ಮುನ್ನೆಲೆಗೆ ಬಂದ ಜಾತಿಗಣತಿ: ಕೆಳವರ್ಗದವರನ್ನು ಭ್ರಮೆಯಲ್ಲಿರಿಸುವ ರಾಜಕಾರಣಕ್ಕೆ ದಿಗಿಲು

ಬಿಹಾರ ಸರಕಾರ ಜಾತಿ ಜನಗಣತಿ ವಿವರವನ್ನು ಬಹಿರಂಗಪಡಿಸಿರುವುದು ದೇಶದಲ್ಲಿನ ಬಹುದೊಡ್ಡ ಸಾಮಾಜಿಕ ಮತ್ತು ರಾಜಕೀಯ ವಿದ್ಯಮಾನ ಎಂಬುದರಲ್ಲಿ ಎರಡು ಮಾತಿಲ್ಲ. ದೇಶದಲ್ಲೇ ಮೊದಲ ಬಾರಿಗೆ ರಾಜ್ಯವೊಂದರ ಜಾತಿ ಜನಗಣತಿ ವಿವರ ಎಲ್ಲರ ಮುಂದಿದೆ. ಮತ್ತದು ಇತರ ರಾಜ್ಯಗಳಲ್ಲಿನ ಜಾತಿ ಸಮೀಕರಣದ ಬಗ್ಗೆಯೂ ತೀವ್ರ ಕುತೂಹಲ ಮೂಡಿಸಿದೆ. ಕಾಂಗ್ರೆಸ್ ಜಾತಿ ಗಣತಿಯನ್ನು ಬಹು ಮುಖ್ಯವಾಗಿ ಪ್ರತಿಪಾದಿಸುತ್ತಿರುವಾಗ, ಬಿಜೆಪಿಯ ನಡೆ ಏನು? ಜಾತಿಗಣತಿ ಹೇಗೆ ಮುಂಬರುವ ಚುನಾವಣೆಗಳಲ್ಲಿ ಮುಖ್ಯ ವಿಚಾರವಾಗಿರಲಿದೆ?

Update: 2023-10-18 05:06 GMT
Editor : Thouheed | By : ಆರ್. ಜೀವಿ

ಲೋಕಸಭೆ ಚುನಾವಣೆ ಎದುರಿಗಿರುವಾಗಲೇ ಬಿಹಾರ ಸರಕಾರದ ಮಹತ್ವದ ನಡೆಯೊಂದು ಸಂಚಲನಕ್ಕೆ ಕಾರಣವಾಗಿದೆ. ಜಾತಿ ಜನಗಣತಿಯ ವಿವರಗಳನ್ನು ಬಹಿರಂಗಪಡಿಸುವ ಮೂಲಕ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಈ ದೇಶದಲ್ಲಿ ಹೇಗೆ ಹಿಂದುಳಿದವರನ್ನು ಕತ್ತಲಲ್ಲಿಡಲಾಗಿದೆ ಮತ್ತು ಅವರನ್ನು ಬಳಸಿಕೊಂಡು ರಾಜಕಾರಣವನ್ನು ನಡೆಸಲಾಗುತ್ತಿದೆ ಎಂಬುದನ್ನು ಸೂಕ್ಷ್ಮವಾಗಿ ಮನವರಿಕೆ ಮಾಡಿಕೊಟ್ಟಿದ್ದಾರೆ.

ಹಿಂದುತ್ವದ, ಅದರಲ್ಲೂ ಮೇಲ್ಜಾತಿಯ ರಾಜಕಾರಣದ ಮೂಲಕ ಆಟವಾಡುತ್ತ ಬಂದಿರುವ ಬಿಜೆಪಿಗೆ ಆಘಾತವಾಗುವಂಥ ಸತ್ಯಗಳನ್ನು ಈ ಜಾತಿ ಗಣತಿ ವಿವರಗಳ ಮೂಲಕ ಬಿಹಾರ ಸರಕಾರ ಹೊರಗೆಡವಿದೆ. ಬಿಜೆಪಿಗೆ ಇದು ದೊಡ್ಡ ಹೊಡೆತ ಕೊಡಲಿದೆಯೇ ಎಂಬ ಕುತೂಹಲವೂ ಮೂಡಿದೆ.

