ಚುನಾವಣೆಯ ಹಾದಿ: ಸಾಮಾಜಿಕ ನ್ಯಾಯ v/s ಧಾರ್ಮಿಕ ಉನ್ಮಾದ?
ಲೋಕಸಭೆ ಚುನಾವಣೆಗೆ ಒಂದೆಡೆ ಕಾಂಗ್ರೆಸ್ ಗ್ಯಾರಂಟಿಗಳ ಘೋಷಣೆ ಮಾಡುತ್ತಿದೆ. ಇನ್ನೊಂದೆಡೆ ಬಿಜೆಪಿ ತನ್ನದೇ ಅಜೆಂಡಾಗಳನ್ನು ಹೊಂದಿದ್ದು, ಸಿಎಎ ಜಾರಿ ಸೇರಿದಂತೆ ಧಾರ್ಮಿಕತೆ ಆಧಾರದಲ್ಲಿ ಧ್ರುವೀಕರಣದ ಚಾಳಿಯನ್ನು ಮುಂದುವರಿಸಿದೆ. ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟಕ್ಕೂ ಕಾಂಗ್ರೆಸ್ ನೇತೃತ್ವದ ವಿಪಕ್ಷ ಮೈತ್ರಿಕೂಟ ‘ಇಂಡಿಯಾ’ಕ್ಕೂ ಧೋರಣೆಗಳ ವಿಚಾರದಲ್ಲಿ ಅಗಾಧ ಅಂತರವಿದೆ. ಹಾಗಾಗಿ ಅವೆರಡೂ ಜನರನ್ನು ಮುಟ್ಟುವ ದಾರಿಗಳು ಕೂಡ ಬೇರೆ ಬೇರೆ.
ಬರುವ ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆ ಯಾಗಿದೆ. ರಾಜಕೀಯ ಪಕ್ಷಗಳಲ್ಲಿ ಈಗಾಗಲೇ ತಯಾರಿ ಜೋರಾಗಿದೆ. ಯಾತ್ರೆಗಳು, ರ್ಯಾಲಿಗಳು, ಭಾಷಣಗಳು, ಭರವಸೆಗಳು, ಇರುವ ಕಾನೂನುಗಳ ಜಾರಿ, ನಾಳಿನ ಕಾನೂನುಗಳ ಮಾತು ಎಲ್ಲವೂ ಜೋರಾಗಿಯೇ ಇದೆ. ಈಗಾಗಲೇ ಕಾಂಗ್ರೆಸ್ ಘೋಷಿಸಿರುವ ಗ್ಯಾರಂಟಿಗಳು ಹಾಗೂ ಬಿಜೆಪಿ ಸಿಎಎ ಅಂಥ ಕಾನೂನು ಜಾರಿ ಮೂಲಕ ನಡೆದುಕೊಳ್ಳುವ ರೀತಿ ನೋಡಿದರೆ ಇಡೀ ಚುನಾವಣೆ ಸಾಮಾಜಿಕ ನ್ಯಾಯ ವರ್ಸಸ್ ಧಾರ್ಮಿಕ ಉನ್ಮಾದ ಎನ್ನುವಂತೆ ನಡೆಯುವ ಹಾಗೆ ಕಾಣಿಸುತ್ತಿದೆ.
ಮೊದಲನೆಯದಾಗಿ ಎರಡೂ ಪಕ್ಷಗಳು ಜನರನ್ನು ಸೆಳೆಯುವ ವಿಚಾರದಲ್ಲಿ ಏನು ಮಾಡುತ್ತಿವೆ ಎನ್ನುವುದನ್ನು ಗಮನಿಸೋಣ. ಬಿಜೆಪಿ ಯತ್ನಗಳ ಬಗ್ಗೆ ಹೇಳುವುದಾದರೆ,
1.ಮೋದಿ ಕಾ ಪರಿವಾರ್:
ಇದು ಲೋಕಸಭೆ ಚುನಾವಣೆಗೂ ಮುನ್ನ ಜನರನ್ನು ಸೆಳೆಯಲು ಬಿಜೆಪಿಯ ಹೊಸ ಅಭಿಯಾನದಂತಿದೆ. ಬಿಜೆಪಿಯ ನಾಯಕರೆಲ್ಲ ತಾವು ಮೋದಿ ಪರಿವಾರ ಎಂದು ಹೇಳಿಕೊಳ್ಳುತ್ತ, ಜನರನ್ನೂ ಹಾಗೆ ಮಾಡಲು ಪ್ರೇರೇಪಿಸುತ್ತಿದ್ದಾರೆ. ಎಲ್ಲರ ನಡುವೆ ಮೋದಿ ಹೆಸರು ಅನುರಣಿಸಬೇಕು ಎಂಬ ಉದ್ದೇಶ ಇಲ್ಲಿದೆ. ಸಾರ್ವಜನಿಕರು, ಮತದಾರರು ಮೋದಿಯವರೊಂದಿಗೆ ಸಂಪರ್ಕ ಸಾಧಿಸುವ ಮತ್ತು ಮೇರಾ ಭಾರತ್, ಮೇರಾ ಪರಿವಾರ್ ಕಲ್ಪನೆಯನ್ನು ಉತ್ತೇಜಿಸುವ ಪ್ರಯತ್ನ ಇದಾಗಿದೆ. 2019ರಲ್ಲಿ ಮೈ ಭಿ ಚೌಕಿದಾರ್ ಥೀಮ್ ಮತ್ತು 2014ರ ಚುನಾವಣೆಯಲ್ಲಿ ಚಾಯ್‌ವಾಲಾ ಥೀಮ್ ಮುಂದೆ ಮಾಡಿದ್ದ ಬಿಜೆಪಿಯ ಹೊಸ ತಂತ್ರಗಾರಿಕೆ ಈ ಅಭಿಯಾನದಲ್ಲಿದೆ.
ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರು ಮೋದಿ ಅವರಿಗೆ ಕುಟುಂಬವಿಲ್ಲ ಎಂದು ಟೀಕಿಸಿದ ಬಳಿಕ ಹಲವಾರು ಬಿಜೆಪಿ ನಾಯಕರು ತಮ್ಮ ಹೆಸರಿನ ಜೊತೆ ಸಾಮಾಜಿಕ ಮಾಧ್ಯಮ ಪ್ರೊಫೈಲ್‌ಗಳಲ್ಲಿ ಮೋದಿ ಕಾ ಪರಿವಾರ್ ಎಂದು ಹಾಕಿಕೊಂಡರು ಮತ್ತು ಇಡೀ ರಾಷ್ಟ್ರವೇ ನಾನು ಮೋದಿಯ ಪರಿವಾರ ಎಂದೇ ಹೇಳುತ್ತಿದೆ ಎಂದು ಬಿಂಬಿಸುವ ಯತ್ನವೂ ಬಿಜೆಪಿ ಸಾಮಾಜಿಕ ಜಾಲತಾಣದಲ್ಲಿ ನಡೆದಿದೆ.
ಶುಕ್ರವಾರ ಜನರ ವಾಟ್ಸ್‌ಆ್ಯಪ್‌ಗಳಿಗೆ ಪ್ರಧಾನಿ ಮೋದಿಯವರು ಬರೆದ ಪತ್ರವೊಂದು ತಲುಪಿದೆ. ಅದರಲ್ಲಿ ಕಳೆದ ಹತ್ತು ವರ್ಷಗಳಲ್ಲಿ ನಾವು ನಮ್ಮ ಸಂಸ್ಕೃತಿಯನ್ನು ಗೌರವಿಸಿ ಕಾಪಾಡಿಕೊಳ್ಳುತ್ತಲೇ ಭಾರತವನ್ನು ಭಾರೀ ಅಭಿವೃದ್ಧಿಯೆಡೆಗೆ ತೆಗೆದುಕೊಂಡು ಹೋಗಿದ್ದೇವೆ. ವಿಕಸಿತ ಭಾರತ ನಿರ್ಮಿಸುವ ಈ ಸಂಕಲ್ಪದಲ್ಲಿ ಜನರ ಭಾಗೀದಾರಿಕೆ ಬೇಕು ಎಂದು ಅವರು ಜನರಲ್ಲಿ ಬೆಂಬಲ ಕೋರಿದ್ದಾರೆ.
2.ಪ್ರಣಾಳಿಕೆಗಾಗಿ ಜನಾಭಿಪ್ರಾಯ:
ಲೋಕಸಭೆ ಚುನಾವಣೆಗೆ ಮುನ್ನ ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆ ರೂಪಿಸಲು ಸಾರ್ವಜನಿಕರಿಂದ ಸಲಹೆಗಳನ್ನು ಕೇಳಿದೆ. ಲೋಕಸಭೆ ಚುನಾವಣೆಗಾಗಿ ಬಿಜೆಪಿ ಪ್ರಣಾಳಿಕೆ ರೂಪಿಸುವುದಕ್ಕೆ ಅಭಿಪ್ರಾಯ ತಿಳಿಸುವಂತೆ ಭಾರತದ ಯುವಕರನ್ನು ಮೋದಿ ಎಕ್ಸ್ ಖಾತೆಯಲ್ಲಿ ಕೇಳಿಕೊಂಡಿದ್ದಾರೆ. ನಮೋ ಆ್ಯಪ್ ಅಥವಾ ಪಿಎಂ ನರೇಂದ್ರ ಮೋದಿ ವೆಬ್‌ಸೈಟ್‌ನಲ್ಲಿ ಕಮೆಂಟ್ ವಿಭಾಗದಲ್ಲಿ ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳಲು ಯುವಕರನ್ನು ಕೇಳಲಾಗಿದೆ.
