ಪ್ರಸಾರ ಸೇವೆಗಳ ನಿಯಂತ್ರಣ ಮಸೂದೆ: ಡಿಜಿಟಲ್ ಮಾಧ್ಯಮವನ್ನು ಮುಗಿಸಿಬಿಡುವ ಹುನ್ನಾರವೆ?

ದೇಶದ ಬಹುತೇಕ ಪ್ರಮುಖ ಪತ್ರಿಕೆಗಳು, ಟಿವಿ ಚಾನೆಲ್‌ಗಳು ಈಗಾಗಲೇ ಸಂಪೂರ್ಣ ಮೋದಿಮಯವಾಗಿವೆ. ಈಗ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಾ ಜನರಿಗೆ ಅಷ್ಟಿಷ್ಟು ಮಾಹಿತಿ, ವಿಶ್ಲೇಷಣೆ ತಲುಪಿಸುತ್ತಿರುವ ಯೂಟ್ಯೂಬ್ ಹಾಗೂ ಡಿಜಿಟಲ್ ಪತ್ರಕರ್ತರಿಗೂ ಕಷ್ಟಕಾಲ. ಅವರಿಗೆ ಸಂಪೂರ್ಣವಾಗಿ ಲಗಾಮು ಹಾಕುವ, ನಿಯಂತ್ರಣ ತಪ್ಪಿದರೆ ಅವರನ್ನು ಹಾಗೂ ಅವರ ಚಾನೆಲ್ ಅನ್ನು ಮುಗಿಸಿಯೇ ಬಿಡುವ ಪ್ರಯತ್ನವಾಗಿ ಪ್ರಸಾರ ಸೇವೆಗಳ ನಿಯಂತ್ರಣ ಮಸೂದೆ 2023ನ್ನು ಕೇಂದ್ರ ಸರಕಾರ ರೂಪಿಸಿದೆ. ಇದು ಜಾರಿಯಾದರೆ ಡಿಜಿಟಲ್ ಪತ್ರಿಕೋದ್ಯಮದ ನಿರ್ನಾಮ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.

Update: 2023-12-19 04:54 GMT
Editor : Thouheed | Byline : ಆರ್.ಜೀವಿ

Photo: freepik

ಡಿಜಿಟಲ್ ಮಾಧ್ಯಮವನ್ನೂ ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಸಾಧ್ಯವಾಗುವಂತೆ, ಪ್ರಸಾರ ಸೇವೆಗಳ ನಿಯಂತ್ರಣ ಮಸೂದೆ 2023ನ್ನು (ದಿ ಬ್ರಾಡ್ ಕಾಸ್ಟಿಂಗ್ ಸರ್ವಿಸಸ್ ರೆಗ್ಯುಲೇಷನ್ ಬಿಲ್) ಕೇಂದ್ರ ಸರಕಾರ ರೂಪಿಸಿದ್ದು, ಸದ್ಯ ಅದು ಸಾರ್ವಜನಿಕರ ಮುಂದಿದೆ. ಈ ಮಸೂದೆ ಮೂಲಕ ಸರಕಾರ ವಿಭಿನ್ನ ಡಿಜಿಟಲ್ ವೇದಿಕೆಗಳು ಮತ್ತು ತಂತ್ರಜ್ಞಾನಗಳನ್ನು ಒಂದೇ ನಿಯಂತ್ರಣ ಚೌಕಟ್ಟಿನ ಅಡಿಯಲ್ಲಿ ತರಲು ಹೊರಟಿದೆ. ತನಗೆ ಬೇಕಿರುವುದನ್ನಷ್ಟೇ ಜಗತ್ತಿನ ಮುಂದೆ ಇಡುವುದಕ್ಕಾಗಿಯೇ ಕೇಂದ್ರ ಸರಕಾರ ಎಲ್ಲದರ ಮೇಲೆಯೂ ಹಿಡಿತ ಸಾಧಿಸಲು ಹೊರಟಿದೆ. ಒಟಿಟಿಯಿಂದ ಹಿಡಿದು ಕಡೆಗೆ ನ್ಯೂಸ್ ಪೋರ್ಟಲ್, ಯೂಟ್ಯೂಬ್ ಚಾನೆಲ್‌ನಂಥ ಡಿಜಿಟಲ್ ಮಾಧ್ಯಮದವರೆಗೆ ಎಲ್ಲವೂ ಸರಕಾರದ ಹಿಡಿತಕ್ಕೆ ಬರಲಿದೆ. ಈವರೆಗೆ ತಮಗೆ ಬೇಕಿರುವಂತೆ ಕಾರ್ಯಕ್ರಮ ಹಾಕಲು ಸ್ವಾತಂತ್ರ್ಯವಿದ್ದ ಒಟಿಟಿ ವೇದಿಕೆಗಳು ಕೂಡ ಇನ್ನು ಮುಂದೆ ಟಿವಿ ವಾಹಿನಿಗಳ ಹಾಗೆ ಕೇಂದ್ರ ಸರಕಾರ ರೂಪಿಸುವ ಕಾರ್ಯಕ್ರಮ ಸಂಹಿತೆಯ ಮಿತಿಗೆ ಒಳಪಡಬೇಕಾಗುತ್ತದೆ.

