ಇಂಡಿಯನ್ ನವಾಯತ್ ಫೋರಂ ವತಿಯಿಂದ ಜನಾಝಾ ವ್ಯಾನ್ ಕೊಡುಗೆ
ಭಟ್ಕಳ: ಭಾರತದ ವಿವಿಧ ನಗರಗಳಲ್ಲಿ ಸ್ಥಾಪಿಸಲಾದ ಎಂಟು ಭಟ್ಕಳ ಜಮಾಅತ್‌ಗಳ ಒಕ್ಕೂಟವಾಗಿರುವ ಇಂಡಿಯನ್ ನವಾಯತ್ ಫೋರಮ್ (ಐಎನ್‌ಎಫ್) ವತಿಯಿಂದ ಇಲ್ಲಿನ ಸಾಮಾಜಿಕ ಮತ್ತು ರಾಜಕೀಯ ಸಂಸ್ಥೆಯಾಗಿರುವ ಮಜ್ಲಿಸ್-ಇ-ಇಸ್ಲಾಹ್-ವ ತಂಝೀಮ್ ಸಂಸ್ಥೆಗೆ ಗೆ ಜನಾಝ ವ್ಯಾನ್ (ಅಂತ್ಯಕ್ರಿಯೆ ವ್ಯಾನ್) ಅನ್ನು ಕೊಡುಗೆಯಾಗಿ ನೀಡಿದೆ.
ಭಟ್ಕಳ ಪಟ್ಟಣದ ನಿವಾಸಿಗಳಿಗೆ, ವಿಶೇಷವಾಗಿ ಸ್ಮಶಾನದಿಂದ ದೂರದಲ್ಲಿರುವ ಮನೆಗಳಿಗೆ, ಮೃತರನ್ನು ಮಸೀದಿಗೆ ಜನಾಝಾ ನಮಾಝ್ (ಅಂತ್ಯಕ್ರಿಯೆಯ ಪ್ರಾರ್ಥನೆ) ಮತ್ತು ಸಮಾಧಿ ಸ್ಥಳಕ್ಕೆ ಸಾರಿಗೆಯನ್ನು ಒದಗಿಸುವ ಮೂಲಕ ಜನಾಝಾ ವ್ಯಾನ್ ಪ್ರಯೋಜನವನ್ನು ನೀಡುತ್ತದೆ. ಭಟ್ಕಳ ಕಾಲೋನಿಗಳು (ನವಾಯತ್ ಕಾಲೋನಿ, ಮದೀನ ಕಾಲೋನಿ, ಇತ್ಯಾದಿ) ಮತ್ತು ಹಳೆಯ ಭಟ್ಕಳದ ಬೀದಿಗಳು (ಡೌನ್‌ಟೌನ್ ಪ್ರದೇಶ) ಸೇರಿದಂತೆ ಪಟ್ಟಣ ವ್ಯಾಪ್ತಿಯಲ್ಲಿ ಈ ಸೇವೆಯನ್ನು ಉಚಿತವಾಗಿ ನೀಡಲಾಗುವುದು ಎಂದು ಐ.ಎನ್.ಎಫ್ ಅಧ್ಯಕ್ಷ ಎಸ್.ಎಂ ಅರ್ಷದ್ ಮೊಹತೆಶಮ್ ತಿಳಿಸಿದ್ದಾರೆ.
ಮೃತ ದೇಹಗಳನ್ನು ಮನೆಗಳಿಂದ ಮಸೀದಿಗಳು ಮತ್ತು ಇತರ ಸ್ಥಳಗಳಿಗೆ ಸಾಗಿಸಲು ಮಿನಿ ಲಾರಿಗಳ ಬಳಕೆಯನ್ನು ಬದಲಿಸುವ ಅಗತ್ಯದಿಂದ ಈ ಉಪಕ್ರಮವು ಹುಟ್ಟಿಕೊಂಡಿತು ಎಂದು ಅರ್ಷದ್ ವಿವರಿಸಿದರು. INF ಅಧೀನದಲ್ಲಿರುವ ಎಂಟು ಭಟ್ಕಳ ಜಮಾತ್‌ಗಳು ಈ ಅಗತ್ಯವನ್ನು ಪೂರೈಸಲು ಸಹಕರಿಸಿದರು ಮತ್ತು ಭಟ್ಕಳದಲ್ಲಿ INF ಕಚೇರಿ ಉದ್ಘಾಟ ನೆಯ ಸಂದರ್ಭದಲ್ಲಿ ತಂಝೀಮ್‌ಗೆ ಜನಾಝಾ ವ್ಯಾನ್ ಹಸ್ತಾಂತರಿಸಲಾಯಿತು ಎಂದು ಅವರು ಮಾಹಿತಿ ನೀಡಿದರು.
