ಯೂತ್ ವಲ್ಡ್ ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್: ಚಿನ್ನದ ಪದಕ ಪಡೆದ ಧನ್ವಿತಾಗೆ ಅದ್ದೂರಿ ಸ್ವಾಗತ
ಭಟ್ಕಳ : ಯುರೋಪಿನ ಹಂಗೇರಿಯಲ್ಲಿ ನಡೆದ ಯೂತ್ ವಲ್ಡ್ ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದಕ ಗೆದ್ದು ತವರಿಗೆ ಆಗಮಿಸಿದ ಭಟ್ಕಳ ಧನ್ವಿತಾ ವಾಸು ಮೊಗೇರ ಹಾಗೂ ಕೋಚ್ ನಾಗಶ್ರೀ ನಾಯ್ಕ ಅವರನ್ನು ತಾಲೂಕಿನ ವಿವಿಧ ಸಂಘ ಸಂಸ್ಥೆಗಳಿಂದ ಭಟ್ಕಳ ರೈಲ್ವೆ ನಿಲ್ದಾಣದಲ್ಲಿ ಅದ್ದೂರಿಯಾಗಿ ಸ್ವಾಗತ ಮಾಡಲಾಯಿತು.
ಬಳಿಕ ತೆರೆದ ಜೀಪ್ ನಲ್ಲಿ ಪುಷ್ಪಪಾಂಜಲಿ ಟಾಕೀಸ್ ರಸ್ತೆ ಮುಖಂತಾರ ಮಣ್ಕುಳಿ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ ಮೂಲಕ ಸಂಶುದ್ದೀನ್ ಸರ್ಕಲ್ ಗೆ ಬಂದು ತಲುಪಿದ ಮೆರವಣಿಗೆ ನಂತರ ಅಲ್ಲಿ ಮೊಗೇರ ಸಮಾಜದ ಅಧ್ಯಕ್ಷರಾದ ಅಣ್ಣಪ್ಪ ಮೊಗೇರ ಸನ್ಮಾನಿಸಿದರು. ಬಳಿಕ ಅಲ್ಲಿಂದ ಧನ್ವಿತಾ ವಾಸು ಮೊಗೇರ ವಿದ್ಯಾಭ್ಯಾಸ ಮಾಡುತ್ತಿರುವ ಆನಂದಾಶ್ರಮ ಶಾಲೆಗೆ ಮೆರವಣಿಗೆ ತಲುಪಿತು. ಅಲ್ಲಿ ಶಾಲಾ ಆಡಳಿತ ಮಂಡಳಿಯಿಂದ ಕೂಡ ಅದ್ದೂರಿಯಾಗಿ ಸ್ವಾಗತ ಮಾಡಿ ಸನ್ಮಾನಿಸಿಸಲಾಯಿತು.
ಪೂರ್ವದಲ್ಲಿ ಭಟ್ಕಳ ರೈಲ್ವೇ ನಿಲ್ದಾಣದಲ್ಲಿ ಸ್ವಾಗತ ಮಾಡಿ ಮಾತನಾಡಿದ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಮೋಹನ ನಾಯ್ಕ ಪುಟಾಣಿ ಧ್ವನಿತಾ ಈಕೆ ಶ್ರೇಷ್ಠ ಸಾಧನೆ ಮಾಡಿದ್ದಾಳೆ. ಕೇವಲ ತಾಲೂಕಾ, ಜಿಲ್ಲಾ, ರಾಜ್ಯ, ರಾಷ್ಟ ಮಟ್ಟದಲ್ಲಲ್ಲಾ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ ಗೆದ್ದು ಸಾಧನೆ ಮಾಡಿದ್ದಾಳೆ. ಕಿಕ್ ಬಾಕ್ಸಿಂಗ್ ನಲ್ಲಿ ಮೊಟ್ಟ ಮೊದಲು ಚಿನ್ನ ಬೆಳ್ಳಿ ಗೆದ್ದಿರುವುದು ಭಟ್ಕಳ ತಾಲೂಕಿಗೆ ಹೆಮ್ಮೆ ಸಂಗತಿ. ಈ ಸಾಧನೆಗೆ ಈಕೆಯ ಕೋಚ್ ನಾಗಶ್ರೀ ನಾಯ್ಕ ಶ್ರಮ ಕೂಡ ಮುಖ್ಯ ಪಾತ್ರವಾಗಿದೆ ಎಂದರು.
ಬಳಿಕ ಉತ್ತರ ಕನ್ನಡ ಜಿಲ್ಲೆ ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷ ಹಾಗೂ ರಾಜ್ಯ ಅಮೇಚ್ಯೂರ್ ಕಬಡ್ಡಿ ಅಸೋಸಿಯೇಷನ್ ಜಂಟಿ ಕಾರ್ಯದರ್ಶಿ ಶ್ರೀಧರ ನಾಯ್ಕ ಮುಟ್ಟಳ್ಳಿ ಮಾತನಾಡಿದರು.
ಈ ಬೈಕ್ ಮೆರವಣಿಗೆಯಲ್ಲಿ ತಾಲೂಕಿನ ವಿವಿಧ ಸಂಘ ಸಂಸ್ಥೆ ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.