3. ಸರಕಾರ ಮತ್ತು ಸಂಸದ/ಶಾಸಕರ ಬಗ್ಗೆ
ಅಭಿಪ್ರಾಯ ಆಹ್ವಾನ:
ಆ್ಯಪ್ ಆಧಾರಿತ ಸಮೀಕ್ಷೆಯ ಮೂಲಕ ನಾಗರಿಕರು ಸ್ಥಳೀಯ ಸಂಸದ ಅಥವಾ ಶಾಸಕರು ಮಾಡಿದ್ದೇನು ಎಂಬುದರ ಬಗ್ಗೆ ಮೋದಿಯವರಿಗೆ ನೇರವಾಗಿ ಅಭಿಪ್ರಾಯ ಹೇಳಲು ಅವಕಾಶ ಮಾಡಲಾಗಿದೆ. ಸರಕಾರ ಮತ್ತು ನಾಯಕತ್ವದ ವಿವಿಧ ಅಂಶಗಳ ಬಗ್ಗೆ ಜನರ ಮನಸ್ಥಿತಿಯನ್ನು ತಿಳಿಯಲು ಜನಮನ ಸಮೀಕ್ಷೆಯನ್ನು ನಮೋ ಅಪ್ಲಿಕೇಶನ್ ಪ್ರಾರಂಭಿಸಿದೆ. ಬಿಜೆಪಿ 2018ರಲ್ಲಿ ಮೊದಲ ಬಾರಿಗೆ ಇಂಥ ಸಮೀಕ್ಷೆಯನ್ನು ಪ್ರಾರಂಭಿಸಿತು. ಕಳೆದ 10 ವರ್ಷಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಭಾರತ ಸಾಧಿಸಿರುವ ಪ್ರಗತಿಯ ಬಗ್ಗೆ ಅಭಿಪ್ರಾಯ ಹಂಚಿಕೊಳ್ಳಲು ಜನರನ್ನು ಕೇಳಲಾಗಿದೆ.
4.ಮನೆ ಮನೆ ಪ್ರಚಾರ:
ಲೋಕಸಭೆ ಚುನಾವಣೆಗೆ ಬಿಜೆಪಿ ಪ್ರಣಾಳಿಕೆಯ ಬಗ್ಗೆ ಸಾರ್ವಜನಿಕರ ಅಭಿಪ್ರಾಯವನ್ನು ಪಡೆಯಲು ಪಕ್ಷದ ಕಾರ್ಯಕರ್ತರು ಸಲಹಾ ಪೆಟ್ಟಿಗೆಗಳನ್ನು ಹಿಡಿದುಕೊಂಡು ಮನೆ ಮನೆಗೆ ಹೋಗಲಿದ್ದಾರೆ ಎಂದು ಮಧ್ಯಪ್ರದೇಶ ಬಿಜೆಪಿ ಮುಖ್ಯಸ್ಥ ವಿ.ಡಿ. ಶರ್ಮಾ ಘೋಷಿಸಿದ್ದಾರೆ.
ಇನ್ನು ಕಾಂಗ್ರೆಸ್ ಹಾದಿಯನ್ನು ಗಮನಿಸುವುದಾದರೆ,
1.ಭಾರತ ಜೋಡೊ ನ್ಯಾಯ ಯಾತ್ರೆ:
ಭಾರತ ಜೋಡೊ ನ್ಯಾಯ ಯಾತ್ರೆ ಕಾಂಗ್ರೆಸ್ ತನ್ನ ಸಿದ್ಧಾಂತದ ಬಗ್ಗೆ ಜನರಿಗೆ ತಿಳಿಸಲು ಮತ್ತು ದೇಶದ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸಮಸ್ಯೆಗಳ ಕುರಿತು ಸಾರ್ವಜನಿಕರೊಂದಿಗೆ ಸಂವಹನ ನಡೆಸಲು ಬಹಳ ಮಹತ್ವದ ನಡೆಯಾಗಿ ಗಮನ ಸೆಳೆದಿದೆ. ಇದು ಜನರ ಪರ ದನಿಯೆತ್ತುವ ಚಳವಳಿ ಎಂದು ಕಾಂಗ್ರೆಸ್ ಹೇಳಿಕೊಂಡಿದೆ. ಈ ಯಾತ್ರೆ ನ್ಯಾಯದ ಮೇಲೆ ಕೇಂದ್ರೀಕರಿಸಿದೆ. 