ಕರ್ನಾಟಕದಲ್ಲಿ ಕುಟುಂಬ ರಾಜಕಾರಣ ಮೀರಲಾರದ ರಾಜಕೀಯ ಪಕ್ಷಗಳು

ಕುಟುಂಬ ರಾಜಕಾರಣವನ್ನು ಮೀರಿ ಇವತ್ತಿನ ರಾಜಕಾರಣ ಸಾಧ್ಯವಿಲ್ಲವೇನೋ ಎಂಬಂತಾಗಿದೆ. ರಾಷ್ಟ್ರಮಟ್ಟದಲ್ಲಿ ಮತ್ತು ರಾಜ್ಯಮಟ್ಟದಲ್ಲಿ ಕುಟುಂಬ ರಾಜಕಾರಣದ ಛಾಯೆ ಢಾಳಾಗಿಯೇ ಇದೆ. ಈ ಸಲದ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದ ಮಟ್ಟಿಗೆ ಈ ಕುಟುಂಬ ರಾಜಕಾರಣದ ಪ್ರಭಾವ ಹೇಗಿದೆ? ಪ್ರಭಾವಿ ರಾಜಕಾರಣಿಗಳ ಕುಟುಂಬ ಸದಸ್ಯರನ್ನು ಬಿಟ್ಟುಕೊಡಲಾರದ ಪರಿಸ್ಥಿತಿಯಲ್ಲಿ ಹೇಗೆ ವಿವಿಧ ಪಕ್ಷಗಳು ಸಿಕ್ಕಿಹಾಕಿಕೊಂಡಿವೆ? ಇಂಥ ಒತ್ತಡ ಮತ್ತು ಒತ್ತಾಯಗಳು ತರಬಹುದಾದ ಪರಿಣಾಮ ಏನಿರಬಹುದು?

Update: 2024-03-26 06:27 GMT
Editor : Thouheed | Byline : ಆರ್.ಜೀವಿ

ಕರ್ನಾಟಕದಲ್ಲಿ ಕುಟುಂಬ ರಾಜಕಾರಣ ಎಂದೊಡನೆ ಸೀದಾ ಎಲ್ಲರ ಗಮನ ಹರಿಯುವುದು ದೇವೇಗೌಡರ ಕುಟುಂಬದ ಕಡೆಗೆ. ಅವರ ಪಕ್ಷವನ್ನು ಕೂಡ ಅಪ್ಪ ಮಕ್ಕಳ ಪಕ್ಷ ಎಂದೇ ಲೇವಡಿ ಮಾಡುತ್ತ ಬರಲಾಗಿದೆ. ಮೊದಲಾದರೆ ದೇವೇಗೌಡರು, ಅವರ ಮಕ್ಕಳಾದ ಕುಮಾರಸ್ವಾಮಿ ಮತ್ತು ರೇವಣ್ಣ ಈ ಮೂವರೇ ಮುಖ್ಯವಾಗಿದ್ದರು. ಈಗ ದೇವೇಗೌಡರ ಇಬ್ಬರು ಸೊಸೆಯಂದಿರು ಮತ್ತು ಇಬ್ಬರು ಮೊಮ್ಮಕ್ಕಳೂ ರಾಜಕಾರಣದಲ್ಲಿದ್ದಾರೆ. ಈ ಬಾರಿ ದೇವೇಗೌಡರ ಅಳಿಯ ಕೂಡ ರಾಜಕಾರಣಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಹೀಗೆ ಅವರ ಕುಟುಂಬ ರಾಜಕಾರಣದ ಕೊಂಬೆಗಳು ವಿಶಾಲವಾಗಿ ಚಾಚಿಕೊಳ್ಳುತ್ತಲೇ ಇವೆ.

ಹಾಗೆಂದು ಕುಟುಂಬ ರಾಜಕಾರಣವೆಂಬುದು ಕರ್ನಾಟಕದಲ್ಲಿ ಜೆಡಿಎಸ್‌ಗೆ ಮಾತ್ರ ಸೀಮಿತವಾಗಿದೆ ಎಂದೇನೂ ಅಲ್ಲ. ಆ ಪಕ್ಷಕ್ಕಿಂತಲೂ ಹೆಚ್ಚಾಗಿಯೇ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್‌ನಲ್ಲಿ ಕುಟುಂಬ ರಾಜಕಾರಣದ ನೆರಳು ಕಾಣಿಸಿಕೊಳ್ಳುತ್ತಿದೆ.