ಈ ಉದ್ದೇಶಕ್ಕಾಗಿ ಈ ಹಿಂದೆ ತಮ್ಮ ಕಂಪನಿಯ ಮಿನಿ ಲಾರಿಯನ್ನು ಉಚಿತವಾಗಿ ನೀಡಿದ ಭಟ್ಕಳ ಅನ್ಫಾಲ್ ಸೂಪರ್ ಮಾರ್ಕೇಟ್ ನ ಮಾಲಕರಾದ ರುಕ್ನುದ್ದೀನ್ ಅಸ್ಲಂ ಮತ್ತು ಇಕ್ಬಾಲ್ ಅವರ ಸೇವೆಯನ್ನು ಎಸ್.ಎಂ.ಅರ್ಷದ್ ಮೊಹತೆಶಮ್ ಶ್ಲಾಘಿಸಿದರು.
ಜುಲೈ ಮೊದಲ ವಾರದಿಂದ ಜನಾಜಾ ವ್ಯಾನ್ ಸಾರ್ವಜನಿಕರ ಸೇವೆ ಲಭ್ಯವಿರುತ್ತದೆ ಎಂದು ಮಜ್ಲಿಸ್-ಎ-ಇಸ್ಲಾಹ್-ವ-ತಂಝೀಮ್ ಸಂಸ್ಥೆ ಹೊರಡಿಸಿದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಸೇವೆಯ ಅಗತ್ಯವಿರುವವರು ಕೋಲಾ ಅಬ್ದುಲ್ ಸಮಿ (8971918484) ಅವರನ್ನು ಅಥವಾ ತಂಝೀಮ್ನ ಕಬ್ರಸ್ತಾನ್ ಸಮಿತಿಯ ಇತರ ಸದಸ್ಯರನ್ನು ಸಂಪರ್ಕಿಸಬಹುದಾಗಿದೆ.
ಈ ಸಂದರ್ಭದಲ್ಲಿ ಐ.ಎನ್.ಎಫ್ ಅಧ್ಯಕ್ಷ ಎಸ್.ಎಂ.ಅರ್ಷದ್ ಮೊಹತೆಶಮ್ ಅವರು, ತಂಝೀಮ್ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಖೀಬ್ ಎಂ.ಜೆ, ಇವರಿಗೆ ಜನಾಝಾ ವಾಹನದ ಕೀಲಿಕೈಯನ್ನು ಹಸ್ತಾಂತರಿಸಿದರು.
ಭಟ್ಕಳ ಮುಸ್ಲಿಂ ಜಮಾತ್ ಮುಂಬೈ, ಮಜ್ಲಿಸ್-ಎ-ಆಂಧ್ರ ನವಾಯತ್, ಭಟ್ಕಳ ಮುಸ್ಲಿಂ ಅಸೋಸಿಯೇಷನ್ ಚೆನ್ನೈ, ಭಟ್ಕಳ ಮುಸ್ಲಿಂ ಜಮಾತ್ ಮಂಗಳೂರು, ಭಟ್ಕಳ ಮುಸ್ಲಿಂ ಜಮಾತ್ ಬೆಂಗಳೂರು, ಭಟ್ಕಳ ಮುಸ್ಲಿಂ ಜಮಾತ್ ಕೇರಳ, ಭಟ್ಕಳ ಮುಸ್ಲಿಂ ಜಮಾತ್ ಮಡಿಕೇರಿ, ಮತ್ತು ಭಟ್ಕಳ ಮುಸ್ಲಿಂ ಜಮಾತ್. ಅಸೋಸಿಯೇಷನ್ ಕೋಲ್ಕತ್ತಾ ಈ ಎಂಟು ಜಮಾಅತ್ ಗಳ ಒಕ್ಕೂಟವಾಗಿ ಇಂಡಿಯನ್ ನವಾಯತ್ ಫೋರಂ ವಿವಿಧ ಸಾಮಾಜಿಕ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದೆ.