ಮೀಸಲಾತಿಯನ್ನು ಮುಗಿಸಿಬಿಡಲಿದೆಯೇ ಬಿಜೆಪಿ?
ಸಂವಿಧಾನ ಹಾಗೂ ಮೀಸಲಾತಿ ಕುರಿತ ಸಂಘ ಪರಿವಾರದ ಪ್ರೀತಿ ಎಷ್ಟು ಎಂಬುದು ಎಲ್ಲರಿಗೂ ಗೊತ್ತಿರುವಂಥದ್ದೇ. ಸಂವಿಧಾನ ಬದಲಾಯಿಸುತ್ತೇವೆ ಎಂದು ಬಿಜೆಪಿಯ ಹಲವು ನಾಯಕರೂ ಬೇರೆ ಬೇರೆ ಸಂದರ್ಭಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಹೇಳಿದ್ದಾರೆ. ಆರೆಸ್ಸೆಸ್‌ನ ಸ್ಥಾಪಕ ನಾಯಕರುಗಳಿಗೆ ಸಂವಿಧಾನ ಹಾಗೂ ಅಂಬೇಡ್ಕರ್ ಬಗ್ಗೆ ಅದೆಷ್ಟು ಅಸಹನೆ ಇತ್ತು ಎಂಬುದೂ ಜಗಜ್ಜಾಹೀರು. ಆದರೆ ಈಗ ದಿಢೀರನೇ ನಾವು ಮೀಸಲಾತಿ ನೀತಿ ಬದಲಿಸುವುದಿಲ್ಲ, ಸಂವಿಧಾನವನ್ನು ತಿದ್ದುಪಡಿ ಮಾಡುವುದಿಲ್ಲ ಎಂದು ಮತ್ತೆ ಮತ್ತೆ ಹೇಳಬೇಕಾದ ಪರಿಸ್ಥಿತಿ ಅಮಿತ್ ಶಾಗೆ ಯಾಕೆ ಬಂದಿದೆ? ಬಿಜೆಪಿ ಈ ಬಾರಿ ಮತ್ತೆ ಅಧಿಕಾರಕ್ಕೆ ಬಂದರೆ ಮೀಸಲಾತಿಯನ್ನು ಮುಗಿಸಿಯೇ ಬಿಡುತ್ತದೆಯೆ? ದಲಿತರಿಗೆ ಬಿಜೆಪಿ ಇಂತಹದ್ದೊಂದು ಹೆಜ್ಜೆ ಇಡಲಿದೆ ಎಂಬ ಭಯ ಕಾಡತೊಡಗಿರುವುದೇಕೆ?
ಮೀಸಲಾತಿ ವಿಚಾರದಲ್ಲಿ ಬಿಜೆಪಿ ಮತ್ತು ಸಂಘ ಪರಿವಾರದ ನಿಲುವು ಎಂಥದೆಂಬುದನ್ನು ನೋಡುವುದಕ್ಕೆ ಹಿಂದಿನ ಕೆಲವು ಸಂದರ್ಭಗಳನ್ನು ಗಮನಿಸಬೇಕು.
1. ಒಬಿಸಿ ಮೀಸಲಾತಿ ಕುರಿತು 1990ರಲ್ಲಿ ಚರ್ಚೆ ನಡೆದ ಹೊತ್ತಲ್ಲಿಯೇ ಬಿಜೆಪಿ ಮತ್ತು ಸಂಘ ಪರಿವಾರದವರು ವಿ.ಪಿ. ಸಿಂಗ್ ಸರಕಾರದ ವಿರುದ್ಧ ಗರಂ ಆಗಿದ್ದರು. ಮಂಡಲ್ ಆಯೋಗದ ವರದಿ ಜಾರಿಗೆ ತಂದಾಗ ಸರಕಾರಿ ಉದ್ಯೋಗಗಳಲ್ಲಿ ಒಬಿಸಿಗಳಿಗೆ ಶೇ.27ರ ಮೀಸಲಾತಿ ನೀಡಲಾಯಿತು.
2. ವಿ.ಪಿ. ಸಿಂಗ್ ನೇತೃತ್ವದ ನ್ಯಾಷನಲ್ ಫ್ರಂಟ್ ಸರಕಾರವನ್ನು ಬಿಜೆಪಿ ಬೆಂಬಲಿಸಿದರೂ, ಅದರ ಆಗಿನ ಅಧ್ಯಕ್ಷ ಎಲ್.ಕೆ. ಅಡ್ವಾಣಿ ರಾಮ ರಥಯಾತ್ರೆ ಆರಂಭಿಸಿದ್ದರು. ಆ ವಿದ್ಯಮಾನವನ್ನು ‘ಮಂಡಲ್ ವರ್ಸಸ್ ಕಮಂಡಲ್’ ಎಂದೇ ಕರೆಯಲಾಗುತ್ತದೆ. ಮಂಡಲ್ ಎಂಬುದು ಸಾಮಾಜಿಕ ನ್ಯಾಯದ ಪರವುಳ್ಳವರನ್ನು ಪ್ರತಿನಿಧಿಸಿದರೆ, ಕಮಂಡಲ್ ಬ್ರಾಹ್ಮಣರು ಮತ್ತಿತರ ಮೇಲ್ಜಾತಿ ಹಿಂದೂಗಳ ರಾಜಕೀಯ ಮತ್ತು ಸಾಮಾಜಿಕ ಹಿತಾಸಕ್ತಿಯ ಪರವಾದುದಾಗಿದೆ.