15 ರಾಜ್ಯಗಳ ಮೂಲಕ ಸಾಗುತ್ತಾ ಈ ಯಾತ್ರೆ, ಎಲ್ಲರಿಗೂ ನ್ಯಾಯ ಎಂಬುದನ್ನು ಪ್ರತಿಪಾದಿಸುತ್ತದೆ. ರಾಜಕೀಯ ಉದ್ದೇಶಗಳ ಹೊರತಾಗಿಯೂ, ಅನ್ಯಾಯ ಮತ್ತು ದ್ವೇಷದ ಅಲೆಗಳ ವಿರುದ್ಧ ಈ ಯಾತ್ರೆ ಗಮನವಿಟ್ಟಿದೆ ಎಂಬುದನ್ನು ಕಾಂಗ್ರೆಸ್ ಈಗಾಗಲೇ ಹೇಳಿದೆ. ಈ ಆಂದೋಲನದಲ್ಲಿ ಭಾಗಿಯಾಗಲು, ಆ ಮೂಲಕ ನ್ಯಾಯ ಯೋಧರಾಗಲು, ಪಕ್ಷ ಜನರನ್ನು ಒತ್ತಾಯಿಸಿದೆ. ಬದಲಾವಣೆಯ ಭಾಗವಾಗಲು ಮತ್ತು ಉಜ್ವಲ ಭವಿಷ್ಯದತ್ತ ನಡೆಯಲು ಅದು ಕೇಳಿಕೊಂಡಿದೆ.
2. ಪ್ರಣಾಳಿಕೆಗಾಗಿ ಜನರ ಸಲಹೆಗಳನ್ನು ಕೋರುವುದು:
ಕಾಂಗ್ರೆಸ್ ಕೂಡ ತನ್ನ ಲೋಕಸಭೆಯ ಪ್ರಣಾಳಿಕೆಗೆ ನಾಗರಿಕರಿಂದ ಸಲಹೆಗಳನ್ನು ಕೇಳಿದೆ. ಅದಕ್ಕೆಂದೇ ರೂಪಿಸಲಾಗಿರುವ ವೆಬ್‌ಸೈಟ್‌ನಲ್ಲಿ ಜನರ ಅಭಿಪ್ರಾಯ ಹಂಚಿಕೊಳ್ಳಲು ಕೋರಲಾಗಿದೆ. ಲೋಕಸಭೆ ಚುನಾವಣೆಯ ಪ್ರಣಾಳಿಕೆಯು ಜನರ ಪ್ರಣಾಳಿಕೆಯಾಗಲಿದೆ ಎಂದು ಪಕ್ಷದ ನಾಯಕ ಪಿ. ಚಿದಂಬರಂ ಹೇಳಿದ್ದಾರೆ. ಪ್ರಣಾಳಿಕೆ ರೂಪಿಸುವುದಕ್ಕಾಗಿ ದೇಶದ ಜನರನ್ನು ಒಳಗೊಳ್ಳಲು ಬಯಸುತ್ತೇವೆ ಎಂದು ಅವರು ಹೇಳಿದ್ದಾರೆ.
ಚುನಾವಣೆ ಪ್ರಕ್ರಿಯೆಯಲ್ಲಿ ಸಾರ್ವಜನಿಕರು ಭಾಗವಹಿಸುವಂತೆ ಮಾಡಲು ಪಕ್ಷಗಳು ಪ್ರಯತ್ನಿಸುತ್ತಿರುವುದು ಇದೇ ಮೊದಲಲ್ಲ. 2019ರ ಲೋಕಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ತಮ್ಮ ಪ್ರಣಾಳಿಕೆಗಾಗಿ ಜನಾಭಿಪ್ರಾಯ ಕೇಳಿದ್ದವು. ಹೀಗೆ ತಮ್ಮ ಯೋಜನೆಗಳನ್ನು ಪ್ರಕಟಿಸುವಲ್ಲಿ ಜನರ ಪಾಲ್ಗೊಳ್ಳುವಿಕೆಗೆ ಅವಕಾಶ ನೀಡುವ ಮೂಲಕ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕ್ರಮ ಫಲಿತಾಂಶದ ಮೇಲೆ ಒಟ್ಟಾರೆ ಬೀರುವ ಪರಿಣಾಮ ಏನೇ ಇದ್ದರೂ, ಅದೊಂದು ಈಗಿನ ಜನಪ್ರಿಯ ಕ್ರಮವಾಗುತ್ತಿದೆ.
