ಕಳೆದ 10 ವರ್ಷಗಳಲ್ಲಿ ರೈತರಿಗಾಗಿ ಮೋದಿ ಸರಕಾರ ಮಾಡಿದ್ದೇನು?

2014ರಲ್ಲಿ ಅಧಿಕಾರಕ್ಕೆ ಬರುವಾಗ ರೈತರ ಮುಂದೆ ನಿಂತು ಮೋದಿ ಕೊಟ್ಟಿದ್ದ ಭರವಸೆಗಳು ಏನೇನಿದ್ದವು ಮತ್ತು ಈ 10 ವರ್ಷಗಳಲ್ಲಿ ರೈತರ ವಿಷಯದಲ್ಲಿ ಆದದ್ದೇನು? ಮೋದಿ ಸರಕಾರದ ಅವಧಿಯಲ್ಲಿ ಒಮ್ಮೆ ವರ್ಷಕ್ಕೂ ಹೆಚ್ಚು ಕಾಲ ಪ್ರತಿಭಟನೆ ಮಾಡಿದ್ದ ರೈತರು ಈಗ ಮತ್ತೊಮ್ಮೆ ಅಂಥದೇ ಹೋರಾಟಕ್ಕೆ ಇಳಿದಿದ್ದಾರೆ. ರೈತರಿಗಾಗಿ ಮೋದಿ ಸರಕಾರ ಏನನ್ನೂ ಮಾಡಿಲ್ಲ ಎನ್ನುವುದಕ್ಕೆ ರೈತರ ಈ ಆಂದೋಲನವೇ ಸಾಕ್ಷಿಯಲ್ಲವೆ?

Update: 2024-02-20 06:31 GMT
Editor : Thouheed | Byline : ಆರ್.ಜೀವಿ

ರೈತರು ಮತ್ತೊಮ್ಮೆ ಪ್ರತಿಭಟನೆಗೆ ಇಳಿದಿದ್ದಾರೆ. 2021ರ ನವೆಂಬರ್‌ನಲ್ಲಿ ಕೃಷಿ ಕಾನೂನುಗಳನ್ನು ರದ್ದುಗೊಳಿಸಿದಾಗ ನೀಡಿದ್ದ ಭರವಸೆಗಳನ್ನು ಈಡೇರಿಸಲು ಮೋದಿ ಸರಕಾರ ವಿಫಲವಾಗಿರುವುದೇ ರೈತರ ಈ ಮತ್ತೊಂದು ಹೋರಾಟದ ಹಿನ್ನೆಲೆ.

ರೈತರು ಈಗ ಇಟ್ಟಿರುವ 12 ಬೇಡಿಕೆಗಳಲ್ಲಿ ಅತಿ ಪ್ರಮುಖ ವಾಗಿರುವುದು ಎಂಎಸ್‌ಪಿ ಅಥವಾ ಕನಿಷ್ಠ ಬೆಂಬಲ ಬೆಲೆಗೆ ಎಂಎಸ್ ಸ್ವಾಮಿನಾಥನ್ ಸೂತ್ರದನ್ವಯ ಕಾನೂನು ಖಾತರಿ ನೀಡಬೇಕೆಂಬು ದಾಗಿದೆ. ಇತರೆಲ್ಲ ವಿಚಾರಗಳಲ್ಲಿನಂತೆ ಎಂಎಸ್‌ಪಿ ವಿಚಾರದಲ್ಲಿಯೂ ಮೋದಿ ಸರಕಾರ ಸುಳ್ಳುಗಳನ್ನೇ ಹೇಳುತ್ತಿದೆ ಎಂಬುದು ಆರೋಪ ಮಾತ್ರವಲ್ಲ, ಅಂಕಿಅಂಶಗಳ ಮೂಲಕ ಕಣ್ಣಿಗೆ ರಾಚುತ್ತಿರುವ ವಾಸ್ತವವೂ ಹೌದು.

ಅದರ ವಿವರಗಳಿಗೆ ಹೋಗುವ ಮೊದಲು, 2014ರಲ್ಲಿ ಅಧಿಕಾರಕ್ಕೆ ಬರುವ ಹೊತ್ತಲ್ಲಿ ಮೋದಿ ಸರಕಾರ ರೈತರಿಗೆ ಏನೇನು ಭರವಸೆಗಳನ್ನು ನೀಡಿತ್ತು ಎಂಬುದನ್ನು ಗಮನಿಸಬೇಕಿದೆ. ಅತ್ಯಂತ ಪ್ರಮುಖವಾದವುಗಳನ್ನು ನೋಡುವುದಾದರೆ,