3. ಆಗ ವ್ಯಾಪಕವಾಗಿ ಭಯ ಹುಟ್ಟಿಸುವಂತೆ ಅಡ್ವಾಣಿ ರಥಯಾತ್ರೆ ತನ್ನ ಹಾದಿಯುದ್ದಕ್ಕೂ ಕೋಮು ಘರ್ಷಣೆಗಳನ್ನು ಪ್ರಚೋದಿಸಿತು. ಯಾತ್ರೆ ಬಿಹಾರ ಮುಟ್ಟಿದಾಗ, ಆ ಸಮಯದಲ್ಲಿ ಬಿಹಾರ ಮುಖ್ಯಮಂತ್ರಿಯಾಗಿದ್ದ ಲಾಲು ಪ್ರಸಾದ್ ಅವರು ಅಡ್ವಾಣಿ ಬಂಧನಕ್ಕೆ ಆದೇಶಿಸಿದರು.
4. ಅದಾದ ಬಳಿಕ ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಕ್ರಮವಾಗಿ 1993 ಮತ್ತು 1995ರಲ್ಲಿ ನಡೆದ ವಿಧಾನ ಸಭಾ ಚುನಾವಣೆಗಳಲ್ಲಿ ಬಿಜೆಪಿಯನ್ನು ಮತದಾರರು ಹಿಗ್ಗಾಮುಗ್ಗಾ ಹಣಿದುಹಾಕಿದರು. ಆ ಚುನಾವಣೆಗಳಲ್ಲಿ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಸಮುದಾಯಗಳನ್ನು ರೂಪಿಸಿದ ಗುಂಪುಗಳು ಮತ್ತು ದಲಿತರು ಸಾಮಾಜಿಕ ನ್ಯಾಯ ಪ್ರತಿಪಾದಿಸಿದ ಮುಲಾಯಂ ಸಿಂಗ್ ಯಾದವ್ ಮತ್ತು ಲಾಲು ಅವರನ್ನು ಅಗಾಧವಾಗಿ ಬೆಂಬಲಿಸಿದರು ಮತ್ತು ಅವರ ರಾಜ್ಯಗಳಲ್ಲಿ ಮೀಸಲಾತಿ ವಿರೋಧಿ ಶಕ್ತಿಗಳ ಮೇಲೆ ದೊಡ್ಡ ಪ್ರಹಾರವೇ ಆಯಿತು.
5. ಇದಾದ ನಂತರದ ವರ್ಷಗಳಲ್ಲಿ ಬಿಜೆಪಿ ತನ್ನ ಸಾಂಪ್ರದಾಯಿಕ ಬೆಂಬಲಿಗರಾದ ಬ್ರಾಹ್ಮಣರು ಮತ್ತು ಬನಿಯಾಗಳನ್ನು ಮಾತ್ರ ಅವಲಂಬಿಸಿರುವುದರ ರಾಜಕೀಯ ಅಪಾಯವನ್ನು ತಿಳಿದುಬಿಟ್ಟಿದೆ. ಹೀಗಾಗಿಯೇ ಉತ್ತರ ಪ್ರದೇಶ, ಬಿಹಾರ, ರಾಜಸ್ಥಾನ ಮತ್ತು ಮಧ್ಯಪ್ರದೇಶಗಳನ್ನು ಒಳಗೊಳ್ಳುವ ಹಿಂದಿ ಭಾಷಿಕ ಪ್ರದೇಶಗಳಲ್ಲಿ ವಿಶೇಷವಾಗಿ ಒಬಿಸಿಗಳು ಮತ್ತು ದಲಿತರ ಮೇಲೆ ತನ್ನ ಹಿಡಿತ ವಿಸ್ತರಿಸುವುದಕ್ಕಾಗಿ ಅನೇಕ ತಂತ್ರಗಳನ್ನು ಹೆಣೆದಿದೆ. ಜನತಾ ಪರಿವಾರ ಛಿದ್ರವಾಗಿ, ಅದರ ಸಣ್ಣ ಸಣ್ಣ ಗುಂಪುಗಳು ಬಿಜೆಪಿಯೊಂದಿಗೆ ವಿಲೀನವಾದಾಗ, ಅವುಗಳ ಭಾಗವಾಗಿದ್ದ ಒಬಿಸಿ ಮತ್ತು ದಲಿತರ ಮೇಲೆಯೂ ಬಿಜೆಪಿ ಹಿಡಿತ ಸಾಧಿಸುವುದು ಸಾಧ್ಯವಾಯಿತು.
6. ಜಾರ್ಖಂಡ್ ಮತ್ತು ಛತ್ತೀಸ್‌ಗಡ ರಾಜ್ಯಗಳ ರಚನೆ ಬಳಿಕ ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿಗಳು ಮತ್ತು ಕ್ರಿಶ್ಚಿಯನ್ ಅಲ್ಲದ ಮತ್ತು ಮುಸ್ಲಿಮೇತರ ಬುಡಕಟ್ಟು ಸಮುದಾಯಗಳ ನಡುವೆ ಆರೆಸ್ಸೆಸ್ ತನ್ನ ಚಟುವಟಿಕೆಗಳನ್ನು ಹೆಚ್ಚಿಸಿದೆ.