ಇದರ ಹೊರತಾಗಿ, ಅಧಿಕಾರಕ್ಕೆ ಬಂದರೆ ಪಕ್ಷವೊಂದು ತಮಗಾಗಿ ಏನನ್ನು ಮಾಡಬೇಕು ಎಂದು ಜನ ಬಯಸುವುದು ಸಹಜ. ಅಧಿಕಾರಕ್ಕೆ ಬಂದರೆ ಜನರಿಗಾಗಿ ತಾನೇನು ಮಾಡಬಹುದು ಎಂಬುದನ್ನು ಪಕ್ಷ ಯೋಚಿಸುವಾಗ ಚುನಾವಣೆಯಲ್ಲಿ ಹೇಗಾದರೆ ಜನರನ್ನು ಆಕರ್ಷಿಸುವುದು ಸಾಧ್ಯ ಎಂಬುದೂ ಸೇರಿದಂತೆ ಹಲವು ಅಂಶಗಳನ್ನು ಯಾವುದೇ ಪಕ್ಷ ಪರಿಗಣಿಸುತ್ತದೆ.
ಈಗ ಕಾಂಗ್ರೆಸ್ ರೈತರಿಗಾಗಿ, ಯುವಕರಿಗಾಗಿ ಮತ್ತು ಮಹಿಳೆಯರಿಗಾಗಿ ಮಹತ್ವದ ಗ್ಯಾರಂಟಿಗಳನ್ನು ಘೋಷಿಸಿದೆ. ಕಳೆದ 10 ವರ್ಷಗಳಲ್ಲಿ ಮೋದಿ ಸರಕಾರ ತಾನು ಕೊಟ್ಟಿದ್ದ ಭರವಸೆಯನ್ನೇ ಮರೆತು ಯಾವುದನ್ನು ಈಡೇರಿಸುವಲ್ಲಿ ವಿಫಲವಾಯಿತೋ ಅದಕ್ಕೆ ಪ್ರತಿಯಾಗಿಯೆಂಬಂತೆ ಕಾಂಗ್ರೆಸ್ ಗ್ಯಾರಂಟಿಗಳಿವೆ.
ಯುವಕರಿಗಾಗಿ ಕಾಂಗ್ರೆಸ್ ಘೋಷಿಸಿರುವ
5 ಗ್ಯಾರಂಟಿಗಳು:
1. ಮೊದಲ ಹೆಜ್ಜೆಯೇ 30 ಲಕ್ಷ ಸರಕಾರಿ ಉದ್ಯೋಗಗಳಿಗೆ ನೇಮಕಾತಿ. ಈ ಭಾರತಿ ಭರೋಸಾ ಯೋಜನೆ ನಿಜವಾಗಿಯೂ ಬಹಳ ದೊಡ್ಡ ಯೋಜನೆಯಾಗಿದೆ.
2. ಮೊದಲ ಕೆಲಸದ ಗ್ಯಾರಂಟಿ. ಪ್ರತೀ ಪದವೀಧರರು ಮತ್ತು ಡಿಪ್ಲೊಮಾ ಹೊಂದಿರುವವರಿಗೆ 1 ಲಕ್ಷ ರೂ. ಸ್ಟೈಪೆಂಡ್‌ನೊಂದಿಗೆ ಒಂದು ವರ್ಷದ ಇಂಟರ್ನ್‌ಶಿಪ್.
3. ಪ್ರಶ್ನೆಪತ್ರಿಕೆ ಸೋರಿಕೆಯಿಂದ ಮುಕ್ತಿ ಭರವಸೆ. ಪತ್ರಿಕೆ ಸೋರಿಕೆ ತಡೆಯಲು ಹೊಸ ಕಾನೂನನ್ನು ತರುವ ಮೂಲಕ ಪರೀಕ್ಷೆಗಳನ್ನು ವಿಶ್ವಾಸಾರ್ಹ ರೀತಿಯಲ್ಲಿ ನಡೆಸುವ ಭರವಸೆ.
4. ಸಾಮಾಜಿಕ ಭದ್ರತೆ. ಚಾಲಕರು, ಗಾರ್ಡ್‌ಗಳು ಮತ್ತು ಡೆಲಿವರಿ ಬಾಯ್‌ಗಳಂತಹ ಕೆಲಸಗಾರರಿಗೆ ಸಾಮಾಜಿಕ ಭದ್ರತೆಗಾಗಿ ಕಾನೂನನ್ನು ತರುವ ಭರವಸೆ.
5. ಯುವ ರೋಶನಿ. ರೂ. 5,000 ಕೋಟಿ ರಾಷ್ಟ್ರೀಯ ನಿಧಿಯಿಂದ ಜಿಲ್ಲಾ ಮಟ್ಟದಲ್ಲಿ ಸ್ಟಾರ್ಟ್ ಅಪ್ ಫಂಡ್ ನೀಡುವ ಮೂಲಕ ಯುವ ಉದ್ಯಮಿಗಳನ್ನು ಬೆಂಬಲಿಸುವ ಭರವಸೆ.