ಮೊದಲನೆಯದಾಗಿ, 2022ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವುದು. ಹಾಗೆ ಭರವಸೆ ಕೊಟ್ಟು ಬಿಜೆಪಿ ಅಧಿಕಾರಕ್ಕೇರಿದ ಮೇಲೆ, 2018ರ ಅಕ್ಟೋಬರ್‌ನಿಂದ ಡಿಸೆಂಬರ್ ವರೆಗಿನ ತ್ರೈಮಾಸಿಕದಲ್ಲಿ ಕೃಷಿ ಆದಾಯದ ಬೆಳವಣಿಗೆ 14 ವರ್ಷಗಳಲ್ಲೇ ಅತ್ಯಂತ ಕಡಿಮೆಯಾಗಿದ್ದುದರ ಬಗ್ಗೆ ಪತ್ರಿಕೆಗಳು ವರದಿ ಮಾಡಿದ್ದವು. ಈ ನಡುವೆ 2016ರ ಫೆಬ್ರವರಿಯಲ್ಲಿ ವಾರ್ಷಿಕ ಬಜೆಟ್‌ಗೆ ಮೊದಲು ಕೂಡ ಮೋದಿ ಆ ಭರವಸೆ ಬಗ್ಗೆ ಮತ್ತೆ ಹೇಳಿದ್ದರು. ಬಿಜೆಪಿಯ 2019ರ ಚುನಾವಣಾ ಪ್ರಣಾಳಿಕೆಯಲ್ಲಿ ಮತ್ತೊಮ್ಮೆ ಅದೇ ಭರವಸೆ ಇತ್ತು. ನಗದು ವರ್ಗಾವಣೆ ಯೋಜನೆಗಳಿಂದ ಸಾಂಸ್ಥಿಕ ಸುಧಾರಣೆಗಳವರೆಗೆ ಹಲವಾರು ಕ್ರಮಗಳನ್ನು ಆ ಪ್ರಣಾಳಿಕೆಯಲ್ಲಿ ಅದು ಘೋಷಿಸಿತ್ತು. ಅದಾಗಿ ಐದು ವರ್ಷಗಳ ನಂತರದ ಅಂಕಿಅಂಶಗಳನ್ನು ಗಮನಿಸಿದರೆ, ಆ ಭರವಸೆ ಈಡೇರಿಲ್ಲ ಎಂಬುದು ಗೊತ್ತಾಗುತ್ತದೆ. ವಿಪರ್ಯಾಸವೆಂದರೆ, ಮೋದಿ ಸರಕಾರದ ಅಡಿಯಲ್ಲಿ ರೈತರ ಆದಾಯ ಇನ್ನಷ್ಟು ಕುಸಿದಿದೆ.

ಗುರಿ ಸಾಧಿಸಲು ಮಾರ್ಗಸೂಚಿ ರೂಪಿಸುವುದಕ್ಕಾಗಿ 2016ರಲ್ಲಿ ರಚಿಸಲಾದ ಸರಕಾರಿ ಸಮಿತಿ 2012-13ರ ರಾಷ್ಟ್ರೀಯ ಮಾದರಿ ಸಮೀಕ್ಷೆಯ ಅಂಕಿಅಂಶಗಳನ್ನು ಬಳಸಿಕೊಂಡಿತ್ತು. ಆ ಅಂಕಿಅಂಶಗಳ ಪ್ರಕಾರ, ದೇಶದ ರೈತರ ರಾಷ್ಟ್ರೀಯ ಸರಾಸರಿ ವಾರ್ಷಿಕ ಆದಾಯ 2015-16ರಲ್ಲಿ 96,703 ರೂ. ಆಗಿತ್ತು. ಅದರ ಆಧಾರದ ಮೇಲೆ ಸಮಿತಿ ನಿಗದಿಪಡಿಸಿದ ಗುರಿಯಂತೆ, ದ್ವಿಗುಣ ಆದಾಯ 2015-16ಕ್ಕೆ ಅಂದಿನ ಸ್ಥಿರ ಬೆಲೆಯಂತೆ 1,92,694 ರೂ. ಹಾಗೂ 2022-23ರಲ್ಲಿ ಈಗಿನ ಬೆಲೆಯಂತೆ 2,71,378 ರೂ. ಆಗಬೇಕು. ಆ ಮಟ್ಟದ ಆದಾಯ ಪಡೆಯಲು ಮುಂದಿನ ಏಳು ವರ್ಷಗಳಲ್ಲಿ ಕೃಷಿ ಆದಾಯ ವಾರ್ಷಿಕವಾಗಿ ಶೇ.10.4ರಷ್ಟು ಹೆಚ್ಚಬೇಕಿದೆ ಎಂದು ಸಮಿತಿ ಲೆಕ್ಕಾಚಾರ ಹಾಕಿದೆ.

2021ರಲ್ಲಿ ಬಿಡುಗಡೆಯಾದ ಕೊನೆಯ ಸಾಂದರ್ಭಿಕ ಸಮೀಕ್ಷೆಯ ಮಾಹಿತಿಯ ಪ್ರಕಾರ, ಕೃಷಿ ಕುಟುಂಬಗಳ ಸರಾಸರಿ ವಾರ್ಷಿಕ ಆದಾಯ 2015-16ರಲ್ಲಿ 96,703 ರೂ. ಇದ್ದದ್ದು 2018-19ರಲ್ಲಿ 1,22,616 ರೂ.ಗೆ ಏರಿದೆ. ಅಂದರೆ, ರೈತರ ಆದಾಯದಲ್ಲಿ ವಾರ್ಷಿಕ ಬೆಳವಣಿಗೆ ಕೇವಲ ಶೇ.2.8ರಷ್ಟು. 2002-2003 ಮತ್ತು 2012-13ರ ಅವಧಿಯಲ್ಲಿ ಶೇ.3ಕ್ಕಿಂತ ಕಡಿಮೆ ಏರಿಕೆಯಾಗಿದೆ. ಇದು ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ಅವಧಿಯಲ್ಲಿನ ದರಕ್ಕೆ ಸರಿಸುಮಾರು ಹೋಲಿಕೆಯಾಗುತ್ತದೆ.