7. ಕಳೆದ ವರ್ಷ ಇದ್ದಕ್ಕಿದ್ದಂತೆ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅದೇ ಮೊದಲ ಬಾರಿಗೆ ದಲಿತರು ಮತ್ತು ಇತರ ಹಿಂದುಳಿದ ವರ್ಗಗಳಿಗೆ ಸರಕಾರಿ ಉದ್ಯೋಗಗಳಲ್ಲಿ ಮೀಸಲಾತಿಗಾಗಿ ಪ್ರತಿಪಾದಿಸಿದ್ದರು. ಅಲ್ಲಿಯ ತನಕವೂ ಮೀಸಲಾತಿ ವಿರೋಧಿ ಹೇಳಿಕೆಗಳನ್ನೇ ನೀಡುತ್ತಾ ಬಂದಿದ್ದವರು, ಬಿಹಾರದಲ್ಲಿನ 2015ರ ವಿಧಾನಸಭಾ ಚುನಾವಣೆಗೆ ಮೊದಲು ಕೂಡ ಮೀಸಲಾತಿ ನೀತಿ ಪರಿಷ್ಕರಣೆಯ ಮಾತನ್ನೇ ಆಡಿದ್ದರು. ಆಗ ಸ್ವತಃ ಮೋದಿ ಮತ್ತು ಶಾ ಕೂಡ ಭಾಗವತ್ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿದ್ದರು. ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ತಮ್ಮ ಪ್ರಚಾರ ಸಭೆಗಳಲ್ಲಿ ಭಾಗವತ್ ನಿಲುವನ್ನು ತೀವ್ರವಾಗಿ ಖಂಡಿಸಿದ್ದರು ಮತ್ತು ಆ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋತಿತ್ತು. ಅದಾದ ಬಳಿಕವೂ ಮೀಸಲಾತಿ ವಿರುದ್ಧವೇ ಮಾತನಾಡುತ್ತ ಬಂದಿದ್ದ ಭಾಗವತ್ ಕಳೆದ ಸೆಪ್ಟಂಬರ್‌ನಲ್ಲಿ ಮೀಸಲಾತಿ ಪರ ಮಾತಾಡಿದ್ದೇಕೆ? ಸ್ಪಷ್ಟವಾಗಿ ಅದರ ಹಿಂದೆ ಇದ್ದುದು 2024ರ ಲೋಕಸಭೆ ಚುನಾವಣಾ ಉದ್ದೇಶವೇ ಹೊರತು ಬೇರೇನೂ ಆಗಿರಲಿಲ್ಲ.
ಮೋದಿ ಸರಕಾರದ ಹತ್ತು ವರ್ಷಗಳ ವೈಫಲ್ಯವನ್ನು ವಿಪಕ್ಷಗಳ ಒಕ್ಕೂಟ ಪಟ್ಟಿ ಮಾಡಿ ಮೋದಿಯನ್ನು ಜರೆಯುತ್ತಿದ್ದಾಗ, ಮತ್ತದಕ್ಕೆ ಪ್ರತ್ಯುತ್ತರ ಕೊಡುವ ದಾರಿಯೇ ಬಿಜೆಪಿಯ ಎದುರು ಇಲ್ಲದೇ ಇದ್ದ ಹೊತ್ತಿನಲ್ಲಿ ಮೀಸಲಾತಿ ಪರ ಭಾಗವತ್ ಹೇಳಿಕೆ ಬಂದಿತ್ತೆಂಬುದನ್ನು ಗಮನಿಸಬೇಕು. 2024ರ ಚುನಾವಣೆಯಲ್ಲಿ ಮೋದಿ ಸರಕಾರವನ್ನು ಉಳಿಸಿಕೊಳ್ಳಬೇಕಾದ ರಾಜಕೀಯ ಒತ್ತಡ ಸಂಘದ ಮೇಲಿದೆ. ಬಿಜೆಪಿ ಸೋತರೆ ಸರಕಾರದಲ್ಲಿನ ಆರೆಸ್ಸೆಸ್ ಹಿಡಿತ ತಪ್ಪಿಹೋಗುತ್ತದೆ ಎಂಬುದು ಮತ್ತು ಅದರಿಂದಾಗಿ ಇಡೀ ಸಂಘ ಪರಿವಾರ ದುರ್ಬಲಗೊಳ್ಳುತ್ತದೆ ಎಂಬುದು ಭಾಗವತ್ ಸೇರಿದಂತೆ ಆರೆಸ್ಸೆಸ್ ಲೆಕ್ಕಾಚಾರ. ಹಾಗಾಗಿಯೇ ಮೋದಿ ಸರಕಾರವನ್ನು ರಕ್ಷಿಸಲು ಆಗ ಭಾಗವತ್ ಶುರು ಮಾಡಿದ್ದೇ ಮೀಸಲಾತಿ ಪರ ಪ್ರತಿಪಾದನೆ.
ವಾಸ್ತವದಲ್ಲಿ ಭಾಗವತ್ ಮಾತ್ರವಲ್ಲ, ಮಹಾರಾಷ್ಟ್ರದ ಚಿತ್ಪಾವನ ಬ್ರಾಹ್ಮಣರೂ ಸೇರಿದಂತೆ ಮೇಲ್ಜಾತಿ ಹಿಂದೂಗಳ ಹಿತಾಸಕ್ತಿಯನ್ನು ಮಾತ್ರವೇ ನೋಡುವ ಇಡೀ ಸಂಘ ಪರಿವಾರಕ್ಕೇ ಮೀಸಲಾತಿ ಎಂದರೆ ಆಗಿಬರುವುದಿಲ್ಲ. ಈಗಲೂ ಮೀಸಲಾತಿ ಪ್ರತಿಪಾದನೆ ಮಾಡುತ್ತಿರುವ ಹೊತ್ತಿನಲ್ಲಿ ಅದರ ಉದ್ದೇಶವಿರುವುದು ಇದೊಂದು ಸಲ ಗೆದ್ದುಬಿಡಬೇಕು ಎನ್ನುವುದು ಮಾತ್ರ.
ಈ ತಂತ್ರದಲ್ಲಿ ಎರಡು ಭಾಗಗಳಿವೆ:
ಒಂದು: ಎಸ್‌ಸಿ, ಎಸ್‌ಟಿ, ಒಬಿಸಿಗಳ ಮೀಸಲಾತಿಯ ಪರ ಇರುವಂತೆ ತೋರಿಸಿಕೊಂಡು, ಅವರ ಪರವಾಗಿ ಯಥೇಚ್ಛ ವಾದದಲ್ಲಿ ತೊಡಗುವ ಮೂಲಕ. ಅವರನ್ನು ಪೂರ್ತಿಯಾಗಿ ತನ್ನ ತೆಕ್ಕೆಗೆ ಸೆಳೆಯುವುದು. ಎರಡು: ಮುಸ್ಲಿಮ್ ಮೀಸಲಾತಿಯನ್ನು ಅಷ್ಟೇ ನೇರಾ ನೇರ ವಿರೋಧಿಸುತ್ತ, ಅವರ ವಿರುದ್ಧ ಈ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗಳನ್ನು ಕೂಡ ಎತ್ತಿಕಟ್ಟುವ ವ್ಯವಸ್ಥಿತ ಹುನ್ನಾರ ನಡೆಸಿರುವುದು. ಈಗ ನಡೆಯುತ್ತಿರುವುದು ಚುನಾವಣಾ ಲಾಭದ ಉದ್ದೇಶದ ಈ ಹುನ್ನಾರಗಳ ಹಿನ್ನೆಲೆಯ ವಿದ್ಯಮಾನಗಳೇ ಆಗಿವೆ ಮತ್ತು ಅದರ ಇಂತಹ ಹುನ್ನಾರವೇ ಬಹಳ ಅಪಾಯಕಾರಿಯಾಗಿ ಕಾಣಿಸುತ್ತಿದೆ.