ನಾರಿ ನ್ಯಾಯದ ಅಡಿಯಲ್ಲಿನ ಐದು ಗ್ಯಾರಂಟಿಗಳು ಹೀಗಿವೆ:
1. ಮಹಾಲಕ್ಷ್ಮಿ ಗ್ಯಾರಂಟಿ ಯೋಜನೆ -ದೇಶದ ಪ್ರತೀ ಬಡ ಕುಟುಂಬದ ಒಬ್ಬ ಮಹಿಳೆಗೆ ವಾರ್ಷಿಕವಾಗಿ 1 ಲಕ್ಷ ರೂ. ವರ್ಗಾವಣೆ ಮಾಡುವ ಸ್ಕೀಮ್ ಇದು.
2. ಆದಿ ಆಬಾದಿ, ಪೂರಾ ಹಕ್ -ಇದರಡಿಯಲ್ಲಿ ಕೇಂದ್ರ ಸರಕಾರಿ ಉದ್ಯೋಗಗಳಲ್ಲಿ ಎಲ್ಲಾ ಹೊಸ ನೇಮಕಾತಿಗಳಲ್ಲಿ ಶೇ.50ರಷ್ಟನ್ನು ಮಹಿಳೆಯರಿಗೆ ಮೀಸಲಿಡಲಾಗುವುದು.
3. ಶಕ್ತಿ ಕಾ ಸಮ್ಮಾನ್ -ಈ ಗ್ಯಾರಂಟಿ ಅಡಿಯಲ್ಲಿ ಆಶಾ, ಅಂಗನವಾಡಿ ಮತ್ತು ಮಧ್ಯಾಹ್ನದ ಊಟದ ಕಾರ್ಯಕರ್ತೆಯರ ಮಾಸಿಕ ಗೌರವಧನವನ್ನು ಡಬಲ್ ಮಾಡಲಾಗುವುದು.
4. ಅಧಿಕಾರ ಮೈತ್ರಿ -ಮಹಿಳೆಯರಿಗೆ ಅವರ ಕಾನೂನು ಹಕ್ಕುಗಳ ಬಗ್ಗೆ ತಿಳಿಸಿಕೊಡಲು ಪ್ರತೀ ಪಂಚಾಯತ್ ಮಟ್ಟದಲ್ಲಿ ಕಾನೂನು ಸಹಾಯಕರ ನೇಮಕದ ಭರವಸೆ.
5. ಸಾವಿತ್ರಿ ಬಾಯಿ ಫುಲೆ ಹಾಸ್ಟೆಲ್‌ಗಳು -ಈ ಗ್ಯಾರಂಟಿ ಯೋಜನೆಯಡಿ ದೇಶದಲ್ಲಿ ಉದ್ಯೋಗದಲ್ಲಿರುವ ಮಹಿಳೆಯರಿ ಗಾಗಿ ಪ್ರತೀ ಜಿಲ್ಲೆಯಲ್ಲಿ ಕನಿಷ್ಠ ಒಂದಾದರೂ ಹಾಸ್ಟೆಲ್ ನಿರ್ಮಾಣ ಮತ್ತು ಇಂತಹ ಹಾಸ್ಟೆಲ್‌ಗಳ ಸಂಖ್ಯೆ ದ್ವಿಗುಣಗೊಳಿಸಲಾಗುವುದು.
ಇನ್ನು ರೈತರಿಗಾಗಿ ಕನಿಷ್ಠ ಬೆಂಬಲ ಬೆಲೆಯ ಕಾನೂನು ಖಾತರಿಯನ್ನು ಕಾಂಗ್ರೆಸ್ ಈಗಾಗಲೇ ಘೋಷಿಸಿದೆ.
ಇನ್ನೊಂದೆಡೆ, ಆದಿವಾಸಿ ಸಮಾಜಕ್ಕೆ ಉತ್ತಮ ಆಡಳಿತ, ಸುಧಾರಣೆಗಳು, ಭದ್ರತೆ, ಸ್ವಆಡಳಿತ, ಆತ್ಮಗೌರವ, ಉಪ ಯೋಜನೆ ಎಂಬ ಆರು ಸಂಕಲ್ಪಗಳನ್ನು ಕೂಡ ಕಾಂಗ್ರೆಸ್ ಘೋಷಿಸಿದೆ.
ಹಾಗಾದರೆ, ಚುನಾವಣೆಗಾಗಿ ಬಿಜೆಪಿ ಪ್ರಯೋಗಿಸಲು ಮುಂದಾಗಿರುವ ಅಸ್ತ್ರಗಳೇನು?
