ಬಿಜೆಪಿ-ಜೆಡಿಎಸ್ ಮೈತ್ರಿ ಮಾತು: ಅಧಿಕಾರದ ಎದುರಲ್ಲಿ ಪ್ರಾದೇಶಿಕ ಪಕ್ಷದ ಅವಕಾಶವಾದಿ ಸೂತ್ರ?

Update: 2023-09-20 05:51 GMT
Editor : Thouheed | By : ಆರ್. ಜೀವಿ

ಜೆಡಿಎಸ್ ಕರ್ನಾಟಕದ ಪ್ರಾದೇಶಿಕ ಪಕ್ಷವಾಗಿ, ರಾಜ್ಯ ರಾಜಕಾರಣದಲ್ಲಿ ತನ್ನದೇ ಮಹತ್ವ ಹೊಂದಿದೆ. ಕೇರಳದಲ್ಲಿಯೂ ಸಕ್ರಿಯವಾಗಿದ್ದು, ರಾಷ್ಟ್ರ ಮಟ್ಟದಲ್ಲಿ ಕೂಡ ತನ್ನ ಅಸ್ತಿತ್ವ ತೋರಿಸುವ ಮಟ್ಟಿಗೆ ಜೆಡಿಎಸ್ ತಂತ್ರಗಾರಿಕೆ ಸುದ್ದಿಯಲ್ಲಿರುತ್ತದೆ.

ಸ್ವಜನ ಪಕ್ಷಪಾತದ ಕಾರಣದಿಂದಾಗಿ, ತಂದೆ ಮಕ್ಕಳ ಪಕ್ಷವೆಂಬ ಟೀಕೆಗೆ ತುತ್ತಾಗಿರುವ ಜೆಡಿಎಸ್, ಅದೆಲ್ಲದರ ಹೊರತಾಗಿಯೂ ಪ್ರಭಾವಶಾಲಿಯಾಗಿರುವುದು ಹೇಗೆ? ಕರ್ನಾಟಕದಲ್ಲಿ ಕಾಣಿಸಿಕೊಂಡ ಇತರ ಹಲವು ಪ್ರಾದೇಶಿಕ ಪಕ್ಷಗಳೆಲ್ಲ ವಿಫಲವಾಗಿರುವಾಗ, ಜೆಡಿಎಸ್ ಅಸ್ತಿತ್ವ ಭದ್ರವಾಗಿರುವುದರ ಮರ್ಮವೇನು?

ದೇವೇಗೌಡರು ಪ್ರಧಾನಿಯಾದದ್ದು ಆಕಸ್ಮಿಕವೇ ಆಗಿತ್ತಾದರೂ, ಅದು ಕರ್ನಾಟಕದ ಎರಡನೇ ಅತಿ ದೊಡ್ಡ ಸಮುದಾಯವಾದ ಒಕ್ಕಲಿಗರ ನಾಯಕರಾಗಿ ಅವರು ಹೊರಹೊಮ್ಮುವುದಕ್ಕೆ ಕಾರಣವಾಯಿತು. ದಕ್ಷಿಣ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಒಕ್ಕಲಿಗ ಮತಗಳೇ ನಿರ್ಣಾಯಕವಾಗಿದ್ದು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕೈಕೊಟ್ಟಿತೆಂಬುದು ಬಿಟ್ಟರೆ ಆ ಭಾಗದ ಒಕ್ಕಲಿಗ ಮತಗಳೇ ಜೆಡಿಎಸ್ ಅನ್ನು ಬಹುಕಾಲದಿಂದ ಕಾಯ್ದುಕೊಂಡು ಬಂದಿವೆ.