ಕರ್ನಾಟಕ ಬಿಜೆಪಿಯಲ್ಲಿ ಯಡಿಯೂರಪ್ಪ ಕುಟುಂಬದ ಹಿಡಿತ ಈಚಿನ ವರ್ಷಗಳಲ್ಲಂತೂ ತೀವ್ರವಾಗಿರುವುದು ಆ ಪಕ್ಷದವರಿಂದಲೇ ಭಾರೀ ಟೀಕೆಗೆ ಒಳಗಾಗುತ್ತಿರುವುದನ್ನೂ ಗಮನಿಸಬಹುದು. ಹಾಗೆಯೇ ಕಾಂಗ್ರೆಸ್‌ನಲ್ಲಿ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಎಂ.ಬಿ. ಪಾಟೀಲ್, ರಾಮಲಿಂಗಾರೆಡ್ಡಿ, ಶಾಮನೂರು ಹೀಗೆ ಕುಟುಂಬಗಳ ಹಿಡಿತವಿದೆ. ಅಷ್ಟಕ್ಕೇ ಸೀಮಿತವಾಗದೆ, ಜಾರಕಿಹೊಳಿ ಕುಟುಂಬ, ಲಕ್ಷ್ಮೀ ಹೆಬ್ಬಾಳ್ಕರ್ ಕುಟುಂಬ ಕೂಡ ಕಾಂಗ್ರೆಸ್‌ನೊಳಗೆ ಪ್ರಬಲವಾಗಿರುವುದನ್ನು ಗಮನಿಸಬಹುದು. ಮಕ್ಕಳು, ಸಹೋದರರು, ಸಹೋದರರ ಮಕ್ಕಳು, ಕಡೆಗೆ ಅಳಿಯಂದಿರು ಕೂಡ ಈ ವಿವಿಧ ಕುಟುಂಬಗಳಿಂದ ರಾಜಕೀಯಕ್ಕೆ ಬಂದಿದ್ದಾರೆ, ಬರುತ್ತಿದ್ದಾರೆ.

ಕುಟುಂಬ ರಾಜಕಾರಣದ ನೆರಳು ಈ ಸಲದ ಲೋಕಸಭಾ ಚುನಾವಣೆಯಲ್ಲಿಯೂ ದೊಡ್ಡ ಮಟ್ಟದಲ್ಲಿಯೇ ಕಾಣಿಸಿಕೊಂಡಿದೆ.

ಮೊದಲು ಈವರೆಗೆ ಘೋಷಣೆಯಾಗಿರುವ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ಗಮನಿಸೋಣ. ಬಿಜೆಪಿ ಕರ್ನಾಟಕದ 20 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಿದೆ. ಅವರಲ್ಲಿ ಕುಟುಂಬ ರಾಜಕಾರಣದ ಹಿನ್ನೆಲೆಯುಳ್ಳವರು,

ಬಿ.ವೈ. ರಾಘವೇಂದ್ರ-ಶಿವಮೊಗ್ಗ-ಯಡಿಯೂರಪ್ಪ ಪುತ್ರ.

ಅಣ್ಣಾಸಾಹೇಬ್ ಜೊಲ್ಲೆ-ಚಿಕ್ಕೋಡಿ-ಪತ್ನಿ ಶಶಿಕಲಾ ಜೊಲ್ಲೆ ಮಾಜಿ ಸಚಿವೆ.

ಉಮೇಶ್ ಜಿ. ಜಾಧವ್-ಕಲುಬುರಗಿ-ಪುತ್ರ ಅವಿನಾಶ್ ಜಾಧವ್ ಕೂಡ ರಾಜಕೀಯದಲ್ಲಿದ್ದಾರೆ

ಗಾಯತ್ರಿ ಸಿದ್ದೇಶ್ವರ್ ದಾವಣಗೆರೆ ಇವರ ಪತಿ ಜಿ.ಎಂ. ಸಿದ್ದೇಶ್ವರ್ ಸಂಸದರಾಗಿದ್ದರು. ಈ ಬಾರಿ ಅವರಿಗೆ ಟಿಕೆಟ್ ಕೈತಪ್ಪಿದರೂ ಪತ್ನಿಗೆ ಅವಕಾಶ ಸಿಗುವುದರೊಂದಿಗೆ ಕುಟುಂಬದ ಹಿಡಿತವೇ ಮುಂದುವರಿದಂತಾಗಿದೆ.

