ಭಾರತದಲ್ಲಿ ಸುಳ್ಳು ಮಾಹಿತಿ ಇನ್ನಷ್ಟು ಅನಾಹುತ ಸೃಷ್ಟಿಸಲಿದೆಯೇ?

ದೇಶಕ್ಕೆ ಹಿಂದೆಂದಿಗಿಂತಲೂ ಇಂದು ಹೆಚ್ಚು ಅಪಾಯಕಾರಿಯಾಗಿರುವುದು ಯಾವುದು? ಪರಿಣಿತರು ಹೇಳುವ ಪ್ರಕಾರ, ಜನರನ್ನು ದಾರಿ ತಪ್ಪಿಸುವ ತಪ್ಪು ಮಾಹಿತಿಗಳು ದೇಶದ ಪಾಲಿಗೆ ಅತಿ ಹೆಚ್ಚು ಅಪಾಯಕಾರಿ. ಮತ್ತೊಮ್ಮೆ ಸಾರ್ವತ್ರಿಕ ಚುನಾವಣೆ ನಡೆಯಲಿರುವ ಹೊತ್ತಿನಲ್ಲಿ ಇದು ತರುವ ಆತಂಕಗಳೇನು? ಕಳೆದ ಸಾರ್ವತ್ರಿಕ ಚುನಾವಣೆ ಹಾಗೂ ಕೋವಿಡ್ ವೇಳೆಯಲ್ಲಿ ಅವು ಏನೆಲ್ಲ ಅನಾಹುತಗಳಿಗೆ ಎಡೆ ಮಾಡಿಕೊಟ್ಟಿದ್ದವು? ಈ ತಪ್ಪು ಮಾಹಿತಿಗಳ ಪ್ರಭಾವಕ್ಕೆ ಜನಸಾಮಾನ್ಯರು ಒಳಗಾಗದಂತೆ ತಡೆಯುವುದು ಹೇಗೆ?

Update: 2024-01-30 04:50 GMT
Editor : Thouheed | Byline : ಆರ್.ಜೀವಿ

ರಾಜಕಾರಣಿಗಳು ತಮ್ಮ ಭಾಷಣದಲ್ಲಿ ಬಹಳಷ್ಟು ಬಾರಿ ಆ ಅಪಾಯವಿದೆ, ಈ ಅಪಾಯವಿದೆ ಎಂದು ಜನರನ್ನು ಹೆದರಿಸುತ್ತಲೇ ಇರುತ್ತಾರೆ. ಆ ಅಪಾಯವನ್ನು ನಿವಾರಿಸಲು ನಮಗೆ ವೋಟು ಕೊಡಿ ಎಂಬ ಪರಿಹಾರವನ್ನೂ ಅವರೇ ಸೂಚಿಸುತ್ತಾರೆ. ಆದರೆ ರಾಜಕೀಯ ಲಾಭದ ಲೆಕ್ಕಾಚಾರ ಇಟ್ಟುಕೊಂಡ ಈ ಭಾಷಣ, ಹೇಳಿಕೆಗಳಾಚೆ ಒಂದು ನಿಜವಾದ ಅಪಾಯ ನಮ್ಮೆಲ್ಲರ ಎದುರಿಗಿದೆ.

ಅದು ಕೇವಲ ಬಾಯಿಮಾತಿನಲ್ಲಿ ಹೇಳುತ್ತಿರುವ ನಿರಾಧಾರ ಮಾತಲ್ಲ. ಸುದೀರ್ಘ ಹಾಗೂ ಆಳವಾದ ಅಧ್ಯಯನ ಮಾಡಿ ತಜ್ಞರು, ಪರಿಣಿತರು ಕೊಟ್ಟಿರುವ ಎಚ್ಚರಿಕೆ ಅದು.

