ಭಟ್ಕಳದ ಅಂಜುಮನ್ ಹಾಮಿ-ಎ-ಮುಸ್ಲಿಮೀನ್ ನೂತನ ಅಧ್ಯಕ್ಷರಾಗಿ ಖ್ಯಾತ ಎನ್ಆರ್‌ಐ ಉದ್ಯಮಿ ಯೂನುಸ್ ಕಾಝಿಯಾ ಆಯ್ಕೆ
ಭಟ್ಕಳ: ಖ್ಯಾತ ಅನಿವಾಸಿ ಭಾರತೀಯ ಉದ್ಯಮಿ ಯೂನುಸ್ ಕಾಝಿಯಾ ಅವರು ಪ್ರತಿಷ್ಠಿತ ಸಂಸ್ಥೆ ಅಂಜುಮನ್ ಹಾಮಿ-ಎ-ಮುಸ್ಲಿಮೀನ್ ಭಟ್ಕಳ ಇದರ ನೂತನ ಅಧ್ಯಕ್ಷರಾಗಿ ರವಿವಾರ ಆಯ್ಕೆಯಾಗಿದ್ದಾರೆ. ಅಂಜುಮನ್ ಭಟ್ಕಳದಲ್ಲಿ 20ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದೆ.
ಇಷಾಕ್ ಶಾಬಂದ್ರಿ ಅವರು ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಅವರು ಹಿಂದಿನ ಅವಧಿಯಲ್ಲಿ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದರು.
ಸಂಸ್ಥೆಯ ಚುನಾವಣಾ ಪ್ರಕ್ರಿಯೆ ಕಳೆದ ತಿಂಗಳು ನಡೆದಿತ್ತು. ನಗರದ ಅಂಜುಮಾನಾಬಾದ್ ನಲ್ಲಿರುವ ಅಂಜುಮನ್ ಹಾಮಿ-ಎ-ಮುಸ್ಲಿಮೀನ್ ನ ಮುಖ್ಯ ಕಚೇರಿಯಲ್ಲಿ ನಡೆದ ಹೊಸದಾಗಿ ಚುನಾಯಿತಗೊಂಡಿರುವ ಕಾರ್ಯಕಾರಿ ಮಂಡಳಿಯ ಮೊದಲ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಯೂನುಸ್ ಕಾಝಿಯಾ ಅವರು ಕೆನರಾ ಮುಸ್ಲಿಮ್ ಖಲೀಜ್ ಕೌನ್ಸಿಲ್ ಮತ್ತು ಕರ್ನಾಟಕ ಎನ್ಆರ್ ಫೋರಮ್ ನ ಅಧ್ಯಕ್ಷರೂ ಆಗಿದ್ದಾರೆ. ಸ್ಥಳೀಯರು ಮತ್ತು ಅನಿವಾಸಿ ಭಾರತೀಯರ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ವಿವಿಧ ಇತರ ಸಂಸ್ಥೆಗಳ ಭಾಗವೂ ಆಗಿದ್ದಾರೆ.
ಉಪಾಧ್ಯಕ್ಷರಾಗಿ ಮುಹಮ್ಮದ್ ಸಾದಿಕ್ ಪಿಲ್ಲೂರ್ ಮತ್ತು ಡಾ.ಝುಬೇರ್ ಕೋಲಾ, ಹೆಚ್ಚುವರಿ ಪ್ರಧಾನ ಕಾರ್ಯದರ್ಶಿಯಾಗಿ ಅಫ್ತಾಬ್ ಕಮ್ರಿ, ಕಾರ್ಯ ಸಮಿತಿ ಕಾರ್ಯದರ್ಶಿಯಾಗಿ ಎಸ್.ಜೆ.ಸೈಯದ್ ಹುಸೇನ್, ಹಣಕಾಸು ಕಾರ್ಯದರ್ಶಿಯಾಗಿ ಎಸ್.ಎಂ.ಸೈಯದ್ ಪರ್ವೇಝ್, ಎಐಟಿಎಂ ಬೋರ್ಡ್ ಕಾರ್ಯದರ್ಶಿಯಾಗಿ ಮೊಹಿಯುದ್ದೀನ್ ರುಕ್ನುದ್ದೀನ್,ಬಿಬಿಎ ಬಿಸಿಎ ವೃತ್ತಿಪರ ಕಾಲೇಜು ಕಾರ್ಯದರ್ಶಿಯಾಗಿ ಆಹೀದ್ ಮೊಹ್ತಿಶಾಮ್,ಪಿಯು ಮತ್ತು ಡಿಗ್ರಿ ಕಾಲೇಜ್ ಬೋರ್ಡ್ ಕಾರ್ಯದರ್ಶಿಯಾಗಿ ಡಾ.ಎಸ್.ಎಂ.ಸೈಯದ್ ಸಲೀಂ, ಹೈಸ್ಕೂಲ್ ಬೋರ್ಡ್ ಕಾರ್ಯದರ್ಶಿಯಾಗಿ ಸಾದುಲ್ಲಾ ರುಕ್ನುದ್ದೀನ್, ಪ್ರೈಮರಿ ಬೋರ್ಡ್ ಕಾರ್ಯದರ್ಶಿಯಾಗಿ ತನ್ವೀರ್ ಕಾಸರಗೋಡ ಮತ್ತು ದೀನಿಯತ್ ಬೋರ್ಡ್ ಕಾರ್ಯದರ್ಶಿಯಾಗಿ ಡಾ.ಅಬ್ದುಲ್ ಹಮೀದ್ ರುಕ್ನುದ್ದೀನ್ ಅವರು ಆಯ್ಕೆಯಾಗಿದ್ದಾರೆ.