ಡಾ. ಸಿ.ಎನ್. ಮಂಜುನಾಥ್ - ಬೆಂಗಳೂರು ಗ್ರಾಮಾಂತರ-ದೇವೇಗೌಡರ ಅಳಿಯ. ಆದರೆ ಅವರ ರಾಜಕೀಯ ಪ್ರವೇಶ ಮಾತ್ರ ಬಿಜೆಪಿಯಿಂದ ಸ್ಪರ್ಧಿಸುವುದರೊಂದಿಗೆ ಆಗುತ್ತಿದೆ.

ತೇಜಸ್ವಿ ಸೂರ್ಯ-ಬೆಂಗಳೂರು ದಕ್ಷಿಣ-ಬಿಜೆಪಿ ನಾಯಕ ಎಲ್.ಎ. ರವಿ ಸುಬ್ರಹ್ಮಣ್ಯ ಅವರ ಅಣ್ಣನ ಮಗ. ಕಳೆದ ಬಾರಿ ದಿ. ಅನಂತ ಕುಮಾರ್ ಪತ್ನಿ ತೇಜಸ್ವಿನಿ ಟಿಕೆಟ್ ಆಕಾಂಕ್ಷಿಯಾಗಿದ್ದರೂ, ಕುಟುಂಬ ರಾಜಕಾರಣಕ್ಕೆ ಮಣೆ ಹಾಕುವುದಿಲ್ಲ ಎಂದು ಟಿಕೆಟ್ ನಿರಾಕರಿಸಲಾಯಿತು. ಆದರೆ ಕಡೆಗೆ ಬಿಜೆಪಿ ನಾಯಕನ ಸಂಬಂಧಿಗೇ ಟಿಕೆಟ್ ನೀಡಲಾಗಿತ್ತು. ಈಗ ಮತ್ತೆ ಅವಕಾಶ ಸಿಕ್ಕಿದೆ.

ಇನ್ನು ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ನೋಡಿದರೆ, ಅಲ್ಲಿ ಕುಟುಂಬ ರಾಜಕಾರಣಕ್ಕೆ ದೊಡ್ಡ ಪ್ರಮಾಣದಲ್ಲಿಯೇ ಮಣೆ ಹಾಕಿರುವುದು ಸ್ಪಷ್ಟವಾಗಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಹಂಚಿಕೆಯಲ್ಲಿ ಕುಟುಂಬದ ಬಲೆಯೊಳಗೆ ಸಿಲುಕಿಬಿಟ್ಟಿದೆ. ಸಚಿವರ ಮಕ್ಕಳು, ಪತ್ನಿ, ಸಂಬಂಧಿ, ಸಹೋದರರಿಗೆ ಟಿಕೆಟ್ ನೀಡಲಾಗಿರುವುದೇ ಜಾಸ್ತಿ. ಈಗಾಗಲೇ ಒಟ್ಟು 24 ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳ ಘೋಷಣೆಯಾಗಿದೆ.

ಐವರು ಸಚಿವರ ಮಕ್ಕಳಿಗೆ ಮಣೆ ಹಾಕಲಾಗಿದೆ. ಬೀದರ್‌ನಲ್ಲಿ ಸಚಿವ ಈಶ್ವರ್ ಖಂಡ್ರೆ ಪುತ್ರ ಸಾಗರ್ ಖಂಡ್ರೆ, ಬೆಳಗಾವಿಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಗ ಮೃಣಾಲ್ ಹೆಬ್ಬಾಳ್ಕರ್, ಚಿಕ್ಕೋಡಿಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ, ಬೆಂಗಳೂರು ದಕ್ಷಿಣದಲ್ಲಿ ಸಚಿವ ರಾಮಲಿಂಗಾರೆಡ್ಡಿ ಪುತ್ರಿ ಸೌಮ್ಯಾ ರೆಡ್ಡಿ, ಬಾಗಲಕೋಟೆಯಲ್ಲಿ ಸಚಿವ ಶಿವಾನಂದ ಪಾಟೀಲ್ ಪುತ್ರಿ ಸಂಯುಕ್ತಾ ಪಾಟೀಲ್ ಅವರಿಗೆ ಟಿಕೆಟ್ ನೀಡಲಾಗಿದೆ.

ಉಳಿದಂತೆ ಕುಟುಂಬ ರಾಜಕಾರಣದ ಹಿನ್ನೆಲೆಯಿರುವ ಅಭ್ಯರ್ಥಿಗಳೆಂದರೆ,

ಡಿ.ಕೆ. ಸುರೇಶ್-ಬೆಂಗಳೂರು ಗ್ರಾಮಾಂತರ-ಡಿಸಿಎಂ ಡಿ.ಕೆ. ಶಿವಕುಮಾರ್ ಸಹೋದರ.

