ ಫೋಟೊ, ರಾಮನದ್ದು ಚಿಕ್ಕ ಫೋಟೊ. ಕೇಳಿದರೆ ರಾಮಲಲ್ಲಾ ಎನ್ನುತ್ತಾರೆ. ನಮ್ಮ ಪೂರ್ವಜರು ಹೇಳಿಕೊಟ್ಟಂತೆ ಸಂಪ್ರದಾಯ ಪಾಲಿಸುತ್ತಿದ್ದೇವೆ. ಯಾವ ರಾಮ ಮಂದಿರಕ್ಕೆ ಹೋದರೂ ರಾಮನ ಮೂರ್ತಿ ಒಂಟಿಯಾಗಿದ್ದನ್ನ ನಾನು ಯಾವತ್ತೂ ನೋಡಿಲ್ಲ. ಯಾವತ್ತೂ ರಾಮ- ಸೀತಾ- ಲಕ್ಷ್ಮಣ ಜೊತೆಯಾಗಿ ಹನುಮಾನ್ ಇದ್ದೇ ಇರುತ್ತಾನೆ. ಆದರೆ ಬಿಜೆಪಿಗರದ್ದು ಏನಿದು ಹೊಸ ಸಂಪ್ರದಾಯ? ಬಿಜೆಪಿಗರೇ ಹೇಳಿದ್ದು ಸತ್ಯ, ಮಾಡಿದ್ದೇ ಇತಿಹಾಸ ಎನ್ನುವುದಾದರೆ ವೇದ- ಪುರಾಣ, ನಮ್ಮ ಪೂರ್ವಜರು ಹೇಳಿಕೊಟ್ಟ ಇತಿಹಾಸ ಏನಾಯಿತು? ಈಗ ಬಿಜೆಪಿಗರ ಹೊಸ ಇತಿಹಾಸ ಕೇಳಬೇಕಾ? ಎಂದು ಪ್ರಶ್ನಿಸಿದ ಅವರು, ಯಾವ ದೇವರಿಗೆ ಹೇಗೆ ಪೂಜೆ ಮಾಡಬೇಕೆಂಬುದು ಇವರು ಹೇಳಬೇಕಾ? ನಮಗೆ ನಮ್ಮ ತಾಯಿ ಹೇಳಿಕೊಟ್ಟಿದ್ದಾಳೆ ಹೇಗೆ ಪೂಜೆ ಮಾಡಬೇಕೆಂದು ಎಂದು ಆಕ್ರೋಶ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News