ಏನಿದು ಮಸೂದೆ?

1995ರ ಕೇಬಲ್ ಟೆಲಿವಿಷನ್ ನೆಟ್‌ವರ್ಕ್ ನಿಯಂತ್ರಣ ಕಾಯ್ದೆಯ ಜಾಗದಲ್ಲಿ ಈ ಮಸೂದೆ ಬರಲಿದೆ. ಟಿವಿ ಚಾನೆಲ್‌ಗಳು ಮತ್ತು ಎಫ್‌ಎಂ ರೇಡಿಯೊ ಜೊತೆಗೆ ಯೂಟ್ಯೂಬ್ ಚಾನೆಲ್‌ಗಳು, ನ್ಯೂಸ್ ಪೋರ್ಟಲ್‌ಗಳು, ವಿತರಣಾ ವೇದಿಕೆಗಳಾದ ಕೇಬಲ್ ಟಿವಿ, ಡಿಟಿಎಚ್, ಐಪಿಟಿವಿ ಎಲ್ಲವೂ ಇದರ ವ್ಯಾಪ್ತಿಗೆ ಬರಲಿವೆ. ಪ್ರಸಾರ ವಲಯಕ್ಕೆ ಏಕೀಕೃತ ಕಾನೂನು ಚೌಕಟ್ಟನ್ನು ತರುವುದು ಇದರ ಉದ್ದೇಶ ಎಂಬುದು ಸರಕಾರದ ವಾದ. ಆದರೆ ನಿಜವಾಗಿ ಯಾರನ್ನು ನಿಯಂತ್ರಿಸುವುದು ಇದರ ಉದ್ದೇಶವಾಗಿದೆ?

ಕೇಬಲ್ ಟಿವಿ ಕಾಯ್ದೆ ಸ್ಯಾಟಲೈಟ್ ಪ್ರಸಾರಗಳನ್ನು ಮಾತ್ರ ಒಳಗೊಂಡಿತ್ತು. ಆದರೆ ಈ ಮಸೂದೆ ಇಂಟರ್‌ನೆಟ್ ಮೂಲಕ ಪ್ರಸಾರವಾಗುವ ವಿಷಯಗಳನ್ನೂ ಒಳಗೊಳ್ಳಲಿದೆ. ಅಂದರೆ, ಯೂಟ್ಯೂಬ್ ಅಥವಾ ಯಾವುದೇ ವೆಬ್‌ಸೈಟ್ ಮೂಲಕ ಪ್ರಕಟಿಸಲಾದ ವಿಷಯಗಳ ಮೇಲೆ ಸರಕಾರಕ್ಕೆ ನಿಯಂತ್ರಣ ಇರುತ್ತದೆ. ಹೀಗಾಗಿ, ಎಲ್ಲಾ ಒಟಿಟಿ ಕಾರ್ಯಕ್ರಮಗಳು ಮತ್ತು ಡಿಜಿಟಲ್ ಸುದ್ದಿ ಪೂರೈಕೆದಾರರು ಸರಕಾರದ ಮೇಲ್ವಿಚಾರಣೆ ವ್ಯಾಪ್ತಿಗೆ ಬರುತ್ತಾರೆ.

