ದುಬಾರಿಯಾಗುತ್ತಿರುವ ಎರಡು ಹೊತ್ತಿನ ಊಟ: ಬಡವರ ತುತ್ತು ಕಸಿಯುತ್ತಿದೆಯೇ ಸರಕಾರದ ನೀತಿ?

ಬೆಲೆ ಏರಿಕೆ ಬಡವರ ತುತ್ತನ್ನು ಕಸಿಯತೊಡಗಿರುವುದು ಸುಳ್ಳಲ್ಲ. ಇತ್ತೀಚಿನ ಕೆಲವು ವರ್ಷಗಳಿಂದ ದೈನಂದಿನ ಅಗತ್ಯದ ವಸ್ತುಗಳು, ಅದರಲ್ಲೂ ದಿನಸಿ, ತರಕಾರಿ ಮೊದಲಾದವುಗಳ ಬೆಲೆ ಏರಿಕೆಯಿಂದ ಬಡವರು ತತ್ತರಿಸುವಂತಾಗಿದೆ. ಇದೇ ವೇಳೆ ಸಂಪಾದನೆ ಮಾತ್ರ ಹೆಚ್ಚು ಕಡಿಮೆ ನಿಂತಲ್ಲಿಯೇ ನಿಂತಿದೆ. ಎರಡು ಹೊತ್ತಿನ ಊಟ ದುಬಾರಿಯಾಗುತ್ತಲೇ ಇರುವುದರ ಕಾರಣವೇನು? ಸರಕಾರದ ನೀತಿ ಹೇಗೆ ಬಡವರು, ಜನಸಾಮಾನ್ಯರು ಅರೆಹೊಟ್ಟೆಯಲ್ಲಿರಬೇಕಾದ ಸ್ಥಿತಿಯನ್ನು ತಂದಿಟ್ಟಿದೆ?

Update: 2023-09-06 10:26 GMT
Editor : Thouheed | By : ಆರ್.ಜೀವಿ

ಥಾಲಿನಾಮಿಕ್ಸ್ ಅಥವಾ ಸಾಮಾನ್ಯವಾಗಿ ಒಂದು ಊಟದ ಖರ್ಚು ಇವತ್ತಿನ ದಿನಮಾನದಲ್ಲಿ ಎಷ್ಟಾಗಿದೆ ಎಂಬುದರ ವಿಚಾರಕ್ಕೆ ಬರುವ ಮೊದಲು ಮೊನ್ನೆಯ ಒಂದು ಸುದ್ದಿಯನ್ನು ಗಮನಿಸಬೇಕು. ಮೋದಿ ಸರಕಾರ ಅಡುಗೆ ಅನಿಲದ ಬೆಲೆಯನ್ನು 200 ರೂಪಾಯಿ ಇಳಿಸಿದೆ. ಮತ್ತದನ್ನು ಈ ದೇಶದ ಅಕ್ಕತಂಗಿಯರಿಗೆ ರಕ್ಷಾಬಂಧನದ ಕೊಡುಗೆ ಎಂದು ರಂಗುರಂಗಾಗಿ ಬಿಂಬಿಸಲಾಗುತ್ತಿದೆ. ಈ ದೇಶದ ಮಹಿಳೆಯರ ಕಷ್ಟ ಅರ್ಥ ಮಾಡಿಕೊಂಡು ಮೋದಿಯವರು ಅಡುಗೆ ಅನಿಲ ದರ ಇಳಿಸಿದ್ದಾರೆ ಎಂದು ಅವರ ಸಂಪುಟದ ಸಚಿವರು, ಬಿಜೆಪಿ ನಾಯಕರು, ಅವರ ಬೆಂಬಲಿಗರು ಒಬ್ಬರ ಬೆನ್ನಲ್ಲೊಬ್ಬರು ಹೇಳಿದ್ದಾರೆ, ಹೊಗಳಿದ್ದಾರೆ.

ಆದರೆ, 2014ರಲ್ಲಿ ಬರೀ 400ರಿಂದ 500 ರೂಪಾಯಿಗಳ ಆಸುಪಾಸಿನಲ್ಲಿದ್ದ ಅಡುಗೆ ಅನಿಲದ ಬೆಲೆಯನ್ನು 1,150 ರೂಪಾಯಿಗೆ ಮುಟ್ಟಿಸಿದ್ದು ಕೂಡ ಮೋದಿ ಸರಕಾರವೇ. ಅಂತರ್‌ರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಕಚ್ಚಾ ತೈಲ ಬೆಲೆ ಏರಿಕೆಯೇ ಬೆಲೆಯೇರಿಕೆಗೆ ಕಾರಣ ಎನ್ನುವವರು, ಕಚ್ಚಾತೈಲ ಬೆಲೆ ಇಳಿದ ಹೊತ್ತಲ್ಲಿಯೂ ಅಡುಗೆ ಅನಿಲದ ಬೆಲೆ ತಗ್ಗಿಸಿರಲಿಲ್ಲ.

ಕಳೆದ ಒಂಭತ್ತು ವರ್ಷಗಳಲ್ಲಿ ಕಾಣದ ಮಹಿಳೆಯರ ಕಣ್ಣೀರು ಮೋದಿಯವರಿಗೆ ಈಗ ಕಂಡಿದ್ದು ಹೇಗೆ? ಚುನಾವಣೆ ಹತ್ತಿರವಾದರೆ ಸಾಕು, ಎಲ್ಲವೂ ಕಾಣಿಸಲು ಶುರುವಾಗುತ್ತವೆ ಎಂಬುದಕ್ಕೆ ಇದೊಂದು ಉದಾಹರಣೆ. ತಾವೇ ಎರಡು ಪಟ್ಟಿಗಿಂತಲೂ ಹೆಚ್ಚು ಏರಿಸಿದ್ದರಲ್ಲಿ 200 ರೂ. ಇಳಿಸಿರುವುದು ಈಗ ಜನರಿಗೆ ಮಾಡಿರುವ ಮಹಾ ಉಪಕಾರ ಎಂದು ಬಣ್ಣಿಸಲಾಗುತ್ತಿದೆ.

ಆದರೆ ವಾಸ್ತವ ಬೇರೆಯೇ ಇದೆ ಎಂಬುದು ನಮ್ಮ ಊಟ ಹೇಗೆ ತುಟ್ಟಿಯಾಗುತ್ತಿದೆ ಎಂಬುದನ್ನು ಗಮನಿಸಿದರೆ ಗೊತ್ತಾಗುತ್ತದೆ.

ಕ್ರಿಸಿಲ್ ಎಂಬ ಸಂಸ್ಥೆಯ ವಿಶ್ಲೇಷಣೆ ಪ್ರಕಾರ, ಒಂದು ಸಾಧಾರಣ ಊಟದ ಬೆಲೆ ಜೂನ್‌ನಲ್ಲಿ ಕಂಡಿರುವ ಏರಿಕೆ ಕಳೆದ ಕೆಲವು ತಿಂಗಳುಗಳಲ್ಲೇ ಗರಿಷ್ಠ ಮಟ್ಟದ್ದಾಗಿದೆ. ಈರುಳ್ಳಿ, ಟೊಮೆಟೊ, ಮೆಣಸಿನಕಾಯಿ, ಶುಂಠಿಯಂಥ ಅಗತ್ಯ ತರಕಾರಿಗಳು, ಅಲ್ಲದೆ ಅಕ್ಕಿ, ಬೇಳೆಯಂಥ ದಿನಸಿಗಳ ಬೆಲೆ ಗಗನಕ್ಕೇರುತ್ತಿದ್ದು, ಒಂದು ಹೊತ್ತಿನ ಊಟವನ್ನು ದುಬಾರಿಗೊಳಿಸಿದೆ. ಕ್ರಿಸಿಲ್ ವಿಶ್ಲೇಷಣೆ ಹೇಳುವಂತೆ, ಸಸ್ಯಾಹಾರಿ ಮತ್ತು ಮಾಂಸಾಹಾರಿ ಊಟಗಳೆರಡರ ಬೆಲೆಯೂ ಜೂನ್‌ನಲ್ಲಿ ಈ ಹಿಂದಿನ ಕೆಲವು ತಿಂಗಳುಗಳಿಗಿಂತಲೂ ಹೆಚ್ಚಿದೆ.