ಪ್ರಪಂಚದಾದ್ಯಂತ ಜನರು ಎದುರಿಸುವ ಪ್ರಮುಖ ಬೆದರಿಕೆಗಳಲ್ಲಿ ತಪ್ಪು ಮತ್ತು ಸುಳ್ಳು ಮಾಹಿತಿ ಕೂಡ ಒಂದಾಗಿದೆ. ಮತ್ತು ಭಾರತವೇ ತಪ್ಪು ಮತ್ತು ಸುಳ್ಳು ಮಾಹಿತಿಗಳು ಸೃಷ್ಟಿಸುವ ಅಪಾಯಕ್ಕೆ ಅತಿ ದೊಡ್ಡ ಪ್ರಮಾಣದಲ್ಲಿ ಸಿಲುಕುವ ದೇಶವಾಗಿದೆ.

ಇದು, ವರ್ಲ್ಡ್ ಎಕನಾಮಿಕ್ ಫೋರಮ್‌ನ 2024ರ ಗ್ಲೋಬಲ್ ರಿಸ್ಕ್ ರಿಪೋರ್ಟ್‌ಗಾಗಿ ನಡೆದ ಸಮೀಕ್ಷೆಯಲ್ಲಿ ತಜ್ಞರು ವ್ಯಕ್ತಪಡಿಸಿರುವ ಆತಂಕ.

ಮೊದಲಿಗೆ ತಪ್ಪು ಮಾಹಿತಿ ಮತ್ತು ಸುಳ್ಳು ಮಾಹಿತಿ ಎಂಬುದರ ನಡುವಿನ ಸೂಕ್ಷ್ಮ ವ್ಯತ್ಯಾಸದ ಬಗ್ಗೆ ತಿಳಿಯೋಣ.

ತಪ್ಪು ಮಾಹಿತಿ ಅಥವಾ misinformation ಎಂದರೆ, ಸುಳ್ಳೆಂದು ತಿಳಿಯದೆ ಹಬ್ಬಿಸುವ ಮಾಹಿತಿ. ಎಷ್ಟೋ ಸಲ ಪಿತೂರಿಯ ಭಾಗವಾಗಿರುವ ಅದು, ಅದರ ಮರ್ಮ ಅರಿಯದೆ ಹಬ್ಬಿಸುವವರಿಂದಾಗಿ ಅನಾಹುತಗಳಿಗೆ ಕಾರಣವಾಗಬಹುದು.

ಇನ್ನು ಸುಳ್ಳು ಮಾಹಿತಿ ಅಥವಾ disinformation ಜನರನ್ನು ದಾರಿ ತಪ್ಪಿಸಲೆಂದು ಉದ್ದೇಶಪೂರ್ವಕವಾಗಿಯೇ ಹರಡುವ ಮಾಹಿತಿಯಾಗಿದೆ.

ಭಾರತದಲ್ಲಿ ಇಂಥ ತಪ್ಪು ಮಾಹಿತಿ ಮತ್ತು ಸುಳ್ಳು ಮಾಹಿತಿಯ ಅಪಾಯಗಳು ಉಳಿದೆಲ್ಲ ದೇಶಗಳಿಗಿಂತ ಹೆಚ್ಚು ಸಂಭವಿಸಲಿವೆ ಎಂಬುದು ಜಾಗತಿಕ ಅಪಾಯಗಳ ವರದಿಯಲ್ಲಿ ವ್ಯಕ್ತವಾಗಿರುವ ಕಳವಳ. ಎಷ್ಟರ ಮಟ್ಟಿಗೆಂದರೆ, ಸಾಂಕ್ರಾಮಿಕ ರೋಗಗಳು, ಆರ್ಥಿಕ ಅಕ್ರಮಗಳು, ಸಂಪತ್ತು ಮತ್ತು ಆದಾಯದಲ್ಲಿನ ಅಸಮಾನತೆ ಹಾಗೂ ಕಾರ್ಮಿಕ ಕೊರತೆಗಳಿಂದ ಉಂಟಾಗಬಹುದಾದ ತೊಂದರೆಗಳಿಗಿಂತ ತಪ್ಪು ಮತ್ತು ಸುಳ್ಳು ಮಾಹಿತಿಗಳಿಂದ ಭಾರೀ ದೊಡ್ಡ ಅಪಾಯ ಭಾರತದಲ್ಲಿ ಎದುರಾಗಲಿದೆ.

