ಭಟ್ಕಳ: ನ್ಯಾಯವಾದಿ ಆರ್.ಆರ್. ಶ್ರೇಷ್ಟಿ ನಿಧನ
ಭಟ್ಕಳ: ಬಾರ್ ಅಸೋಶಿಯೇಶನ್ ಭಟ್ಕಳದ ಹಿರಿಯ ಸದಸ್ಯ, ನ್ಯಾಯವಾದಿ ಹಾಗೂ ನೋಟರಿ ಆರ್.ಆರ್. ಶ್ರೇಷ್ಟಿ ಅಲ್ಪ ಕಾಲದ ಅಸೌಖ್ಯದಿಂದ ಉಡುಪಿ ಖಾಸಗೀ ಆಸ್ಪತ್ರೆಯಲ್ಲಿ ಬುಧವಾರ ಬೆಳಿಗ್ಗೆ ನಿದನರಾದರು.
ಮೃತರು ಭಟ್ಕಳದ ನ್ಯಾಯಾಲಯದಲ್ಲಿ 1987ರಿಂದ ವಕಾಲತ್ತು ಆರಂಭಿಸಿದ್ದು ಅನೇಕ ಕ್ಲಿಷ್ಟಕರವಾದ ಪ್ರಕರಣಗಳನ್ನು ಇತ್ಯರ್ಥ ಪಡಿಸುವಲ್ಲಿ ಯಶಸ್ವೀಯಾಗಿದ್ದರಲ್ಲದೇ ಕಾರವಾರ ಜಿಲ್ಲಾ ನ್ಯಾಯಾಲಯದಲ್ಲಿಯೂ ಕೂಡಾ ಕೆಲವು ಪ್ರಕರಣದಲ್ಲಿ ವಕಾಲತ್ತು ವಹಿಸಿದ್ದರು. ಭಟ್ಕಳ ಬಾರ್ ಅಸೋಶಿಯೇಶನ್‌ನಲ್ಲಿ ಹಿರಿಯ ವಕೀಲರಾಗಿದ್ದ ಅವರು ಎರಡು ಬಾರಿ ವಕೀಲರ ಸಂಘದ ಅಧ್ಯಕ್ಷರಾಗಿ ಯಶಸ್ವೀ ಕಾರ್ಯಾಚರಣೆ ನಡೆಸಿದ್ದರು. ಕಳೆದ ಕೆಲವು ತಿಂಗಳುಗಳ ಹಿಂದೆಯಷ್ಟೇ ಭಟ್ಕಳಕ್ಕೆ ಹೊಸ ನ್ಯಾಯಾಂಗದ ಕಟ್ಟಡದ ಮಂಜೂರಿಗೋಸ್ಕರ ವಕೀಲರ ತಂಡದೊಂದಿಗೆ ಕಟ್ಟಡ ಸಮಿತಿಯ ಕಾರ್ಯದರ್ಶಿಯಾಗಿದ್ದ ಅವರು ಬೆಂಗಳೂರಿಗೂ ತೆರಳಿ ಹೊಸ ಕಟ್ಟಡ ಮಂಜೂರಿ ಮಾಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವರಲ್ಲಿ ಒಬ್ಬರಾಗಿದ್ದಾರೆ.
ಮೃತರ ಅಂತಿಮ ದರ್ಶನವನ್ನು ನ್ಯಾಯಾಧೀಶರುಗಳಾದ ಹಿರಿಯ ಶ್ರೇಣಿಯ ನ್ಯಾಯಾಧೀಶ ಕಾಂತ ಕುರಣಿ, ಪ್ರಧಾನ ಸಿವಿಲ್ ಜಡ್ಜ್ ದೀಪಾ ಅರಳಗುಂಡಿ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಧನವತಿಯವರು ಶ್ರೇಷ್ಟಿಯವರ ಮನೆಗೆ ತೆರಳಿ ಅಂತಿ ದರ್ಶನ ಪಡೆದರು ಹಾಗೂ ಸಚಿವ ಮಂಕಾಳ ವೈದ್ಯ, ಮಾಜಿ ಶಾಸಕ ಸುನಿಲ್ ನಾಯ್ಕ, ಆರ್.ಎನ್.ಎಸ್. ಸಮೂಹ ಸಂಸ್ಥೆಯ ನಾಗರಾಜ ಶೆಟ್ಟಿ, ಮುರ್ಡೇಶ್ವರ ಶಿಕ್ಷಣ ಪ್ರತಿಷ್ಟಾನದ ಅಧ್ಯಕ್ಷ ಎಸ್. ಎಸ್. ಕಾಮತ್, ಹಿರಿಯ ನ್ಯಾಯವಾದಿ ಮಾಜಿ ಶಾಸಕ ಜೆ.ಡಿ .ನಾಯ್ಕ, ವಕೀಲರ ಸಂಘದ ಅಧ್ಯಕ್ಷ ಎಂ.ಜೆ. ನಾಯ್ಕ, ಕಾರ್ಯದರ್ಶಿ ಆರ್.ಜಿ. ನಾಯ್ಕ, ಉಪಾಧ್ಯಕ್ಷ ನಾಗರಾಜ ನಾಯ್ಕ, ನಿವೃತ್ತ ಜಿಲ್ಲಾ ನ್ಯಾಯಾಧೀಶ ರವಿ ನಾಯ್ಕ, ಹಿರಿಯ ವಕೀಲರಾದ ಎಂ.ಎಲ್. ನಾಯ್ಕ, ವಕೀಲರ ಸಂಘದ ಮಾಜಿ ಅಧ್ಯಕ್ಷ ಗಣೇಶ ನಾಯ್ಕ, ಹಿರಿಯ ಕಿರಿಯ ವಕೀಲರುಗಳು ಹಾಗೂ ಊರಿನ ಗಣ್ಯರು ಪಡೆದರು.
