ಚುನಾವಣೆಗಾಗಿ ವಿಶ್ವೇಶ್ವರ ಹೆಗಡೆ ಕಾಗೇರಿಯಿಂದ ಮೇಸ್ತಾ ಪ್ರಕರಣ ಬಳಕೆ: ಶ್ರೀರಾಮ ಜಾದೂಗಾರ ಆರೋಪ
ಕಾರವಾರ: ಚುನಾವಣೆ ಬಂದಾಗ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಪರೇಶ್ ಮೇಸ್ತಾ ಪ್ರಕರಣದ ಪ್ಲೇ ಕಾರ್ಡ್ ಬಳಸಿಕೊಳ್ಳುತ್ತಿದ್ದಾರೆ. ದಯವಿಟ್ಟು ನಿಮ್ಮ ರಾಜಕೀಯದ ತೆವಲಿಗೆ ಹಿಂದುಳಿದ ಯುವಕರನ್ನ ಬಳಸಿಕೊಳ್ಳಬೇಡಿ ಎಂದು ಶ್ರೀರಾಮ ಜಾದೂಗಾರ ಹೇಳಿದರು.
ಇಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪರೇಶ್ ಮೇಸ್ತಾ ಪ್ರಕರಣದಲ್ಲಿ ಸುಮಾರು 95 ಯುವಕರ ಮೇಲೆ ಕೇಸ್ ಹಾಕಲಾಗಿತ್ತು. ಇನ್ನೂ ಕೋರ್ಟ್ ಕಚೇರಿ ಎಂದು ತಿರುಗಾಡುತ್ತಿದ್ದೇವೆ. ಆದರೆ ಯಾವ ಬಿಜೆಪಿ ಮುಖಂಡರೂ ನಮ್ಮ ಸಹಾಯಕ್ಕೆ ಬಂದಿಲ್ಲ. ಚುನಾವಣೆ ಬಂದಾಗ ಪರೇಶ್ ಮೇಸ್ತಾ ಪ್ರಕರಣ ಇವರಿಗೆ ನೆನಪಿಗೆ ಬರುತ್ತದೆ. ಕಾಗೇರಿಯವರು ಆ ಸಂದರ್ಭದಲ್ಲಿ ನಮಗೆ ಏನು ಸಹಾಯ ಮಾಡಿದ್ದರೆ ಎಂದು ತಿಳಿಸಲಿ ರಾಜಕೀಯಕ್ಕೆ ನಮ್ಮನ್ನು ಬಳಕೆ ಮಾಡಿಕೊಳ್ಳಲು ಹೊರಟಿರುವುದು ನಮಗೆ ಬೇಸರ ತರಿಸಿದೆ ಎಂದರು.
ಕಳೆದ ಬಾರಿ ಸ್ಪೀಕರ್ ಆಗಿದ್ದಾಗ ನಮ್ಮ ಪರ ಕಾಗೇರಿಯವರು ಏನು ಮಾಡಿದ್ದಾರೆ? ಏಳು ವರ್ಷದಿಂದ ನಾವು ಕೋರ್ಟ್ ಗೆ ಓಡಾಡುತ್ತಿದ್ದೇವೆ. ಹಿಂದೂ ಕಾರ್ಯಕರ್ತರಾದ ನಾವು ಸದ್ಯ ನೆಮ್ಮದಿಯಾಗಿ ಇದ್ದೇವೆ. ಚುನಾವಣೆಗಾಗಿ ಮತ್ತೆ ನಮ್ಮನ್ನ ಎಳೆದು ತಂದು ಕಂಡವರ ಮನೆಯ ಬಾವಿಗೆ ದಬ್ಬಬೇಡಿ. ಪರೇಶ್ ಮೇಸ್ತಾ ಹತ್ಯೆಯಾದಾಗ ನಾವು ಗಲಭೆಯಲ್ಲಿ ಪಾಲ್ಗೊಂಡಿದ್ದೆವು ಎಂದು ಕೇಸು ಹಾಕಿದ್ದರು. ನಂತರ ಸಿಬಿಐಗೆ ವಹಿಸಿದಾಗ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಇದ್ದರೂ ನ್ಯಾಯ ಕೊಡಿಸಲಾಗಿಲ್ಲ. ಈಗ ಚುನಾವಣೆಗಾಗಿ, ತಮ್ಮ ತೆವಲಿಗಾಗಿ ನಮ್ಮನ್ನ ಬಳಸಿಕೊಳ್ಳಲು ಹೊರಟಿದ್ದಾರೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ವಿಕ್ರಂ, ರಾಮ್, ನಿತ್ಯಾನಂದ ಪಾಲೇಕರ್, ನಾಗರಾಜ, ಪ್ರದೀಪ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಪರೇಶ್ ಮೇಸ್ತಾ ಪ್ರಕರಣದಲ್ಲಿ ದೂರು ದಾಖಲಾಗಿ ನಾವು ಸಾಕಷ್ಟು ನೋವು ಅನುಭವಿಸಿದ್ದೇವೆ. ಉದ್ಯೋಗಕ್ಕಾಗಿ ವಿದೇಶಕ್ಕೆ ತೆರಳಲು ಪಾಸ್‌ಪೋರ್ಟ್ ಮಾಡಿಸಲೂ ಆಗುತ್ತಿಲ್ಲ. ನಮ್ಮ ಕುಟುಂಬಗಳ ಕಣ್ಣೀರು ಕೇಳುವವರು ಇಲ್ಲದಾಗಿದೆ. ಇದಕ್ಕೆಲ್ಲ ಹೊಣೆ ಯಾರು?
- ಶ್ರೀರಾಮ್ ಜಾದೂಗಾರ, ಹೊನ್ನಾವರ