ಬತ್ತಿದ ಕಾವೇರಿ ಕೊಳ್ಳ; ಮರುಕಳಿಸಿದ ವಿವಾದದ ತಾಪ

Update: 2023-09-04 10:22 GMT
Editor : Thouheed | By : ಆರ್. ಜೀವಿ

ಕಾವೇರಿ ಜಲಾನಯನ ಪ್ರದೇಶದಲ್ಲಿ ಬೀಳಬೇಕಾದ ಮಳೆ ಬೀಳದಿದ್ದರೆ ಕರ್ನಾಟಕ ಮತ್ತು ತಮಿಳುನಾಡು ನಡುವೆ ಕಾವೇರಿ ವಿವಾದ ಭುಗಿಲೇಳುತ್ತದೆ. ಕೆಲವು ವರ್ಷಗಳ ಬಳಿಕ ಈ ಸಲ ಮತ್ತೆ ಅಂಥದೇ ಸ್ಥಿತಿ ತಲೆದೋರಿದೆ. ಕರ್ನಾಟಕದ ಕಷ್ಟಕ್ಕೆ ಕಿವಿಗೊಡದ ತಮಿಳುನಾಡು ತನ್ನ ಪಾಲಿನ ನೀರಿಗಾಗಿ ಪಟ್ಟುಹಿಡಿಯುತ್ತದೆ. ನಿಜವಾಗಿಯೂ ಈ ವಿವಾದ ಬೆನ್ನುಬಿಡದಂತಾಗಿರುವುದರ ಹಿನ್ನೆಲೆ ಏನು? ನೈಸರ್ಗಿಕ ಬಿಕ್ಕಟ್ಟಿನ ಸ್ಥಿತಿಯಲ್ಲಿ ಬೇಕಿರುವ ಸಂಕಷ್ಟ ಸೂತ್ರವೊಂದು ಏಕಿಲ್ಲ?

ಮತ್ತೊಮ್ಮೆ ಕಾವೇರಿ ವಿವಾದ ಎದುರಾಗಿದೆ. ವಾಡಿಕೆಯ ಮಳೆಯಾಗದೆ, ಕಾವೇರಿ ಜಲಾನಯನ ಪ್ರದೇಶದಲ್ಲಿ ನೀರಿನ ಕೊರತೆಯಾಗಿರುವುದು ಇದಕ್ಕೆ ಕಾರಣ. ಆದರೆ, ವಾಸ್ತವ ಗೊತ್ತಿದ್ದೂ ನೀರಿಗಾಗಿ ಹಠ ಹಿಡಿಯುವ ತಮಿಳುನಾಡು ಮತ್ತೊಮ್ಮೆ ಸುಪ್ರೀಂ ಕೋರ್ಟಿನ ಮುಂದೆ ನಿಂತಿತು. ಈ ತಿಂಗಳ ಕಡೆಯವರೆಗೆ ನಿತ್ಯವೂ 24 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಕರ್ನಾಟಕಕ್ಕೆ ನಿರ್ದೇಶನ ನೀಡಬೇಕೆಂಬುದು ಅದರ ಆಗ್ರಹವಾಗಿತ್ತು.

ಆದರೆ, ಶುಕ್ರವಾರ, ಅಂದರೆ ಆಗಸ್ಟ್ 25ರಂದು ವಿಚಾರಣೆ ಕೈಗೆತ್ತಿಕೊಂಡ ನ್ಯಾ.ಬಿ.ಆರ್ ಗವಾಯಿ ನೇತೃತ್ವದ ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠ, ನಿತ್ಯ 24 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಕರ್ನಾಟಕಕ್ಕೆ ಆದೇಶಿಸಬೇಕೆಂದು ತಮಿಳುನಾಡು ಸರಕಾರ ಮಾಡಿದ್ದ ಮನವಿಯನ್ನು ತಿರಸ್ಕರಿಸಿತು. ವಾರದೊಳಗೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆ ನಡೆಸುವಂತೆ ಸೂಚಿಸಿರುವ ಸುಪ್ರೀಂ ಕೋರ್ಟ್, ವಿಚಾರಣೆಯನ್ನು ಸೆ.1ಕ್ಕೆ ಮುಂದೂಡಿತು.

