ಭಟ್ಕಳ: ಲೈಫ್ ಕೇರ್ ಆಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನ್, ಐಸಿಯು, ಮಾಡ್ಯುಲರ್ ಒ.ಟಿ. ಉದ್ಘಾಟನೆ
ಭಟ್ಕಳ, ಜು.13: ಪಟ್ಟಣದ ಲೈಫ್ ಕೇರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನ್, ಐಸಿಯು ಮತ್ತು ಆಪರೇಷನ್ ಥಿಯೇಟರ್ ಅನ್ನು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್.ವೈದ್ಯ ಶನಿವಾರ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಸಚಿವರು, ಇಲ್ಲಿನ ಅನಿವಾಸಿ ಭಾರತೀಯರು, ಹೊರದೇಶದಲ್ಲಿ ಉದ್ಯಮ ಮತ್ತು ಉದ್ಯೋಗದಲ್ಲಿರುವವರು ಭಟ್ಕಳದಲ್ಲಿ ಸುಸಜ್ಜಿತ ಆಸ್ಪತ್ರೆ, ಉದ್ಯಮ ಸ್ಥಾಪಿಸಲು ಹಣ ವಿನಿಯೋಗ ಮಾಡಬೇಕೆಂದು ಹೇಳಿದರು.
ಲೈಫ್ ಕೇರ್ ಆಸ್ಪತ್ರೆ ಆರಂಭವಾಗಿ 4 ವರ್ಷದ ಬಳಿಕ ಅತ್ಯಾಧುನಿಕ ಸೌಲಭ್ಯದ ವ್ಯವಸ್ಥೆ ಮಾಡಲಾಗಿದೆ. ಇದೀಗ ಆಸ್ಪತ್ರೆಯಲ್ಲಿ 50 ಬೆಡ್ ಸೇರಿದಂತೆ ಸುಸಜ್ಜಿತ ವ್ಯವಸ್ಥೆ ಇದ್ದು, ಮುಂದಿನ ದಿನಗಳಲ್ಲಿ ಇದು 200 ಬೆಡ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆಗುವುದರಲ್ಲಿ ಯಾವುದೇ ಅನುಮಾನ ಇಲ್ಲ. ಈ ಆಸ್ಪತ್ರೆಯ ಅಭಿವೃದ್ಧಿಗೆ ಸರಕಾರದಿಂದಲೂ ಸಹಾಯ, ಸಹಕಾರ ಮಾಡಲಾಗುವುದು ಎಂದು ಭರವಸೆ ನೀಡಿದರು.
ಭಟ್ಕಳ ಪಟ್ಟಣದಲ್ಲಿ ರಸ್ತೆ, ವಿದ್ಯುತ್, ಕುಡಿಯುವ ನೀರು ವ್ಯವಸ್ಥೆಗೆ ಅನುದಾನ ಕಲ್ಪಿಸಲಾಗಿದೆ. ಮುಂದಿನ ದಿನಗಳಲ್ಲಿ ಕಡವಿನಕಟ್ಟೆ ಅಣೆಕಟ್ಟೆಯಿಂದ ಎಲ್ಲಾ ಭಾಗಕ್ಕೂ ನೀರು ಸರಬರಾಜು ಮಾಡಲು ನೀರಿನ ಕೊರತೆ ಉಂಟಾಗಬಹುದು ಎಂದು 220 ಕೋಟಿ ರೂ. ವೆಚ್ಚದಲ್ಲಿ ಹೊನ್ನಾವರದಿಂದ ಕುಡಿಯುವ ನೀರು ತರುವ ವ್ಯವಸ್ಥೆ ಮಾಡಲಾಗುತ್ತಿದೆ. ಭಟ್ಕಳ ಬಂದರು-ಸಾಗರ ರಸ್ತೆ ಅಗಲೀಕರಣಕ್ಕೆ 25 ಕೋಟಿ ರೂ., ಪಟ್ಟಣದಲ್ಲಿ ರಸ್ತೆ ಕಾಮಗಾರಿಗೆ 25 ಕೋಟಿ ರೂ. ಅನುದಾನ ಮಂಜೂರು ಮಾಡಲಾಗಿದೆ ಎಂದು ಮಂಕಾಳ ವೈದ್ಯ ತಿಳಿಸಿದರು.
ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಮಂಗಳೂರು ರಾಜೀವ್ ಗಾಂಧಿ ಯುನಿವರ್ಸಿಟಿಯ ಸೆನೆಟ್ ಸದಸ್ಯ ಡಾ. ಯು.ಟಿ. ಇಫ್ತಿಕಾರ್ ಅಲಿ ಮಾತನಾಡಿ, ಭಟ್ಕಳದಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣದ ಅಗತ್ಯವಿದೆ. ಮೆಡಿಕಲ್ ಸಂಬಂಧಿಸಿದಂತೆ ಸಂಸ್ಥೆಗಳನ್ನು ಸ್ಥಾಪಿಸುವುದಿದ್ದರೆ ರಾಜೀವ್ ಗಾಂಧಿ ಯುನಿವರ್ಸಿಟಿ ಇದಕ್ಕೆ ಎಲ್ಲ ರೀತಿಯ ಸಹಕಾರ ನೀಡಲಿದೆ. ಭಟ್ಕಳದ ಲೈಫ್ ಕೇರ್ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಸೌಲಭ್ಯ ಒದಗಿಸಿರುವುದು ಮತ್ತು ತಜ್ಞ ವೈದ್ಯರ ತಂಡ ಇರುವುದು ಜನತೆಗೆ ಅನುಕೂಲವಾಗಿದೆ ಎಂದು ಶ್ಲಾಘಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಆಸ್ಪತ್ರೆಯ ಅಧ್ಯಕ್ಷ ಯೂನುಸ್ ಖಾಝಿಯಾ, ಜನತೆಯ ಅನುಕೂಲಕ್ಕಾಗಿ ಲೈಫ್ ಕೇರ್ ಆಸ್ಪತ್ರೆಯನ್ನು ಲೈಫ್ ಕೇರ್ ಸ್ಪೆಷಾಲಿಟಿ ಆಸ್ಪತ್ರೆಯನ್ನಾಗಿ ಮಾಡಲಾಗಿದೆ. ಇಲ್ಲಿ ತಜ್ಞ ವೈದ್ಯರು ಮತ್ತು ಅತ್ಯಾಧುನಿಕ ವೈದ್ಯಕೀಯ ವ್ಯವಸ್ಥೆ ಇರುವುದರಿಂದ ಭಟ್ಕಳದ ಜನರು ಚಿಕತ್ಸೆಗಾಗಿ ಬೇರೆ ಊರಿಗೆ ಹೋಗುವುದು ತಪ್ಪಿದಂತಾಗಿದೆ. ಮುಂದಿನ ದಿನಗಳಲ್ಲಿ ಎಲ್ಲರ ಸಹಕಾರದಿಂದ ಆಸ್ಪತ್ರೆಯಲ್ಲಿ ಮತ್ತಷ್ಟು ಬೆಡ್ ಹೆಚ್ಚಿಸುವು ದರ ಜೊತೆಗೆ ಹೆಚ್ಚಿನ ವೈದ್ಯಕೀಯ ಸೌಲಭ್ಯ ದೊರಕಿಸಿಕೊಡಲು ಪ್ರಯತ್ನಿಸಲಾಗುವುದು ಎಂದರು.
ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಸವಿತಾ ಕಾಮತ್, ಜಮಾಅತುಲ್ ಮುಸ್ಲಿಮೀನ್ ಪ್ರಧಾನ ಖಾಝಿ ಮೌಲಾನ ಅಬ್ದುಲ್ ರಬ್ ನದ್ವಿ, ಮರ್ಕಝಿ ಖಲೀಫಾ ಜಮಾಅತ್ನ ಪ್ರಧಾನ ಖಾಝಿ ಮೌಲಾನ ಖ್ವಾಜಾ ಮುಹಿದ್ದೀನ್ ಅಕ್ರಮಿ ನದ್ವಿ ಮಾತನಾಡಿದರು.
ವೇದಿಕೆಯಲ್ಲಿ ಆಸ್ಪತ್ರೆಯ ನಿರ್ದೇಶಕ ಅಲ್ತಾಫ್ ಉಪಸ್ಥಿತರಿದ್ದರು. ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಮುಹಮ್ಮದ್ ಸಲ್ಮಾನ್ ಜುಬಾಪು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ನಿರ್ದೇಶಕ ಝುಲ್ಫಿಕರ್ ಅಲಿ ಅತಿಥಿಗಳನ್ನು ಪರಿಚಯಿಸಿದರು.