1. ಈಗಾಗಲೇ ಅಯೋಧ್ಯೆಯ ರಾಮಮಂದಿರವನ್ನು ಮೋದಿ ಉದ್ಘಾಟಿಸಿದ್ದಾರೆ. ಮತಗಳನ್ನು ಸೆಳೆಯುವ ತಂತ್ರಗಾರಿಕೆಯ ಭಾಗವಾಗಿಯೇ ಅದನ್ನು ಬಿಜೆಪಿ ಮಾಡಿದೆ ಎಂಬುದು ಸ್ಪಷ್ಟ.
2. ಅಮೃತ ಕಾಲ ಎಂಬ ಮತ್ತೊಂದು ವಿಚಾರವನ್ನು ಹೇಳಿಕೊಳ್ಳುತ್ತ ಮೋಡಿ ಮಾಡುವುದರಲ್ಲೂ ಮೋದಿ ಸರಕಾರ ನಿರತವಾಗಿದೆ. ರಾಮ ಮಂದಿರ ಉದ್ಘಾಟನೆ ಹೊತ್ತಲ್ಲಿಯೂ ಮೋದಿ ಅಮೃತ ಕಾಲದ ಬಗ್ಗೆ ಮಾತಾಡಿದ್ದರು.
3. ಅಯೋಧ್ಯೆಯಲ್ಲಿ ರಾಮಮಂದಿರ ವಿಚಾರವನ್ನು ಈವರೆಗಿನ ಚುನಾವಣಾ ವಿಷಯವಾಗಿ ಇಟ್ಟುಕೊಂಡಿದ್ದ ಬಿಜೆಪಿ, ಈಗ ಅದನ್ನು ನಿರ್ಮಾಣ ಮಾಡಿದ ಹೆಗ್ಗಳಿಕೆಗಾಗಿ ವೋಟು ಸೆಳೆಯುವ ತಂತ್ರ ರೂಪಿಸಿರುವಾಗಲೇ, ಮತ್ತೊಂದೆಡೆ ಕಾಶಿ, ಮಥುರಾದ ವಿಚಾರವನ್ನೂ ಎತ್ತಿಕೊಂಡಿರುವುದರ ಮರ್ಮವನ್ನು ಗಮನಿಸಬಹುದು.
4. ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿ ಮೂಲಕವೂ ಅದು ತನ್ನ ಬೇಳೆ ಬೇಯಿಸಿಕೊಳ್ಳಲು ಹೊರಟಿದೆ.
5. ಇನ್ನು ಇಂಡಿಯನ್ ಪಿನಲ್ ಕೋಡ್ ಬದಲಿಗೆ ಭಾರತ ನ್ಯಾಯ ಸಂಹಿತೆಯನ್ನು ತಂದಿರುವುದರ ಹಿಂದೆ ಕೂಡ ಅದರ ಒಳ ಅಜೆಂಡಾ ಇದೆ ಎಂಬುದು ಸ್ಪಷ್ಟ.
ಇದೆಲ್ಲದರ ಮೂಲಕವೂ ಅದು ಧ್ರುವೀಕರಣ ರಾಜಕಾರಣಕ್ಕೆ ಒತ್ತು ನೀಡುತ್ತ, ಸಮಾಜವನ್ನು ಒಡೆದು ಲಾಭ ಮಾಡಿಕೊಳ್ಳುವತ್ತ ಗಮನ ಹರಿಸಿದೆ.
ಇದರ ಜೊತೆಗೆ ವಿಕಸಿತ ಭಾರತದ ಸಂಕಲ್ಪ ಎಂಬ ಘೋಷಣೆಯೂ ಈಗ ಸೇರಿಕೊಂಡಿದೆ.
ಇದೇ ವೇಳೆ ಕಾಂಗ್ರೆಸ್ ನಡೆ ಮಾತ್ರ ಸಾಮಾಜಿಕ ನ್ಯಾಯದ ಪ್ರತಿಪಾದನೆಯೊಂದಿಗಿದೆ.
ಅಧಿಕಾರದಲ್ಲಿರುವವರು ಸರ್ವಾಧಿಕಾರದ ಧೋರಣೆಯೊಂದಿಗೆ ಆಕ್ರಮಿಸಿಕೊಳ್ಳುತ್ತಿರುವುದರ ಬಗ್ಗೆ ಮತ್ತು ಸಾಮಾಜಿಕ, ಆರ್ಥಿಕ ತಾರತಮ್ಯವನ್ನು ಎಸಗುತ್ತಿರುವುದರ ಬಗ್ಗೆ ಭಾರತ ಜೋಡೊ ಯಾತ್ರೆ ಎಚ್ಚರಿಸಿತ್ತು. ಈಗ ಅದರ ಎರಡನೇ ಹಂತವಾಗಿದ್ದ ಭಾರತ ಜೋಡೊ ನ್ಯಾಯ ಯಾತ್ರೆ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ನ್ಯಾಯದ ಸಾಂವಿಧಾನಿಕ ಆದರ್ಶಗಳನ್ನು ಸಾಧಿಸುವ ಆಶಯದ್ದು. ಈಗಾಗಲೇ ಕಾಂಗ್ರೆಸ್ ಘೋಷಿಸಿರುವ ಎಲ್ಲ ಗ್ಯಾರಂಟಿಗಳು ಇದಿಷ್ಟೂ ಆಶಯಗಳನ್ನು ಈಡೇರಿಸುವ ಗುರಿಯನ್ನು ಉಳ್ಳವಾಗಿವೆ.