ಭಾರತದಲ್ಲಿ ಹಿಂದಿನ ಚುನಾವಣೆ ವೇಳೆಯೂ ಹೇಗೆ ಸುಳ್ಳು ಮಾಹಿತಿಗಳನ್ನು ಹರಡಿ ಅನಾಹುತಗಳನ್ನು ಸೃಷ್ಟಿಸಲಾಯಿತು, ತನ್ನ ಗೆಲುವಿಗೆ ಹೇಗೆ ಆಡಳಿತಾರೂಢ ಪಕ್ಷ ಅದನ್ನು ಅಸ್ತ್ರವಾಗಿಸಿಕೊಂಡಿತು ಎಂಬುದು ಜಗಜ್ಜಾಹೀರಾಗಿರುವ ಸಂಗತಿ. ಈಗ ಮತ್ತೆ ಚುನಾವಣೆ ಬರುತ್ತಿರುವ ಹೊತ್ತಿನಲ್ಲಿ ಅಂಥದೇ ಅಪಾಯ ತಲೆದೋರಲಿರುವ ಬಗ್ಗೆ ಈ ಸಮೀಕ್ಷೆಯಲ್ಲಿ ಸುಳಿವುಗಳು ಕಾಣಿಸಿವೆ.

ವರ್ಲ್ಡ್ ಎಕನಾಮಿಕ್ ಫೋರಮ್‌ನ 2024ರ ಜಾಗತಿಕ ಅಪಾಯಗಳ ವರದಿಯು ಕ್ಷಿಪ್ರ ತಾಂತ್ರಿಕ ಬದಲಾವಣೆ, ಆರ್ಥಿಕ ಅನಿಶ್ಚಿತತೆ, ಹೆಚ್ಚುತ್ತಿರುವ ತಾಪಮಾನ, ಸಂಘರ್ಷ ಮೊದಲಾದವುಗಳ ಹಿನ್ನೆಲೆಯಲ್ಲಿ ಮುಂದಿನ ದಶಕದಲ್ಲಿ ನಾವು ಎದುರಿಸಬಹುದಾದ ಕೆಲವು ತೀವ್ರ ಅಪಾಯಗಳನ್ನು ಗುರುತಿಸುತ್ತದೆ. ಅದರಲ್ಲೂ, ತಪ್ಪು ಮಾಹಿತಿಯು ಮುಂದಿನ ಎರಡು ವರ್ಷಗಳಲ್ಲಿ ಅತಿ ದೊಡ್ಡ ಜಾಗತಿಕ ಅಪಾಯವೆಂದು ಆ ವರದಿಯು ಗುರುತಿಸಿದೆ. ಇದು ಭಾರತವೂ ಸೇರಿದಂತೆ ಚುನಾವಣೆಗೆ ಸಜ್ಜಾಗುತ್ತಿರುವ 50ಕ್ಕೂ ಹೆಚ್ಚು ರಾಷ್ಟ್ರಗಳ ಪ್ರಜಾಪ್ರಭುತ್ವ ಪ್ರಕ್ರಿಯೆಗಳ ಮೇಲೆ ತನ್ನ ಕರಾಳ ನೆರಳು ಬೀರಲಿದೆ ಎಂದು ವರದಿ ಎಚ್ಚರಿಸಿದೆ.