ಎಷ್ಟೇ ಸರಳ ಊಟವೆಂದರೂ, ಅಕ್ಕಿ, ಬೇಳೆ, ಹಾಗೆಯೇ ಈರುಳ್ಳಿ, ಟೊಮೆಟೊ, ಆಲೂಗಡ್ಡೆ, ಮೆಣಸಿನಕಾಯಿಯಂಥ ತರಕಾರಿಗಳು ಬೇಕು. ಅವುಗಳ ಬೆಲೆ ಏರುತ್ತಿದ್ದಂತೆಯೇ ಬಡವರು ಒಂದು ಹೊತ್ತಿನ ಊಟಕ್ಕೂ ಯೋಚಿಸಬೇಕಾಗುತ್ತದೆ. ಖರ್ಚು ಮಾತ್ರ ಏರುತ್ತ, ಗಳಿಕೆ ಇದ್ದಲ್ಲೇ ಇದ್ದಾಗ ಅರೆಹೊಟ್ಟೆಯಲ್ಲಿಯೇ ಸಂಸಾರ ನಿಭಾಯಿಸಬೇಕಾದ ಸ್ಥಿತಿಯೂ ದೇಶದ ಲಕ್ಷಾಂತರ ಕುಟುಂಬಗಳ ಮುಂದಿದೆ.

ಕಳೆದ ತಿಂಗಳು ಟೊಮೆಟೊ ಬೆಲೆ ಕೈಗೆಟುಕಲಾರದ ಎತ್ತರವನ್ನು ಮುಟ್ಟಿತು. ಒಮ್ಮೆಲೆ 120 ರೂ. ಗಡಿ ದಾಟಿ ಕಡೆಗೆ 180 ರೂ.ವರೆಗೆ ತಲುಪಿತು. 200 ರೂ. ಆಸುಪಾಸು ಮುಟ್ಟಿದ ವರದಿಗಳೂ ಇದ್ದವು. ಅದು ಕೊಂಚ ತಗ್ಗಿತೆನ್ನುವಾಗ ಈರುಳ್ಳಿ ಬೆಲೆ ಏರಿತು. ಅಕ್ಕಿ, ಗೋಧಿ, ಜೊತೆಗೆ ಬೇಳೆಯೂ ದುಬಾರಿಯಾಗಿದೆ. ಜೂನ್‌ನಲ್ಲಿ ತೊಗರಿ ಬೇಳೆಯ ಬೆಲೆ ಶೇ.3ರಷ್ಟು ಹೆಚ್ಚಿತ್ತು. ಗೋಧಿ ಹಿಟ್ಟು ಮತ್ತು ಅಕ್ಕಿ ಬೆಲೆಗಳು ಕೂಡ ವರ್ಷದಿಂದ ವರ್ಷಕ್ಕೆ ಏರಿಕೆ ಕಂಡಿವೆ. ಹಿಟ್ಟಿನ ಬೆಲೆ ಶೇ.9ರಷ್ಟು ಹೆಚ್ಚಿದ್ದರೆ, ಈ ಅವಧಿಯಲ್ಲಿ ಅಕ್ಕಿ ಶೇ.12ರಷ್ಟು ದುಬಾರಿಯಾಗಿದೆ.

ಕಳೆದ ವರ್ಷದ ಕಡೆಯಲ್ಲಿ ಪ್ರಕಟವಾಗಿದ್ದ ವರದಿಯೊಂದರ ಪ್ರಕಾರ, ಹತ್ತೇ ವರ್ಷಗಳಲ್ಲಿ ದೇಶದ ಪ್ರತೀ ಮನೆಯ ಊಟದ ಖರ್ಚು ಶೇ.70ರಷ್ಟು ಹೆಚ್ಚಳವಾಗಿದೆ. 2015ರಿಂದೀಚಿನ ಅಂಕಿ ಅಂಶಗಳನ್ನು ಗಮನಿಸಿದರೆ, 2015ರಲ್ಲಿ ಸಸ್ಯಾಹಾರಿ ಊಟದ ವೆಚ್ಚ 16 ರೂ. ಇತ್ತು. ಅಂದರೆ ದಿನಕ್ಕೆ ಎರಡು ಊಟ ತಯಾರಿಸಲು ಕೇವಲ 32 ರೂ. ವೆಚ್ಚವಾಗುತ್ತಿತ್ತು.

2022ರಲ್ಲಿ ಅದೇ ಎರಡು ಊಟದ ಬೆಲೆ 45 ರೂ.ಗೆ ಏರಿತು. ಅಂದರೆ, 13 ರೂ. ಹೆಚ್ಚಳವಾಯಿತು. 2015ರಲ್ಲಿ ಐವರ ಕುಟುಂಬಕ್ಕೆ ಸಸ್ಯಾಹಾರಿ ಊಟದ ಮಾಸಿಕ ವೆಚ್ಚ 4,700 ರೂ. ಇತ್ತು. 2022ರಲ್ಲಿ ಅದು ಸುಮಾರು 6,700 ರೂ.ಗೆ ಹೆಚ್ಚಿತು.