ಕಾಂಗ್ರೆಸ್ ತನ್ನ ಭರವಸೆಗಳನ್ನು ಕಾಂಗ್ರೆಸ್ ಗ್ಯಾರಂಟಿ ಎಂದು ಕರೆದಿದೆ. ಆದರೆ ಕಾಂಗ್ರೆಸ್ ಗ್ಯಾರಂಟಿಗಳನ್ನು ನಕಲು ಮಾಡಿದ ಬಿಜೆಪಿ ಮಾತ್ರ ಅವುಗಳನ್ನು ಮೋದಿ ಗ್ಯಾರಂಟಿ ಅಥವಾ ಮೋದಿ ಸರಕಾರ್ ಕಿ ಗ್ಯಾರಂಟಿ ಎಂದು ಕರೆದಿದೆ. ಕಳೆದ ಹತ್ತು ವರ್ಷಗಳಲ್ಲಿ ಮೋದಿಯಾಗಲೀ ಮೋದಿ ಸರಕಾರವಾಗಲೀ ನೀಡಿದ್ದ ಯಾವ ಪ್ರಮುಖ ಭರವಸೆಗಳನ್ನೂ ಈಡೇರಿಸಿಲ್ಲ. ಸ್ವಿಸ್ ಬ್ಯಾಂಕ್‌ನಿಂದ ಕಪ್ಪು ಹಣ ತರುವುದು, ಕೋಟಿ ಕೋಟಿ ಉದ್ಯೋಗ ಸೃಷ್ಟಿಸುವುದು - ಮೋದಿಯವರ ಇಂತಹ ಪ್ರಮುಖ ಭರವಸೆಗಳು ಈಡೇರಲೇ ಇಲ್ಲ.
ಆದರೆ ಕಾಂಗ್ರೆಸ್ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ಆರೇ ತಿಂಗಳಲ್ಲಿ ತಾನು ಘೋಷಿಸಿದ್ದ ಎಲ್ಲ ಐದೂ ಭರವಸೆಗಳನ್ನು ಜಾರಿಗೊಳಿಸಿತು. ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳ ಯಶಸ್ವಿ ಅನುಷ್ಠಾನದಿಂದ ನಾಲ್ಕು ಕೋಟಿಗೂ ಹೆಚ್ಚು ಜನರು ಪ್ರಯೋಜನ ಪಡೆದಿದ್ದಾರೆ ಎಂದು ಕರ್ನಾಟಕ ಸರಕಾರ ಹೇಳಿದೆ. ಅದರ ಈ ಬದ್ಧತೆ ಕೂಡ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ಅದಕ್ಕೆ ಆತ್ಮವಿಶ್ವಾಸ ತುಂಬಿದೆ ಎಂಬುದು ನಿಜ.
ಉದ್ಯೋಗ ಮತ್ತು ಜೀವನೋಪಾಯವನ್ನೇ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಮುಖ ವಿಷಯಗಳನ್ನಾಗಿ ಮುಂದಿಟ್ಟಿದೆ. ಬಿಜೆಪಿ ಭಾವನಾತ್ಮಕ ವಿಚಾರಗಳನ್ನು, ಅದರಲ್ಲೂ ಅಯೋಧ್ಯೆಯ ರಾಮ ಮಂದಿರ ಮತ್ತು ಹಿಂದುತ್ವದ ವಿಚಾರಗಳನ್ನು ತೆಗೆದುಕೊಂಡು, ಜನರನ್ನು ಧರ್ಮದ ಅಮಲಿನಲ್ಲಿ ಮುಳುಗಿಸುತ್ತಿದೆ. ಈ ಹೊತ್ತಿನಲ್ಲಿ ಕಾಂಗ್ರೆಸ್ ತನ್ನ ಸದುದ್ದೇಶದ ಮತ್ತು ಸತ್ಯದ ಹೆಜ್ಜೆಗಳ ಬಗ್ಗೆ ಜನತೆಯ ಗಮನ ಸೆಳೆಯಲೇಬೇಕಿರುವುದು ಮುಖ್ಯವಾಗಿದೆ.