ಡಾ. ರಾಧಾಕೃಷ್ಣ ದೊಡ್ಡಮನಿ-ಕಲಬುರಗಿ-ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಳಿಯ.

ರಾಜಶೇಖರ್ ಹಿಟ್ನಾಳ್-ಕೊಪ್ಪಳ-ಶಾಸಕ ರಾಘವೇಂದ್ರ ಹಿಟ್ನಾಳ್ ಸಹೋದರ.

ಪ್ರಭಾವತಿ ಮಲ್ಲಿಕಾರ್ಜುನ್ -ದಾವಣಗೆರೆ-ಶಾಮನೂರು ಶಿವಶಂಕರಪ್ಪ ಅವರ ಸೊಸೆ, ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಪತ್ನಿ.

ಮನ್ಸೂರ್ ಖಾನ್-ಬೆಂಗಳೂರು ಸೆಂಟ್ರಲ್-ಮಾಜಿ ಸಚಿವ ರೆಹಮಾನ್ ಖಾನ್ ಪುತ್ರ.

ಗೀತಾ ಶಿವರಾಜ್ ಕುಮಾರ್-ಶಿವಮೊಗ್ಗ-ಸಚಿವ ಮಧು ಬಂಗಾರಪ್ಪ ಸಹೋದರಿ.

ಶ್ರೇಯಸ್ ಪಟೇಲ್-ಹಾಸನ-ಮಾಜಿ ಸಂಸದ ದಿ. ಪುಟ್ಟಸ್ವಾಮಿಗೌಡರ ಮೊಮ್ಮಗ.

ವೆಂಕಟರಮಣೇಗೌಡ-ಮಂಡ್ಯ-ಪಕ್ಷೇತರ ಶಾಸಕ ಪುಟ್ಟಸ್ವಾಮಿ ಗೌಡ ಸಹೋದರ.

ಅಂದರೆ, ಟಿಕೆಟ್ ಘೋಷಣೆಯಾಗಿರುವ 24 ಕ್ಷೇತ್ರಗಳಲ್ಲಿ 13 ಕಡೆ ರಾಜಕಾರಣಿಗಳ ಕುಟುಂಬ ಸದಸ್ಯರೇ ಅಭ್ಯರ್ಥಿಗಳಾಗಿದ್ದಾರೆ.

ಹೀಗೆ ಕುಟುಂಬ ರಾಜಕಾರಣ ಎಂದೊಡನೆ ಜೆಡಿಎಸ್ ಅನ್ನೇ ಜರೆಯುತ್ತಿದ್ದ ಪಕ್ಷಗಳೆರಡೂ ಕುಟುಂಬ ರಾಜಕಾರಣವನ್ನು ಮೀರಲಾರದ ಸ್ಥಿತಿಯಲ್ಲಿವೆ ಅಥವಾ ಅದಕ್ಕಿಂತ ಹೆಚ್ಚಾಗಿ ಕುಟುಂಬ ರಾಜಕಾರಣಕ್ಕೇ ಮಣೆ ಹಾಕುತ್ತಿವೆ.