ಅದಾದ ಬಳಿಕ, ನಡೆದ ಸಭೆಯಲ್ಲಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ 15 ದಿನಗಳವರೆಗೆ ನಿತ್ಯ 5 ಸಾವಿರ ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಬಿಡುವಂತೆ ಕರ್ನಾಟಕಕ್ಕೆ ಸೂಚಿಸಿದೆ.

ನೀರಿಗೆ ಸಂಕಷ್ಟ ಬಂದಿರುವ ಹೊತ್ತಲ್ಲಿ ನಿತ್ಯ 24 ಸಾವಿರ ಕ್ಯೂಸೆಕ್ ಕಾವೇರಿ ನೀರನ್ನು ಬಿಡಬೇಕೆಂದು ತಮಿಳುನಾಡು ಕೇಳುತ್ತಿರುವುದು ಸರಿಯಲ್ಲ ಎಂದು ಕರ್ನಾಟಕ ಸರಕಾರ ಹೇಳಿತ್ತು.

ಇದಕ್ಕೂ ಮುನ್ನ, ನೀರು ಬಿಡಲು ತಮಿಳುನಾಡು ಕೇಳಿದ್ದ ಬೆನ್ನಲ್ಲೇ ಇತ್ತ ಕರ್ನಾಟಕ ಸಾಧ್ಯವಿರುವ ಪ್ರಮಾಣದಲ್ಲಿ ನೀರು ಹರಿಸಲು ತೊಡಗಿತ್ತು. ಅದು ರಾಜ್ಯದಲ್ಲಿ ರೈತರು ಮತ್ತು ಪ್ರತಿಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಈ ನಡುವೆ, ಕೇಂದ್ರ ಸರಕಾರದ ಬಳಿ ಸರ್ವಪಕ್ಷ ನಿಯೋಗ ಕೊಂಡೊಯ್ಯುವ ತೀರ್ಮಾನವನ್ನೂ ರಾಜ್ಯ ಸರಕಾರ ತೆಗೆದುಕೊಂಡಿದೆ.

ಕಾವೇರಿ ನೀರಿನ ವಿಚಾರದಲ್ಲಿ ತಮಿಳುನಾಡು ರಾಜಕೀಯ?:

ಮಳೆಯಾಗದೆ ನೀರಿನ ಕೊರತೆಯಾದಾಗ ಮಾತ್ರವೇ ನೀರು ಹರಿಸುವುದಕ್ಕೆ ಕರ್ನಾಟಕ ತಕರಾರೆತ್ತುತ್ತದೆ ಎಂಬ ವಾಸ್ತವ ತಮಿಳುನಾಡಿಗೂ ಗೊತ್ತು. ಆದರೆ ಅದು ಈ ವಾಸ್ತವಕ್ಕೆ ಎಂದೂ ಕಿವಿಗೊಟ್ಟಿದ್ದೇ ಇಲ್ಲ. ತನ್ನ ಪಾಲಿನ ನೀರನ್ನು ಲೆಕ್ಕಾಚಾರ ಹಾಕಿ ಪಟ್ಟು ಹಿಡಿದು ಕೇಳುವುದನ್ನು ಅದು ಮಾಡಿಕೊಂಡೇ ಬಂದಿದೆ. ತನ್ನ ರೈತರ ಕಷ್ಟ ಹೇಳುವ ಅದು ಕರ್ನಾಟಕದ ರೈತರಿಗೂ ಕಷ್ಟವಿದೆ ಎನ್ನುವುದನ್ನು ಬೇಕೆಂದೇ ಅಲಕ್ಷಿಸುತ್ತದೆ.