ಗಮನಿಸಬೇಕಿರುವ ಸಂಗತಿಯೆಂದರೆ, 2015-16ರ ಅವಧಿಯಿಂದ ಬೆಳೆಯಿಂದ ಬರುವ ಆದಾಯ ವಾರ್ಷಿಕವಾಗಿ ಶೇ.1.5ರಷ್ಟು ಕುಸಿದಿರುವುದರಿಂದ ರೈತರ ವಾರ್ಷಿಕ ಆದಾಯದಲ್ಲಿನ ಏರಿಕೆ ಕೂಡ ಕೃಷಿಯೇತರ ಆದಾಯದಿಂದ ಬಂದಿರುವುದಾಗಿದೆ. ರೈತರ ಆದಾಯ ದ್ವಿಗುಣಗೊಳಿಸುವ ವಿಚಾರದಲ್ಲಿನ ಪ್ರಗತಿ ಏನು ಎಂಬ ಪ್ರಶ್ನೆ ಎದುರಾದರೆ ಕೇಂದ್ರ ಸರಕಾರ ಅದನ್ನು ಈಗ ರಾಜ್ಯ ಸರಕಾರಗಳ ತಲೆಗೆ ಕಟ್ಟುತ್ತಿದೆ.

ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿಯಲ್ಲಿ ಸಾರ್ವಜನಿಕ ಹೂಡಿಕೆಯನ್ನು ಹೆಚ್ಚಿಸುವುದು ಮೋದಿ ಕೊಟ್ಟಿದ್ದ ಮತ್ತೊಂದು ಭರವಸೆಯಾಗಿತ್ತು. ತಮಾಷೆಯೆಂದರೆ, 1980-81ರಲ್ಲಿ ಕೃಷಿಯಲ್ಲಿ ಶೇ.43.2ರಷ್ಟಿದ್ದ ಸರಕಾರದ ಹೂಡಿಕೆ ಮೋದಿ ಸರಕಾರ ಬಂದ ಮೇಲೆ 2016-17ರಲ್ಲಿ ಶೇ.18.8ಕ್ಕೆ ಇಳಿದಿತ್ತು.

ಅನಿರೀಕ್ಷಿತ ಪ್ರಾಕೃತಿಕ ವಿಕೋಪಗಳಿಂದಾಗುವ ಬೆಳೆ ನಷ್ಟ ನೀಗಿಸಲು ಕೃಷಿ ವಿಮಾ ಯೋಜನೆ ಜಾರಿಗೊಳಿಸುವ ಭರವಸೆ ನೀಡಲಾಗಿತ್ತು. ಆದರೆ ಅದಕ್ಕಾಗಿ ತಂದ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಅಸ್ತಿತ್ವದಲ್ಲಿರುವ ಹಲವಾರು ಯೋಜನೆಗಳನ್ನು ಇಲ್ಲವಾಗಿಸಿತು. ಖಾಸಗಿಯವರು ಬೆಳೆ ವಿಮಾ ಕ್ಷೇತ್ರ ಪ್ರವೇಶಿಸಲು ಅವಕಾಶ ಮಾಡಿಕೊಡಲಾಯಿತು.

ಕೃಷಿ ಯೋಜನೆಗಳಲ್ಲಿ ಮೋದಿ ಸರಕಾರದ ಪ್ರಮುಖ ಯೋಜನೆಯೆಂದರೆ, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ. 2019ರಲ್ಲಿ ಪ್ರಾರಂಭವಾದ ಈ ನಗದು ವರ್ಗಾವಣೆ ಯೋಜನೆಯು ಪ್ರಸಕ್ತ ಈ ವಲಯಕ್ಕೆ ಕೇಂದ್ರ ಬಜೆಟ್‌ನ ಸುಮಾರು ಅರ್ಧದಷ್ಟು ಭಾಗವನ್ನು ಹೊಂದಿದೆ. ಕಳೆದ ಡಿಸೆಂಬರ್ ನಲ್ಲಿ ಸಂಸತ್ತಿನಲ್ಲಿ ಸರಕಾರ ಒದಗಿಸಿದ ಮಾಹಿತಿಯ ಪ್ರಕಾರ, ಯೋಜನೆ ಪ್ರಾರಂಭವಾದಾಗಿನಿಂದ 11 ಕೋಟಿ ರೈತರಿಗೆ ಇದರ ಪ್ರಯೋಜನ ಸಿಕ್ಕಿದೆ. ಹಾಗಿದ್ದೂ, ಭಾರತದ ಕೃಷಿ ಕಾರ್ಮಿಕರಲ್ಲಿ ಕನಿಷ್ಠ ಶೇ.55ರಷ್ಟಿರುವ ಭೂರಹಿತ ರೈತರು ಈ ಯೋಜನೆಯ ವ್ಯಾಪ್ತಿಗೆ ಬರುವುದಿಲ್ಲ.

ಇನ್ನು, ಬಹಳ ಪ್ರಮುಖವಾಗಿರುವುದು ಎಂಎಸ್‌ಪಿ. ಈಗ ಮತ್ತೊಮ್ಮೆ ಹೋರಾಟಕ್ಕೆ ಇಳಿದಿರುವ ರೈತರ ಪ್ರಮುಖ ಬೇಡಿಕೆಯೂ ಇದೇ ಆಗಿದೆ.