ಮುಂದಿನ ಎರಡು ವರ್ಷಗಳಲ್ಲಿ ಜಗತ್ತಿನಾದ್ಯಂತ ಅಂದಾಜು 400 ಕೋಟಿ ಜನರು ತಮ್ಮ ಮತ ಚಲಾಯಿಸಲಿದ್ದಾರೆ. ಈ ಚುನಾವಣೆಗಳ ಮೇಲೆ ಸುಳ್ಳು ಮಾಹಿತಿಯ ಸಂಭಾವ್ಯ ಪರಿಣಾಮವು ವಿಶ್ವಾದ್ಯಂತ ಅಪಾಯಕಾರಿ ವಾತಾವರಣವನ್ನು ಸೃಷ್ಟಿಸಲಿದೆ. ಮುಂದಿನ ಎರಡು ವರ್ಷಗಳಲ್ಲಿ ಭಾರತ, ಅಮೆರಿಕ, ಇಂಗ್ಲೆಂಡ್, ಇಂಡೋನೇಶ್ಯ, ಮೆಕ್ಸಿಕೋ, ಪಾಕಿಸ್ತಾನ ಸೇರಿದಂತೆ ಹಲವಾರು ದೇಶಗಳು ಸಾರ್ವತ್ರಿಕ ಚುನಾವಣೆ ಎದುರಿಸಲಿವೆ. ತಪ್ಪು ಮತ್ತು ಸುಳ್ಳು ಮಾಹಿತಿಯ ವ್ಯಾಪಕ ಬಳಕೆ ಮತ್ತು ಅದನ್ನು ಪ್ರಸಾರ ಮಾಡುವ ಸಾಧನಗಳು ಮತದಾರರ ಮೇಲೆ ವ್ಯತಿರಿಕ್ತ ಪ್ರಭಾವ ಬೀರಬಹುದು. ಇಲ್ಲವೇ, ಹೊಸದಾಗಿ ಚುನಾಯಿತ ಸರಕಾರಗಳ ನ್ಯಾಯಸಮ್ಮತತೆಯನ್ನು ಪ್ರಶ್ನಿಸುವ ಸಂದರ್ಭಗಳು ಉಂಟಾಗಬಹುದು. ಪರಿಣಾಮವಾಗಿ ಅಶಾಂತಿ, ಹಿಂಸಾತ್ಮಕ ಪ್ರತಿಭಟನೆಗಳು ಮತ್ತು ದ್ವೇಷದ ಘಟನೆಗಳಿಂದಾಗಿ ಜನರ ನಡುವೆ ಸಂಘರ್ಷ ತಲೆದೋರಬಹುದು.

ಚುನಾವಣೆಗಳ ಹೊರತಾಗಿಯೂ, ವಾಸ್ತವದಲ್ಲಿ ತಪ್ಪು ಗ್ರಹಿಕೆಗಳ ಮೂಲಕ ಹೆಚ್ಚು ಧ್ರುವೀಕರಣದ ಸಾಧ್ಯತೆಯಿದೆ. ಸಾರ್ವಜನಿಕ ಆರೋಗ್ಯದಿಂದ ಸಾಮಾಜಿಕ ನ್ಯಾಯದವರೆಗಿನ ವಿಷಯಗಳ ಬಗ್ಗೆ ವಾಸ್ತವವನ್ನು ಮರೆಮಾಚುವ ಯತ್ನಗಳು ಮುಂದುವರಿಯಬಹುದು. ಹೀಗೆ ಸತ್ಯವನ್ನು ದುರ್ಬಲಗೊಳಿಸುವ ಯತ್ನದಲ್ಲಿ, ಮಾಧ್ಯಮಗಳ ಮೇಲಿನ ನಿಯಂತ್ರಣ ಮತ್ತು ಸೆನ್ಸಾರ್‌ಶಿಪ್ ಅಪಾಯವೂ ಹೆಚ್ಚಾಗುತ್ತದೆ. ತಪ್ಪು ಮತ್ತು ಸುಳ್ಳು ಮಾಹಿತಿಗೆ ಪ್ರತಿಕ್ರಿಯೆಯಾಗಿ, ಸರಕಾರ ತನಗೆ ಬೇಕಿರುವಂಥ ವಿಚಾರವನ್ನಷ್ಟೇ ಸತ್ಯವೆಂದು ಬಿಂಬಿಸುವುದು ನಡೆಯಲಿದೆ. ಅದಕ್ಕಾಗಿ ಮಾಹಿತಿಯನ್ನು ನಿಯಂತ್ರಿಸುವ ಕೆಲಸವೂ ಹೆಚ್ಚು ತೀವ್ರಗೊಳ್ಳಬಹುದು. ಅಂತರ್ಜಾಲಕ್ಕೆ ಸಂಬಂಧಿಸಿದ ಸ್ವಾತಂತ್ರ್ಯ, ಪತ್ರಿಕಾ ಮತ್ತು ವ್ಯಾಪಕ ಮಾಹಿತಿಯ ಮೂಲಗಳಿಗೆ ಈಗಾಗಲೇ ಜನಸಾಮಾನ್ಯರಿಗೆ ದೊಡ್ಡ ಮಟ್ಟದ ಅಡೆತಡೆ ಸೃಷ್ಟಿಯಾಗಿದ್ದು, ಅದು ಇನ್ನೂ ಹೆಚ್ಚಬಹುದು. ಮಾಹಿತಿಯ ವ್ಯಾಪಕ ದಮನಕ್ಕೆ ಸರಕಾರ ಇಳಿಯಬಹುದು.