ವಕೀಲರ ಸಂಘದಿಂದ ಸಂತಾಪ ಸಭೆ: ಹಿರಿಯ ನ್ಯಾಯವಾದಿ ಹಾಗೂ ನೋಟರಿ ಆರ್.ಆರ್.ಶ್ರೇಷ್ಟಿಯವರ ನಿದನದ ಸುದ್ದಿ ತಿಳಿಯುತ್ತಲೇ ಭಟ್ಕಳ ವಕೀಲರ ಸಂಘದ ಅಧ್ಯಕ್ಷ ಎಂ.ಜೆ. ನಾಯ್ಕ ಅವರ ಅಧ್ಯಕ್ಷತೆಯಲ್ಲಿ ಸಭೆ ಸೇರಿದ ಭಟ್ಕಳ ಬಾರ್ ಅಸೋಶಿಯೇಶನ್ ಸದಸ್ಯರುಗಳು ಸಂತಾಪ ಸಭೆ ನಡೆಸಿದರು.
ಹಿರಿಯ ನ್ಯಾಯವಾದಿಗಳಾಗಿದ್ದ ಅವರು ಕಿರಿಯರಿಗೆ ಮಾರ್ಗದರ್ಶಕರಾಗಿದ್ದಲ್ಲದೇ ನ್ಯಾಯಾಲಯದ ಕಲಾಪಗಳಲ್ಲಿ ಹಾಗೂ ಲೋಕ ಅದಾಲತ್, ಕಾನೂನು ಸೇವಾ ಸಮಿತಿಯ ಕಾರ್ಯಗಳಿಗೆ ಕೂಡಾ ಉತ್ತಮ ಸಹಕಾರ ನೀಡುತ್ತಿದ್ದರು. ಕೆಲವೊಂದು ವಿಷಯಗಳಲ್ಲಿ ಮಾರ್ಗದರ್ಶಕರಾಗಿದ್ದ ಅವರು ನಿದನವು ಭಟ್ಕಳ ಬಾರ್ ಅಸೋಶಿಯೇನ್‌ಗೆ ತುಂಬಲಾರದ ನಷ್ಟ ಎಂದು ವಕೀಲರ ಸಂಘದ ಅಧ್ಯಕ್ಷ ಎಂ.ಜೆ. ನಾಯ್ಕ ಹೇಳಿದರು. ಈ ಸಂದರ್ಭದಲ್ಲಿ ಒಂದು ನಿಮಿಷ ಮೌಲಾನಚರಣೆಯ ಮೂಲಕ ಅಗಲಿದ ಶ್ರೇಷ್ಟಿಯವರಿಗೆ ಶೃದ್ಧಾಂಜಲಿ ಸಲ್ಲಿಸಲಾಯಿತು.
ಸಭೆಯಲ್ಲಿ ಹಿರಿಯ ವಕೀಲರು ಹಾಗೂ ಮಾಜಿ ಶಾಸಕರಾದ ಜೆ.ಡಿ.ನಾಯ್ಕ, ವಕೀಲರ ಸಂಘದ ಕಾರ್ಯದರ್ಶಿ ಆರ್.ಜಿ. ನಾಯ್ಕ, ಉಪಾಧ್ಯಕ್ಷ ನಾಗರಾಜ ನಾಯ್ಕ, ಸಹಕಾರ್ಯದರ್ಶಿ ನಾಗರತ್ನಾ ನಾಯ್ಕ, ಹಿರಿಯ ವಕೀಲರುಗಳಾದ ನಾಗರಾಜ ಈ.ಎಚ್., ಕೆ.ಎಚ. ನಾಯ್ಕ, ವಿ.ಎಫ್.ಗೋಮ್ಸ, ಜೆ.ಡಿ. ಭಟ್ಟ, ನಿವೃತ್ತ ನ್ಯಾಯಾಧೀಶ ರವಿ ನಾಯ್ಕ, ಎಸ್.ಬಿ. ಬೊಮ್ಮಾಯಿ, ಶಂಕರ ಕೆ. ನಾಯ್ಕ, ರಾಜೇಶ ನಾಯ್ಕ ಹಾಗೂ ಬಾರ್ ಅಸೋಶಿಯೇಶನ್ ಹಿರಿಯ ಹಾಗೂ ಕಿರಿಯ ಸದಸ್ಯರುಗಳು ಉಪಸ್ಥಿತರಿದ್ದರು. ನಂತರ ಎಲ್ಲಾ ವಕೀಲರುಗಳು ಮೃತರ ಗೌರವಾರ್ಥ ತಮ್ಮ ಕಚೇರಿಗಳನ್ನು ಬಂದ್ ಮಾಡಿ ಕೋರ್ಟ ಕಲಾಪದಿಂದ ಹೊರಗುಳಿದು ಮೃತರ ಅಂತಿಮ ದರ್ಶನಕ್ಕೆ ತೆರಳಿದರು.