2014ರ ಚುನಾವಣೆ ಹೊತ್ತಲ್ಲಿ ಮೋದಿ ರ್ಯಾಲಿಗಳಲ್ಲೆಲ್ಲ ಹೊಸ ಎಂಎಸ್‌ಪಿ ಬಗ್ಗೆ ಹೇಳಿದ್ದೇ ಹೇಳಿದ್ದು. ಎಂಎಸ್‌ಪಿಗೆ ಹೊಸ ಸೂತ್ರ ತರುತ್ತಿದ್ದೇವೆ. ಸಂಪೂರ್ಣ ಉತ್ಪಾದನಾ ವೆಚ್ಚ ಮತ್ತು ಲಾಭದ ಶೇ.50ರಷ್ಟು ಅದರಲ್ಲಿರಲಿದೆ. ರೈತರನ್ನು ಲೂಟಿ ಮಾಡಲು ಯಾರಿಗೂ ಅವಕಾಶ ಇರುವುದಿಲ್ಲ ಎಂದಿದ್ದರು. ಬೀಜ, ನೀರಾವರಿ, ವಿದ್ಯುತ್, ಕೃಷಿ ಉಪಕರಣಗಳು, ಔಷಧಿಗಳು, ರಸಗೊಬ್ಬರಗಳು ಮತ್ತು ರೈತರು ಮಾಡಿದ ಇತರ ಎಲ್ಲ ಖರ್ಚನ್ನು ಲೆಕ್ಕಕ್ಕೆ ತೆಗೆದುಕೊಳ್ಳುತ್ತೇವೆ. ಅದರ ಜೊತೆಗೆ ಶೇ.50ರಷ್ಟು ಲಾಭವನ್ನು ಸೇರಿಸುತ್ತೇವೆ. ಆದ್ದರಿಂದ, 100 ರೂ. ವೆಚ್ಚವಾಗಿದ್ದಲ್ಲಿ ಎಂಎಸ್‌ಪಿ 150 ರೂ. ಆಗಿರುತ್ತದೆ ಎಂದಿದ್ದರು.

2018-19ರ ಬಜೆಟ್‌ನಲ್ಲಿ ಎಂಎಸ್‌ಪಿಯನ್ನು ಉತ್ಪಾದನಾ ವೆಚ್ಚದ ಒಂದೂವರೆ ಪಟ್ಟು ಹೆಚ್ಚಿಸಲಾಗುವುದು ಎಂದು ಆಗಿನ ಹಣಕಾಸು ಸಚಿವ ಅರುಣ್ ಜೇಟ್ಲಿ ಘೋಷಿಸಿದ್ದರು. ಆದರೂ ಏರಿಸಲಾದ ಎಂಎಸ್‌ಪಿ ಕುಟುಂಬ ಕಾರ್ಮಿಕ ಮೌಲ್ಯ ಮತ್ತು ಕೃಷಿ ಬಂಡವಾಳವನ್ನು ಮಾತ್ರ ಲೆಕ್ಕಹಾಕುವ ಸೂತ್ರವಾದ A2+FL  ಅನ್ವಯ ಇತ್ತು.

ಸ್ವಾಮಿನಾಥನ್ ಆಯೋಗದ ಶಿಫಾರಸು ಕೂಡ, ಉತ್ಪಾದನೆಯ ಸರಾಸರಿ ವೆಚ್ಚಕ್ಕಿಂತ ಕನಿಷ್ಠ ಶೇ. 50ರಷ್ಟು ಹೆಚ್ಚು ಎಂಎಸ್‌ಪಿ ಇರಬೇಕು ಎಂದಾಗಿತ್ತು. ಅದನ್ನು ಸಿ2+50 ಪರ್ಸೆಂಟ್ ಸೂತ್ರ ಎಂದೇ ಕರೆಯಲಾಗುತ್ತದೆ. ಅದರಲ್ಲಿ ಬಂಡವಾಳದ ಹೂಡಿಕೆ ವೆಚ್ಚ, ಭೂಮಿಯ ಬಾಡಿಗೆ ವೆಚ್ಚ, ರೈತರಿಗೆ ಆದಾಯದ ಶೇ. 50ರಷ್ಟನ್ನು ನೀಡುವುದು ಸೇರುತ್ತದೆ.

ಆದರೆ 2007ರಲ್ಲಿ ಆಗಿನ ಯುಪಿಎ ಸರಕಾರ ಸ್ವಾಮಿನಾಥನ್ ಆಯೋಗದ ಶಿಫಾರಸಿನ ಅನ್ಯಯ ಎಂಎಸ್‌ಪಿ ಜಾರಿ ಸಾಧ್ಯವಿಲ್ಲ ಎಂದುಬಿಟ್ಟಿತ್ತು. ಆನಂತರ, ಈಗ 10 ವರ್ಷಗಳಿಂದ ಅಧಿಕಾರದಲ್ಲಿರುವ ಮೋದಿ ಸರಕಾರವೂ ಅದರ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ.

ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ಅವಧಿಗೆ ಹೋಲಿಸಿದರೆ ಕಳೆದ ದಶಕದಲ್ಲಿ ಎಂಎಸ್‌ಪಿ ಹೆಚ್ಚಳ ಅತ್ಯಂತ ನಿಧಾನ ಗತಿಯಲ್ಲಿದೆ ಎಂಬುದನ್ನು ಸರಕಾರದ ಅಂಕಿಅಂಶಗಳೇ ತೋರಿಸುತ್ತವೆ. 2003-4ರಲ್ಲಿ ಗೋದಿಗೆ ಎಂಎಸ್‌ಪಿ 630 ರೂ. ಇತ್ತು. 2013-14ರಲ್ಲಿ ಗೋಧಿಗೆ ಕ್ವಿಂಟಲ್‌ಗೆ ಎಂಎಸ್‌ಪಿ 1,400 ರೂ. ಇತ್ತು. ಅಂದರೆ, 2003ರಿಂದ 2014ರವರೆಗೆ 10 ವರ್ಷಗಳಲ್ಲಿ ಯುಪಿಎ ಸರಕಾರದ ಅವಧಿಯಲ್ಲಿ ಎಂಎಸ್‌ಪಿ ಶೇ.122ರಷ್ಟು ಹೆಚ್ಚಳ ಕಂಡಿತ್ತು. ಈಗ ಎನ್‌ಡಿಎ ಸರಕಾರದ 10 ವರ್ಷಗಳಲ್ಲಿ ಪ್ರತೀ ಕ್ವಿಂಟಲ್‌ಗೆ ಎಂಎಸ್‌ಪಿ ಅವತ್ತು 1,400 ಇದ್ದದ್ದು 2,275 ಆಗಿದೆ. ಅಂದರೆ 2014ರಿಂದ 2024ರ ಅವಧಿಯಲ್ಲಿ ಎಂಎಸ್‌ಪಿ ಏರಿಕೆ ಶೇ.63 ಮಾತ್ರ. ಯುಪಿಎ ಕಾಲದ 10 ವರ್ಷಗಳಲ್ಲಿ ಶೇ. 122 ಏರಿಕೆ ಕಂಡಿದ್ದ ಎಂಎಸ್‌ಪಿ, ಮೋದಿ ಕಾಲದ 10 ವರ್ಷಗಳಲ್ಲಿ ಹೆಚ್ಚಳವಾಗಿರುವುದು ಶೇ.63ರಷ್ಟು ಮಾತ್ರ. ಹಾಗಾದರೆ ಮೋದಿ ಸರಕಾರ ಹೇಳಿಕೊಳ್ಳುತ್ತಿರುವ ಹೆಚ್ಚಳ ಯಾವುದು ಮತ್ತು ಎಲ್ಲಿದೆ?

ಇನ್ನು, ಎಂಎಸ್‌ಪಿಗೆ ಕಾನೂನು ಖಾತರಿ ಘೋಷಿಸಲು ಸರಕಾರ ಹಿಂಜರಿಯುತ್ತಿರುವುದೇಕೆ? ಸ್ವಾಮಿನಾಥನ್ ಸೂತ್ರದನ್ವಯ ಎಂಎಸ್‌ಪಿ ಹೆಚ್ಚಿಸುವುದಾದರೆ, ವಾರ್ಷಿಕ ಕನಿಷ್ಠ 10 ಲಕ್ಷ ಕೋಟಿ ಹೆಚ್ಚುವರಿಯಾಗಿ ಭರಿಸಬೇಕಾಗುತ್ತದೆ ಎಂಬುದು ಪರಿಣಿತರ ಅಂದಾಜು. ಆದರೆ ನೇರವಾಗಿ ಯಾವುದೇ ಪಕ್ಷ ಅಥವಾ ಸರಕಾರ ಎಂಎಸ್‌ಪಿ ಕಾನೂನು ಖಾತರಿಯನ್ನು ನಿರಾಕರಿಸುವ ಸ್ಥಿತಿಯಲ್ಲಿಲ್ಲ. ಅದನ್ನು ರೈತರ ಬಹಳ ದೊಡ್ಡ ಮಟ್ಟದ ರಾಜಕೀಯ ಬೆಂಬಲ ಪಡೆಯಲು ಬಳಸುವ ಪಕ್ಷಗಳು ಅದನ್ನು ಹಿಂದೆಗೆದುಕೊಳ್ಳುವ ಸಾಧ್ಯತೆಯಿಲ್ಲ ಎಂದು ತಜ್ಞರು ಹೇಳುತ್ತಾರೆ. ಅಧಿಕಾರಕ್ಕೆ ಬಂದರೆ, ಸ್ವಾಮಿನಾಥನ್ ಸಮಿತಿಯ ಶಿಫಾರಸಿನಂತೆಯೇ ಎಂಎಸ್‌ಪಿ ಹೆಚ್ಚಿಸುವ ಭರವಸೆಯನ್ನು ಕಾಂಗ್ರೆಸ್ ಕೂಡ ಈಗ ನೀಡುತ್ತಿದೆ. ಆದರೆ ಸ್ವಾಮಿನಾಥನ್ ಆಯೋಗದ ಹಲವು ಶಿಫಾರಸುಗಳನ್ನು ಜಾರಿಗೆ ತಂದಿದ್ದರೂ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಎಂಎಸ್‌ಪಿಯನ್ನು ಮಾತ್ರ ಮುಟ್ಟಲೇ ಹೋಗಿರಲಿಲ್ಲ ಎಂಬುದು ಕೂಡ ವಿಪರ್ಯಾಸವಾಗಿ ನಮ್ಮೆದುರು ಇದೆ. ಇದು ತುಂಬಾ ಸಂಕೀರ್ಣವಾದ ಸಮಸ್ಯೆ. ಹೆಚ್ಚಿನ ಚರ್ಚೆ ಆಗಬೇಕಿದೆ. ಒಂದೇ ಬಾರಿಗೆ ತಂದುಬಿಡುವ ಹಾಗೆಯೂ ಇಲ್ಲ. ಅಲ್ಲದೆ, ಇದು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗುವ ಸಾಧ್ಯತೆಯನ್ನೂ ಅಲ್ಲಗಳೆಯಲು ಸಾಧ್ಯವಿಲ್ಲ.