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮೂಲಕ ಸೃಷ್ಟಿಸಲಾಗುವ ಸುಳ್ಳು ಮತ್ತು ತಪ್ಪು ದಾರಿಗೆಳೆಯುವ ಮಾಹಿತಿಗಳಿಂದ ಪ್ರಜಾಪ್ರಭುತ್ವ ನಾಶ ಮತ್ತು ಸಮಾಜದ ಧ್ರುವೀಕರಣದಂಥ ಸಂಭವನೀಯತೆಗಳು ದೊಡ್ಡ ಅಪಾಯವಾಗಿ ಪರಿಣಮಿಸಲಿವೆ ಎಂದು ವರದಿ ಹೇಳಿದೆ. ದೀರ್ಘಾವಧಿಯಲ್ಲಿ ಅತಿ ದೊಡ್ಡ ಅಪಾಯವನ್ನು ತರಲಿರುವ ಅಂಶವಾಗಿ ಪರಿಸರ ಅಪಾಯವನ್ನು ಅದು ಗುರುತಿಸಿದೆಯಾದರೂ, ಮುಂದಿನ ಎರಡು ವರ್ಷಗಳಲ್ಲಿ ತಪ್ಪು ಮತ್ತು ಸುಳ್ಳು ಮಾಹಿತಿಯು ಅತ್ಯಂತ ತೀವ್ರ ಅಪಾಯ ತರಲಿದೆ ಎಂದು ಅದು ಎಚ್ಚರಿಸಿದೆ. ತಂತ್ರಜ್ಞಾನದ ತ್ವರಿತ ಪ್ರಗತಿ ಹೊಸ ಸಮಸ್ಯೆಗಳನ್ನು ಹೇಗೆ ಸೃಷ್ಟಿಸುತ್ತಿದೆ ಮತ್ತು ಸ್ಥಿತಿಯನ್ನು ಹೇಗೆ ಹದಗೆಡಿಸುತ್ತಿದೆ ಎಂಬುದನ್ನು ವರದಿ ಎತ್ತಿ ಹೇಳಿದೆ. ಚಾಟ್ ಜಿಪಿಟಿಯಂಥ ತಂತ್ರಜ್ಞಾನದ ಬೆಳವಣಿಗೆಯು ಸಮುದಾಯಗಳನ್ನು ಧ್ರುವೀಕರಿಸುವ ಅಪಾಯ ತಂದೊಡ್ಡಿದೆ. ಈ ಉನ್ನತ ತಂತ್ರಜ್ಞಾನವನ್ನು ಮುಂದಿನ ದಿನಗಳಲ್ಲಿ ಪರಿಣಿತರು ಮಾತ್ರವಲ್ಲದೆ, ಯಾವುದೇ ವಿಶೇಷ ಕೌಶಲ್ಯ ಇಲ್ಲದವರೂ ಬಳಸಬಹುದಾಗಿದೆ ಎಂಬುದೇ ಅಪಾಯವನ್ನು ಇನ್ನಷ್ಟಾಗಿಸಲಿದೆ. ಸಂಶೋಧಕರು ಈ ಕಾರಣಕ್ಕಾಗಿಯೇ ಆತಂಕಗೊಂಡಿದ್ದಾರೆ.