ಇನ್ನೂ ಯಾರೆಲ್ಲ ಇದರ ವ್ಯಾಪ್ತಿಗೆ ಬರಬಹುದು ಎನ್ನುವುದು ಸ್ಪಷ್ಟವಿಲ್ಲವಾದರೂ, ಯಾವುದೇ ಡಿಜಿಟಲ್ ವೇದಿಕೆಯಲ್ಲಿರುವ ಯಾರನ್ನೇ ಆದರೂ ಇದರ ಅಡಿಯಲ್ಲಿ ತರಬಲ್ಲ ರೀತಿಯಲ್ಲಿ ನಿಯಮಗಳನ್ನು ರೂಪಿಸಲಾಗಿದೆ ಎಂದು ಹೇಳಲಾಗುತ್ತಿದೆ. ಒಟಿಟಿ, ಆನ್‌ಲೈನ್‌ನಲ್ಲಿ ವೀಡಿಯೊ ಮಾಡುತ್ತಿರುವವರು, ಅದನ್ನು ಮರುಪೋಸ್ಟ್ ಮಾಡುವವರು, ಫಾರ್ವರ್ಡ್ ಮಾಡುವವರು ಎಲ್ಲರೂ ಇದರಡಿಯಲ್ಲಿ ಬರುತ್ತಾರೆ.

ಇದರ ವ್ಯಾಖ್ಯಾನದಂತೆ ಪ್ರೋಗ್ರಾಂ ಎಂದರೆ ಯಾವುದೇ ಆಡಿಯೊ, ವೀಡಿಯೊ, ಸಂಕೇತಗಳು, ಸಂಜ್ಞೆ, ಬರವಣಿಗೆ, ಪ್ರಸಾರ ಜಾಲವನ್ನು ಬಳಸಿಕೊಂಡು ಹರಡುವ ಚಿತ್ರಗಳು ಇವೆಲ್ಲವೂ ಸೇರುತ್ತವೆ. ಅಲ್ಲದೆ, ಸಿನೆಮಾಗಳು, ಫೀಚರ್‌ಗಳು, ನಾಟಕಗಳು, ಸಾಕ್ಷ್ಯಚಿತ್ರಗಳು, ಜಾಹೀರಾತುಗಳು ಮತ್ತು ಧಾರಾವಾಹಿಗಳು ಕೂಡ ಇದರಡಿ ಬರುತ್ತವೆ.

ಏನಿದರ ಸ್ವರೂಪ?

ಈಗಿರುವ ಪ್ರಸಾರದ ನಿಯಮಗಳ ಜೊತೆಗೆ, ಇದು ಮೂರು ಹಂತಗಳ ನಿಯಂತ್ರಣವನ್ನು ಪ್ರಸ್ತಾಪಿಸುತ್ತದೆ. ಮೊದಲನೆಯದು, ಪ್ರಸಾರಕರು ಮತ್ತು ಆಪರೇಟರ್‌ಗಳ ಸ್ವಯಂ ನಿಯಂತ್ರಣ; ಎರಡನೆಯದು ಸ್ವಯಂ ನಿಯಂತ್ರಣ ಸಂಸ್ಥೆಗಳು (ಎಸ್‌ಆರ್‌ಒ) ಹಾಗೂ ಮೂರನೆಯದು ಪ್ರಸಾರ ಸಲಹಾ ಮಂಡಳಿ (ಬಿಎಸಿ).

ಅದರಂತೆ, ಪ್ರತೀ ಪ್ರಸಾರಕರು ಇಲ್ಲವೇ ಆಪರೇಟರ್‌ಗಳು ಕುಂದುಕೊರತೆ ನಿವಾರಣಾ ಘಟಕ ಸ್ಥಾಪಿಸುವುದು ಕಡ್ಡಾಯ.

ಜೊತೆಗೆ, ಪ್ರತೀ ಪ್ರಸಾರಕರು ವಿಷಯ ಮೌಲ್ಯಮಾಪನ ಸಮಿತಿಯನ್ನು (ಸಿಇಸಿ) ಹೊಂದಿರಬೇಕು. ಅದು ಪ್ರಸಾರವಾಗುವ ಎಲ್ಲಾ ವಿಷಯಗಳನ್ನು ಪ್ರಮಾಣೀಕರಿಸಬೇಕಿರುತ್ತದೆ. ವ್ಯಂಗ್ಯವೆಂದರೆ, ಈ ಸಮಿತಿಯ ರಚನೆ, ಗಾತ್ರ, ಕೋರಂ ಮತ್ತು ಇತರ ವಿವರಗಳನ್ನು ಸರಕಾರ ನಿರ್ಧರಿಸುತ್ತದೆ. ನೇರವಾಗಿ ಹೇಳಬೇಕೆಂದರೆ ಸಂಪಾದಕೀಯ ಮಂಡಳಿಯ ಜಾಗವನ್ನು ಈ ಸಮಿತಿ ಆಕ್ರಮಿಸಲಿದೆ. ಆ ಸಂಸ್ಥೆಯ ಸಂಪಾದಕೀಯ ಮಂಡಳಿ ಕೇವಲ ಹೆಸರಿಗೆ ಇದ್ದು ಈ ಸಮಿತಿಯೇ ನಿಜವಾದ ಸಂಪಾದಕ ಮಂಡಳಿಯಾಗಲಿದೆ. ಉದಾಹರಣೆಗೆ, ರವೀಶ್ ಕುಮಾರ್ ಇಂದು ಇಂಥದೊಂದು ವಿಚಾರದ ಬಗ್ಗೆ ಮಾತನಾಡಬಹುದೆ ಎಂಬುದನ್ನು ಆ ಸಮಿತಿ ಹೇಳುತ್ತದೆ.