ಜೆಡಿಎಸ್ ಇತಿಹಾಸ

ಮಾಜಿ ಪ್ರಧಾನಿ ದೇವೇಗೌಡ ನೇತೃತ್ವದಲ್ಲಿ ಜೆಡಿಎಸ್ ಅಸ್ತಿತ್ವಕ್ಕೆ ಬಂದಿದ್ದು 1999ರಲ್ಲಿ. ಅದಕ್ಕೂ ಮೊದಲು ಸಂಯುಕ್ತ ರಂಗದ ಭಾಗವಾಗಿದ್ದ ಜನತಾದಳದಿಂದ ದೇವೇಗೌಡರು ಪ್ರಧಾನಿಯೂ ಆಗಿ 11 ತಿಂಗಳು, ಅಂದರೆ ಜೂನ್ 1996ರಿಂದ ಎಪ್ರಿಲ್ 1997ರವರೆಗೆ ಅಧಿಕಾರದಲ್ಲಿದ್ದರು. ಅದಾದ ಬಳಿಕ ಮತ್ತೆ ರಾಜ್ಯ ರಾಜಕಾರಣಕ್ಕೆ ದೇವೇಗೌಡರು ಮರಳುವಂತಾಯಿತು.

ರಾಜ್ಯದಲ್ಲಿ ಪ್ರಬಲವಾಗಿದ್ದ ಜನತಾ ದಳ ದೇವೇಗೌಡರು ಮತ್ತು ರಾಮಕೃಷ್ಣ ಹೆಗಡೆ ನಡುವಿನ ವೈಮನಸ್ಸಿನಿಂದಾಗಿ ಒಡೆಯಿತು. ಜನತಾ ದಳ ಹೋಳಾಗಿ, ದೇವೇಗೌಡರ ಬಣ ಜೆಡಿಎಸ್ ಎಂದಾಯಿತು. ಇನ್ನೊಂದು ಬಣ ಜೆಡಿಯು ಎಂದಾಯಿತು. ಜೆಡಿಯು ಎನ್‌ಡಿಎ ಭಾಗವಾದರೆ, ಜೆಡಿಎಸ್ ಅಸ್ತಿತ್ವಕ್ಕೆ ಬಂದ ಮೊದಲ ದಿನಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡರಿಂದಲೂ ರಾಜಕೀಯವಾಗಿ ಅಂತರ ಕಾಯ್ದುಕೊಂಡಿತು.

ಆದರೆ, ತನ್ನ ಮೈತ್ರಿ ವಿರೋಧಿ ನಿಲುವನ್ನು ಜೆಡಿಎಸ್ ಮೊದಲ ಬಾರಿಗೆ ಮುರಿದದ್ದು 2004ರಲ್ಲಿ.

ಚುನಾವಣಾ ರಾಜಕಾರಣ

ಜೆಡಿಎಸ್ ಮೈತ್ರಿ ರಾಜಕಾರಣವನ್ನು ನೋಡುವ ಮೊದಲು, ಚುನಾವಣಾ ರಾಜಕಾರಣದಲ್ಲಿ ಅದು ಹೇಗೆ ಯಶಸ್ಸಿನ ಸೂತ್ರಗಳನ್ನು ಕಂಡುಕೊಂಡಿತು ಎಂಬುದನ್ನು ಗಮನಿಸಬೇಕು.

ಪ್ರತ್ಯೇಕ ಪಕ್ಷವಾಗಿ ಎದುರಿಸಿದ ಮೊದಲ ಚುನಾವಣೆಯಲ್ಲಿ, ಅಂದರೆ 1999ರಲ್ಲಿ ತಾನು ಸ್ಪರ್ಧಿಸಿದ್ದ 203 ಅಸೆಂಬ್ಲಿ ಸ್ಥಾನಗಳಲ್ಲಿ ಜೆಡಿಎಸ್ ಗೆದ್ದದ್ದು 10 ಸ್ಥಾನಗಳನ್ನು ಮಾತ್ರ.

