ಪ್ರಧಾನಿ ಮೋದಿ ಸುಳ್ಳುಗಳ ಸರದಾರ, ಬಿಜೆಪಿ ಸುಳ್ಳಿನ ಕಾರ್ಖಾನೆ: ಸಿಎಂ ಸಿದ್ದರಾಮಯ್ಯ

Update: 2024-05-03 12:10 GMT

ಮುಂಡಗೋಡ: ಯುವಕರು ಕೆಲಸ ಕೊಡಿ ಎಂದರೆ ಪಕೋಡಾ ಮಾರಲು ಹೋಗಿ ಎಂದು ಪ್ರಧಾನಿ ಮೋದಿಯವರು ವಿದ್ಯಾವಂತ ಯುವಜನರಿಗೆ ಬೇಜವಾಬ್ದಾರಿ ಹೇಳಿಕೆ ಕೊಟ್ಟರು. ಮೋದಿ ಮೋದಿ ಎಂದು ಜೈಕಾರ ಹಾಕಿದ ಯುವಕರಿಗೆ ಅವರು ತಿರುಪತಿ ತಿಮ್ಮಪ್ಪನ ನಾಮ ಹಾಕಿದರು. ನರೇಂದ್ರ ಮೋದಿ ಸುಳ್ಳಿನ ಸರದಾರ, ಬಿಜೆಪಿ ಸುಳ್ಳು ಉತ್ಪಾದನಾ ಕೇಂದ್ರ; ಸುಳ್ಳೇ ಅವರ ಮನೆ ದೇವ್ರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು.

ಇಲ್ಲಿ ಹಮ್ಮಿಕೊಂಡಿದ್ದ ಪ್ರಜಾಧ್ವನಿ-2 ಸಮಾವೇಶದಲ್ಲಿ ಮಾತನಾಡಿದ ಅವರು, ನಿರುದ್ಯೋಗ ಸಮಸ್ಯೆ ಬಗೆಹರಿಸಲು ಹೊಸ ಕಾರ್ಖಾನೆ ಸ್ಥಾಪಿಸದೆ, ಬಂಡವಾಳ ಹೂಡಿಕೆಗೆ ಅವಕಾಶವನ್ನೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಾಡಿಕೊಟ್ಟಿಲ್ಲ.‌ ಮೋದಿ ಬಹಳ ಸೊಗಸಾಗಿ ಮಾತನಾಡುತ್ತಾರೆ. ಇವತ್ತಿನವರೆಗೆ ಸುಳ್ಳುಗಳನ್ನೇ ಹೇಳಿ ಅವರು ಜನರನ್ನ ತಪ್ಪು ದಾರಿಗೆ ಎಳೆದು, ಜನರ ಭಾವನೆಗಳನ್ನ ಕೆರಳಿಸಿ, ಜಾತಿ- ಧರ್ಮದ ಹೆಸರಿನಲ್ಲಿ ದ್ವೇಷ ಹರಿಬಿಟ್ಟು ರಾಜಕಾರಣ ಮಾಡುತ್ತಿದ್ದಾರೆ. ಇದನ್ನ ಜನತೆ ಅರ್ಥ ಮಾಡಿಕೊಳ್ಳಬೇಕು. ಸುಳ್ಳು ಹೇಳುವ ಇಂಥವರನ್ನ ಮತ್ತೆ ನಂಬುತ್ತೀರಾ? ದಯಮಾಡಿ ನಂಬಬೇಡಿ. ಅವರು ದೇಶಕ್ಕೆ ಮಾಡಿದ ದೊಡ್ಡ ಮೋಸ ಸುಳ್ಳು ಎಂದರು.