ಕಳೆದ ವರ್ಷ ಕೇಂದ್ರದ ನರೇಂದ್ರ ಮೋದಿ ಸರಕಾರ, ಜನಗಣತಿಯ ಭಾಗವಾಗಿ ಎಸ್‌ಸಿ ಮತ್ತು ಎಸ್‌ಟಿಗಳನ್ನು ಹೊರತುಪಡಿಸಿ ಇತರ ಜಾತಿಗಳ ಎಣಿಕೆಯನ್ನು ಕೈಗೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ ನಂತರ ಬಿಹಾರ ಸರಕಾರ ಜಾತಿ ಜನಗಣತಿಗೆ ಆದೇಶಿಸಿತ್ತು. ಅದು ಭಾರೀ ಚರ್ಚೆಗೆ ಕಾರಣವಾಯಿತಲ್ಲದೆ, ಹಲವು ತೊಡಕುಗಳನ್ನೂ ಎದುರಿಸಬೇಕಾಯಿತು. ನ್ಯಾಯಾಲಯದಲ್ಲಿಯೂ ಅದನ್ನು ಪ್ರಶ್ನಿಸಲಾಯಿತು. ಒಂದು ಹಂತದಲ್ಲಿ ಸಮೀಕ್ಷೆಗೆ ಕೋರ್ಟ್ ತಡೆಯನ್ನೂ ಕೊಟ್ಟಿತ್ತು. ಜಾತಿ ಜನಗಣತಿಯನ್ನು ಕೋರ್ಟ್‌ನಲ್ಲಿ ಪ್ರಶ್ನಿಸುವಾಗ ಎರಡು ಆಧಾರಗಳನ್ನು ಮುಂದಿಡಲಾಗಿತ್ತು. ಒಂದು, ಅದು ನಾಗರಿಕರ ಖಾಸಗಿತನದ ಮೂಲಭೂತ ಹಕ್ಕನ್ನು ಉಲ್ಲಂಘಿಸುತ್ತದೆ.

ಎರಡು, ಅಂತಹ ಸಮೀಕ್ಷೆಯನ್ನು ಕೈಗೊಳ್ಳಲು ರಾಜ್ಯಕ್ಕೆ ಯಾವುದೇ ಅಧಿಕಾರವಿಲ್ಲ ಎಂಬ ವಾದ.

ಆದರೆ, ಬಿಹಾರ ಸರಕಾರದ ಅಫಿಡವಿಟ್ ಅಂಗೀಕರಿಸಿದ ನ್ಯಾಯಾಲಯ, ಯಾವುದೇ ಬಗೆಯಲ್ಲಿ ಡೇಟಾ ಸೋರಿಕೆಗೆ ಅವಕಾಶವಿಲ್ಲದ ಕಾರ್ಯವಿಧಾನವನ್ನು ಈ ಸಮೀಕ್ಷೆ ಹೊಂದಿದೆ ಎಂಬುದನ್ನು ಮನಗಂಡಿತು. ಅಲ್ಲದೆ, ಜಾತಿ ಜನಗಣತಿಯನ್ನು ಕೇಂದ್ರ ಸರಕಾರವೇ ನಡೆಸಬೇಕೆಂಬ ವಾದವನ್ನೂ ಕೋರ್ಟ್ ತಳ್ಳಿಹಾಕಿತು. ಯಾವುದೇ ರಾಜ್ಯಗಳ ಸಾಂವಿಧಾನಿಕ ಅಧಿಕಾರವನ್ನು ತಡೆಯಲು ಸಾಧ್ಯವಿಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿತು.

ಜಾತಿ ಜನಗಣತಿಗೆ ಬಿಹಾರ ಸರಕಾರ ಮುಂದಾದಾಗ ನೀಡಿದ್ದ ಕಾರಣಗಳು ಹೀಗಿದ್ದವು:

1.ಪ್ರಸಕ್ತ ಇರುವ ಮೀಸಲು ಕೋಟಾಗಳು ಹಿಂದುಳಿದ ವರ್ಗಗಳ ಈಗಿನ ಜನಸಂಖ್ಯೆಗೆ ಅನುಗುಣವಾಗಿಲ್ಲ.