ಎಷ್ಟು ನೀರಿದ್ದರೂ ತನಗೇ ಬೇಕೆಂಬ ಥರದ ಧೋರಣೆಯನ್ನೇ ಅದು ತೋರಿಸುತ್ತ ಬಂದಿರುವುದೂ ನಿಜ. ಕೇರಳಕ್ಕೆ ಹಂಚಿಕೆಯಾದ 30 ಟಿಎಂಸಿ ನೀರಿನ ಅಷ್ಟು ಪ್ರಮಾಣವನ್ನು ಕೇರಳ ಬಳಸಿಕೊಳ್ಳಲು ಸಾಧ್ಯವಿಲ್ಲ ಎಂಬ ಕಾರಣದಿಂದ ಆ ನೀರನ್ನು ಕೂಡ ತಮಿಳುನಾಡಿಗೇ ಹರಿಸಬೇಕೆಂದು ನ್ಯಾಯಮಂಡಳಿ ತೀರ್ಪು ನೀಡಿತ್ತು. ಸುಪ್ರೀಂ ಕೋರ್ಟ್ ಕೂಡ ಇದನ್ನು ಬದಲಿಸಿಲ್ಲ.

ನೀರು ಹಂಚಿಕೆ ಮತ್ತು ನೀರು ಬಿಡುವ ಕಾರ್ಯದ ಮೇಲ್ವಿಚಾರಣೆ ನೋಡಿಕೊಳ್ಳುವ ಕಾವೇರಿ ನೀರು ಮೇಲ್ವಿಚಾರಣಾ ಪ್ರಾಧಿಕಾರ ಕೂಡ ತಮಿಳುನಾಡಿನ ಪರವಾಗಿಯೇ ನಿಲ್ಲುವುದಿದೆ ಎಂಬ ಆರೋಪಗಳೂ ಇವೆ. ನೀರಿನ ಕೊರತೆಯಿರುವ ಸಂದರ್ಭದಲ್ಲಿಯೂ ಕರ್ನಾಟಕ ತನ್ನ ಬಳಕೆಗೆ ಸಂಗ್ರಹಿಸಿಟ್ಟುಕೊಂಡ ನೀರನ್ನೇ ತಮಿಳುನಾಡಿಗೆ ಬಿಡಬೇಕಾದ ಸ್ಥಿತಿ ಇರುವುದು ಇದೇ ಕಾರಣದಿಂದ. ನೀರು ಬಿಡಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೇಳಿದರೂ ಪ್ರಾಧಿಕಾರ ತಮಿಳುನಾಡಿಗೆ ನೀರು ಬಿಡುವಂತೆ ಮಾಡುತ್ತದೆ ಎಂದೇ ಹೇಳಲಾಗುತ್ತದೆ.

2018ರ ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಇಲ್ಲಿಯವರೆಗೂ ವಾಡಿಕೆಯಂತೆ ಮಳೆಯಾಗುತ್ತಿದ್ದುದರಿಂದ ಸಮಸ್ಯೆ ತಲೆದೋರಿರಲಿಲ್ಲ. ತಮಿಳುನಾಡಿನ ನಿಗದಿತ ಪಾಲಿಗಿಂತ ಹೆಚ್ಚು ನೀರನ್ನು ಕರ್ನಾಟಕ ಹರಿಸುತ್ತಲೇ ಬಂದಿತ್ತು. ಆದರೆ ಈ ಬಾರಿ ವಾಡಿಕೆಯ ಮಳೆಯಾಗದಿರುವುದೇ ಪರಿಸ್ಥಿತಿ ಹದಗೆಡುವುದಕ್ಕೆ ಕಾರಣವಾಗಿದೆ.

ಕಾವೇರಿ ಜಲಾನಯನ ಪ್ರದೇಶದ ಜಲಾಶಯಗಳಲ್ಲಿ ಅಗತ್ಯ ನೀರು ಸಂಗ್ರಹವಾಗಿಲ್ಲ. ಕಬಿನಿ ಮತ್ತು ಕೆಆರ್‌ಎಸ್‌ನಲ್ಲಿ 2022ರ ಆಗಸ್ಟ್ 21ರ ವೇಳೆಗೆ 102.63 ಟಿಎಂಸಿ ನೀರು ಇತ್ತು. ಆದರೆ ಈ ಸಲದ ಆಗಸ್ಟ್‌21ರ ವೇಳೆಗೆ ಈ ಎರಡೂ ಜಲಾಶಯಗಳಲ್ಲಿನ ನೀರಿನ ಸಂಗ್ರಹ 69.80 ಟಿಎಂಸಿ ಮಾತ್ರ.