ಈಚೆಗೆ ಮೋದಿ ಸೇರಿದಂತೆ ಬಿಜೆಪಿ ನಾಯಕರು ಮೀಸಲಾತಿ ಕುರಿತಂತೆ ಕೊಡುತ್ತಿರುವ ಹೇಳಿಕೆಗಳನ್ನು ಒಮ್ಮೆ ಗಮನಿಸಬೇಕು.
ಉತ್ತರ ಪ್ರದೇಶ ಸಿಎಂ ಆದಿತ್ಯನಾಥ್ ಹೇಳಿಕೆ:
‘‘ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಮೀಸಲಾತಿಯಲ್ಲಿ ಕಡಿತ ಗೊಳಿಸಿ, ಒಬಿಸಿಗಳ ಪಟ್ಟಿಯಲ್ಲೇ ಮುಸ್ಲಿಮರಿಗೂ ಕಾಂಗ್ರೆಸ್ ಮೀಸಲಾತಿ ಕಲ್ಪಿಸಿತ್ತು. ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಮುಸ್ಲಿಮರಿಗೆ ಒಬಿಸಿಯೊಳಗೇ ಮೀಸಲಾತಿ ಕಲ್ಪಿಸುವ ಮೂಲಕ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ. ಎಸ್‌ಸಿ ಮತ್ತು ಎಸ್‌ಟಿ ಸಮುದಾಯಗಳ ಹಕ್ಕುಗಳನ್ನೇ ಕಸಿದುಕೊಳ್ಳಲು ಕಾಂಗ್ರೆಸ್ ಉದ್ದೇಶಿಸಿದೆ.’’
ಪ್ರಧಾನಿ ಮೋದಿ ಹೇಳಿಕೆ:
‘‘ಹಿಂದುಳಿದವರು ಮತ್ತು ದಲಿತರ ಮೀಸಲಾತಿಯನ್ನು ಕಿತ್ತು ಮುಸ್ಲಿಮರಿಗೆ ನೀಡಲು ಕಾಂಗ್ರೆಸ್ ಮುಂದಾಗಿದೆ. ಒಬಿಸಿ ಪಟ್ಟಿಯಲ್ಲಿಯೇ ಮುಸ್ಲಿಮರಿಗೆ ಮೀಸಲಾತಿ ಕಲ್ಪಿಸುವ ಮೂಲಕ ಕಾಂಗ್ರೆಸ್ ಒಬಿಸಿ ಸಮುದಾಯದ ದೊಡ್ಡ ಪಾಲನ್ನು ಕಸಿದುಕೊಂಡಿತ್ತು. ಕಾಂಗ್ರೆಸ್ ಒಬಿಸಿಗಳ ದೊಡ್ಡ ಶತ್ರುವಾಗಿದೆ.’’
ಅಮಿತ್ ಶಾ ಹೇಳಿಕೆ:
‘‘ತೆಲಂಗಾಣದಲ್ಲಿ ಕಾಂಗ್ರೆಸ್ ಮತ್ತು ಬಿಆರ್‌ಎಸ್ ನೀಡಿರುವ ಮುಸ್ಲಿಮ್ ಮೀಸಲಾತಿಯನ್ನು ಬಿಜೆಪಿ ಕೊನೆಗೊಳಿಸಲಿದೆ ಮತ್ತು ಅದನ್ನು ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗಳಿಗೆ ಹಂಚಲಾಗುವುದು.’’
ಹೀಗೆ, ಒಂದೆಡೆ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗಳನ್ನು ಸೆಳೆಯುವುದು ಮತ್ತು ಇನ್ನೊಂದೆಡೆ ಮುಸ್ಲಿಮರ ವಿರುದ್ಧ ದ್ವೇಷ ಹರಡುವುದು ಎರಡನ್ನೂ ಏಕಕಾಲದಲ್ಲಿಯೇ ಬಿಜೆಪಿ ಮಾಡುತ್ತಿದೆ.
ಉಳ್ಳವರ ಕಡೆಯಿಂದ ಸಂಪತ್ತನ್ನು ಕಿತ್ತುಕೊಂಡು ಅದನ್ನೆಲ್ಲ ಕಾಂಗ್ರೆಸ್, ಮುಸ್ಲಿಮರಿಗೆ ಹಂಚಲಿದೆ, ನಿಮ್ಮ ಮಂಗಲಸೂತ್ರವನ್ನು ಕೂಡ ಅವರು ಬಿಡುವುದಿಲ್ಲ ಎಂದು ಬಹುಸಂಖ್ಯಾತ ಹಿಂದೂಗಳನ್ನು ಮುಸ್ಲಿಮರ ವಿರುದ್ಧ ಎತ್ತಿಕಟ್ಟುವ ರೀತಿಯಲ್ಲಿ ಸುಳ್ಳು ಆರೋಪ ಮಾಡಿದ್ದವರು ಈಗ ಮಿಸಲಾತಿ ವಿಚಾರದಲ್ಲಿಯೂ ಅದೇ ವಿಭಜನೆ ಮಂತ್ರ ಶುರು ಮಾಡಿದ್ದಾರೆ. ಇದೇ ಈಗ ಹಿಂದುಳಿದವರನ್ನು ಮತ್ತು ದಲಿತರನ್ನು ಆತಂಕಕ್ಕೆ ಈಡು ಮಾಡಿರುವ ವಿಚಾರ. ಒಂದು ವೇಳೆ ಗೆದ್ದರೆ ಬಿಜೆಪಿ ತೆಗೆದುಕೊಳ್ಳಬಹುದಾದ ಹೆಜ್ಜೆಗಳು ಏನಿರಬಹುದು? ಈಗಾಗಲೇ ಹಲವು ನಾಯಕರು ತಮ್ಮದೇ ಆದ ರೀತಿಯಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.