2.ಹಿಂದುಳಿದ ವರ್ಗಗಳಿಗೆ ಹೆಚ್ಚಿನ ಮೀಸಲಾತಿಯನ್ನು ನೀಡುವುದಕ್ಕಾಗಿ ಜಾತಿ ಜನಗಣತಿ.

3.ಜಾತಿ ಸಮೀಕ್ಷೆಯಿಂದ ಬಡವರ ಸಮಗ್ರ ಸಾಮಾಜಿಕ, ಆರ್ಥಿಕ ದತ್ತಾಂಶವನ್ನು ಸಂಗ್ರಹಿಸಬಹುದು.

4.ಜಾತಿ ಹಾಗೂ ಸಮುದಾಯಗಳಿಗೆ ಅನುಗುಣವಾಗಿ ನೀತಿಗಳನ್ನು ರೂಪಿಸಲು ಅನುಕೂಲವಾಗುತ್ತದೆ.

5.ಒಬಿಸಿಗಳು ಮತ್ತು ಇತರ ಜಾತಿಗಳ ಸಾಮಾಜಿಕ, ಆರ್ಥಿಕ ಸ್ಥಿತಿಯ ಬಗ್ಗೆ ಮಾಹಿತಿ ಲಭ್ಯವಿಲ್ಲದ ಕಾರಣದಿಂದಾಗಿ, ಅವರಿಗೆ ನಿರ್ದಿಷ್ಟ ನೀತಿಗಳು ಮತ್ತು ಯೋಜನೆಗಳನ್ನು ರೂಪಿಸುವುದು ಕಷ್ಟಕರವಾಗಿದೆ.

6.ಜಾತಿ ಸಮೀಕ್ಷೆ ವಿವಿಧ ಜಾತಿಗಳ ಸಮಾನ ಅಭಿವೃದ್ಧಿಗೆ ಸಹಾಯ ಮಾಡುತ್ತದೆ

ಇದೆಲ್ಲದರ ಜೊತೆಗೇ, ಬಿಜೆಪಿಗೆ ರಾಜಕೀಯವಾಗಿ ಸವಾಲಾಗುವ ಉದ್ದೇಶವೂ ನಿತೀಶ್ ಅವರ ನಡೆಯ ಹಿಂದಿತ್ತು.

ರಾಜಕೀಯ ಲಾಭಕ್ಕಾಗಿಯೇ ಬಿಹಾರ ಸರಕಾರ ಈ ಸಮೀಕ್ಷೆಯನ್ನು ಮಾಡಿಸುತ್ತಿದೆ ಎಂಬ ವಾದಗಳೇ ಆಗ ಎದ್ದಿದ್ದವು ಮತ್ತು ಈಗಲೂ ಅದು ದೊಡ್ಡ ಮಟ್ಟದಲ್ಲಿ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ರಾಜ್ಯದಲ್ಲಿ ಮಾತ್ರವಲ್ಲದೆ ರಾಷ್ಟ್ರಮಟ್ಟದಲ್ಲಿಯೂ ರಾಜಕೀಯ ಲಾಭವಾಗಿ ಇದು ಒದಗಲಿದೆ ಎಂದು ಹೇಳಲಾಗುತ್ತಿದೆ. ಜಾತಿ ಗಣತಿ ವಿವರ ಬಹಿರಂಗಗೊಳಿಸುವ ಮೂಲಕ ಅತಿ ಹಿಂದುಳಿದ ಜಾತಿಗಳು, ಯಾದವೇತರ ಹಿಂದುಳಿದ ಜಾತಿಗಳು ಹಾಗೂ ದಲಿತರ ನಾಯಕನಾಗಿ ನಿತೀಶ್ ಕುಮಾರ್ ರಾಜಕೀಯ ಮರುಹುಟ್ಟು ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ.