ಇಂಥ ಬಿಕ್ಕಟ್ಟಿನ ಸ್ಥಿತಿಯಲ್ಲಿಯೂ ತಮಿಳುನಾಡು ತನ್ನ ಪಾಲಿನ ನೀರಿಗಾಗಿ ರಚ್ಚೆ ಹಿಡಿದು ಕೇಳುತ್ತಿದೆ. ಪ್ರಾಧಿಕಾರವೂ ಅದರ ಮಾತು ಕೇಳುತ್ತಿದೆ ಎಂಬುದು ಈಗ ಕರ್ನಾಟಕದ ಪಾಲಿಗೆ ಸಂಕಷ್ಟ ತಂದಿಟ್ಟಿದೆ.

ಇಲ್ಲಿರುವ ದೊಡ್ಡ ಸಮಸ್ಯೆ ಏನು?:

ಸಾಮಾನ್ಯ ಜಲವರ್ಷದಲ್ಲಿ ಯಾವ ರಾಜ್ಯಗಳಿಗೆ ಎಷ್ಟು ನೀರು ಹಂಚಿಕೆಯಾಗಬೇಕು ಎಂಬುದೇನೋ ತೀರ್ಮಾನವಾಗಿದೆ. ಆದರೆ ಸಮಸ್ಯೆ ತಲೆದೋರುವುದೇ ವಾಡಿಕೆಯ ಮಳೆಯಾಗದೆ ನೀರಿನ ಕೊರತೆಯಾದಾಗ.

ಇಂಥ ಸ್ಥಿತಿಯಲ್ಲಿ ಏನು ಮಾಡಬೇಕು ಎಂಬ ಸಂಕಷ್ಟ ಸೂತ್ರ ಇಲ್ಲದಿರುವುದೇ ವಿವಾದ ಭುಗಿಲೇಳುವುದಕ್ಕೆ ಕಾರಣ.

ಮಳೆಯಿಲ್ಲದೆ ನೀರಿನ ಕೊರತೆ ಎದುರಾದಾಗ ಕರ್ನಾಟಕ ಎಷ್ಟು ನೀರನ್ನು ಉಳಿಸಿಕೊಳ್ಳಬೇಕು? ತಮಿಳುನಾಡಿಗೆ ಎಷ್ಟು ನೀರನ್ನು ಬಿಡಬೇಕು? ಇದು ಬಗೆಹರಿಯದ ಪ್ರಶ್ನೆಯಾಗಿದೆ. ಇದನ್ನು ನಿರ್ಧರಿಸುವ ಯಾವುದೇ ಮಾನದಂಡವಿಲ್ಲ.

ಕರ್ನಾಟಕ ಸರಕಾರ ಈಗ ಇದರೆಡೆಗೆ ಗಂಭೀರವಾಗಿ ಗಮನ ಹರಿಸಿದೆ. ಸಂಕಷ್ಟ ಸೂತ್ರ ನಿರ್ದಿಷ್ಟಪಡಿಸುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಸಮರ್ಥವಾಗಿ ವಾದ ಮಂಡಿಸುವಂತೆ ರಾಜ್ಯದ ವಕೀಲರಿಗೆ ಸರಕಾರ ಸಲಹೆ ನೀಡಿದೆ ಎಂಬ ವಿಚಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಖಚಿತಪಡಿಸಿದ್ದಾರೆ.

ಈಗ, ಬಿಕ್ಕಟ್ಟಿನ ಸ್ಥಿತಿಯಲ್ಲಿಯೂ ತಮಿಳುನಾಡಿಗೆ ನೀರು ಬಿಟ್ಟಿರುವುದು ಕರ್ನಾಟಕದಲ್ಲಿ ಪ್ರತಿಪಕ್ಷಗಳ ಕೆಂಗಣ್ಣಿಗೆ ಗುರಿಯಾಯಿತು. ರಾಜ್ಯದ ರೈತರಿಗೆ ನೀರು ಕೊಡದೆ ತಮಿಳುನಾಡಿಗೆ ಬಿಟ್ಟಿರುವುದು ಸರಿಯಲ್ಲ ಎಂದು ಬಿಜೆಪಿ ಹೇಳಿದರೆ, ಸುಪ್ರೀಂ ಕೋರ್ಟ್‌ಗೆ ತಮಿಳುನಾಡು ಅರ್ಜಿ ಸಲ್ಲಿಸಿದ ತಕ್ಷಣ ರಾಜ್ಯ ಸರಕಾರ ನೀರು ಹರಿಸುವ ಬದಲು ತಕರಾರು ಅರ್ಜಿ ಸಲ್ಲಿಸಬೇಕಿತ್ತು ಎಂಬುದು ಜೆಡಿಎಸ್ ವಾದ.