ಬಿಜೆಪಿಯಲ್ಲೂ ಕುಟುಂಬ ರಾಜಕಾರಣದ ವಿಚಾರವಾಗಿ ಆ ಪಕ್ಷದ ನಾಯಕರೇ ರೋಸಿಹೋಗತೊಡಗಿದ್ದಾರೆ. ಅದರಲ್ಲೂ ಈಶ್ವರಪ್ಪ, ಸದಾನಂದಗೌಡ ಸೇರಿದಂತೆ ಹಲವು ನಾಯಕರು ಬಿಎಸ್‌ವೈ ಕುಟುಂಬ ರಾಜಕಾರಣವನ್ನು ಬಹಿರಂಗವಾಗಿಯೇ ಟೀಕಿಸುತ್ತಿದ್ದಾರೆ. ಅಲ್ಲಿ ಕುಟುಂಬ ರಾಜಕಾರಣ ವಿಚಾರ ತೀವ್ರ ಚರ್ಚೆಗೆ ಒಳಗಾಗಿರುವುದು ಯಡಿಯೂರಪ್ಪ ಪುತ್ರ ವಿಜಯೇಂದ್ರಗೆ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ ಕೊಟ್ಟ ಬಳಿಕ. ಯಡಿಯೂರಪ್ಪ ಕುಟುಂಬವನ್ನು ಸದಾ ಕೆಣಕುತ್ತಲೇ ಇರುವ ಬಿಜೆಪಿಯ ಮತ್ತೊಬ್ಬ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅಂತೂ ಈ ಚುನಾವಣೆ ಬಳಿಕ ವಂಶಪಾರಂಪರ್ಯ ರಾಜಕಾರಣ, ಭ್ರಷ್ಟಾಚಾರ, ಹೊಂದಾಣಿಕೆ ರಾಜಕಾರಣ ಅಂತ್ಯವಾಗಲಿದೆ. ಜೂನ್-ಜುಲೈವರೆಗೆ ಕಾದು ನೋಡಿ. ಜುಲೈನಲ್ಲಿ ಬಿಜೆಪಿಯಲ್ಲಿ ಹೊಸ ಯುಗ ಆರಂಭವಾಗಲಿದೆ ಎಂದಿದ್ದಾರೆ. ಯಡಿಯೂರಪ್ಪ ಮೇಲೆ ಸಿಟ್ಟಾಗಿರುವ ಈಶ್ವರಪ್ಪ ಕೂಡ, ಚುನಾವಣೆ ನಂತರ ವಿಜಯೇಂದ್ರ ಪಕ್ಷದ ರಾಜ್ಯಾಧ್ಯಕ್ಷ ಹುದ್ದೆ ಕಳೆದುಕೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.

ಬಿಜೆಪಿ ತಾನು ಸದಾ ಕುಟುಂಬ ರಾಜಕಾರಣದ ವಿರುದ್ಧ ಇರುವ ಪಕ್ಷ ಎಂದು ಹೇಳಿಕೊಳ್ಳುತ್ತಿದೆ. ಕುಟುಂಬ ರಾಜಕಾರಣವನ್ನು ತಮ್ಮ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಪದೇ ಪದೇ ಉಲ್ಲೇಖ ಮಾಡುತ್ತಾರೆ. ಅದರಲ್ಲೂ ಕಾಂಗ್ರೆಸ್ ಅನ್ನು ಆಡಿಕೊಳ್ಳುವುದಕ್ಕೆ ಅವರು ಕುಟುಂಬ ರಾಜಕಾರಣ ವಿಚಾರವನ್ನು ಎಳೆದು ತರುತ್ತಾರೆ. ಆದರೆ ಬಿಜೆಪಿಯಲ್ಲಿ ರಾಜ್ಯ ಮಾತ್ರವಲ್ಲ ರಾಷ್ಟ್ರ ಮಟ್ಟದಲ್ಲೂ ಕುಟುಂಬ ರಾಜಕಾರಣದ ಹಿಡಿತ ಸಾಕಷ್ಟು ಇದೆ.

ಕಾಂಗ್ರೆಸ್ ನಾಯಕರು ಈಗ ಇದೇ ವಿಚಾರವನ್ನು ಮುಂದಿಟ್ಟುಕೊಂಡು ಬಿಜೆಪಿಯನ್ನು ಟೀಕೆ ಮಾಡುತ್ತಿದ್ದಾರೆ. ‘‘ಹಿಪಾಕ್ರಸಿಗೆ ಮತ್ತೊಂದು ಹೆಸರೇ ಮೋದಿ. ಶಿವಮೊಗ್ಗದಲ್ಲಿ ವೇದಿಕೆ ಮೇಲೆ ಯಡಿಯೂರಪ್ಪರನ್ನು ಕೂರಿಸಿಕೊಂಡು, ಆ ಕಡೆ ಅಭ್ಯರ್ಥಿಯಾಗಿರುವ ದೊಡ್ಡ ಮಗ, ಈ ಕಡೆ ರಾಜ್ಯಾಧ್ಯಕ್ಷನಾದ ಚಿಕ್ಕ ಮಗನನ್ನು ಕೂರಿಸಿಕೊಂಡಿದ್ದ ಮೋದಿ ಅವರೇ ನಿಮ್ಮ ಡೋಂಗಿತನ ಬಯಲಾಗಿದೆ. ನಿಮ್ಮ ಟೆಲಿಪ್ರಾಂಪ್ಟರ್‌ನಿಂದ ಕುಟುಂಬ ರಾಜಕೀಯ ಎಂಬ ಪದವನ್ನು ಅಳಿಸಿಬಿಡಿ’’ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ. ‘‘ಮೋದಿ ಅವರೇ, ರಾಜ್ಯ ಬಿಜೆಪಿಗೆ ಬಿಎಸ್‌ವೈ ಸನ್ಸ್ ಪಾರ್ಟಿ ಎಂದು ನಾಮಕರಣ ಮಾಡಿಬಿಡಿ’’ ಎಂದೂ ಕಾಂಗ್ರೆಸ್ ಟೀಕಿಸಿದೆ. ಆದರೆ, ಈಗ ತನ್ನ ಅಭ್ಯರ್ಥಿಗಳ ಪಟ್ಟಿಯ ಮೂಲಕ ಕಾಂಗ್ರೆಸ್ ಕೂಡ, ಕುಟುಂಬ ರಾಜಕಾರಣದ ಒತ್ತಾಯವನ್ನು ಮೀರಲಾಗದ ಅವಸ್ಥೆಯನ್ನು ತೋರಿಸಿಕೊಂಡಂತಾಗಿದೆ.