ಸಂಪಾದನೆ ವಿಚಾರವನ್ನೂ ಗಮನಿಸುವುದಾದರೆ, ಗಳಿಕೆಯ ಶೇ.45ರಷ್ಟು ಊಟಕ್ಕೇ ವೆಚ್ಚವಾಗುತ್ತದೆ. ಭಾರತದ ಬಹುತೇಕ ಮನೆಗಳಲ್ಲಿ ದುಡಿಯುವವನು ಒಬ್ಬನೇ ಆಗಿರುತ್ತಾನೆ ಎಂದುಕೊಂಡರೆ, ಸಾಧಾರಣ ಗಳಿಕೆಯ ಲೆಕ್ಕಾಚಾರದಲ್ಲಿ 2017ರಲ್ಲಿ ಆತ ತನ್ನ ಗಳಿಕೆಯ ಶೇ.28ರಷ್ಟನ್ನು ಆಹಾರ ಮತ್ತು ಅಡುಗೆಗೆ ಖರ್ಚು ಮಾಡುತ್ತಿದ್ದ. ಆದರೆ, 2022ರಲ್ಲಿ ಸಂಬಳದ ಶೇ.45ರಷ್ಟನ್ನು ವೆಚ್ಚ ಮಾಡಬೇಕಾಯಿತು.

ವರದಿ ಹೇಳಿರುವ ಪ್ರಕಾರ, ಆ ಹೊತ್ತಿನಲ್ಲಿ ವಿವಿಧ ಪದಾರ್ಥಗಳ ಶೇಕಡಾವಾರು ಏರಿಕೆ ಗಮನಿಸುವುದಾದರೆ,

ಮಾಂಸ ಮತ್ತು ಮೀನು - ಶೇ.206

ಅಡುಗೆ ಎಣ್ಣೆ - ಶೇ.192.4

ಮಸಾಲೆ ಪದಾರ್ಥ - 193.6

ತರಕಾರಿ- ಶೇ.186.6

ಹಣ್ಣುಗಳು - ಶೇ.172

ಹಾಗಾದರೆ, ನಮ್ಮ ಊಟ ದುಬಾರಿಯಾಗುತ್ತಿರುವುದೇಕೆ?

ಇದಕ್ಕೆ ಕಾರಣ, ಸರಕಾರದ ಆರ್ಥಿಕ ನೀತಿಗಳು, ಅತಿವೃಷ್ಟಿ, ಬರಗಾಲ, ಯುದ್ಧಗಳು, ರಾಜತಾಂತ್ರಿಕ ನಿಲುವುಗಳು.

ಇನ್ನು ಕರ್ನಾಟಕದ ವಿಚಾರಕ್ಕೆ ಬರುವುದಾದರೆ, ಆಗಸ್ಟ್ ತಿಂಗಳಿನಿಂದ ಎಲ್ಲವೂ ತುಟ್ಟಿಯಾಗಿದೆ. ಹಾಲು, ತರಕಾರಿ, ದಿನಸಿ ಪದಾರ್ಥಗಳ ಬೆಲೆ ಏರಿದೆ. ಬೆಂಗಳೂರಿನ ಶೇ.75ರಷ್ಟು ಹೊಟೇಲ್‌ಗಳಲ್ಲಿ ಇದಕ್ಕೂ ಮುನ್ನವೇ ಊಟ, ತಿಂಡಿ, ಟೀ, ಕಾಫೀ ದರ ಏರಿಕೆಯಾಗಿತ್ತು. ಆಗಸ್ಟ್ 1ರ ಬಳಿಕ ಉಳಿದ ಹೊಟೇಲ್‌ಗಳಲ್ಲಿಯೂ ದರ ಶೇ.10ರಷ್ಟು ಏರಿಕೆಯಾಗಿದೆ ಎಂಬ ವರದಿಗಳಿವೆ. ಹಲವೆಡೆ ದಕ್ಷಿಣ ಭಾರತ ಶೈಲಿಯ ಊಟದ ಬೆಲೆ 100 ರೂ. ದಾಟಿದ್ದು, ಕಾಫಿ, ಚಹದ ಸರಾಸರಿ ಬೆಲೆ 15ರಿಂದ 20 ರೂ.ಗೆ ಏರಿದೆ ಎನ್ನುತ್ತಿವೆ ವರದಿಗಳು.