ತಮಿಳುನಾಡು ಸುಪ್ರೀಂ ಕೋರ್ಟ್ ಮೊರೆ ಹೋಗಿರುವುದು ದುರದೃಷ್ಟಕರ. ಅಂಥ ಹೆಜ್ಜೆ ತೆಗೆದುಕೊಳ್ಳಬೇಕಾದ ಮಟ್ಟಿಗೆ ಪರಿಸ್ಥಿತಿ ಹೋಗಿರಲಿಲ್ಲ. ಕರ್ನಾಟಕದಲ್ಲಿ ಪರಿಸ್ಥಿತಿ ಹದಗೆಟ್ಟಿರುವುದು ಅವರಿಗೆ ಗೊತ್ತಿದೆ. ನಾವು ಟೀಕೆಗಳನ್ನು ಎದುರಿಸಿದರೂ ಕಾನೂನನ್ನು ಗೌರವಿಸಿ ತಮಿಳುನಾಡಿಗೆ ನೀರು ಬಿಟ್ಟಿದ್ದೇವೆ ಎಂಬುದು ಡಿಸಿಎಂ ಡಿ.ಕೆ.ಶಿವಕುಮಾರ್ ಸಮರ್ಥನೆ.

ಸದ್ಯ, ಸುಪ್ರೀಂ ಕೋರ್ಟ್ ತಮಿಳುನಾಡಿನ ಮನವಿಯನ್ನು ತಿರಸ್ಕರಿಸಿದೆ. ತಮಿಳುನಾಡಿನ ಬೇಡಿಕೆಯಾಗಿದ್ದ ನಿತ್ಯ 24 ಸಾವಿರ ಕ್ಯೂಸೆಕ್ ಬದಲು ನಿತ್ಯ 5 ಸಾವಿರ ಕ್ಯೂಸೆಕ್ ನೀರು ಬಿಡಲು ಪ್ರಾಧಿಕಾರ ಸೂಚಿಸಿದೆ. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದ್ದು, ಕಾನೂನು ತಜ್ಞರ ಸಲಹೆ ಪಡೆದು ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದಾರೆ.

ಇದರಂತೆ, ತಮಿಳುನಾಡಿಗೆ ಸಲ್ಲಬೇಕಾದ 404.25 ಟಿಎಂಸಿ ನೀರಿನಲ್ಲಿ 227 ಟಿಎಂಸಿ ನೀರು ತಮಿಳುನಾಡಿನಲ್ಲಿಯೇ ಲಭ್ಯವಿರುತ್ತದೆ. ಉಳಿದ 177.25 ಟಿಎಂಸಿ ನೀರನ್ನು ಕರ್ನಾಟಕ ಪ್ರತಿ ವರ್ಷ ತಮಿಳುನಾಡಿಗೆ ಬಿಡಬೇಕಿರುತ್ತದೆ.

ಸುಪ್ರೀಂ ಕೋರ್ಟ್ ಈ ತೀರ್ಪು ಕೊಟ್ಟ ಬಳಿಕ 2018ರಲ್ಲಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ಕಾವೇರಿ ನೀರು ನಿಯಂತ್ರಣ ಸಮಿತಿ ಸ್ಥಾಪನೆಯಾಗಿವೆ.ಪ್ರಾಧಿಕಾರ ಇಲ್ಲಿಯವರೆಗೆ 22 ಸಭೆಗಳನ್ನು ನಡೆಸಿದೆ.

ಇಲ್ಲಿಯವರೆಗೆ ನಡೆದ ನಿಯಂತ್ರಣ ಸಮಿತಿ ಸಭೆಗಳು 84.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Contributor - ಆರ್. ಜೀವಿ

contributor

Similar News