ಆಗ ದೇವೇಗೌಡರಿಗೆ ಹೊಳೆದದ್ದು ರಾಜ್ಯದಲ್ಲಿ ಪ್ರಬಲವಾಗುತ್ತಿರುವ ಬಿಜೆಪಿಯಿಂದ ಬೆದರಿಕೆ ಎದುರಿಸುತ್ತಿರುವ ಮುಸ್ಲಿಮ್ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಮೂಲಕ ಪಕ್ಷವನ್ನು ಬಲಪಡಿಸಬಹುದೆಂಬ ವಿಚಾರ. ಆ ಹೊತ್ತಿನಲ್ಲಿ ರಾಜ್ಯದ ಜನಸಂಖ್ಯೆಯ ಶೇ.12ರಷ್ಟಿದ್ದ ಮುಸ್ಲಿಮ್ ಸಮುದಾಯದ ಮತದಾರರನ್ನು ಸೆಳೆಯುವ ಮೂಲಕ ಜೆಡಿಎಸ್ ರಾಜಕೀಯಕ್ಕೆ ಹೊಸ ಆಯಾಮ ಒದಗಿತ್ತು.

ಕೇವಲ 10 ಸ್ಥಾನಗಳನ್ನು ಗೆದ್ದಿದ್ದ ಐದೇ ವರ್ಷಗಳ ಬಳಿಕ, ಅಂದರೆ 2004ರಲ್ಲಿ ಜೆಡಿಎಸ್ 58 ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಯಿತು. ಅತಂತ್ರ ವಿಧಾನಸಭೆ ಸನ್ನಿವೇಶ ತಲೆದೋರಿ, ಜೆಡಿಎಸ್ ನಿಜವಾದ ಆಟಗಾರನಾಗಿ ಮುನ್ನೆಲೆಗೆ ಬಂತು.

2004 ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಸರಕಾರ

ಜೆಡಿಎಸ್ ಮೊದಲ ಬಾರಿಗೆ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿದ್ದೇ ಆಗ. ಕಾಂಗ್ರೆಸ್-ಜೆಡಿಎಸ್ ಪರಸ್ಪರ ಕೈಜೋಡಿಸಿ 2004ರಲ್ಲಿ ಸರಕಾರ ರಚಿಸಿದವು. ಆ ಸಂದರ್ಭದಲ್ಲಿ ಕುಮಾರಸ್ವಾಮಿ ರಾಮನಗರ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು.

ಇದಾದ ಬಳಿಕ ನಿಜವಾಗಿಯೂ ಅಧಿಕಾರದ ದಾಹಕ್ಕೆ ಒಳಗಾದ ಜೆಡಿಎಸ್, ಬಹಳ ಬೇಗ ಮತ್ತೊಂದು ದಿಕ್ಕು ಹಿಡಿಯಿತು.

2006 ಜೆಡಿಎಸ್, ಬಿಜೆಪಿ ಸಮ್ಮಿಶ್ರ ಸರಕಾರ:

2006ರಲ್ಲಿ ಬಿಜೆಪಿ ಜೊತೆ ಜೆಡಿಎಸ್‌ನ ಕುಮಾರಸ್ವಾಮಿ ಕೈಜೋಡಿಸುವುದರೊಂದಿಗೆ ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಪರ್ವ ಶುರುವಾಯಿತು.

ಮುಖ್ಯಮಂತ್ರಿಯಾಗುವುದಕ್ಕಾಗಿ ಕಾಂಗ್ರೆಸ್‌ನ ಧರಂಸಿಂಗ್ ಸರಕಾರಕ್ಕೆ ಕೈಕೊಟ್ಟು, ತಮ್ಮ ಪಕ್ಷದ 46 ಶಾಸಕರೊಡನೆ ಹೊರಬಂದ ಕುಮಾರಸ್ವಾಮಿ ಬಿಜೆಪಿ ಜೊತೆ ಹೋದರು. 2006ರ ಫೆಬ್ರವರಿ 3ರಂದು ಅವರು ಮುಖ್ಯಮಂತ್ರಿಯಾದರು.

