ಮುಸ್ಲಿಮರ ವಿರುದ್ಧ ಅಪಪ್ರಚಾರ, ಕೋಮುಗಲಭೆ ಸೃಷ್ಟಿಸುವವರ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಬೇಕು: ಅಬ್ದುಲ್ ರಕೀಬ್
ಭಟ್ಕಳ: ಮುಸ್ಲಿಮರ ವಿರುದ್ಧ ಅಪಪ್ರಚಾರ ಮತ್ತು ಕೋಮುಗಲಭೆ ಸೃಷ್ಟಿಸಲು ಹುನ್ನಾರ ನಡೆಸುತ್ತಿರುವ ಬಿಜೆಪಿ ನಾಯಕರ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಬೇಕು ಎಂದು ತಂಝೀಮ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಕೀಬ್ ಎಂ.ಜೆ. ಅವರು ಒತ್ತಾಯಿಸಿದ್ದಾರೆ.
ಭಾರತದಲ್ಲಿ ವಕ್ಫ್ ಆಸ್ತಿಗಳು ಮುಸ್ಲಿಂ ಸಮುದಾಯದ ಧಾರ್ಮಿಕ, ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ವಿಶೇಷವಾಗಿ ಮೀಸಲಾಗಿವೆ. ಇವು ಮುಸ್ಲಿಂ ಸಮಾಜದ ಕಲ್ಯಾಣಕ್ಕಾಗಿ ಮಸೀದಿ, ಮದ್ರಸಾ, ಆಸ್ಪತ್ರೆ ಮತ್ತು ಅನೇಕ ಸಾಮಾಜಿಕ ಸೇವಾ ಕೇಂದ್ರಗಳ ಸ್ಥಾಪನೆಗೆ ಸಹಕಾರಿಯಾಗಿದೆ. ಇತಿಹಾಸದ ದಶಕಗಳಿಂದ ವಕ್ಫ್ ಆಸ್ತಿಗಳು ಬಡವರ ಸಹಾಯ, ಶಿಕ್ಷಣದ ಬೆಂಬಲ, ಮತ್ತು ಆರೋಗ್ಯ ಸೇವೆಗಳ ವಿಸ್ತರಣೆಗೆ ಮಹತ್ವಪೂರ್ಣ ಪಾತ್ರವಹಿಸುತ್ತಿವೆ. ಈ ಆಸ್ತಿಗಳನ್ನು ರಕ್ಷಿಸಲು ವಕ್ಫ್ ಕಾಯ್ದೆಯನ್ನು ರೂಪಿಸಿದ ಸರ್ಕಾರಗಳು ಅದನ್ನು ರಕ್ಷಿಸುತ್ತ ಬಂದಿವೆ. ಇದನ್ನು ರಕ್ಷಿಸಲೆಂದೇ ಸರ್ಕಾರ ವಕ್ಫ್ ಬೋರ್ಡ್ ಸ್ಥಾಪಿಸಿದೆ. ಬಿಜೆಪಿಯೂ ಕೂಡ ತನ್ನ ಪ್ರಣಾಳಿಕೆಯಲ್ಲಿ ವಕ್ಫ್ ಆಸ್ತಿ ರಕ್ಷಣೆಗಾಗಿ ಬದ್ಧವಿರುವುದಾಗಿ 2014ರ ಚುನಾವಣಾ ಪೂರ್ವ ಘೋಷಿಸಿತ್ತು.