ಎಲ್ಲಾ ಪ್ರಸಾರಕರು ಮತ್ತು ಆಪರೇಟರ್‌ಗಳು ಸ್ವಯಂ ನಿಯಂತ್ರಣ ಸಂಸ್ಥೆಗಳ (ಎಸ್‌ಆರ್‌ಒ) ಭಾಗವಾಗುವುದರಿಂದ, ಈ ಎಸ್‌ಆರ್‌ಒಗಳು ಎಲ್ಲಾ ಕುಂದುಕೊರತೆಗಳು, ಮೇಲ್ಮನವಿಗಳು, ವೈಯಕ್ತಿಕ ಪ್ರಸಾರಕರು ತಿಳಿಸದ ಇತರ ವಿಚಾರಗಳನ್ನು ಪರಿಹರಿಸುತ್ತವೆ. ಅಲ್ಲದೆ, ಸರಕಾರ ರೂಪಿಸಿದ ಸಂಹಿತೆ ಅನುಸರಣೆ ಆಗಿದೆಯೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ಮಾರ್ಗಸೂಚಿಗಳನ್ನು ನೀಡುತ್ತವೆ. ನಿಯಮ ಉಲ್ಲಂಘನೆಗೆ ಶಿಕ್ಷೆಯೆಂದರೆ ತಾತ್ಕಾಲಿಕ ಅಮಾನತು, ಸದಸ್ಯತ್ವ ರದ್ದತಿ, ಸಲಹೆ, ಎಚ್ಚರಿಕೆ, ಖಂಡನೆ ಇಲ್ಲವೆ 5 ಲಕ್ಷದವರೆಗೆ ದಂಡವನ್ನೂ ವಿಧಿಸಬಹುದಾಗಿದೆ.

ಇನ್ನು ಕಾರ್ಯಕ್ರಮ ಸಂಹಿತೆ ಮತ್ತು ಜಾಹೀರಾತು ಸಂಹಿತೆ ಉಲ್ಲಂಘನೆಗಳ ಕುರಿತು ಕೇಂದ್ರ ಸರಕಾರಕ್ಕೆ ಸಲಹೆ ನೀಡಲು ಪ್ರಸ್ತಾಪಿಸಲಾಗಿರುವ ಪ್ರಸಾರ ಸಲಹಾ ಮಂಡಳಿಯ ವಿಚಾರ. ಮಾಧ್ಯಮದಲ್ಲಿ 25 ವರ್ಷಗಳ ಅನುಭವ ಹೊಂದಿರುವ ಸ್ವತಂತ್ರ ಸದಸ್ಯರೊಬ್ಬರು ಅಧ್ಯಕ್ಷರಾಗಿರುತ್ತಾರೆ ಎನ್ನುತ್ತದೆ ಮಸೂದೆ. ಮಾಹಿತಿ ಪ್ರಸಾರ ಸಚಿವಾಲಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ, ಗೃಹ ಸಚಿವಾಲಯ, ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವನ್ನು ಪ್ರತಿನಿಧಿಸುವ ಐವರು ಸರಕಾರಿ ಅಧಿಕಾರಿಗಳಿರುತ್ತಾರೆ. ಅಲ್ಲದೆ, ಐವರು ಖ್ಯಾತ ಸ್ವತಂತ್ರ ವ್ಯಕ್ತಿಗಳು ಕೂಡ ಸಮಿತಿಯಲ್ಲಿರುತ್ತಾರೆ. ಗಮನಿಸಬೇಕಿರುವ ವಿಚಾರವೆಂದರೆ, ಈ ಎಲ್ಲರನ್ನೂ ಕೇಂದ್ರ ಸರಕಾರವೇ ನೇಮಿಸುತ್ತದೆ.

