ಹೊನ್ನಾವರ: ಓಮ್ನಿ - ಬಸ್ ನಡುವೆ ಢಿಕ್ಕಿ: ಓರ್ವ ಮೃತ್ಯು, ಮಹಿಳೆಗೆ ಗಾಯ
ಭಟ್ಕಳ: ಹೊನ್ನಾವರ ತಾಲೂಕಿನ ಗೇರಸುಪ್ಪಾ ಹೆದ್ದಾರಿಯಲ್ಲಿ ಓಮ್ನಿ ಹಾಗೂ ಖಾಸಗಿ ಬಸ್ ಢಿಕ್ಕಿ ಹೊಡೆದ ಪರಿಣಾಮ ಓರ್ವ ಮೃತಪಟ್ಟಿದ್ದು, ಮಹಿಳೆಯೋರ್ವರು ಗಾಯಗೊಂಡ ಘಟನೆ ಶುಕ್ರವಾರ ಸಂಜೆ ಸಂಭವಿಸಿದೆ.
ಮೃತರನ್ನು ಭಟ್ಕಳ ಮಖ್ದೂಮ್ ಕಾಲನಿ ನಿವಾಸಿ ಸೈಯದ್ ಅಬ್ದುಲ್ ವಾಜಿದ್ (40) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಅವರ ಪತ್ನಿ ಗುಲ್ಶನ್ ಅರಾ ಗಾಯಗೊಂಡಿದ್ದು, ಹೊನ್ನಾವರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೂಲಗಳ ಪ್ರಕಾರ, ದುಬೈನಿಂದ ಸುಮಾರು 28 ದಿನಗಳ ಹಿಂದೆ ಭಟ್ಕಳಕ್ಕೆ ಬಂದಿದ್ದ ಅಬ್ದುಲ್ ವಾಜಿದ್ ತನ್ನ ಸಹೋದರ ಸಹೋದರಿಯರನ್ನು ಭೇಟಿ ಮಾಡಲು ಪತ್ನಿಯೊಂದಿಗೆ ಗೇರುಸೊಪ್ಪ ರಾಷ್ಟ್ರೀಯ ಹೆದ್ದಾರಿ ಮೂಲಕ ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪ ಗ್ರಾಮಕ್ಕೆ ತೆರಳುತ್ತಿದ್ದರು ಎನ್ನಲಾಗಿದೆ.
ಅವರು ಪ್ರಯಾಣಿಸುತ್ತಿದ್ದ ಓಮ್ನಿಗೆ ಎದುರಿನಿಂದ ಬರುತ್ತಿದ್ದ ಖಾಸಗಿ ಬಸ್ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಅಬ್ದುಲ್ ವಾಜಿದ್ ಮತ್ತು ಆತನ ಪತ್ನಿ ಗಾಯಗೊಂಡಿದ್ದರು. ಅವರನ್ನು ಹೊನ್ನಾವರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಬ್ದುಲ್ ವಾಜಿದ್ ಅವರು ಸಂಜೆ 6 ಗಂಟೆಯ ಸುಮಾರಿಗೆ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಈ ಬಗ್ಗೆ ಇಲ್ಲಿನ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.