ಜು.30: ರಾಬಿತಾ ಎಜುಕೇಶನಲ್ ಎಕ್ಸಲೆನ್ಸ್ ಅವಾರ್ಡ್, ಸಾಧಕರಿಗೆ ಸನ್ಮಾನ

Update: 2023-07-27 16:44 GMT

ಭಟ್ಕಳ: ರಬಿತಾ ಸೊಸೈಟಿ ಭಟ್ಕಳ ಎಂದು ಜನಪ್ರಿಯವಾಗಿರುವ ಭಟ್ಕಳ ಮುಸ್ಲಿಂ ಖಲೀಜ್ ಕೌನ್ಸಿಲ್ (ಬಿಎಂಕೆಸಿ) ತನ್ನ ಬಹು ನಿರೀಕ್ಷಿತ ವಾರ್ಷಿಕ ಶೈಕ್ಷಣಿಕ ಪ್ರಶಸ್ತಿ ಸಮಾರಂಭವನ್ನು ಜುಲೈ 30ರಂದು ಬೆಳಿಗ್ಗೆ 10:30 ಕ್ಕೆ ತಾಲೂಕಾ ಕ್ರೀಡಾಂಗಣದಲ್ಲಿ (ವೈಎಂಎಸ್‌ಎ ಮೈದಾನ) ನಡೆಸಲು ಸಜ್ಜಾಗಿದ್ದು, ಪ್ರತಿಷ್ಠಿತ ಕಾರ್ಯಕ್ರಮವು ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿದ ಅತ್ಯುತ್ತಮ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸುವ ಗುರಿಯನ್ನು ಹೊಂದಿದೆ ಎಂದು ರಾಬಿತಾ ಸೂಸೈಟಿ ಪ್ರಧಾನ ಕಾರ್ಯದರ್ಶಿ ಅತಿಕುರ‍್ರಹ್ಮಾನ್ ಮುನಿರಿ ತಿಳಿಸಿದರು.

ಈ ಕುರಿತಂತೆ ರಾಬಿತಾ ಸೂಸೈಟಿಯಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು, ಈ ವರ್ಷದ ಪ್ರಶಸ್ತಿ ಸಮಾರಂಭವು ಎರಡು ಅವಧಿಗಳಲ್ಲಿ ನಡೆಯಲಿದ್ದು, ಕ್ರಮವಾಗಿ ಬೆಳಿಗ್ಗೆ 10:30 ರಿಂದ 12-30 ಮತ್ತು ಸಂಜೆ 5:00 ರಿಂದ 7 ಗಂಟೆ ವರೆಗೆ ನಡೆಯಲಿದೆ. ರಾತ್ರಿ 9:30ಕ್ಕೆ ನವಯತಿ ಮುಶಾಯಿರಾ (ಕವಿಗೋಷ್ಟಿ) ನಡೆಯಲಿದೆ ಎಂದರು.

ಸಮಾರಂಭದಲ್ಲಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್‌ಬಿ) ಪ್ರಧಾನ ಕಾರ್ಯದರ್ಶಿ ಮತ್ತು ಖ್ಯಾತ ವಿದ್ವಾಂಸ ಮೌಲಾನಾ ಫಝಲುರ್ ರಹೀಮ್ ಮುಜದ್ದಿದಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ, ಮೀನುಗಾರಿಕೆ ಮತ್ತು ಬಂದರು, ಒಳನಾಡು ಸಾರಿಗೆ ಸಚಿವ ಮಾಂಕಾಳ್ ಎಸ್ ವೈದ್ಯ ಗೌರವ ಅತಿಥಿಗಳಾಗಿ ಉಪಸ್ಥಿತರಿರುವರು. ಸಮಾರಂಭದ ಅಧ್ಯಕ್ಷತೆಯನ್ನು ಭಟ್ಕಳ ಮುಸ್ಲಿಂ ಖಲೀಜ್ ಕೌನ್ಸಿಲ್ (ಬಿಎಂಕೆಸಿ) ಅಧ್ಯಕ್ಷ ಮೊಹಮ್ಮದ್ ಫಾರೂಕ್ ಮುಸ್ಬಾ ವಹಿಸಲಿದ್ದಾರೆ ಎಂದು ಅವರು ಹೇಳಿದರು.

ಸಮಾರಂಭದಲ್ಲಿ ದಾರುಲ್ ಉಲೂಮ್ ನದ್ವತುಲ್ ಉಲಮಾ ಲಖನೌದ ಉಪ ಪ್ರಾಂಶುಪಾಲರಾದ ಮೌಲಾನಾ ಅಬ್ದುಲ್ ಅಝೀಝ್ ಖಲೀಫಾ ನದ್ವಿ, ಮಾಜಿ ಪ್ರಾಂಶುಪಾಲರಾದ ರಾಬಿಯಾ ಉಸ್ಮಾನ್ ಜುಬಾಪು ಹಾಗೂ ಡಾ.ಆಲಿಯಾ ನಝ್ನೀನ್ ಅವರನ್ನು ಸನ್ಮಾನಿಸಲಾಗುವುದು.

ಪ್ರಶಸ್ತಿ ಪ್ರದಾನ ಸಮಾರಂಭದ ಸಂಚಾಲಕ ಯಾಸಿರ್ ಕಾಶಿಮಿಜಿ ಮಾತನಾಡಿ, ಭಟ್ಕಳದ 32 ಕ್ಕೂ ಹೆಚ್ಚು ಅಸಾಧಾರಣ ವಿದ್ಯಾರ್ಥಿಗಳಿಗೆ ಅವರ ಗಮನಾರ್ಹ ಸಾಧನೆಗಾಗಿ ರಾಬಿತಾ ಎಕ್ಸಲೆನ್ಸ್ ಪ್ರಶಸ್ತಿಯನ್ನು ನೀಡಲಾಗುವುದು. ಪ್ರಶಸ್ತಿಗೆ ಭಾಜನರಾದವರಲ್ಲಿ ತಾಲೂಕಿನ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಹಾಗೂ ಗಲ್ಫ್ ದೇಶಗಳು ಸೇರಿದಂತೆ ಭಟ್ಕಳದಿಂದ ಹೊರಗಿರುವ ಶಾಲೆಗಳ ವಿದ್ಯಾರ್ಥಿಗಳು ಸೇರಿದ್ದಾರೆ ಎಂದರು.

ರಾಬಿತಾ ಸೂಸೈಟಿತಯ ಅಧ್ಯಕ್ಷ ಫಾರೂಕ್ ಮುಸ್ಬಾ ಮಾತನಾಡಿ, ರಾಬಿತಾ ಸೊಸೈಟಿ, 1993 ರಿಂದ ಭಟ್ಕಳದಲ್ಲಿ ನೋಂದಾಯಿಸಲ್ಪಟ್ಟ ಲಾಭರಹಿತ ಎನ್‌ಜಿಒ, ಅರೇಬಿಯನ್ ಗಲ್ಫ್ ದೇಶಗಳಲ್ಲಿನ ಭಟ್ಕಳ ಮೂಲದ ಎನ್‌ಆರ್‌ಐಗಳನ್ನು ಒಂದೇ ಸಮನ್ವಯ ವೇದಿಕೆಯಡಿ ಸಮರ್ಪಿತವಾಗಿ ಒಗ್ಗೂಡಿಸು ತ್ತಿದೆ ಎಂದ ಅವರು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಟ್ಕಳದ ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ವಿದ್ಯಾರ್ಥಿಗಳನ್ನು ಬೆಂಬಲಿಸುವಂತೆ ಅವರು ಕೋರಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News