ರೇವಂತ್ ರೆಡ್ಡಿ:
ಮುಂದಿನ ದಿನಗಳಲ್ಲಿ ಹಿಂದುಳಿದ ಸಮುದಾಯಗಳಿಗೆ ಮೀಸಲಾತಿಯನ್ನು ಸಂಪೂರ್ಣವಾಗಿ ತೆಗೆದುಹಾಕಲು ಬಿಜೆಪಿ ಯೋಜಿಸುತ್ತಿದೆ ಎಂಬುದು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಆರೋಪ. ಆರೆಸ್ಸೆಸ್ ಶತಮಾನೋತ್ಸವ ವರ್ಷವಾದ 2025ರ ವೇಳೆಗೆ ಬಿಜೆಪಿ ಮೀಸಲಾತಿಯನ್ನು ರದ್ದುಗೊಳಿಸಲಿದೆ ಎಂಬ ರೇವಂತ್ ರೆಡ್ಡಿ ಹೇಳಿಕೆ, ಮುಸ್ಲಿಮರಿಗೆ ಮೀಸಲಾತಿ ವಿಚಾರವಾಗಿ ಕಾಂಗ್ರೆಸ್ ಬಿಜೆಪಿ ನಡುವೆ ವಾಗ್ಯುದ್ಧ ತೀವ್ರವಾಗಿರುವ ಹೊತ್ತಿನಲ್ಲಿಯೇ ಬಂದಿದೆ. ಎಸ್‌ಸಿ, ಎಸ್‌ಟಿ, ಒಬಿಸಿ ಮೀಸಲಾತಿಯನ್ನು ಕಿತ್ತುಹಾಕುವ ಪ್ರಯತ್ನ ನಡೆದಿದೆ. ಹಿಂದುಳಿದ ವರ್ಗಗಳಿಗೆ ಮೀಸಲಾತಿ ಪ್ರಸ್ತಾಪಿಸಿದ ಮಂಡಲ್ ಆಯೋಗದ ವರದಿಯ ಅನುಷ್ಠಾನಕ್ಕೂ ಬಿಜೆಪಿ ಈ ಹಿಂದೆ ಅಡ್ಡಗಾಲಾಗಿತ್ತು ಎಂದು ರೇವಂತ್ ರೆಡ್ಡಿ ಈಚೆಗೆ ಸಾರ್ವಜನಿಕ ಸಭೆಯೊಂದರಲ್ಲಿ ಹೇಳಿದರು. ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಸಮುದಾಯಗಳಿಗೆ ಮೀಸಲಾತಿ ರದ್ದುಗೊಳಿಸುವುಕ್ಕಾಗಿಯೇ ಸಂಸತ್ತಿನಲ್ಲಿ ಹೆಚ್ಚು ಬಲ ಹೊಂದಲು ಅದು ಉದ್ದೇಶಿಸಿದೆ ಎಂದು ರೆಡ್ಡಿ ಆರೋಪಿಸಿದರು.
ಅಸದುದ್ದೀನ್ ಉವೈಸಿ:
ಎಐಎಂಐಎಂ ಅಧ್ಯಕ್ಷ ಅಸದುದ್ದೀನ್ ಉವೈಸಿ ಕೂಡ ರೇವಂತ್ ರೆಡ್ಡಿ ರೀತಿಯಲ್ಲಿಯೇ ಆತಂಕ ವ್ಯಕ್ತಪಡಿಸಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿಯನ್ನು ತೆಗೆದುಹಾಕುವ ಸಲುವಾಗಿಯೇ ಮೋದಿ ಸಂವಿಧಾನವನ್ನು ಬದಲಾಯಿಸಲಿದ್ದಾರೆ ಎಂದು ಉವೈಸಿ ಹೇಳಿದ್ದಾರೆ. ಆರೆಸ್ಸೆಸ್ ಮೇಲ್ಜಾತಿಯ ಜನರು ಸಂವಿಧಾನವನ್ನು ಎಂದಿಗೂ ಒಪ್ಪಿಕೊಳ್ಳಲಿಲ್ಲ ಮತ್ತು ಅಂಬೇಡ್ಕರ್ ಸಂವಿಧಾನವನ್ನು ರೂಪಿಸಿದವರು ಎಂಬ ಅಂಶವನ್ನು ಆರೆಸ್ಸೆಸ್‌ಗೆ ಅರಗಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಬಿಜೆಪಿ ಸಂವಿಧಾನ ಬದಲಿಸಿದರೆ ಮೀಸಲಾತಿಯನ್ನು ತೆಗೆದುಹಾಕಲಿದೆ ಮತ್ತು ಅಲ್ಪಸಂಖ್ಯಾತರ ಪಾಲಿನ ಸೌಲಭ್ಯವನ್ನೂ ಕಿತ್ತುಹಾಕಲಿದೆ ಎಂದು ಉವೈಸಿ ಹೇಳಿದ್ದಾರೆ.