ಕಾರ್ಯಕ್ರಮ ಸಂಹಿತೆ ಮತ್ತು ಜಾಹೀರಾತು ಸಂಹಿತೆ ಉಲ್ಲಂಘನೆಗಳ ಕುರಿತ ದೂರುಗಳನ್ನು ಮಾತ್ರವಲ್ಲದೆ, ಎಸ್‌ಆರ್‌ಒಗಳ ನಿರ್ಧಾರ ಪ್ರಶ್ನಿಸುವ ಮೇಲ್ಮನವಿಗಳ ವಿಚಾರಣೆಯನ್ನೂ ಈ ಸಮಿತಿಯೇ ನಡೆಸುತ್ತದೆ. ಬಳಿಕ ಈ ವಿಚಾರಗಳ ಬಗ್ಗೆ ಕೇಂದ್ರ ಸರಕಾರಕ್ಕೆ ಇದು ತನ್ನ ಶಿಫಾರಸುಗಳನ್ನು ಮಾಡುತ್ತದೆ.

ಇದರಲ್ಲಿನ ಸಮಸ್ಯೆ ಏನು?

ಮೊದಲನೆಯದಾಗಿ, ಈ ವಿವಾದಾತ್ಮಕ ಮೂರು ಹಂತದ ವ್ಯವಸ್ಥೆ ಪೂರ್ತಿಯಾಗಿ ಕೇಂದ್ರದ ಹಿಡಿತದಲ್ಲೇ ಇದೆ ಮತ್ತು ಸಂಶಯಾಸ್ಪದವಾಗಿದೆ. ಇದು ಸಾರ್ವಜನಿಕ ಸಲಹೆಗಳನ್ನು ಆಧರಿಸಿಲ್ಲ. ಎರಡನೆಯದಾಗಿ, ಇದು 2021ರ ವಿವಾದಾತ್ಮಕ ಐಟಿ ನಿಯಮಗಳ ಅನುಕರಣೆಯಂತೆಯೇ ಇದೆ. ಅದರ ಎರಡು ಸೆಕ್ಷನ್‌ಗಳಿಗೆ ಬಾಂಬೆ ಮತ್ತು ಮದ್ರಾಸ್

ಹೈಕೋರ್ಟ್‌ಗಳು ಈಗಾಗಲೇ ತಡೆ ನೀಡಿವೆ ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಮಾಧ್ಯಮ ಮತ್ತು ಮನರಂಜನಾ ಕ್ಷೇತ್ರಗಳ ಮೇಲೆ

ಈ ಮಸೂದೆಯ ಪರಿಣಾಮಗಳೇನು?

1.ಪ್ರಸ್ತಾವಿತ ಮಸೂದೆ ಕಾರ್ಯಕ್ರಮ ಮತ್ತು ಜಾಹೀರಾತು ಸಂಹಿತೆಗಳ ಪಾಲನೆಯಾಗುವುದನ್ನು ಖಚಿತಪಡಿಸಿಕೊಳ್ಳಲು ವಿಷಯ ಮೌಲ್ಯಮಾಪನ ಸಮಿತಿ (ಸಿಇಸಿ) ಇರಬೇಕೆಂದಿರುವುದು ಪ್ರಸಾರ ಉದ್ಯಮದ ಕಳವಳಕ್ಕೆ ಕಾರಣವಾಗಿದೆ. ಇದು ಟಿವಿ ಪ್ರಸಾರಕರು ಮತ್ತು ಒಟಿಟಿ ವೇದಿಕೆಗಳ ಸೃಜನಶೀಲ ಸ್ವಾತಂತ್ರ್ಯ ಕಸಿಯುತ್ತದೆ ಎಂಬುದು ಸ್ಪಷ್ಟವಾಗಿದೆ.

2.ಪ್ರಸಾರಕ್ಕೆ ಮೊದಲು ಸಿಇಸಿ ಅನುಮೋದನೆಯನ್ನು ಪಡೆಯಬೇಕೆಂಬ ನಿಯಮದ ಮೂಲಕ ಕೇಂದ್ರ ಸರಕಾರ ಆಂತರಿಕ ಸೆನ್ಸಾರ್ ಮಂಡಳಿಗೆ ಸಮವಾದ ಮಂಡಳಿಯ ಆಣತಿಯಂತೆಯೇ ಎಲ್ಲವೂ ನಡೆಯುವ ಸ್ಥಿತಿಯನ್ನು ಹೇರುತ್ತದೆ.