ಎಂಎಸ್‌ಪಿ ಏನು ಮತ್ತು ಯಾಕೆ ಮುಖ್ಯ ಎಂಬುದನ್ನು ನೋಡೋಣ. ಭಾರತದಲ್ಲಿ ರೈತರು ಋತುವಿನ ಆಧಾರದ ಮೇಲೆ ಅಕ್ಕಿ ಮತ್ತು ಗೋಧಿಯಂತಹ ವಿವಿಧ ಬೆಳೆಗಳನ್ನು ಬೆಳೆಯಲು ವರ್ಷಪೂರ್ತಿ ದುಡಿಯುತ್ತಾರೆ. ಆದರೂ ಕೆಲವೊಮ್ಮೆ ಅವರು ದೊಡ್ಡ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಬೆಲೆ ತುಂಬಾ ಕಡಿಮೆಯಾದಾಗ, ಆ ಋತುವಿನಲ್ಲಿ ಸಾಕಷ್ಟು ಬೆಳೆಗಳಿದ್ದರೆ ಅಥವಾ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಬೆಲೆ ತುಂಬಾ ಕಡಿಮೆಯಿದ್ದರೆ ಹಾಗಾಗುತ್ತದೆ. ಆಗ ರೈತರು ಆರ್ಥಿಕವಾಗಿ ಕುಸಿದುಹೋಗುತ್ತಾರೆ. ತಮ್ಮನ್ನು ಮತ್ತು ಕುಟುಂಬವನ್ನು ಪೋಷಿಸಲು ಸಾಕಷ್ಟು ಆದಾಯ ಗಳಿಸುವುದು ಕಠಿಣವಾಗುತ್ತದೆ. ಈ ಸಮಸ್ಯೆ ತಡೆಗಟ್ಟಲೆಂದೇ ಕೇಂದ್ರ ಸರಕಾರ ವಿವಿಧ ಬೆಳೆಗಳಿಗೆ ಪ್ರತೀ ವರ್ಷ ಎಂಎಸ್‌ಪಿ ಘೋಷಿಸುತ್ತದೆ. ಅದು, ಬೆಳೆಗಳ ಒಂದು ನಿರ್ದಿಷ್ಟ ಭಾಗವನ್ನು ಒಂದು ನಿರ್ದಿಷ್ಟ ದರದಲ್ಲಿ ಖರೀದಿಸುವ ಭರವಸೆಯಾಗಿದೆ. ಮಾರುಕಟ್ಟೆ ಬೆಲೆಗಳು ಎಂಎಸ್‌ಪಿಗಿಂತ ಕಡಿಮೆಯಾದರೂ, ಅದು ರೈತನ ಮೇಲೆ ಪರಿಣಾಮ ಬೀರುವುದಿಲ್ಲ. ರೈತರು ತಮ್ಮ ಶ್ರಮಕ್ಕೆ ತಕ್ಕಷ್ಟಲ್ಲದಿದ್ದರೂ ಒಂದು ಮಟ್ಟದ ಹಣವನ್ನು ಮರಳಿ ಪಡೆಯಲು ಎಂಎಸ್‌ಪಿ ನೆರವಾಗುತ್ತದೆ. ಎಂಎಸ್‌ಪಿ ರೈತರಿಗೆ ತಮ್ಮ ಉತ್ಪಾದನಾ ವೆಚ್ಚ ಸರಿದೂಗಿಸಲು ಮತ್ತು ಲಾಭ ಗಳಿಸಲು ಸಹಾಯ ಮಾಡುತ್ತದೆ. ಕೃಷಿ ವೆಚ್ಚಗಳು ಮತ್ತು ಬೆಲೆಗಳ ಆಯೋಗ (CACP) ಉತ್ಪಾದನಾ ವೆಚ್ಚಗಳು, ಬೇಡಿಕೆ, ಪೂರೈಕೆ ಮತ್ತು ಮಾರುಕಟ್ಟೆ ಪ್ರವೃತ್ತಿಗಳಂತಹ ಅಂಶಗಳ ಆಧಾರದ ಮೇಲೆ ಎಂಎಸ್‌ಪಿಯನ್ನು ಶಿಫಾರಸು ಮಾಡುತ್ತದೆ. ಅದರ ಅಂತಿಮ ನಿರ್ಧಾರ ಕೇಂದ್ರ ಸರಕಾರದ್ದಾಗಿದೆ.