ಈಗ ಬಿಜೆಪಿ ತನ್ನ ರಾಜಕೀಯ ಲಾಭಕ್ಕಾಗಿ ವಕ್ಫ್ ಕುರಿತಂತೆ ಸುಳ್ಳನ್ನು ಹಬ್ಬಿಸಿ, ವಿವಾದವನ್ನುಂಟು ಮಾಡುತ್ತಿದ್ದು, ರಾಜ್ಯಾದ್ಯಂತ ವಕ್ಫ್ ಆಸ್ತಿಗಳ ವಿರುದ್ಧ ಹೋರಾಟ ಮಾಡುವ ನಾಟಕ ಮಾಡುತ್ತಿದೆ. ಈ ಹೊರಾಟದ ನೆಪದಲ್ಲಿ ಮುಸ್ಲಿಮರ ವಿರುದ್ದ ಅಪಪ್ರಚಾರ ಮಾಡುವ, ಮತ್ತು ಸಮಾಜದಲ್ಲಿ ಕೋಮುಗಲಭೆ ಉಂಟುಮಾಡಲು ಪ್ರೇರಣೆಯ ನೀಡುವ ಹುನ್ನಾರಗಳು ನಡೆಯುತ್ತಿವೆ. ಭಟ್ಕಳದಲ್ಲಿ ಸರ್ಕಾರಕ್ಕೆ ಮನವಿ ಸಲ್ಲಿಸುವ ಸಂದರ್ಭದಲ್ಲಿ ಬಿಜೆಪಿಯ ಕೃಷ್ಣ ನಾಯ್ಕ್ ಎಂಬವರು, ಮುಸ್ಲಿಮರ ವಿರುದ್ಧ ತಪ್ಪುಮಾಹಿತಿ ಹರಡುತ್ತಿದ್ದು, ತಾನು ಪ್ರಚಾರ ಗಿಟ್ಟಿಸಿಕೊಳ್ಳಲು ಇಂತಹ ಅಸತ್ಯ, ಮತ್ತು ಕಪೋಲಕಲ್ಪಿತ ಹೇಳಿಕೆಗಳನ್ನು ನೀಡಿದ್ದಾರೆ. ಇಂತಹ ಹೇಳಿಕೆಗಳಿಂದ ಶಾಂತಿ ಕದಡುತ್ತದೆ ಹೊರತು ಯಾವುದೇ ಪ್ರಯೋಜನ ಉಂಟಾಗಲು ಸಾಧ್ಯವಿಲ್ಲ. ತಂಝೀಮ್ ಸಂಸ್ಥೆಯೂ ಭಟ್ಕಳದಲ್ಲಿ ಕಳೆದ ನೂರು ವರ್ಷಗಳಿಂದ ಇಲ್ಲಿ ಶಾಂತಿ ಸೌಹಾರ್ದತೆ ಕಾಪಾಡಿಕೊಂಡು ಬರುತ್ತಿದೆ. ಇದರ ಪ್ರತಿಫಲ ಎಂಬಂತೆ ಭಟ್ಕಳ ಈಗ ಶಾಂತವಾಗಿದೆ. ರಾಜಕೀಯ ಪ್ರೇರಿತ ಇಂತಹ ಹೇಳಿಕೆಗಳಿಂದ ಭಟ್ಕಳ ಮತ್ತು ರಾಜ್ಯದಲ್ಲಿ ಕೋಮುಸೌಹಾರ್ದತೆ ಕದಡುವ ಆತಂಕವಿದೆ. ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದಕ್ಕೆ ಧಕ್ಕೆ ತರುವ ವ್ಯಕ್ತಿಗಳ ವಿರುದ್ಧ ಸ್ಥಳಿಯ ಪೊಲೀಸರು ತಕ್ಷಣ ಕ್ರಮ ಕೈಗೊಳ್ಳಬೇಕು, ಮತ್ತು ಇಂತಹ ವ್ಯಕ್ತಿಗಳ ವಿರುದ್ಧ ಸ್ವಯಂ ಪ್ರೇರಿತವಾಗಿ ದೂರನ್ನು ದಾಖಲಿಸಿಕೊಳ್ಳಬೇಕು. ಸಾರ್ವಜನಿಕರ ನಡುವೆ ದ್ವೇಷ ಬಿತ್ತಲು ಪ್ರಚೋದನೆ ನೀಡುವ ಈ ರೀತಿಯ ಅಪಪ್ರಚಾರವನ್ನು ತಡೆಗಟ್ಟಲು ಪೊಲೀಸ್ ಇಲಾಖೆಯು ಸೂಕ್ತವಾಗಿ ಸ್ಪಂದಿಸಬೇಕು ಎಂದು ಅಬ್ದುಲ್ ರಕೀಬ್ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.