ಸಾಲಾ ವಸೂಲಾತಿಗೆ ತೆರಳಿದ ವ್ಯಕ್ತಿ ಹಲ್ಲೆ ಪ್ರಕರಣ; ದೂರು - ಪ್ರತಿ ದೂರು ದಾಖಲು
ಭಟ್ಕಳ: ಸಾಲ ವಸೂಲಿಗೆ ತೆರಳಿದ ಸೇಂಟ್ ಮಿಲಾಗ್ರೀಸ್ ಸಿಬ್ಬಂದಿ ಸಾಲಗಾರನಿಗೆ ಕೆಟ್ಟ ಶಬ್ದದಿಂದ ಬೈದು, ಆತನ ಮೇಲೆ ಹಲ್ಲೆ ನಡೆಸಿರುವ ಘಟನೆ ಭಟ್ಕಳದ ನೀಲಾವರ ಲಾಡ್ಜ್ ಎದುರಿನ ಚಾಲುಕ್ಯ ಬಸ್ ಕಚೇರಿಯಲ್ಲಿ ನಡೆದಿರುವುದಾಗಿ ವರದಿಯಾಗಿದ್ದು ಈ ಕುರಿತಂತೆ ಹಲ್ಲೆ ಮಾಡಿದವರು ಮತ್ತು ಹಲ್ಲೆಗೊಳಗಾದವರಿಂದ ದೂರು ಪ್ರತಿ ದೂರು ದಾಖಲಾಗಿದೆ.
ಭಟ್ಕಳದ ಚಾಲುಕ್ಯ ಬಸ್ ಕಚೇರಿಯ ವ್ಯವಸ್ಥಾಪಕ ಈಶ್ವರ ದುರ್ಗಪ್ಪ ನಾಯ್ಕ ಹಲ್ಲೆಗೊಳಗಾದವರು. ಸೆಂಟ್ ಮಿಲಾಗ್ರೀಸ್ ನ ಸಿಬ್ಬಂದಿ ಅಜಯ, ರಾಜೇಶ, ಕೀರ್ತಿರಾಜ ಪಾಂಡುರಂಗ ಶಿರಾಲಿ, ದೇವೇಂದ್ರ, ರೋಹಿತ ಸುರೇಶ ಮೊಗೇರ, ನಾಗರಾಜ ಪರಮೇಶ್ವರ ದೇವಾಡಿಗ ಹಲ್ಲೆ ಮಾಡಿದ ಆರೋಪಿಗಳು ಎಂದು ದೂರಲಾಗಿದೆ.
ಹಲ್ಲೆಗೊಳಗಾದ ಈಶ್ವರ ನಾಯ್ಕ ಸೆಂಟ್ ಮಿಲಾಗ್ರೀಸ್ ಬ್ಯಾಂಕಿನಲ್ಲಿ ವೈಯಕ್ತಿಕ ಸಾಲವನ್ನು ಪಡೆದುಕೊಂಡಿದ್ದರು. ಕೌಟುಂಬಿಕ ಕಾರಣದಿಂದ ಸಾಲದ ಹಣವನ್ನು ತುಂಬದೇ ಬಾಕಿ ಇತ್ತು. 15 ದಿನಗಳ ಹಿಂದೆ ಬ್ಯಾಂಕಿನ ಸಿಬ್ಬಂದಿ ಸಾಲವನ್ನು ತುಂಬಲು ಹೇಳಿದಾಗ ಸಾಲದ ಪೂರ್ತಿ ಹಣವನ್ನು 2 ತಿಂಗಳಲ್ಲಿ ತುಂಬಿ ಕೊಡುವುದಾಗಿ ಕಾಲಾವಕಾಶ ಪಡೆದುಕೊಂಡಿದ್ದರು. ಆದರೆ ಜೂನ್ 27ರ ಸಂಜೆಗೆ ಆರೋಪಿತರು ಈಶ್ವರ ನಾಯ್ಕರಿಗೆ ಪ್ರಶ್ನೆ ಮಾಡಿ, ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಈಶ್ವರ ನಾಯ್ಕ ಆರೋಪಿಸಿದ್ದು, ಈ ಕುರಿತು ಭಟ್ಕಳ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪ್ರತಿ ದೂರು ದಾಖಲು : ಈಶ್ವರ ನಾಯ್ಕ ನೀಡಿದ ದೂರಿಗೆ ಪ್ರತಿಯಾಗಿ ಸೇಂಟ್ ಮಿಲಾಗ್ರೀಸ್ ಸಿಬ್ಬಂದಿ ಪ್ರತಿ ದೂರು ದಾಖಲಿಸಿದ್ದಾರೆ.