ಜೆಡಿಎಸ್, ಬಿಜೆಪಿ ತಲಾ 20 ತಿಂಗಳ ಸರಕಾರ ನಡೆಸುವ ಒಪ್ಪಂದ ಅದಾಗಿತ್ತು. ಆದರೆ 2007ರ ಅಕ್ಟೋಬರ್ 8ರವರೆಗೆ ಸಿಎಂ ಹುದ್ದೆಯಲ್ಲಿ ಮುಂದುವರಿದ ಕುಮಾರಸ್ವಾಮಿ, ಬಿಜೆಪಿಗೆ ಅಧಿಕಾರ ಹಸ್ತಾಂತರಿಸಲು ನಿರಾಕರಿಸಿ, ಹೊರಬಂದರು.

ಬಿಜೆಪಿ ಜೊತೆ ಕುಮಾರಸ್ವಾಮಿ ಕೈಜೋಡಿಸಿ ಸರಕಾರ ರಚಿಸಿದಾಗ, ಅದು ತಮ್ಮ ಸಮ್ಮತಿಯಿಲ್ಲದೆ ಆಗಿರುವ ಬೆಳವಣಿಗೆ ಎಂದು ದೇವೇಗೌಡರು ಹೇಳಿಕೊಂಡರು. ಮುಸ್ಲಿಮ್ ಸಮುದಾಯದ ವಿಶ್ವಾಸವನ್ನು ಉಳಿಸಿಕೊಳ್ಳುವುದು, ಅವರ ಮತಗಳು ಜೆಡಿಎಸ್‌ನಿಂದ ದೂರವಾಗದಂತೆ ನೋಡಿಕೊಳ್ಳುವುದು ದೇವೇಗೌಡರ ಉದ್ದೇಶವಾಗಿತ್ತು ಎಂದೇ ವಿಶ್ಲೇಷಿಸಲಾಗಿತ್ತು.

2018 ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಸರಕಾರ:

2018ರಲ್ಲಿ ರಾಜ್ಯದಲ್ಲಿ ಮತ್ತೊಮ್ಮೆ ಅತಂತ್ರ ವಿಧಾನಸಭೆ ತಲೆದೋರಿತು. ಅದು ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರ ಅಸ್ತಿತ್ವಕ್ಕೆ ಬರಲು ದಾರಿ ಮಾಡಿಕೊಟ್ಟಿತು.

ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ತಂತ್ರದ ಭಾಗವಾಗಿ, 78 ಸ್ಥಾನಗಳ ಬಲ ಹೊಂದಿದ್ದ ಕಾಂಗ್ರೆಸ್, 38 ಸ್ಥಾನಗಳನ್ನು ಗೆದ್ದಿದ್ದ ಜೆಡಿಎಸ್‌ಗೆ ಮುಖ್ಯಮಂತ್ರಿ ಹುದ್ದೆ ಬಿಟ್ಟುಕೊಟ್ಟು ಸಮ್ಮಿಶ್ರ ಸರಕಾರ ರಚಿಸಿತು. ಕುಮಾರಸ್ವಾಮಿ 2018ರ ಮೇ 23ರಂದು ಮತ್ತೆ ಮುಖ್ಯಮಂತ್ರಿಯಾದರು.

ಇಲ್ಲೊಂದು ರಾಜಕೀಯ ವಿಪರ್ಯಾಸವಿತ್ತು. 1999ರಲ್ಲಿ ಜೆಡಿಎಸ್ ಅಸ್ತಿತ್ವಕ್ಕೆ ಬಂದಿದ್ದ ವರ್ಷ ಇದೇ ಕುಮಾರಸ್ವಾಮಿ ಸಾತನೂರು ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದಾಗ ಅವರಿಗೆ ಎದುರಾಳಿಯಾಗಿ ಸೋಲಿಸಿದ್ದವರು ಕಾಂಗ್ರೆಸ್‌ನ ಡಿ.ಕೆ. ಶಿವಕುಮಾರ್.

ಅದೇ ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್, 2018ರಲ್ಲಿ ಸಮ್ಮಿಶ್ರ ಸರಕಾರ ರಚನೆಯ ಹಿಂದೆ ಮಹತ್ವದ ಪಾತ್ರ ವಹಿಸಿ, ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವುದಕ್ಕೆ ಕಾರಣರಾಗಿದ್ದರು.