ಈವರೆಗೆ ಹಿಂದುಳಿದ ವರ್ಗಗಳಿಗೆ ಸರಕಾರಿ ಉದ್ಯೋಗಗಳಲ್ಲಿದ್ದ ಶೇ.27ರಷ್ಟು ಮೀಸಲಾತಿಗೆ ತೀರಾ ವಿರುದ್ಧವಾಗಿ ಈ ಜಾತಿ ಜನಗಣತಿಯ ಅಂಕಿಅಂಶಗಳಿವೆ. ಒಬಿಸಿಗಳಿಗೆ ಕೋಟಾವನ್ನು ಹೆಚ್ಚಿಸಬೇಕೆಂಬ ಬೇಡಿಕೆಯೂ ಈಗ ಹೆಚ್ಚಲಿದೆ ಎಂಬುದರಲ್ಲಿ ಅನುಮಾನವಿಲ್ಲ. ಈ ಜಾತಿಗಣತಿಯ ವಿವರಗಳಿಂದ ಬಿಹಾರದಲ್ಲಿ ಒಬಿಸಿಗಳ ಪ್ರಾಬಲ್ಯವೇ ಹೆಚ್ಚಿರುವುದು ಬಹಿರಂಗವಾಗಿದೆ. ಮಾತ್ರವಲ್ಲ, ಆ ವರ್ಗ ಚುನಾವಣೆಯಲ್ಲಿ ಬೀರುವ ಪ್ರಭಾವವೆಂಥದು ಎಂಬುದನ್ನೂ ಸ್ಪಷ್ಟಪಡಿಸಿದೆ.

ಬಿಜೆಪಿ ಹಲವು ಬಗೆಯಲ್ಲಿ ಅಡ್ಡಿಪಡಿಸಿದ್ದರ ಹೊರತಾಗಿಯೂ ಜಾತಿ ಜನಗಣತಿ ನಡೆದು, ಅಂತಿಮವಾಗಿ ಅದರ ವಿವರಗಳು ಬಹಿರಂಗವಾಗಿರುವುದು ಬಿಜೆಪಿಯ ಹಿಂದುತ್ವ ರಾಜಕಾರಣದ ಆಟಕ್ಕೆ ದೊಡ್ಡ ಸವಾಲಾಗಲಿದೆ ಎಂಬುದೂ ನಿಜ. ಈಗ ರಾಷ್ಟ್ರೀಯ ಜಾತಿ ಜನಗಣತಿ ನಡೆಸುವುದಕ್ಕೂ ಒತ್ತಾಯಗಳು ಸಹಜವಾಗಿಯೇ ತೀವ್ರಗೊಳ್ಳುತ್ತಿವೆ. ಬಿಹಾರ ಜಾತಿ ಜನಗಣತಿ ವರದಿಯನ್ನು ಪ್ರತಿಪಕ್ಷ ಮೈತ್ರಿಕೂಟ ‘ಇಂಡಿಯಾ’ ಸ್ವಾಗತಿಸಿದೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಬಿಹಾರದ ಜಾತಿ ಗಣತಿ ಅನ್ವಯ ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಜನರು ಶೇ.84ರಷ್ಟು ಇದ್ದಾರೆ ಎಂಬುದು ಬಹಿರಂಗವಾಗಿದೆ. ಕೇಂದ್ರ ಸರಕಾರದ 90 ಕಾರ್ಯದರ್ಶಿಗಳ ಪೈಕಿ ಕೇವಲ 3 ಮಂದಿ ಮಾತ್ರ ಒಬಿಸಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಅವರು ನಿಭಾಯಿಸುವುದು ಭಾರತದ ಬಜೆಟ್‌ನ ಶೇ. 5ರಷ್ಟನ್ನು ಮಾತ್ರ. ಹಾಗಾಗಿ, ದೇಶದ ಜಾತಿ ಅಂಕಿಅಂಶಗಳನ್ನು ತಿಳಿದುಕೊಳ್ಳಬೇಕಿದೆ ಎಂದು ಪ್ರತಿಪಾದಿಸಿದ್ದಾರೆ.

ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ವಾಸ್ತವವಾಗಿ ಜಾತಿಗಣತಿಯನ್ನು ಪೂರ್ಣಗೊಳಿಸಿತ್ತು. ಆದರೆ ಅದರ ಫಲಿತಾಂಶಗಳನ್ನು ಮೋದಿ ಸರಕಾರ ಪ್ರಕಟಿಸಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿರುವ ರಾಹುಲ್, ನೊಂದ ಸಮಾಜಗಳ ಸಬಲೀಕರಣಕ್ಕೆ ಜಾತಿಗಣತಿ ಅತ್ಯವಶ್ಯಕ ಎಂದಿದ್ದಾರೆ.