ಸಂಜಯ್ ಸಿಂಗ್:
ಬಿಜೆಪಿ ಗೆದ್ದರೆ ಮೀಸಲಾತಿಯನ್ನು ರದ್ದುಪಡಿಸಲಿದೆ ಎಂದು ಎಎಪಿ ಕೂಡ ಹೇಳಿದೆ. ಬಿಜೆಪಿ ದಲಿತರು ಮತ್ತು ಅವಕಾಶ ವಂಚಿತ ಜನರ ವಿರುದ್ಧ ತಾರತಮ್ಯ ಮಾಡುತ್ತಿದೆ ಎಂದು ಎಎಪಿ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಆರೋಪಿಸಿದ್ದಾರೆ. ಬಿಜೆಪಿ ಸಂಸದರು ಸಂವಿಧಾನ ಬದಲಾಯಿಸುವ ಬಗ್ಗೆ ಬಹಿರಂಗವಾಗಿಯೇ ಮಾತನಾಡುತ್ತಿದ್ದಾರೆ. ಅದಕ್ಕಾಗಿಯೇ ಬಿಜೆಪಿ 400 ಸೀಟುಗಳನ್ನು ಗೆಲ್ಲುವ ಹಠದಲ್ಲಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನವನ್ನು ಬದಲಾಯಿಸುತ್ತದೆ ಮತ್ತು ದಲಿತರು, ಬುಡಕಟ್ಟು ಮತ್ತು ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಕೊನೆಗಾಣಿಸಲಿದೆ ಎಂದು ಅವರು ಆರೋಪಿಸಿದ್ಧಾರೆ.
ಅಂಬೇಡ್ಕರ್ ರೂಪಿಸಿದ ಸಂವಿಧಾನವನ್ನು ಬದಲಾಯಿಸುವುದಾಗಿ ಬಿಜೆಪಿ ಮಂದಿ ಹೇಳುತ್ತಾರೆ. ಗುಜರಾತಿನಲ್ಲಿ ಅವರೇನು ಮಾಡಿದರು ಎನ್ನುವುದು ಗೊತ್ತಿದೆ. ಈಗ ದೇಶದಲ್ಲೆಲ್ಲ ಅದನ್ನು ಮಾಡಲಿದ್ದಾರೆ. ಅವರು ಮತ್ತೆ ಅಧಿಕಾರಕ್ಕೆ ಬಂದರೆ ಮೀಸಲಾತಿ ಹೋಗಲಿದೆ ಎಂಬ ಆತಂಕವನ್ನು ದಲಿತ ವರ್ಗದ ಜನಸಮಾನ್ಯರೆಲ್ಲ ವ್ಯಕ್ತಪಡಿಸುತ್ತಿದ್ಧಾರೆ.
ಬಿಜೆಪಿ ಸಂವಿಧಾನವನ್ನು ರದ್ದುಪಡಿಸುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟನೆ ನೀಡುತ್ತಿದ್ದಾರೆ. ಹಾಗೆಂದು ಹೇಳಲಾಗುತ್ತಿರುವುದು ಕಾಂಗ್ರೆಸ್ ಕುತಂತ್ರ ಎಂಬುದು ಅವರ ಆರೋಪ. ಸ್ವತಃ ಅಂಬೇಡ್ಕರ್ ಕೂಡ ಸಂವಿಧಾನವನ್ನು ರದ್ದುಗೊಳಿಸಲು ಸಾಧ್ಯವಿಲ್ಲ ಎಂದು ಹೊಸದೇ ವರಸೆಯಲ್ಲೂ ಅವರು ಮಾತಾಡಬಲ್ಲರು.
ಇನ್ನೊಂದೆಡೆ ಅಮಿತ್ ಶಾ ಕೂಡ ಮೋದಿಗೆ ದನಿಗೂಡಿಸುತ್ತಿ ದ್ದಾರೆ. ಸಂದರ್ಶನ, ರ್ಯಾಲಿ ಹೀಗೆ ಹೋದ ಹೋದಲ್ಲೆಲ್ಲ ಅದನ್ನೇ ಹೇಳುವುದಕ್ಕೆ ಅವರು ಶುರುಮಾಡಿದ್ದಾರೆ. ಬಿಜೆಪಿ ಅಧಿಕಾರದಲ್ಲಿ ಎಸ್‌ಸಿ, ಎಸ್‌ಟಿ, ಒಬಿಸಿ ಮೀಸಲಾತಿಯನ್ನು ರದ್ದುಗೊಳಿಸುವುದಿಲ್ಲ ಎಂದು ಹೇಳತೊಡಗಿದ್ದಾರೆ. ಸಂವಿಧಾನ ಬದಲಿಸುವ ಮಾತೇ ಇಲ್ಲ ಎನ್ನುತ್ತಿದ್ದಾರೆ. ಅದನ್ನವರು ಮೋದಿ ಗ್ಯಾರಂಟಿ ಎನ್ನುವಲ್ಲಿಯವರೆಗೂ ಹೋಗಿದ್ದಾರೆ. ಅಂದರೆ ಅದು ತಾವು ಮಾಡಲಿರುವ ಉಪಕಾರ ಎಂಬ ಧಾಟಿಯಲ್ಲಿ ಅವರ ಮಾತು ಇದೆ. ಸಂವಿಧಾನ ಬದಲಾವಣೆ, ಮೀಸಲಾತಿ ರದ್ದು ಮಾಡುವುದಿದ್ದರೆ ಈ ಹತ್ತು ವರ್ಷಗಳಲ್ಲೇ ಮಾಡಿಬಿಡಬಹುದಿತ್ತು. ದೇಶದ ಜನರು ಕಳೆದ ಹತ್ತು ವರ್ಷಗಳಿಂದ ಬಿಜೆಪಿಯನ್ನು ಬಹುಮತದಿಂದ ಆರಿಸುವ ಮೂಲಕ ಸಂವಿಧಾನ ಬದಲಾಯಿಸುವ ಶಕ್ತಿಯನ್ನು ನೀಡಿದ್ದರು. ಆದರೆ ನಾವು ಮೀಸಲಾತಿಯನ್ನು ರದ್ದುಗೊಳಿಸಲಿಲ್ಲ ಎನ್ನುತ್ತಿದ್ದಾರೆ ಅವರು. ಬಹುಮತದೊಡನೆ ಅಧಿಕಾರಕ್ಕೇರುವುದು ಸಂವಿಧಾನ ಬದಲಿಸಲು ಸಿಗುವಂಥ ಬಲ ಎಂಬುದು ಅವರ ಮನಸ್ಸಿನಲ್ಲಿಯೂ ಇದೆ ಎಂಬುದು ಕೂಡ ಈ ಮಾತಿನಿಂದ ಸ್ಪಷ್ಟವಾಗುತ್ತದೆ. ಆದರೆ, ಬಿಜೆಪಿ ಅಧಿಕಾರದಲ್ಲಿ ಇರುವವರೆಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳ ಮೀಸಲಾತಿಯನ್ನು ರದ್ದುಪಡಿಸುವ ಪ್ರಶ್ನೆಯೇ ಇಲ್ಲ ಎಂಬುದು ಮೋದಿಯವರ ಗ್ಯಾರಂಟಿಯಾಗಿತ್ತು ಎಂದು ಹೇಳುವ ಮೂಲಕ, ಒಳ್ಳೆಯತನದ ಪ್ರದರ್ಶನಕ್ಕೆ ಜನರೆದುರು ಅಮಿತ್ ಶಾ ಇಳಿದಿದ್ದಾರೆ.