ಎಂಎಸ್‌ಪಿ ವ್ಯಾಪ್ತಿಯಲ್ಲಿ ಬರುವ ಬೆಳೆಗಳ ವಿವರ ನೋಡುವುದಾದರೆ, ಕೃಷಿ ವೆಚ್ಚಗಳು ಮತ್ತು ಬೆಲೆಗಳ ಆಯೋಗ 22 ನಿರ್ದಿಷ್ಟ ಬೆಳೆಗಳಿಗೆ ಎಂಎಸ್‌ಪಿಯನ್ನು ಶಿಫಾರಸು ಮಾಡುತ್ತದೆ. ಇವುಗಳಲ್ಲಿ ಖಾರಿಫ್ ಹಂಗಾಮಿನ 14 ಬೆಳೆಗಳು, ರಬಿ ಹಂಗಾಮಿನ 6 ಮತ್ತು ಇತರ 2 ವಾಣಿಜ್ಯ ಬೆಳೆಗಳು ಸೇರಿವೆ.

ಏಕೆ ಎಂಎಸ್‌ಪಿ ಬಹಳ ಮುಖ್ಯವಾಗುತ್ತದೆ?

2014 ಮತ್ತು 2015ರಲ್ಲಿ ದೊಡ್ಡ ಬರ ಪರಿಸ್ಥಿತಿ ಎದುರಾಗಿತ್ತು. ಈ ಬಾರಿ ಕರ್ನಾಟಕದಲ್ಲಿಯೂ ಭೀಕರ ಬರ ಇದೆ. ಈ ಸ್ಥಿತಿಯಲ್ಲಿ ಬೆಳೆಗಳ ಬೆಲೆ ಕುಸಿಯುತ್ತದೆ. ಡಿನೋಟಿಫಿಕೇಷನ್, ಜಿಎಸ್‌ಟಿಯಂಥ ವಿಚಾರಗಳು ಕೃಷಿ ಸೇರಿದಂತೆ ಗ್ರಾಮೀಣ ಪ್ರದೇಶಗಳ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿರುವುದನ್ನು ಗಮನಿಸಬಹುದು. ಆರ್ಥಿಕತೆ ನಿಧಾನವಾಗುವ ಹೊತ್ತಿನಲ್ಲೇ ರೈತರಿಗೆ ಬೇಕಾಗುವ ಇಂಧನ, ರಸಗೊಬ್ಬರಗಳ ಬೆಲೆಯೂ ಏರುತ್ತದೆ. ಇಂಥ ಸ್ಥಿತಿಯಲ್ಲಿ ರೈತರು ತಮ್ಮ ಬೆಳೆಗಳಿಗೆ ನ್ಯಾಯಯುತ ಬೆಲೆ ಪಡೆಯಲು, ಕೃಷಿಯೇ ಜನರ ಜೀವನೋಪಾಯವಾಗಿರುವ ಪ್ರದೇಶಗಳಲ್ಲಿ ಎಂಎಸ್‌ಪಿ ಬಹಳ ದೊಡ್ಡ ಬಲವಾಗಿ ಒದಗುತ್ತದೆ.

ಆದರೆ ಕಳೆದ 10 ವರ್ಷಗಳಲ್ಲಿ ಮೋದಿ ಸರಕಾರ ಎಂಎಸ್‌ಪಿ ವಿಚಾರದಲ್ಲಿಯೂ ಸುಳ್ಳುಗಳನ್ನೇ ಹೇಳಿಕೊಂಡು ಬರುತ್ತಿದೆ ಎಂಬ ಆರೋಪಗಳಿವೆ. ಮೋದಿ ಸರಕಾರ ತರಲು ಹೊರಟಿದ್ದ ಕೃಷಿ ಕಾನೂನುಗಳಂತೂ ರೈತವಿರೋಧಿಯಾಗಿದ್ದವು. 2020ರಲ್ಲಿ ಮೋದಿ ಸರಕಾರ ರೈತರು ತಮ್ಮ ಉತ್ಪನ್ನಗಳನ್ನು ಯಾವುದೇ ನಿರ್ಬಂಧಗಳಿಲ್ಲದೆ ಖಾಸಗಿ ಕಂಪೆನಿಗಳಿಗೆ ಮಾರಾಟ ಮಾಡಲು ಅನುವು ಮಾಡಿಕೊಡುವ ಮೂಲಕ ಭಾರತದ ಕೃಷಿ ವ್ಯಾಪಾರವನ್ನು ವಿಸ್ತರಿಸುವುದಾಗಿ ಹೇಳಿಕೊಳ್ಳುವ ಮೂರು ಕಾನೂನುಗಳನ್ನು ಅಂಗೀಕರಿಸಿತ್ತು. ಕೃಷಿ ವಲಯವನ್ನು ಕಾರ್ಪೊರೇಟೀಕರಣ ಮಾಡುವ ಒಂದು ಕ್ರಮವೆಂದು ರೈತರು ಆ ಕಾಯ್ದೆಗಳ ವಿರುದ್ಧ ನಿಂತರು. ವರ್ಷಗಟ್ಟಲೆ ಪ್ರತಿಭಟನೆ ನಡೆಸಿದರು. ಅಂತಿಮವಾಗಿ ಸರಕಾರ 2021ರಲ್ಲಿ ಆ ಕಾನೂನುಗಳನ್ನು ಹಿಂದೆೆಗೆದುಕೊಳ್ಳಬೇಕಾಗಿ ಬಂದಿತ್ತು. ಆ ಸಂದರ್ಭದಲ್ಲಿ ಮೋದಿ ಸರಕಾರ ನೀಡಿದ್ದ ಭರವಸೆಗಳಲ್ಲಿ ಕೂಡ ಎಂಎಸ್‌ಪಿಯ ಕಾನೂನು ಖಾತರಿ ಕೂಡ ಸೇರಿತ್ತು. ಆದರೆ ಅದನ್ನು ಈಡೇರಿಸುವುದರಿಂದ ಮಾತ್ರ ಸರಕಾರ ತಪ್ಪಿಸಿಕೊಳ್ಳುತ್ತಲೇ ಇದೆ.