ಆದರೆ ಒಂದೇ ವರ್ಷದಲ್ಲಿ ಕಾಂಗ್ರೆಸ್, ಜೆಡಿಎಸ್‌ನ 17 ಶಾಸಕರು ಬಿಜೆಪಿ ಸೇರಿ ಆ ಮೈತ್ರಿ ಸರಕಾರ ಪತನವಾಯಿತು.

2023ರ ವಿಧಾನಸಭೆ ಚುನಾವಣೆ ಬಳಿಕ ಮತ್ತೊಮ್ಮೆ ಕಿಂಗ್‌ಮೇಕರ್ ಆಗುವ ಕನಸು ಕಂಡಿದ್ದ ಜೆಡಿಎಸ್‌ಗೆ ಮತದಾರರರು ದೊಡ್ಡ ಪೆಟ್ಟು ಕೊಟ್ಟಿದ್ದರು. ಅದರ ಪ್ರಾಬಲ್ಯವಿರುವ ಹಳೇ ಮೈಸೂರು ಭಾಗದಲ್ಲಿಯೇ ಕಾಂಗ್ರೆಸ್ ಹೆಚ್ಚುವರಿ ಸ್ಥಾನಗಳನ್ನು ಗೆಲ್ಲುವುದರೊಂದಿಗೆ, ನಿರೀಕ್ಷಿಸಿಯೇ ಇರದ ಮಟ್ಟಿಗೆ ಜೆಡಿಎಸ್ ಮುಗ್ಗರಿಸುವಂತಾಯಿತು.

ಮುಂದಿನ ಲೋಕಸಭೆ ಚುನಾವಣೆಗಾಗಿ ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರ ಜೆಡಿಎಸ್ ಪಾಲಿಗೆ ಮುಖ್ಯವಾಗುತ್ತಿರುವುದು ಇದೇ ಕಾರಣದಿಂದ. ಕಾಂಗ್ರೆಸ್ ಕೆಡವಿರುವ ತನ್ನ ಕೋಟೆಯನ್ನು ಹಳೇ ಮೈಸೂರು ಭಾಗದಲ್ಲಿ ಮತ್ತೆ ಭದ್ರಪಡಿಸಿಕೊಳ್ಳುವ ಲೆಕ್ಕಾಚಾರ ಜೆಡಿಎಸ್‌ನದ್ದು.


ಇನ್ನೊಂದೆಡೆ ಕಾಂಗ್ರೆಸ್‌ನ ಪ್ರಚಂಡ ಗೆಲುವು ಬಿಜೆಪಿಯನ್ನೂ ಕಂಗೆಡಿಸಿದೆ. ಈ ಸೋಲಿನ ಹಿನ್ನೆಲೆಯಲ್ಲಿಯೇ ಬಿಜೆಪಿ ಮತ್ತು ಜೆಡಿಎಸ್ ಎರಡರ ನಡುವೆ ಮೈತ್ರಿ ಸಾಧ್ಯತೆ ಕುದುರುತ್ತಿರುವ ಹಾಗೆ ಕಾಣಿಸುತ್ತಿದೆ.

ಜೆಡಿಎಸ್ ಲೋಕಸಭೆಯಲ್ಲಿ ದಾಖಲಿಸಿದ ಅಸ್ತಿತ್ವದ ಬಗ್ಗೆ ನೋಡುವುದಾದರೆ,

1999ರಲ್ಲಿ ಒಂದು ಸ್ಥಾನ 2004ರಲ್ಲಿ ಎರಡು ಸ್ಥಾನಗಳು, 2009ರಲ್ಲಿ ಮೂರು ಸ್ಥಾನಗಳು, 2014ರಲ್ಲಿ ಎರಡು ಸ್ಥಾನಗಳು ಹಾಗೂ 2019ರಲ್ಲಿ ಒಂದು ಸ್ಥಾನ. ಅದು ಈಗ ಅಸಿಂಧು ಎಂದು ಹೈ ಕೋರ್ಟ್ ತೀರ್ಪು ನೀಡಿದೆ.