ಇಲ್ಲೊಂದು ವ್ಯಂಗ್ಯವೆಂದರೆ, ಕುಟುಂಬ ರಾಜಕಾರಣದ ಹಣೆಪಟ್ಟಿಯನ್ನು ಅದೇ ಅದರ ವಿಶೇಷತೆ ಎಂಬಂತೆ ಹೊತ್ತುಕೊಂಡಿರುವ ಜೆಡಿಎಸ್ ಈ ಬಾರಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಬಹುಶಃ ಎರಡೇ ಸೀಟುಗಳಲ್ಲಿ ಕಣಕ್ಕಿಳಿಯುವ ಸ್ಥಿತಿಗೆ ಬಂದು ಮುಟ್ಟಿದೆ. ಆ ಎರಡರಲ್ಲಿ ಒಂದೆಡೆ ಕುಮಾರಸ್ವಾಮಿಯವರ ಪುತ್ರ ನಿಖಿಲ್ ಕುಮಾರಸ್ವಾಮಿ ಕಣಕ್ಕಿಳಿಯುವ ಸುದ್ದಿಯಿದೆ. ಇನ್ನೊಂದು ಕ್ಷೇತ್ರದಲ್ಲಿ ರೇವಣ್ಣನವರ ಪುತ್ರ ಪ್ರಜ್ವಲ್ ರೇವಣ್ಣ ಸ್ಪರ್ಧೆಗೆ ಮೈತ್ರಿ ಪಕ್ಷ ಬಿಜೆಪಿಯ ನಾಯಕರಿಂದಲೇ ವಿರೋಧ ವ್ಯಕ್ತವಾಗುತ್ತಿದೆ. ಅದೇನೇ ಇದ್ದರೂ, ದೇವೇಗೌಡರ ಮೊಮ್ಮಕ್ಕಳನ್ನು ಗೆಲ್ಲಿಸಲು ಜೆಡಿಎಸ್ ಕಾರ್ಯಕರ್ತರು ಬೆವರಿಳಿಸಬೇಕಿದೆ.

ಕರ್ನಾಟಕದಲ್ಲಿ ಜೆಡಿಎಸ್ ವಿರುದ್ಧ ಕುಟುಂಬ ರಾಜಕಾರಣದ ಆರೋಪ ಕೇಳಿಬರುತ್ತಿತ್ತು. ಆದರೆ, ಹಾಗೆ ಆರೋಪ ಮಾಡುವ ಇತರ ಪಕ್ಷಗಳು ಅದೇ ಹಾದಿಯಲ್ಲಿಯೇ ಸಾಗಿವೆ. ರಾಜ್ಯ ರಾಜಕಾರಣದಲ್ಲಿ ವಂಶಪಾರಂಪರ್ಯ ರಾಜಕಾರಣ ಬೆಳೆಯುತ್ತಲೇ ಇದೆ. ಕಾರ್ಯಕರ್ತರು ಹಗಲು ರಾತ್ರಿ ದುಡಿಯುವುದು, ಕುಟುಂಬ ರಾಜಕಾರಣದ ಕುಡಿಗಳು ದಿಢೀರನೆ ಬಂದು ಅಧಿಕಾರ ಅನುಭವಿಸುವುದು - ಈ ಕೆಟ್ಟ ಸಂಪ್ರದಾಯಕ್ಕೆ ಕೊನೆ ಯಾವಾಗ?

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಆರ್.ಜೀವಿ

contributor

Similar News