ಮಾಧ್ಯಮ ವರದಿಗಳಿಗೆ ಸ್ಪಂಧನೆ; ಜಾಮಿಯಾಬಾದ್ ರಸ್ತೆಯಲ್ಲಿ ತ್ಯಾಜ್ಯ ತೆರವುಗೊಳಿಸಲು ಕ್ರಮ

Update: 2023-07-22 13:42 GMT

ಭಟ್ಕಳ: ಹೆಬ್ಳೆ ಪಂಚಾಯತ ವ್ಯಾಪ್ತಿಯ ಜಾಮಿಯಾಬಾದ್ ರಸ್ತೆಯಲ್ಲಿ ಕಳೆದ ಎರಡು ತಿಂಗಳಿನಿಂದ ಬಿದ್ದುಕೊಂಡಿದ್ದ ತ್ಯಾಜ್ಯವನ್ನು ಹೆಬಳೆ ಪಂಚಾಯತ್ ಶನಿವಾರ ವಿಲೇವಾರಿ ಮಾಡಿದೆ.

ಹೆಬಳೆ ಪಂಚಾಯತ್ ವ್ಯಾಪ್ತಿಯಲ್ಲಿ ಕಳೆದ ಎರಡು ತಿಂಗಳಿನಿಂದ ತ್ಯಾಜ್ಯ ವಿಲೇವಾರಿ ಘಟಕವಾಗಿ ಮಾರ್ಪಟ್ಟಿರುವ ರಸ್ತೆಯ ದುಃಸ್ಥಿತಿಯನ್ನು ಎತ್ತಿ ಹಿಡಿಯುವ ವರದಿಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದು, ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಿ ಸಮಸ್ಯೆಯನ್ನು ಬಗೆ ಹರಿಸುವಲ್ಲಿ ಶೀಘ್ರಕ್ರಮ ಜರುಗಿಸಿದ್ದಾರೆ.

ಜಾಮಿಯಬಾದ್ ರಸ್ತೆಯ ಅಬೂಬಕರ್ ಮಸೀದಿ ಎದುರು ಹಾಗೂ ನ್ಯೂಶಮ್ಸ್ ಶಾಲೆಯ ಎದುರು ಕಳೆದ ಒಂದು ತಿಂಗಳಿನಿಂದ ರಾಶಿ ರಾಶಿ ಘನತ್ಯಾಜ್ಯ ಬಿದ್ದುಕೊಂಡಿದ್ದು ರಸ್ತೆಯ ಮೇಲೆ ಓಡಾಡುವ ಮಂದಿ ತಮ್ಮ ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ಬಿದ್ದ ಕಸದ ರಾಶಿಯಲ್ಲಿ ನಾಯಿಗಳ ಹಿಂಡು ಸೇರುತ್ತಿದ್ದು ತ್ಯಾಜ್ಯವನ್ನು ರಸ್ತೆಗೆ ಎಳೆದು ತರುತ್ತಿದ್ದವು. ಚಿಕ್ಕ ಶಾಲಾ ಮಕ್ಕಳು ನಾಯಿಗಳ ಭಯದಿಂದ ರಸ್ತೆಯ ಮೇಲೆ ಓಡಾಡಲು ಹೆದರಿಕೊಳ್ಳುತ್ತಿದ್ದರು. ಆದರೆ ಇದಾವುದರ ಪರಿವೆ ಇಲ್ಲದಿದ್ದ ಪಂಚಾಯತ್ ಅಧಿಕಾರಿಗಳ ಗಮನ ಸೆಳೆಯುತ್ತ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಅಷ್ಟೇ ಅಲ್ಲದೆ ಜಿಲ್ಲಾಡಳಿತ ಮತ್ತು ತಾಲೂಕಾಡಳಿತ ಈ ಕುರಿತಂತೆ ಗಮನ ಹರಿಸಬೇಕು ಎಂಬ ಮನವಿಯನ್ನೂ ಮಾಡಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಪಂಚಾಯತ್ ಆಡಳಿತ ಶನಿವಾರ ಬೆಳಿಗ್ಗೆಯಿಂದಲೇ ಜೆ.ಸಿ.ಬಿ ಮೂಲಕ ತ್ಯಾಜ್ಯ ವಿಲೇವಾರಿ ಮಾಡುತ್ತಿರುವುದು ಕಂಡು ಬಂದಿದೆ.

ರಸ್ತೆಯಲ್ಲಿರುವ ಕಸದ ರಾಶಿಯನ್ನು ತೆರವುಗೊಳಿಸುವುದು ಕೇವಲ ತಾತ್ಕಾಲಿಕ ಪರಿಹಾರವಾಗಿದ್ದು ಜನರು ಮತ್ತೇ ಮತ್ತೇ ಇಲ್ಲೇ ಕಸವನ್ನು ಎಸೆದು ಹೋಗುತ್ತಾರೆ. ಎಲ್ಲಿಯವರೆಗೆ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಸಾಧ್ಯವಿಲ್ಲವೋ ಅಲ್ಲಿಯ ವರೆಗೆ ಈ ಸಮಸ್ಯೆ ಜೀವಂತವಾಗಿರುತ್ತದೆ. ಜಿಲ್ಲಾಧಿಕಾರಿಗಳು ಹಾಗೂ ಭಟ್ಕಳ ವಿಧಾನಸಭಾ ಕ್ಷೇತ್ರದ ಶಾಸಕರು ಜಿಲ್ಲಾ ಉಸ್ತುವಾರಿ ಮಂತ್ರಿಗಳೂ ಆಗಿರುವ ಮಂಕಾಳ್ ವೈದ್ಯ ಇತ್ತ ಕಡೆ ಗಮನ ಹರಿಸಿ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಕಸ ಮತ್ತು ತ್ಯಾಜ್ಯ ವಿಲೇವಾರಿ ಸೂಕ್ತ ವ್ಯವಸ್ಥೆ ಮಾಡಿ ಸಾರ್ವಜನಿಕರು ಕಸ ಎಸೆಯದಂತೆ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕೆಂದೂ ಈ ಭಾಗದ ಮುಖಂಡ ಯಾಹ್ಯಾ ಹಲ್ಲಾರೆ ಒತ್ತಾಯಿಸಿದ್ದಾರೆ.

ಜಾಮಿಯಾಬಾದ್ ರಸ್ತೆಗೆ ಸ್ವಚ್ಛ, ಸುರಕ್ಷಿತ ಮತ್ತು ಹೆಚ್ಚು ನೈರ್ಮಲ್ಯದ ವಾತಾವರಣವನ್ನು ಖಚಿತಪಡಿಸಿಕೊಳ್ಳಲು ಸಾರ್ವಜನಿಕರು ಒಗ್ಗೂಡಿ ಕೆಲಸ ಮಾಡಬೇಕಾಗಿದೆ. ಕೇವಲ ಸರ್ಕಾರದ ಮೇಲೆ ಭಾರ ಹಾಕುವುದಕ್ಕಿಂತ ಸಮಸ್ಯೆ ಪರಿಹರಿಸುವಲ್ಲಿ ಜನರ ಪಾತ್ರವೂ ಬಹಳ ಮುಖ್ಯವಾದುದು. ಸಮಸ್ಯೆಗೆ ನಾವೇ ಕಾರಣರಾಗಬಾರದು; ಬದಲಿಗೆ, ನಾವು ಪರಿಹಾರವಾಗೋಣ." ಎಂದು ಹಲ್ಲಾರೆ ಮನವಿ ಮಾಡಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News