ಎನ್‌ಡಿಟಿವಿಗೆ ನೀಡಿರುವ ಸಂದರ್ಶನದಲ್ಲಿ ಕೂಡ ಅದನ್ನೇ ಹೇಳಿದ್ದಾರೆ. ಮೋದಿ ಸರಕಾರ ಎಂದಿಗೂ ಮೀಸಲಾತಿ ನೀತಿಯನ್ನು ಮುಟ್ಟುವುದಿಲ್ಲ ಅಥವಾ ಬೇರೆಯವರೂ ಅದನ್ನು ಮಾಡಲು ಬಿಡುವುದಿಲ್ಲ ಎಂದಿದ್ದಾರೆ. ಹಾಗೆಯೇ, ಸಂವಿಧಾನ ಬದಲಾಯಿಸಲು ಸರಕಾರ ಯೋಜಿಸುತ್ತಿದೆ ಎಂಬ ಆರೋಪಗಳನ್ನು ಕೂಡ ಅವರು ತಳ್ಳಿಹಾಕಿದ್ದಾರೆ. ಇದೆಲ್ಲವೂ ಕಾಂಗ್ರೆಸ್ ಮಾಡುತ್ತಿರುವ ಸುಳ್ಳು ಪ್ರಚಾರ ಎಂದೂ ಶಾ ಹೇಳಿದ್ದಾರೆ.
ದಲಿತರು, ಆದಿವಾಸಿಗಳು ಮತ್ತು ಒಬಿಸಿ ಮೀಸಲಾತಿಯನ್ನು ಬಿಜೆಪಿ ರದ್ದುಪಡಿಸಲಿದೆ ಎಂದು ಕಾಂಗ್ರೆಸ್ ಸುಳ್ಳು ಪ್ರಚಾರ ಮಾಡುತ್ತಿದೆ. ದಲಿತರು, ಬುಡಕಟ್ಟು ಅಥವಾ ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು ಬಿಜೆಪಿ ಬೆಂಬಲಿಸುತ್ತದೆಯೇ ವಿನಃ ರದ್ದು ಮಾಡುವುದಿಲ್ಲ ಎಂದು ಅವರು ಮತ್ತೆ ಮತ್ತೆ ಸ್ಪಷ್ಟನೆ ಕೊಡುತ್ತಿದ್ದಾರೆ. ಸ್ವತಃ ಮೋದಿಯವರೇ ಮೀಸಲಾತಿಯ ದೊಡ್ಡ ಬೆಂಬಲಿಗರಾಗಿದ್ದಾರೆ. ಆದರೆ ಕಾಂಗ್ರೆಸ್ ಒಬಿಸಿ ವಿರೋಧಿ ಪಕ್ಷವಾಗಿದೆ. ಹಿಂದುಳಿದ ವರ್ಗಗಳಿಗೆ ಕಾಂಗ್ರೆಸ್ ಹಲವು ವರ್ಷಗಳಿಂದ ಅನ್ಯಾಯ ಮಾಡಿದೆ. ಒಬಿಸಿ ಸಮುದಾಯಕ್ಕೆ ಮೀಸಲಾತಿ ಕೊಡುವ ಕೆಲಸ ಮಾಡಿದ್ದೇ ಮೋದಿಯವರು ಎಂದೆಲ್ಲ ಸಾಲು ಸಾಲು ಸುಳ್ಳುಗಳನ್ನು ಶಾ ಪೋಣಿಸಿದ್ದಾರೆ.