2019ರಲ್ಲಿ ಕಾಂಗ್ರೆಸ್, ಜೆಡಿಎಸ್ ಮೈತ್ರಿ

ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದವು. ಆಗ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರವೇ ಅಸ್ತಿತ್ವದಲ್ಲಿದ್ದುದರಿಂದ ಅದು ಸಹಜ ದೋಸ್ತಿ ಎನ್ನುವಂತೆ ಕಂಡಿತ್ತು.

ಆದರೆ, ಎರಡೂ ಪಕ್ಷಗಳಿಗೂ ಆ ಮೈತ್ರಿ ಮುಖಗೇಡಿ ಸ್ಥಿತಿಯನ್ನು ತಂದಿಟ್ಟಿತ್ತು. ಎರಡೂ ಪಕ್ಷಗಳು ಗೆದ್ದಿದ್ದು ತಲಾ ಒಂದೊಂದು ಸೀಟು ಮಾತ್ರ. 25 ಕ್ಷೇತ್ರಗಳು ಬಿಜೆಪಿಯ ಪಾಲಾಗಿದ್ದವು. ಒಂದು ಸ್ಥಾನದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಗೆದ್ದಿದ್ದರು.

ಅದಕ್ಕೇ ಜಿ. ಪರಮೇಶ್ವರ್ ಅಂಥ ಕಾಂಗ್ರೆಸ್ ನಾಯಕರು, ನಾವು ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಅನುಭವಿಸಿ ಆಗಿದೆ ಎಂದು ಹೇಳುತ್ತಿರುವುದು.

ಕುಮಾರಸ್ವಾಮಿಯವರೂ ಕಾಂಗ್ರೆಸ್ ಜೊತೆ ಮೈತ್ರಿಗಿಂತ ಬಿಜೆಪಿ ಜೊತೆ ಹೋಗುವುದಕ್ಕೇ ಹೆಚ್ಚು ಆಸಕ್ತಿ ತೋರಿಸಿಕೊಂಡು ಬಂದಿದ್ದಾರೆ.

2024ರ ಲೋಕಸಭೆ ಚುನಾವಣೆಗಾಗಿ ಮೈತ್ರಿ

ಈಗ ಲೋಕಸಭೆ ಚುನಾವಣೆಗಾಗಿ ಬಿಜೆಪಿ, ಜೆಡಿಎಸ್ ಮೈತ್ರಿ ವಿಚಾರ ರಾಜಕೀಯ ಮಹತ್ವ ಪಡೆದಿದೆ. ಮೈತ್ರಿ ಪಕ್ಕಾ ಎಂದು ಬಿಜೆಪಿಯಲ್ಲಿ ಯಡಿಯೂರಪ್ಪನವರಂಥ ನಾಯಕರೇ ಒಂದೆಡೆ ಖಚಿತಪಡಿಸಿದ್ದರೆ, ಇನ್ನೊಂದೆಡೆ ದೇವೇಗೌಡರೂ ಮೈತ್ರಿ ಮಾಡಿಕೊಳ್ಳುವ ವಿಚಾರ ನಿಜವೆಂದಿದ್ದಾರೆ.

ಆದರೆ ಈಚಿನ ಬೆಳವಣಿಗೆಯಂತೆ, ಮೈತ್ರಿ ಕುರಿತು ಮಾತನಾಡದಿರಲು ರಾಜ್ಯ ಬಿಜೆಪಿ ನಾಯಕರಿಗೆ ಹೈಕಮಾಂಡ್ ಸೂಚಿಸಿದೆ ಎನ್ನಲಾಗುತ್ತಿದೆ. ಹಾಗಾಗಿ ಮೈತ್ರಿ ಬಗ್ಗೆ ಗೊತ್ತಿಲ್ಲವೆಂದು ಬಿಎಸ್‌ವೈ ಸೇರಿದಂತೆ ಇತರ ನಾಯಕರು ಹೇಳತೊಡಗಿದ್ದಾರೆ. ಜೆಡಿಎಸ್ ಬಿಜೆಪಿ ಮೈತ್ರಿ ನೂರಕ್ಕೆ ನೂರರಷ್ಟು ಖಚಿತ ಎಂದು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ. ದೇವೇಗೌಡ ಹೇಳಿದ್ದಾರೆ.