3.ಕಾರ್ಯಕ್ರಮ ಸಂಹಿತೆ ಮೂಲಕ ಸರಕಾರ ಹಳೆಯ ಮತ್ತು ಅಪ್ರಸ್ತುತವಾಗಿರುವ ಟಿವಿ ನಿಯಮಗಳನ್ನು ಹೇರಲಿದೆಯೇ ಎಂಬ ಆತಂಕ ಒಟಿಟಿ ವೇದಿಕೆಗಳನ್ನು ಕಾಡತೊಡಗಿದೆ.

4.ಹಿಂದೆ ಅಂಥ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಉಪಕರಣಗಳನ್ನು ಸೀಝ್ ಮಾಡಿರುವ ಉದಾಹರಣೆಗಳಿರುವುದರಿಂದ, ಈ ಬಗ್ಗೆ ಟಿವಿ ಚಾನೆಲ್‌ಗಳು, ಒಟಿಟಿ, ಡಿಜಿಟಲ್ ನ್ಯೂಸ್‌ನಂಥ ಪ್ರಸಾರಕರು ಮತ್ತು ಕೇಬಲ್, ಡಿಟಿಎಚ್, ಐಪಿಟಿವಿಯಂಥ ಬ್ರಾಡ್‌ಕಾಸ್ಟಿಂಗ್ ನೆಟ್‌ವರ್ಕ್‌ಗಳು ಚಿಂತಿತವಾಗಿವೆ.

ಸಾಮಾನ್ಯ ನಾಗರಿಕರ ಮೇಲೆಯೂ

ಇದು ಪರಿಣಾಮ ಬೀರುತ್ತದೆಯೇ?

ಡಿಜಿಟಲ್ ಮಾಧ್ಯಮಗಳ ಮೂಲಕ ಸುದ್ದಿ ಮತ್ತು ಪ್ರಚಲಿತ ವಿದ್ಯಮಾನಗಳ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಸ್ವತಂತ್ರ ಪತ್ರಕರ್ತರನ್ನು ಮಾತ್ರವಲ್ಲದೆ, ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ ಮತ್ತು ಮಾಹಿತಿಯನ್ನು ಹಂಚಿಕೊಳ್ಳುವ ವ್ಯಕ್ತಿಗಳನ್ನೂ ನಿಯಂತ್ರಣ ಚೌಕಟ್ಟಿನ ಅಡಿಯಲ್ಲಿ ತರುವುದು ಈ ಮಸೂದೆಯ ಉದ್ದೇಶವಾಗಿದೆ. ಇದರಿಂದಾಗಿ, ಜನಸಾಮಾನ್ಯರು ಕೂಡ ಗೊಂದಲಮಯ ಸನ್ನಿವೇಶ ಎದುರಿಸುವಂತಾಗುತ್ತದೆ. ಅವರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೂ ಕಲ್ಲು ಬೀಳಲಿದೆ.

ನಿಯಂತ್ರಣ ಎಂಬುದು ಹಿಡಿತ ಎಂಬ ಅರ್ಥದಲ್ಲಿರಬಾರದು. ಆದರೆ ಈಗಿನ ಕೇಂದ್ರ ಸರಕಾರ ಇದನ್ನು ಹಿಡಿತ ಸಾಧಿಸುವುದು ಎಂಬ ಉದ್ದೇಶದಲ್ಲಿಯೇ ಗ್ರಹಿಸುತ್ತದೆ. ಈ ಮಸೂದೆಯಲ್ಲಿ ಸುಮಾರು 60 ಕಡೆಗಳಲ್ಲಿ, ‘ಸೂಚಿಸಬಹುದಾದಂತೆ’ ಎಂಬ ಪದ ಬಳಸಲಾಗಿದೆ. ಉದಾಹರಣೆಗೆ, ಪ್ರಸಾರ ಸಲಹಾ ಮಂಡಳಿಯ ನೇಮಕಾತಿ ನಿಯಮಗಳು, ಷರತ್ತುಗಳು, ಆಯ್ಕೆ ವಿಧಾನ, ಅಧಿಕಾರಾವಧಿ, ಅವರ ಕಾರ್ಯವಿಧಾನಗಳು ಸೂಚಿಸಬಹುದಾದಂತೆ ಇರುತ್ತವೆ ಎನ್ನಲಾಗಿದೆ. ‘ಕೇಂದ್ರ ಸರಕಾರವು ಸೂಚಿಸಿದಂತೆ’ ಎಂಬುದನ್ನು 17 ಬಾರಿ ಬಳಸಲಾಗಿದೆ. ಪತ್ರಿಕಾ ಸ್ವಾತಂತ್ರ್ಯವನ್ನು ನಿರ್ಬಂಧಿಸುವ ನಿಯಮ ರಚನಾ ಮಂಡಳಿಗಳೆಲ್ಲವೂ ಕೇಂದ್ರ ಸರಕಾರದ್ದೇ ಭಾಗವಾಗಿವೆ.

