ಶಿರೂರು ಗುಡ್ಡ ಕುಸಿತ| ಲಾರಿಯ ವೀಲ್ ಜಾಕ್ ಪತ್ತೆ
ಕಾರವಾರ: ಅಂಕೋಲಾ ತಾಲೂಕಿನ ಶಿರೂರು ಗುಡ್ಡ ಕುಸಿತದಿಂದ ಗಂಗಾವಳಿ ನದಿ ನೀರಿನ ಪಾಲಾಗಿರುವ ಕೇರಳ ಮೂಲದ ಅರ್ಜುನ್ ಸೇರಿದಂತೆ ಸ್ಥಳೀಯರಿಬ್ಬರ ಶೋಧ ಕಾರ್ಯಾಚರಣೆಗೆ ಮಂಗಳವಾರದಿಂದ ಈಶ್ವರ ಮಲ್ಪೆ ಅವರು ಮುಂದಾಗಿದ್ದಾರೆ.
ಕಾರ್ಯಾಚರಣೆಯಲ್ಲಿ ಭಾರತ್ ಬೆಂಝ್ ಲಾರಿಯ ವೀಲ್ ಜಾಕ್‌ವೊಂದು 28 ದಿನಗಳ ಬಳಿಕ ಪತ್ತೆಯಾಗಿದೆ. ಈ ವೀಲ್ ಜಾಕ್ ತನ್ನ ಲಾರಿಯದ್ದೇ ಎಂದು ಲಾರಿ ಮಾಲಕ ಖಚಿತ ಪಡಿಸಿದ್ದರೂ ಘಟನೆ ಪೂರ್ವದಲ್ಲಿ ಸ್ಥಳದಲ್ಲಿದ್ದ ಬೇರೆ ಲಾರಿಗಳದ್ದಾ ಎಂಬುದು ಇನ್ನೂ ಸ್ಪಷ್ಟವಿಲ್ಲ.
ಈಶ್ವರ ಮಲ್ಪೆ ತಂಡ ಬೆಳಿಗ್ಗೆಯೇ ಸ್ಥಳಕ್ಕೆ ಆಗಮಿಸಿದ್ದರು. ಆದರೆ, ಉತ್ತರ ಕನ್ನಡ ಜಿಲ್ಲಾಡಳಿತದಿಂದ ಅನುಮತಿ ಸಿಗದ ಕಾರಣ ಕಾರ್ಯಾಚರಣೆಗೆ ಇಳಿದಿರಲಿಲ್ಲ. ಬಳಿಕ ಸ್ಥಳೀಯ ಶಾಸಕ ಸತೀಶ ಸೈಲ್ ಮುಂದಾಳತ್ವದಲ್ಲಿ ಈಶ್ವರ ಮಲ್ಪೆ ಅವರನ್ನು ಗಂಗಾವಳಿ ನದಿಯಲ್ಲಿ ಕಾರ್ಯಾಚರಣೆಗೆ ಇಳಿಸಲಾಗಿತ್ತು.
ಈ ವೇಳೆ ಮಾತನಾಡಿದ ಶಾಸಕ ಸತೀಶ್ ಸೈಲ್, ಘಟನೆ ನಡೆದು ಒಂದು ತಿಂಗಳಾಗಿದ್ದು, ಸರಕಾರದಿಂದ ಪರವಾನಿಗೆ ಪಡೆದು ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ. ನೇವಿ, ಸೈನಿಕರು ತಮ್ಮ ಕೆಲಸ ಮಾಡುತ್ತಿದ್ದಾರೆ. ಶೋಧ ಕಾರ್ಯಾಚರಣೆಯನ್ನು ಪ್ರಾಮಾಣಿಕವಾಗಿ ಮಾಡಲಾಗುವುದು ಎಂದು ಹೇಳಿದರು.