ಭಟ್ಕಳ: ಜಮಾಅತೆ ಇಸ್ಲಾಮಿ ಹಿಂದ್, ಸದ್ಭಾವನಾ ಮಂಚ್ ವತಿಯಿಂದ ಸೌಹಾರ್ದ ಸಮಾರಂಭ

Update: 2024-07-13 13:03 GMT

ಭಟ್ಕಳ: ನಮ್ಮ ದೇಶದಲ್ಲಿ ವೈವಿದ್ಯತೆ ಇದೆ. ಇಲ್ಲಿನ ಅಹಾರ ಪದ್ಧತಿ, ಉಡುಗೆ ತೊಡುಗೆ, ಭಾಷೆ, ಸಂಸ್ಕೃತಿ, ಧರ್ಮ, ಆಚಾರ-ವಿಚಾರ ಎಲ್ಲವೂ ವಿಭಿನ್ನವಾಗಿವೆ. ಈ ವೈವಿಧ್ಯತೆ ನಮ್ಮ ದೌರ್ಬಲ್ಯವಾಗದೆ ಅದು ನಮ್ಮ ಶಕ್ತಿಯಾಗಿದೆ ಎಂದು ಜಮಾಅತೆ ಇಸ್ಲಾಮಿ ಹಿಂದ್ ರಾಷ್ಟ್ರೀಯ ಉಪಾಧ್ಯಕ್ಷ ಸದ್ಭಾವನಾ ಮಂಚ್ ಇದರ ರಾಷ್ಟ್ರೀಯ ಸಂಚಾಲಕ ಫ್ರೊ. ಡಾ.ಮುಹಮ್ಮದ್ ಸಲೀಮ್ ಇಂಜಿನೀಯರ್ ಹೇಳಿದರು.

ಅವರು ಭಟ್ಕಳದ ಜಮಾಅತೆ ಇಸ್ಲಾಮಿ ಹಿಂದ್ ಹಾಗೂ ಸದ್ಭಾವನಾ ಮಂಚ್ ವತಿಯಿಂದ ಹೊಟೇಲ್ ರಾಯಲ್ ಓಕ್ ನಲ್ಲಿ ನಡೆದ ಸದ್ಭಾವನಾ ಸೌಹಾರ್ದ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಾವು ಒಬ್ಬರು ಇನ್ನೊಬ್ಬರನ್ನು ಆದರಿಸಿ ಗೌರವಿಸುವುದನ್ನು ರೂಢಿಸಿಕೊಳ್ಳಬೇಕು, ನಮಗೆ ಗೌರವ, ಸನ್ಮಾನ, ಸುರಕ್ಷೆ ದೊರೆಯಬೇಕು ಎಂದು ನಾವು ಬಯಸುವುದಾದರೆ ಬೇರೆಯವರಿಗೂ ಗೌರವಿಸಿ ಆದರಿಸುವುದನ್ನು ಕಲಿತುಕೊಳ್ಳಬೇಕು ಎಂದರು.

ಸಮಾಜದ ಪರಸ್ಪರರಲ್ಲಿನ ಅಂತರ ಕಡಿಮೆಯಾಗುತ್ತಿದ್ದು ಅಪನಂಬಿಕೆ ಮೂಡುತ್ತಿದೆ ಇದಕ್ಕೆ ಕಾರಣ ಧರ್ಮ ಎಂದು ಹೇಳಲಾಗುತ್ತಿದೆ. ಧರ್ಮದಿಂದಾಗಿಯೇ ಮನುಷ್ಯ ಮನುಷ್ಯರ ನಡುವೆ ದ್ವೇಷ ಹಗೆತನ ಹುಟ್ಟಿಕೊಳ್ಳುತ್ತಿದೆ ಎಂಬ ಭ್ರಮೆ ಯನ್ನು ಹುಟ್ಟು ಹಾಕುತ್ತಿದ್ದಾರೆ. ಆದರೆ ಇದು ಸರಿಯಲ್ಲ. ವಾಸ್ತವಿಕ ಧರ್ಮದಿಂದ ಮನುಷ್ಯ ದೂರ ಆಗುತ್ತಿರುವುದೇ ಇದಕ್ಕೆಲ್ಲ ಕಾರಣವಾಗಿದ್ದು ನಾನು ಧರ್ಮವನ್ನು ಗೌರವಿಸಬೇಕು, ಧರ್ಮವನ್ನು ಪಾಲಿಸಬೇಕು ಎಂದು ಕರೆ ನೀಡಿದ ಅವರು, ಧರ್ಮದ ಮೇಲೆ ನೆಲೆ ನಿಲ್ಲುವವರು ಯಾವತ್ತೂ ಹಿಂಸೆಯನ್ನು ಮಾಡುವುದಿಲ್ಲ ಮತ್ತು ಅದಕ್ಕೆ ಪ್ರಚೋದಿಸುವುದಿಲ್ಲ. ರಾಜಕೀಯ ಸ್ವಾರ್ಥಸಾಧನೆಗಾಗಿ ಧರ್ಮ ದುರ್ಬಳಕೆಯಾಗುತ್ತಿದೆ ಎಂದು ವಿಷಾದಿಸಿದರು.