ಬಿಜೆಪಿಯ ಭಯ ಏನು?

ಜಾತಿಜನಗಣತಿ ಮಾಡಲು ಮನಸ್ಸಿಲ್ಲದ ಬಿಜೆಪಿ ಸರಕಾರ ನೆಪಗಳನ್ನು ಹೇಳುತ್ತಲೇ, ಅದನ್ನು ಮುಂದೆ ತಳ್ಳುತ್ತಿದೆ.

ಮುಂಬರುವ ಚುನಾವಣೆಯನ್ನೂ ಅದು ಈ ಯಾವ ಸವಾಲುಗಳಿಲ್ಲದೆಯೇ ದಾಟಲು ಯೋಚಿಸಿತ್ತು. ಆದರೆ ಈಗ ಬಿಹಾರ ಸರಕಾರ ಜಾತಿಗಣತಿ ವಿವರ ಬಹಿರಂಗಪಡಿಸಿರುವುದರಿಂದ, ಜಾತಿಗಣತಿಯೇನಾದರೂ ದೇಶಾದ್ಯಂತ ನಡೆದರೆ ದೇಶದ ಒಟ್ಟಾರೆ ಜಾತಿವಾರು ಜನಸಂಖ್ಯೆಯ ಚಿತ್ರ ಹೇಗಿರಬಹುದು ಎಂಬ ಸುಳಿವು ಸಿಕ್ಕಂತಾಗಿದೆ. ಇದು ನಿಜವಾಗಿಯೂ ಬಿಜೆಪಿಯ ಆತಂಕವನ್ನು ದುಪ್ಪಟ್ಟು ಮಾಡಿದೆ. ಹೀಗಾಗಿಯೇ, ಜಾತಿ ಹೆಸರಲ್ಲಿ ದೇಶವನ್ನು ವಿಭಜಿಸುವ ಪ್ರಯತ್ನ ಇದು ಎಂದು ಮೋದಿ ಆರೋಪಿಸಿದ್ದಾರೆ.

ದೇಶಾದ್ಯಂತ ಜಾತಿಗಣತಿಗೆ ಒತ್ತಾಯ

ಇದೆಲ್ಲದರ ನಡುವೆ, ಬಿಹಾರ ಜಾತಿ ಗಣತಿ ವಿವರಗಳು ದೇಶಾದ್ಯಂತ ಜಾತಿ ಗಣತಿ ಆಗಬೇಕಿರುವುದರ ಜರೂರನ್ನು ಪ್ರತಿಪಾದಿಸಿವೆ. ಕಾಂಗ್ರೆಸ್ ಈಗಾಗಲೇ ತಾನು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಜನಗಣತಿ ನಡೆಸುವುದಾಗಿ ಹೇಳಿದೆ.

ಮುಂಬರುವ ಚುನಾವಣೆಗಳಲ್ಲಿ ಗೆಲ್ಲುವ ರಾಜ್ಯಗಳಲ್ಲಿಯೂ ಅದು ಜಾತಿಗಣತಿ ನಡೆಸುವ ಭರವಸೆಯನ್ನು ಹೆಚ್ಚು ಒತ್ತುಕೊಟ್ಟು ನೀಡುತ್ತಿದೆ. ಪಂಚರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಜಾತಿ ಗಣತಿಯ ವಿಚಾರವನ್ನು ಪ್ರಮುಖವಾಗಿ ತೆಗೆದುಕೊಂಡಿದೆ.

ಸಾಮಾಜಿಕ ನ್ಯಾಯ ಎಂಬುದು ಇವತ್ತಿನ ರಾಜಕಾರಣದ ಪ್ರಖರ ವಿಚಾರವಾಗುತ್ತಿರುವ ಮೂಲಕ, ಹಿಂದುಳಿದವರನ್ನು, ಕೆಳ ಸಮುದಾಯದವರನ್ನು ಭ್ರಮೆಯಲ್ಲಿರಿಸಿ ರಾಜಕೀಯ ಮಾಡುವವರಿಗೆ ದುರಿತ ಕಾಲ ಎದುರಾಗುವುದು ದೂರವಿಲ್ಲ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Contributor - ಆರ್. ಜೀವಿ

contributor

Similar News