ಇದೇ ಹೊತ್ತಿನಲ್ಲಿ ಅವರು, ಮುಸ್ಲಿಮರಿಗೆ ಕೊಡುತ್ತಿರುವ ಶೇ.4ರಷ್ಟು ಮೀಸಲಾತಿಯನ್ನು ರದ್ದುಪಡಿಸುವುದಾಗಿ ಹೇಳುತ್ತಿದ್ದಾರೆ. ಮುಸ್ಲಿಮರ ಮೀಸಲಾತಿಯನ್ನು ಧರ್ಮದ ಆಧಾರದಲ್ಲಿ ಮೀಸಲಾತಿ ಎಂದು ತಪ್ಪು ವ್ಯಾಖ್ಯಾನ ಮಾಡಿಕೊಂಡೇ ಬಂದಿದೆ ಬಿಜೆಪಿ. ಧರ್ಮದ ಆಧಾರದ ಮೇಲೆ ಮೀಸಲಾತಿ ನೀತಿಗಳನ್ನು ರಾಜಕೀಯಗೊಳಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ‘‘ಕಾಂಗ್ರೆಸ್‌ನ ಈ ಕ್ರಮ ಇಡೀ ದೇಶದ ಒಬಿಸಿ ಸಮುದಾಯಗಳಿಗೆ ಎಚ್ಚರಿಕೆ ಗಂಟೆಯಾಗಿದೆ. ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡಬಾರದು ಎಂದು ಸಂವಿಧಾನ ತಯಾರಕರು ಸ್ಪಷ್ಟವಾಗಿ ನಿರ್ಧರಿಸಿದ್ದಾರೆ.’’ ಎಂದೆಲ್ಲ ಮೋದಿ ಮಾತಾಡಿದ್ದರು. ಆದರೆ, ನಿಜವಾಗಿಯೂ ಸಂವಿಧಾನದ ವಿರುದ್ಧ ಇರುವವರು ಯಾರು? ಮತ್ತು ಅವರೇಕೆ ಮುಸ್ಲಿಮರಿಗೆ ಮೀಸಲಾತಿ ನೀಡುವ ವಿಚಾರಕ್ಕೆ ಬಂದಾಗ, ಮುಸ್ಲಿಮರನ್ನು ಒಂದು ಸಮುದಾಯ ಎಂಬುದನ್ನು ಬೇಕೆಂದೇ ಮರೆತು, ಧರ್ಮದ ವಿಚಾರ ತರುತ್ತಿದ್ದಾರೆ? ಅವರ ಉದ್ದೇಶವೇನು?
ಈಗ ಕರ್ನಾಟಕದಲ್ಲಿನ ಮುಸ್ಲಿಮ್ ಮೀಸಲಾತಿ ವಿಚಾರ ಹೇಳುವಾಗಲೂ ಸತ್ಯವನ್ನು ಮರೆಮಾಚಲಾಗಿದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಒಬಿಸಿ ಮೀಸಲಾತಿ ಕಡಿತಗೊಳಿಸಿ ಮುಸ್ಲಿಮರಿಗೆ ನೀಡುತ್ತಿದೆ ಎಂದು ಬಹು ದೊಡ್ಡ ಸುಳ್ಳನ್ನು ಆದಿತ್ಯನಾಥ್ ಮತ್ತು ಮೋದಿ ಹೇಳಿದ್ದಾರೆ.
ವಾಸ್ತವವಾಗಿ, ಮುಸ್ಲಿಮರನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಲಾಗಿರುವುದು ಈಗಿನ ಬೆಳವಣಿಗೆಯೇನೂ ಅಲ್ಲ. 1977ರಿಂದಲೂ ಮುಸ್ಲಿಮರನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಲಾಗಿದೆ. ಅಲ್ಲದೆ, ಬಿಜೆಪಿಯವರು ತಪ್ಪಾಗಿ ವ್ಯಾಖ್ಯಾನಿಸುವಂತೆ, ಮೀಸಲಾತಿ ಕೋಮುವಾದವಲ್ಲ. ಅದು ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿದಿರುವಿಕೆಯನ್ನು ಆಧರಿಸಿದೆ. ಕೆಲವು ರಾಜ್ಯಗಳು ಒಟ್ಟಾರೆಯಾಗಿ ಮುಸ್ಲಿಮರಿಗೆ ಮೀಸಲಾತಿಯನ್ನು ನೀಡಿದರೆ, ಇತರ ರಾಜ್ಯಗಳು ಕೆಲವು ವರ್ಗದ ಮುಸ್ಲಿಮರಿಗೆ ಮಾತ್ರ ಮೀಸಲಾತಿಯನ್ನು ಒದಗಿಸುತ್ತವೆ. ಮತ್ತದಕ್ಕೆ ಸಾಂವಿಧಾನಿಕ ಬೆಂಬಲವೇ ಇದೆ.
ಇಷ್ಟೆಲ್ಲ ಸತ್ಯ ವಿಚಾರಗಳು ಇರುವಾಗ, ಬಿಜೆಪಿ ಏಕೆ ಈ ವಿಚಾರದಲ್ಲಿಯೂ ಸುಳ್ಳುಗಳನ್ನೇ ಪೋಣಿಸಿ ಜನರನ್ನು ವಂಚಿಸುತ್ತಿದೆ? ಏಕೆ ಅಲ್ಲಿಯೂ ಕೋಮು ದೃಷ್ಟಿಯಿಂದ ಎತ್ತಿಕಟ್ಟಲು, ದ್ವೇಷ ಹರಡಲು ನೋಡುತ್ತಿದೆ? ಉತ್ತರ ಸ್ಪಷ್ಟವಿದೆ. ಈಗ ಎಸ್‌ಸಿ, ಎಸ್‌ಟಿ, ಒಬಿಸಿ ಮೀಸಲಾತಿ ಪರ ಮಾತಾಡುತ್ತಾ, ಅವರನ್ನು ಮುಸ್ಲಿಮರ ವಿರುದ್ಧ ಎತ್ತಿಕಟ್ಟುತ್ತಿರುವ ಬಿಜೆಪಿ, ನಾಳೆ ಒಂದು ವೇಳೆ ಗೆದ್ದರೆ, ಎಸ್‌ಸಿ, ಎಸ್‌ಟಿ, ಒಬಿಸಿಗಳ ಮೀಸಲಾತಿಯನ್ನಾದರೂ ಉಳಿಸೀತೆ?
ಗೆಲ್ಲುವವರೆಗೂ ಒಂದು ರೀತಿಯ ಆಟ, ಗೆದ್ದ ಮೇಲೆ ಬೇರೆಯೇ ಆಟ ಬಿಜೆಪಿಗೆ ಗೊತ್ತಿಲ್ಲದ್ದೇನೂ ಅಲ್ಲವಲ್ಲ?