ರೈತರ ಆದಾಯ ದುಪ್ಪಟ್ಟು ಮಾಡುತ್ತೇನೆಂದವರು ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದರು‌. ಬಡವರು ಹಸಿವಿನಿಂದ ಮಲಗಬಾರದು, ಕರ್ನಾಟಕ ಹಸಿವು ಮುಕ್ತ ಮಾಡಬೇಕೆಂದು ಅನ್ನಭಾಗ್ಯದಲ್ಲಿ ಅಕ್ಕಿ ಕೊಟ್ಟೆ. ಬಿಜೆಪಿ ಸರ್ಕಾರ ಬಂದಾಗ ಯಡಿಯೂರಪ್ಪ ಅದರಲ್ಲಿ 2 ಕೆಜಿ ಇಳಿಸಿದರು. ಅಧಿಕಾರಕ್ಕೆ ಬಂದ ತಕ್ಷಣವೇ ಕ್ಯಾಬಿನೆಟ್‌ನಲ್ಲಿ ಡಿಸೈಡ್ ಮಾಡಿ ಗ್ಯಾರಂಟಿ ಯೋಜನೆಗಳನ್ನ ಜಾರಿಗೆ ತಂದೆವು. ಆದರೆ ಆಗಲೂ ಅನ್ನಭಾಗ್ಯಕ್ಕೆ‌ ಅಕ್ಕಿ ಕೊಡದೆ ಜನರಿಗೆ ದ್ರೋಹ ಮಾಡಿದರು ಎಂದರು.

ಈ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗೆ ಆಶೀರ್ವಾದ ಮಾಡಬೇಕು. ನಿಮ್ಮೆಲ್ಲರ ಧ್ವನಿಯಾಗಿ ಕರ್ನಾಟಕದ ಪರವಾಗಿ ಲೋಕಸಭೆಯಲ್ಲಿ ಮಾತನಾಡಲು ಅವಕಾಶ ಮಾಡಿಕೊಡಿ. ಈ ಜಿಲ್ಲೆಯ ಜನ ರಾಜಕೀಯವಾಗಿ ಬುದ್ಧಿವಂತರು. ಪ್ರಬುದ್ಧರು. ದೇಶದ ರಾಜಕೀಯ ವಿಶ್ಲೇಷಣೆ ಮಾಡಬಲ್ಲರು. ಕೊಟ್ಟ ಮಾತನ್ನ ಉಳಿಸಿಕೊಂಡಿರುವವರು ಯಾರು, ನೀಡಿ ರುವ ಭರವಸೆ ಈಡೇರಿಸದ ಪಕ್ಷ ಯಾವುದೆಂದು ಗುರುತಿಸುವ ಸಾಮರ್ಥ್ಯ ನಿಮಗಿದೆ ಎಂದು ಭಾವಿಸಿದ್ದೇನೆ ಎಂದರು.

10 ವರ್ಷಗಳಿಂದ ಪ್ರಧಾನಿಯಾಗಿರುವ ನರೇಂದ್ರ ಮೋದಿ, ನುಡಿದಂತೆ ನಡೆದಿದ್ದಾರೆಂದು ಅನಿಸಿದರೆ ಬೆಂಬಲಿಸಿ‌. ನುಡಿದಂತೆ ನಡೆದಿಲ್ಲವೆಂದಾದರೆ ತಿರಸ್ಕರಿಸಿ.

ಸರ್ವರಿಗೂ ಸಮಪಾಲು ಸಮಬಾಳು ನಮ್ಮ ಧ್ಯೇಯ. ಸಂವಿಧಾನ ರಕ್ಷಣೆಗೆ, ಪ್ರಜಾಪ್ರಭುತ್ವ ಉಳಿಸಲು ಕಾಂಗ್ರೆಸ್ ಬೆಂಬಲಿಸಬೇಕು. ಕಾಂಗ್ರೆಸ್ ಉಳಿಯದಿದ್ದರೆ ನಾವ್ಯಾರೂ ಉಳಿಯಲು ಸಾಧ್ಯವಿಲ್ಲ ಎಂದರು.

"ಡಾ.ಅಂಜಲಿ ನಿಂಬಾಳ್ಕರ್ ಇದೇ ಉತ್ತರ ಕನ್ನಡ ಕ್ಷೇತ್ರದವರು. ಮರಾಠ ಹೆಣ್ಣುಮಗಳಿಗೆ ಕೊಡಬೇಕೆಂದು ಈ ಬಾರಿ ಅವರಿಗೆ ಟಿಕೆಟ್ ನೀಡಿದ್ದೇವೆ. ಅವರ ಕೈಹಿಡಿಬೇಕು, ಆಕೆಗೆ ಶಕ್ತಿ ನೀಡಬೇಕಿ. ವೈದ್ಯರಾಗಿದ್ದ ಅವರು ನಿಮ್ಮ ಕಷ್ಟಗಳನ್ನ ಅರಿತಿದ್ದಾರೆ"

- ಸಿದ್ದರಾಮಯ್ಯ, ‌ಮುಖ್ಯಮಂತ್ರಿ






 


 


Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News