ಸದ್ಭಾವನಾ ಮಂಚ್ ನ ಕಾರ್ಯಚಟುವಟಿಕೆಗಳ ಕುರಿತು ಮಾತನಾಡಿ ಸದ್ಭಾವನಾ ಸಂದೇಶ ನೀಡಿ ಮಾತನಾಡಿದ ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯ ಕಾರ್ಯದರ್ಶಿ ಹಾಗೂ ಶಾಂತಿ ಪ್ರಕಾಶನ ಮಂಗಳೂರು ಇದರ ವ್ಯವಸ್ಥಾಪಕ ಮುಹಮ್ಮದ್ ಕುಂಞಿ, ಸದ್ಭಾವನಾ ಮಂಚ್ ಎಂಬುದು ದೇಶದ ಉದ್ದಗಲಕ್ಕೂ ಸೌಹಾರ್ದ, ಸಾಮಾರಸ್ಯವನ್ನು ಬಲಪಡಿ ಸುವುದಕ್ಕಾಗಿ ಮತ್ತು ಒಂದು ಆರೋಗ್ಯ ಪೂರ್ಣ ಸಮಾಜ ನಿರ್ಮಾಣಕ್ಕಾಗಿ ಕಾರ್ಯಾಚರಿಸುತ್ತಿರುವಂತಹ ವೇದಿಕೆ ಯಾಗಿದೆ. ನಮ್ಮ ಪ್ರದೇಶ, ಮೊಹಲ್ಲಗಳಲ್ಲಿ ಸಾಮಾರಸ್ಯವನ್ನು ಕಾಯ್ದುಕೊಳ್ಳುವುದು, ಅಶಾಂತಿ ಉಂಟಾಗದಂತೆ ನಮ್ಮಲ್ಲಿನ ಸಂಬಂಧಗಳನ್ನು ಗಟ್ಟಿಗೊಳಿಸುವಲ್ಲಿ ಸಕ್ರೀಯವಾಗಿದೆ. ನೆಮ್ಮದಿ, ಸಂತೃಪ್ತಿ, ಭ್ರಮೆಗಳಿಂದ ಮುಕ್ತವಾದ ಸಮಾಜ ನಿರ್ಮಾಣ ಇದರ ಗುರಿಯಾಗಿದೆ. ನಮ್ಮ ದೊಡ್ಡ ದುರಂತ ಎಂದರೆ ಇಂದು ನಮ್ಮ ಸಮಾಜದಲ್ಲಿ ಮೌಲ್ಯಗಳು ನಶಿಸಿ ಹೋಗುತ್ತಿವೆ. ಅಧರ್ಮಿಗಳು, ಅಪರಾಧಿಗಳನ್ನು ಸಮಾಜ ನಾಯಕ (ಲೀಡರ್) ಎಂದು ಗುರುತಿಸುತ್ತಿದೆ. ಯಾರು ಹೆಚ್ಚು ದ್ವೇಷವನ್ನು ಹರಡುತ್ತಾರೋ ಅವರು ದೊಡ್ಡ ದೊಡ್ಡ ಹುದ್ದೆಯಲ್ಲಿದ್ದಾರೆ. ಇಂದು ಸುಳ್ಳು ವಿಜ್ರಂಭಿಸುತ್ತಿದೆ. ಸುಳ್ಳುಗಳ ಮೂಲಕ ಭ್ರಮೆಯನ್ನು ಹುಟ್ಟುಹಾಕಲಾಗುತ್ತಿದೆ.ಇಂತಹ ದಯನೀಯ ಸ್ಥಿತಿಯಲ್ಲಿ ನಾವು ಬದುಕುತ್ತಿದ್ದೇವೆ. ಸದ್ಭಾವನಾ ಮಂಚ್ ಮೂಲಕ ನಮ್ಮ ಸಮಾಜದಲ್ಲಿ ಮೌಲ್ಯಗಳನ್ನು ಬೆಳೆಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ ಎಂದರು.

ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯಾಧ್ಯಕ್ಷ ಡಾ.ಮುಹಮ್ಮದ್ ಸಾದ್ ಬೆಳಗಾಮಿ, ಸದ್ಭಾವನಾ ಮಂಚ್ ಭಟ್ಕಳದ ಅಧ್ಯಕ್ಷ ಸತೀಶ್ ಕುಮಾರ್ ನಾಯ್ಕ ಮಾತನಾಡಿದರು. ಜಮಾಅತೆ ಇಸ್ಲಾಮಿ ಭಟ್ಕಳ ಶಾಖೆಯ ಕಾರ್ಯದರ್ಶಿ ಅಬ್ದುಲ್ ರವೂಫ್ ಸವಣೂರು ಸ್ವಾಗತಿಸಿದರು. ಸದ್ಭಾವನಾ ಮಂಚ್ ಕಾರ್ಯದರ್ಶಿ ಎಂ.ಆರ್.ಮಾನ್ವಿ ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಅರ್ಪಿಸಿದರು.

ಜಮಾಅತೆ ಇಸ್ಲಾಮಿ ಹಿಂದ್ ಮಂಗಳುರು ವಲಯ ಸಂಚಾಲಕ ಸಯೀದ್ ಇಸ್ಮಾಯಿಲ್, ಉಪಸಂಚಾಲಕ ಅಮೀನ್ ಆಹ್ಸನ್, ಉ.ಕ. ಜಿಲ್ಲಾ ಸಂಚಾಲಕ ಅಬ್ದುಲ್ ಮನ್ನಾನ್ ಸಿರ್ಸಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.










 


 


 


 


Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News