ಈಗಾಗಲೇ, ಸರಕಾರವನ್ನು ಪ್ರಶ್ನಿಸುವ ಪತ್ರಕರ್ತರನ್ನು ಈ ದೇಶದಲ್ಲಿ ಹೇಗೆ ನಡೆಸಿಕೊಳ್ಳಲಾಗುತ್ತಿದೆ ಎಂಬುದು ಗೊತ್ತಿರುವ ವಿಚಾರ. ಯಾವುದೇ ಮಾಧ್ಯಮ ಸಂಸ್ಥೆಯ ಮೇಲೆ ದಾಳಿಯಾದಾಗ ಪತ್ರಕರ್ತರ ವೈಯಕ್ತಿಕ ಮೊಬೈಲ್ ಫೋನ್, ಲ್ಯಾಪ್‌ಟಾಪ್‌ನಂಥ ಸಾಧನಗಳನ್ನು ವಶಪಡಿಸಿಕೊಳ್ಳುವ ಕ್ರಮವೊಂದು ಈಗಲೇ ಅನಿಯಂತ್ರಿತವಾಗಿ ನಡೆಯುತ್ತಿದೆ. ಕೋರ್ಟ್ ಆದೇಶವಾಗಲೀ ವಾರಂಟ್ ಆಗಲೀ ಇಲ್ಲದೆಯೂ ಪೊಲೀಸರು ಪತ್ರಕರ್ತರ ವಿರುದ್ಧ ಇಂಥ ಬಲವಂತದ ಕ್ರಮಕ್ಕೆ ಮುಂದಾಗುವುದನ್ನು ನೋಡುತ್ತಿದ್ದೇವೆ. ಮುಕ್ತ ಪತ್ರಿಕಾ ವೃತ್ತಿಯ ಮೇಲಿನ ಈ ಭಯಾನಕ ದಾಳಿ ಕಳೆದ ಕೆಲವು ವರ್ಷಗಳಿಂದ ಯಾವುದೇ ಅಡೆತಡೆಯಿಲ್ಲದೇ ನಡೆಯುತ್ತಿದೆ. ಇತ್ತೀಚೆಗೆ ನ್ಯಾಯಾಲಯಗಳು ಇಂಥ ದಮನಕಾರಿ ನಡೆಯ ವಿರುದ್ಧ ಮಾತನಾಡಿವೆ. ಪತ್ರಕರ್ತರ ಸಾಧನಗಳನ್ನು ಜಪ್ತಿ ಮಾಡುವಂಥ ಅನಿಯಂತ್ರಿತ ಅಧಿಕಾರದ ಬಗ್ಗೆ ನ್ಯಾಯಾಲಯ ಆಕ್ಷೇಪ ವ್ಯಕ್ತಪಡಿಸಿದೆ. ಹಾಗಿರುವಾಗಲೂ, ಅಂಥ ಅಕ್ರಮಗಳನ್ನೇ ಅಧಿಕೃತ ಕಾನೂನುಗಳಾಗಿ ಮತ್ತೊಂದು ದಿಕ್ಕಿನಿಂದ ಪ್ರಯೋಗಿಸಲು ಸರಕಾರ ಹೊಂಚುತ್ತಿದೆಯೇನೊ ಎಂದು ಗಂಭೀರ ಅನುಮಾನ ಬರುವ ಹಾಗೆ ಈ ಪ್ರಸಾರ ನಿಯಂತ್ರಣ ಮಸೂದೆಯ ಸ್ವರೂಪವಿದೆ.