ಹತ್ತು ವರ್ಷಗಳಿಂದ ಸಂಪಾದನೆ ಏರದೇ ಇದ್ದರೂ, ಊಟ ತಿಂಡಿಗಳ ಬೆಲೆ ಕಳೆದ ಮೂರು ವರ್ಷಗಳಲ್ಲಿ ದುಪ್ಪಟ್ಟಾಗಿದೆ ಎಂಬ ಅಹವಾಲು ಜನಸಾಮಾನ್ಯರದ್ದು.

2014ರ ಪ್ರಣಾಳಿಕೆಯಲ್ಲಿ ಹೆಚ್ಚಿನ ಹಣದುಬ್ಬರ ಮತ್ತು ಬಡ್ಡಿದರವನ್ನು ನಿಯಂತ್ರಿಸುವ ಮಾತನ್ನು ಬಿಜೆಪಿ ಹೇಳಿತ್ತು. ಆದರೆ ಆದದ್ದೇನು? ಸರಳವಾಗಿ ಹೇಳಬೇಕೆಂದರೆ, ಶ್ರೀಮಂತರನ್ನು ಹೊರತುಪಡಿಸಿ ಪ್ರತಿಯೊಬ್ಬರೂ ಅಗತ್ಯ ವಸ್ತುಗಳ ಖರೀದಿಯಲ್ಲಿ ಬೆಲೆ ಏರಿಕೆಯ ಬಿಸಿಯನ್ನು ಅನುಭವಿಸುತ್ತಿರುವುದಂತೂ ನಿಜ. ನಿರಂತರವಾದ ಹೆಚ್ಚಿನ ಹಣದುಬ್ಬರ 2023ರ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಕುಟುಂಬದ ಆರ್ಥಿಕ ಉಳಿತಾಯವನ್ನು 30 ವರ್ಷಗಳ ಹಿಂದಿನ ಸ್ಥಿತಿಗೆ ತಳ್ಳಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯ ಹೊರತಾಗಿಯೂ, ಜನರು ಇನ್ನೂ ತಾವು ಕಷ್ಟಪಟ್ಟು ಚೂರುಪಾರು ಉಳಿಸಿದ್ದನ್ನೇ ಬಳಸಿಕೊಂಡು ಅವುಗಳನ್ನು ಖರೀದಿಸುತ್ತಿದ್ದಾರೆ. ಆದರೂ ಪ್ರತಿಯೊಬ್ಬರೂ ಹೆಚ್ಚಿನ ಬೆಲೆಗೆ ಅಗತ್ಯ ವಸ್ತುಗಳನ್ನು ಖರೀದಿಸಲು ಸಾಧ್ಯವಿಲ್ಲ.




ಐಷಾರಾಮಿ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಶ್ರೀಮಂತರು ನಿರಾಳವಾಗಿಯೇ ಇದ್ದಾರೆ ಮತ್ತು ಜನಸಾಮಾನ್ಯರು ಹೈರಾಣಾಗುತ್ತಿದ್ದಾರೆ. ಮೋದಿ ಅವಧಿಯಲ್ಲಿ ಅಸಮಾನತೆ ಮತ್ತು ಬಡತನ ಹೆಚ್ಚಿದೆ ಎಂಬುದನ್ನು ಹಲವಾರು ವರದಿಗಳು ಸೂಚಿಸುತ್ತವೆ.

ಈ ದೇಶದ ರಾಜಕೀಯ ಬಡವರ ಕಣ್ಣೀರು ಒರೆಸೀತು ಎಂದು ನಿರೀಕ್ಷಿಸುವುದೇ ದೊಡ್ಡ ವ್ಯಂಗ್ಯ. ತಾವು ಈರುಳ್ಳಿ ತಿನ್ನುವುದಿಲ್ಲ ಎನ್ನುವ ಮಂತ್ರಿಗಳೂ, ನ್ಯಾಯಕ್ಕಾಗಿ ಪ್ರತಿಭಟಿಸುವ ರೈತರನ್ನು ಉಗ್ರರು ಎಂದು ಕರೆಯುವ ರಾಜಕಾರಣಿಗಳೂ ಇರುವ ಈ ದೇಶದಲ್ಲಿ ಬಡವರ ಕಣ್ಣೀರು ಒರೆಸುವವರು ನಿಜವಾಗಿಯೂ ಇದ್ದಾರೆಯೆ?

Tags:    

Writer - ವಾರ್ತಾಭಾರತಿ

contributor

Editor - Thouheed

contributor

Contributor - ಆರ್.ಜೀವಿ

contributor

Similar News