ಭಟ್ಕಳ| ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯ ಬೆಳೆಸಲು ಸಜ್ಜಾದ್ ನೋಮಾನಿ ಸಲಹೆ
ಭಟ್ಕಳ, ಜು.17: ನಮ್ಮ ಶಿಕ್ಷಣ ಸಂಸ್ಥೆಯ ಹೊಣೆಗಾರರು ಕೇವಲ ಶಾಲಾ ಕಟ್ಟಡ ಮತ್ತು ಸಂಪನ್ಮೂಲವನ್ನು ಕ್ರೋಡೀಕರಿಸುವುದರಲ್ಲೇ ತಮ್ಮ ಗಮನ ಕೇಂದ್ರೀಕರಿಸುತ್ತಿದ್ದು, ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸುವುದರ ಕಡೆಗೂ ಗಮನ ಹರಿಸಬೇಕಾಗಿದೆ ಎಂದು ಖ್ಯಾತ ವಿದ್ವಾಂಸ, ಆಲ್ ಇಂಡಿಯಾ ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್‌ನ ಮುಖಂಡ ಮೌಲಾನ ಖಲೀಲುರ‌್ರಹ್ಮಾನ್ ಸಜ್ಜಾದ್ ನೋಮಾನಿ ಸಲಹೆ ನೀಡಿದ್ದಾರೆ.
ಇಲ್ಲಿನ ಅನಿವಾಸಿ ಭಾರತೀಯರ ಸಂಘಟನೆ ರಾಬಿತಾ ಸೊಸೈಟಿ ವತಿಯಿಂದ ಬುಧವಾರ ಸಂಜೆ ಅಂಜುಮನಾಬಾದ್ ಮೈದಾನದಲ್ಲಿ ನಡೆದ ರಾಬಿತಾ ಶೈಕ್ಷಣಿಕ ಪ್ರತಿಭಾ ಪುರಸ್ಕಾರ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿಗಳನ್ನು ಪ್ರದಾನಿಸಿ ಅವರು ಮಾತನಾಡಿದರು.
ಶಿಕ್ಷಣ ಸಂಸ್ಥೆಗಳು ಮತ್ತು ಶಿಕ್ಷಣ ಪಡೆದವರು ಹೆಚ್ಚಾದಂತೆ ನಮ್ಮ ಸಮಾಜ ಹಾಳಾಗುತ್ತಿದೆ ಎಂದರೆ ಇದರ ಕುರಿತು ಶಿಕ್ಷಣ ಸಂಸ್ಥೆಯ ಮುಖಂಡರು, ಶಿಕ್ಷಕರು ಗಂಭೀರವಾಗಿ ಯೋಚನೆ ಮಾಡಬೇಕಾಗಿದೆ ಎಂದು ಕಿವಿಮಾತು ಹೇಳಿದರು.
ರಾಬಿತಾ ಸಂಸ್ಥೆಯ ಅಧ್ಯಕ್ಷ ಉಮರ್ ಫಾರೂಖ್ ಮುಸ್ಬಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಡಾ.ಅತೀಕುರ‌್ರಹ್ಮಾನ್ ಮುನೀರಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಭಟ್ಕಳದ ಪ್ರತಿಷ್ಠಿತ ತರಬಿಯತ್ ಎಜ್ಯುಕೇಶನ್ ಸೊಸೈಟಿಯ ನ್ಯೂ ಶಮ್ಸ್ ಸ್ಕೂಲ್ ಈ ವರ್ಷದ ‘ರಾಬಿತಾ ಬೆಸ್ಟ್ ಸ್ಕೂಲ್’ ಅವಾರ್ಡ್ ಪಡೆದುಕೊಂಡಿದೆ. ಅದೇ ರೀತಿ ಅಲಿ ಪಬ್ಲಿಕ್ ಸ್ಕೂಲ್‌ನ ವಿಜ್ಞಾನ ಶಿಕ್ಷಕಿ ರಿಫತ್ ಕೋಬಟ್ಟೆ ಅವರಿಗೆ ‘ರಾಬಿತಾ ಬೆಸ್ಟ್ ಟೀಚರ್’ ಅವಾರ್ಡ್ ಪ್ರದಾನಿಸಲಾಯಿತು.
ಕಾರ್ಯಕ್ರಮದಲ್ಲಿ ತಂಝೀಮ್ ಸಂಸ್ಥೆಯ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ, ಅಂಜುಮನ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯೂನುಸ್ ಕಾಝಿಯಾ, ಜಮಾಅತುಲ್ ಮುಸ್ಲಿಮೀನ್ ಪ್ರಧಾನ ಖಾಝಿ ಮೌಲಾನ ಅಬ್ದುಲ್ ರಬ್ ನದ್ವಿ, ಮರ್ಕಝಿ ಜಮಾಅತ್‌ನ ಪ್ರಧಾನ ಕಾರ್ಯದರ್ಶಿ ಮೌಲಾನ ಖ್ವಾಜಾ ಅಕ್ರಮಿ ಮದಿನಿ ನದ್ವಿ, ಮುಸ್ಲಿಮ್ ಕಮ್ಯುನಿಟಿ ಜಿದ್ದಾ ಇದರ ಅಧ್ಯಕ್ಷ ಖಮರ್ ಸಾದಾ ಮತ್ತಿತರರು ಉಪಸ್ಥಿತರಿದ್ದರು.