ಕಳೆದ 10 ವರ್ಷಗಳ ಸಾಧನೆ!

ಭಾರತದ ಅಕ್ಕಿ ರಫ್ತು ನಿಷೇಧ ನೀತಿ ರೈತರ ಆದಾಯಕ್ಕೆ ದೊಡ್ಡ ಹೊಡೆತ ಕೊಟ್ಟಿತೆಂಬ ಆರೋಪವನ್ನು ರೈತ ಸಂಘಟನೆಗಳು ಕಳೆದ ಆಗಸ್ಟ್‌ನಲ್ಲಿ ಮಾಡಿದ್ದವು. ಮೋದಿ ಸರಕಾರದ ನೀತಿಯಿಂದಾಗಿ ಗೋಧಿ ಬೆಳೆದ ರೈತರು 40,000 ಕೋಟಿ ರೂ. ನಷ್ಟ ಅನುಭವಿಸಿದ್ದಾಗಿ ಇಂಡಿಯನ್ ಕೌನ್ಸಿಲ್ ಫಾರ್ ರಿಸರ್ಚ್ ಆನ್ ಇಂಟರ್‌ನ್ಯಾಷನಲ್ ಇಕನಾಮಿಕ್ ರಿಲೇಶನ್ಸ್ (ICRIER) ವರದಿ ಹೇಳಿತ್ತು. ಹಾಗೆಯೇ, ಈರುಳ್ಳಿ ರಫ್ತು ನಿಷೇಧ ಕೂಡ ನಷ್ಟಕ್ಕೆ ಕಾರಣವಾಗಿ ರೈತರಿಗೆ ಕಣ್ಣೀರು ತರಿಸಿತ್ತು. ಸರಕಾರದ ನೀತಿ ನಿರ್ಧಾರಗಳು ರೈತರನ್ನು ಕಷ್ಟಕ್ಕೇ ನೂಕುತ್ತಿವೆ ಎಂದಾದ ಮೇಲೆ, ಅವು ಯಾರ ಲಾಭಕ್ಕಾಗಿ ಆಗುತ್ತಿವೆ ಹಾಗಾದರೆ?

ಎಂಎಸ್‌ಪಿ ಹೆಚ್ಚಳದ ಬಗ್ಗೆ ಪೋಸ್ಟರುಗಳಲ್ಲಿ ಮಾತ್ರ ಹೇಳಿಕೊಳ್ಳುತ್ತಲೇ ಇದೆ ಮೋದಿ ಸರಕಾರ. ಹಾಗಾದರೆ ಎಷ್ಟು ಸಿಗುತ್ತಿದೆ? ಸ್ವಾಮಿನಾಥನ್ ವರದಿ ಶಿಫಾರಸು ಮಾಡಿದ ಸೂತ್ರಕ್ಕೆ ಅನುಗುಣವಾಗಿ ಸಿಗುತ್ತಿದೆಯೆ ಇಲ್ಲವೆ? ಪೋಸ್ಟರುಗಳಲ್ಲಿ ಮಾತ್ರ ಹೇಳಿಕೊಳ್ಳಲಾಗುತ್ತಿರುವ ಎಂಎಸ್‌ಪಿ ಹೆಚ್ಚಳ ಎಷ್ಟೆಂಬುದಕ್ಕೆ ಯಾವ ಆಧಾರವನ್ನೂ ಸರಕಾರ ಕೊಡುತ್ತಿಲ್ಲ. ಮೋದಿ ಕಾಲದಲ್ಲಿ ಎಲ್ಲವೂ ತುಟ್ಟಿಯಾಗಿದೆ. ವಿದ್ಯುತ್ ಬಿಲ್ ಹೆಚ್ಚಿದೆ. ಉಪಕರಣಗಳ ಬೆಲೆ ಏರಿಕೆಯಾಗಿದೆ. ಆದರೆ ಎಂಎಸ್‌ಪಿ ಮಾತ್ರ ಎಷ್ಟು ಏರಿದೆ? ಎಂಎಸ್‌ಪಿ ಸರಿಯಾಗಿ ಹೆಚ್ಚಳ ಕಂಡಿದ್ದರೆ ಏಕೆ ರೈತರ ಆದಾಯ ಕುಸಿದಿರುತ್ತಿತ್ತು?

ಈ ಎಲ್ಲ ಪ್ರಶ್ನೆಗಳು ಎದ್ದು ಕಾಣಿಸುತ್ತಿವೆ. ಮತ್ತವು ಈಗ ಮತ್ತೆ ಹೋರಾಟಕ್ಕೆ ನಿಂತಿರುವ ರೈತರು ಎತ್ತಿರುವ ಪ್ರಶ್ನೆಗಳೂ ಆಗಿವೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಆರ್.ಜೀವಿ

contributor

Similar News