ಸಿನೆಮಾ ಸೆನ್ಸಾರ್‌ಶಿಪ್ ವಿಚಾರದಲ್ಲಿಯೇ ಬಹಳಷ್ಟು ಆಕ್ಷೇಪಗಳು, ತಕರಾರುಗಳು ಇವೆ. ಆದರೀಗ ಅದು ಸತ್ಯವನ್ನು ಜನರಿಗೆ ಮುಟ್ಟಿಸಲು ಯತ್ನಿಸುತ್ತಿರುವ ಸುದ್ದಿಗಳ ಪ್ರಸಾರದ ಬುಡಕ್ಕೇ ಬಂದು ಮುಟ್ಟಿರುವುದು ಕಳವಳಕಾರಿ. ದೊಡ್ಡ ಪತ್ರಿಕೆಗಳು, ಟಿವಿ ಚಾನೆಲ್‌ಗಳು ಕೇಂದ್ರ ಸರಕಾರದ, ಬಿಜೆಪಿಯ ತುತ್ತೂರಿಗಳಾಗಿ ಬಿಟ್ಟಿರುವಾಗ ಡಿಜಿಟಲ್ ವೇದಿಕೆಗಳಲ್ಲಿರುವ ಸ್ವತಂತ್ರ ಪತ್ರಕರ್ತರು ನಿಜವಾದ ಪತ್ರಿಕೋದ್ಯಮ ಮಾಡುತ್ತಿದ್ದಾರೆ. ಕಹಿ ಸತ್ಯಗಳನ್ನು ಜನರ ಮುಂದಿಡುತ್ತಿದ್ದಾರೆ. ಕಟು ಪ್ರಶ್ನೆಗಳನ್ನು ಸರಕಾರಕ್ಕೆ ಕೇಳುತ್ತಿದ್ದಾರೆ. ಇದು ಪ್ರತಿದಿನ ಸಾವಿರಾರು ಸಣ್ಣ ಹಾಗೂ ಮಧ್ಯಮ ಗಾತ್ರದ ಡಿಜಿಟಲ್ ವೇದಿಕೆಗಳ ಮೂಲಕ ಕೋಟಿಗಟ್ಟಲೆ ಜನರನ್ನು ತಲುಪುತ್ತಿದೆ. ಇದು ಈ ಸರಕಾರವನ್ನು ಹಾಗೂ ಆಡಳಿತ ಪಕ್ಷವನ್ನು ಚಿಂತೆಗೀಡು ಮಾಡಿದೆ.

ಈ ಕರಡು ಮಸೂದೆ, ಆನ್‌ಲೈನ್‌ನಲ್ಲಿನ ವೈವಿಧ್ಯತೆಯ ಬಗ್ಗೆ ಸರಕಾರಕ್ಕಿರುವ ಭಯವನ್ನು ಸ್ಪಷ್ಟವಾಗಿ ಸೂಚಿಸುತ್ತದೆ ಮತ್ತದನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಸರಕಾರ ಬಯಸಿದೆ ಎಂಬುದು ಖಚಿತವಾಗುತ್ತದೆ. ಜಾಹೀರಾತುಗಳನ್ನು ನಿರ್ಬಂಧಿಸುವ ಮೂಲಕ ಅಥವಾ ಮಾಲಕರಿಗೆ ಫೋನ್ ಕಾಲ್ ಮೂಲಕ ಪತ್ರಿಕೆಗಳು ಮತ್ತು ಟಿವಿ ಚಾನೆಲ್‌ಗಳನ್ನು ನಿರ್ಬಂಧಿಸಲಾಗುತ್ತಿದೆ. ಈಗ, ಕಠಿಣ ಕ್ರಮದ ಬೆದರಿಕೆಯನ್ನು ಕಾನೂನಾತ್ಮಕವಾಗಿ ಒಡ್ಡುವ ಮೂಲಕ ಡಿಜಿಟಲ್ ಮಾಧ್ಯಮಗಳನ್ನೂ ಹಿಡಿತಕ್ಕೆ ತೆಗೆದುಕೊಳ್ಳುವ ಯತ್ನವಾಗಿ ಈ ಮಸೂದೆಯನ್ನು ರೂಪಿಸಲಾಗಿದೆ.

ನಿಜವಾಗಿಯೂ, ಇದೆಲ್ಲವೂ ಡಿಜಿಟಲ್ ಪತ್ರಿಕೋದ್ಯಮದ ಸ್ವಾತಂತ್ರ್ಯ ಮತ್ತು ವೈವಿಧ್ಯತೆಯ ಕೊನೆಯಾಗುವಂಥ ಸ್ಥಿತಿಯನ್ನು ತಂದಿಡಲಿದೆಯೇ?

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಆರ್.ಜೀವಿ

contributor

Similar News