ಮೈತ್ರಿ ವಿಚಾರವಾಗಿ ಮೋದಿ ಮತ್ತು ಅಮಿತ್ ಶಾ ಅವರೇ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದ್ದು. ಶೀಘ್ರವೇ ಮಾತುಕತೆ ಅಂತಿಮಗೊಳ್ಳಬಹುದು ಎಂಬ ಸುದ್ದಿಗಳಿವೆ. ಈ ನಡುವೆ, ಮೈತ್ರಿ ವಿಚಾರ ಎರಡು ಪಕ್ಷಗಳೊಳಗೂ ತಳಮಳಕ್ಕೆ ಕಾರಣವಾಗಿದೆ ಎಂಬ ಮಾತುಗಳೂ ಇವೆ.

ಇನ್ನೊಂದೆಡೆ, ಜಾತ್ಯತೀತ ಎಂದು ಹೆಸರಿಟ್ಟುಕೊಂಡವರು ಕೋಮುವಾದಿಗಳ ಜೊತೆ ಸೇರಿಕೊಂಡಿದ್ದಾರೆ. ಅಧಿಕಾರಕ್ಕಾಗಿ ಯಾರ ಜೊತೆಗಾದರೂ ಜೆಡಿಎಸ್‌ನವರು ಸೇರಿಕೊಳ್ಳುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.

ಕಾಂಗ್ರೆಸ್ ಮುಸ್ಲಿಮರಿಗೆ ಅನ್ಯಾಯ ಮಾಡಿದೆ ಎಂದು ಆರೋಪಿಸಿ, ಬಿಟ್ಟು ಹೋಗಿ ಜೆಡಿಎಸ್ ರಾಜ್ಯಾಧ್ಯಕ್ಷರಾದ ಸಿ.ಎಂ. ಇಬ್ರಾಹೀಂ ಅವರಿಂದ ಈ ಬಗ್ಗೆ ಯಾವುದೇ ಹೇಳಿಕೆ ಬಂದಿಲ್ಲ. ಅವರ ಮುಂದಿನ ನಡೆ ಏನಿರಲಿದೆ ಎಂದು ಕಾದು ನೋಡಬೇಕು.

ಪ್ರಾದೇಶಿಕ ಪಕ್ಷದ ಅಸ್ತಿತ್ವ ಉಳಿಸಿಕೊಳ್ಳುವುದಕ್ಕಾಗಿಯೇ ಮೈತ್ರಿ ಎಂದು ದೇವೇಗೌಡರು ಸಮರ್ಥಿಸಿಕೊಂಡಿದ್ದರೆ, ರಾಜ್ಯದ ಹಿತರಕ್ಷಣೆಗಾಗಿ ಮೈತ್ರಿ ಎಂದು ಕುಮಾರಸ್ವಾಮಿಯವರು ಹೇಳಿದ್ದಾರೆ.

ಮೈತ್ರಿ ಮತ್ತದರ ಫಲಿತಾಂಶಗಳ ವಿಚಾರ ಏನೇ ಇರಲಿ, ರಾಜ್ಯದ ಅಥವಾ ದೇಶದ ಹಿತದೃಷ್ಟಿ ಎಂಬುದರ ರಾಜಕೀಯ ಅರ್ಥ ಮಾತ್ರ ಹಲವು ಸಲ ಹಾಸ್ಯಾಸ್ಪದವೂ, ಅದಕ್ಕಿಂತ ಹೆಚ್ಚಾಗಿ ಆತಂಕಕಾರಿಯೂ ಆಗಿರುತ್ತದಲ್ಲವೆ ಎಂಬ ಪ್ರಶ್ನೆಯೊಂದು ಉಳಿದುಬಿಡುತ್ತದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Contributor - ಆರ್. ಜೀವಿ

contributor

Similar News