ಸತ್ಯಕ್ಕಿಂತಲೂ ಬಹುಬೇಗ ಇಂಥ ಸುಳ್ಳು ಮಾಹಿತಿಗಳು ಹರಡುವುದರಿಂದ ಅವು ಉಂಟುಮಾಡುವ ಅನಾಹುತಗಳ ತೀವ್ರತೆಯೂ ಹೆಚ್ಚು. ಸತ್ಯವೇನೆಂಬುದು ಗೊತ್ತಾಗುವ ಮೊದಲೇ ಹಿಂಸಾಚಾರದಂಥ ಘಟನೆಗಳು ನಡೆದುಹೋಗಲು, ಅಮಾಯಕರಿಗೆ ಹಾನಿಯುಂಟು ಮಾಡಲು, ಆ ಮೂಲಕ ಅವುಗಳ ಹಿಂದಿರುವವರ ನಿಗದಿತ ಉದ್ದೇಶ ಸಾಧಿತವಾಗಲು ಅವು ಕಾರಣವಾಗುತ್ತವೆ.

ಡೀಪ್ ಫೇಕ್ ಮೂಲಕ ಸಮಾಜದಲ್ಲಿ ಶಾಂತಿ ನೆಮ್ಮದಿ ಕೆಡಿಸುವ, ದೊಡ್ಡ ಸಂಖ್ಯೆಯ ಜನರನ್ನು ಪ್ರಭಾವಿಸುವ ಮತ್ತು ಪ್ರಚೋದಿಸುವ ನಿಟ್ಟಿನಲ್ಲಿ ತಂತ್ರಜ್ಞಾನದ ದುರ್ಬಳಕೆ ಅನಿಯಂತ್ರಿತವಾಗಲಿದೆ ಎಂಬುದು ನಿಜಕ್ಕೂ ದಿಗಿಲುಗೊಳಿಸುವ ಸಂಗತಿಯಾಗಿದೆ. ಹೀಗಾದಾಗ, 1.ಜನರು ಸತ್ಯವನ್ನು ಪರಿಶೀಲಿಸುವುದು ಅಥವಾ ಸತ್ಯ ಯಾವುದು, ಸುಳ್ಳು ಯಾವುದು ಎಂದು ಬೇರ್ಪಡಿಸಲು ಆಗದೇ ಇರಬಹುದು; 2.ಸತ್ಯಕ್ಕಿಂತ ಸುಳ್ಳು ಹೆಚ್ಚು ಆಕರ್ಷಿಸುವುದರಿಂದ ಮತ್ತು ಪ್ರಚೋದಿಸುವುದರಿಂದ ಅದೇ ಅವರನ್ನು ಸತ್ಯದ ಮಗ್ಗುಲನ್ನು ಕಂಡುಕೊಳ್ಳದಂತೆ ತಡೆಯಬಹುದು; 3.ಇದು ಸಮಾಜಗಳು ಮತ್ತಷ್ಟು ಧ್ರುವೀಕರಣಗೊಳ್ಳುವುದಕ್ಕೆ ಕಾರಣವಾಗಬಹುದು; 4.ನ್ಯಾಯಸಮ್ಮತತೆಯನ್ನು ಪ್ರಶ್ನಿಸಲು ನಕಲಿ ಮಾಹಿತಿಗಳನ್ನು ಬಳಸುವುದು ಅತಿಯಾಗಬಹುದು.

5.ಆಗ ಪ್ರಜಾಸತ್ತೆಯ ಪ್ರಕ್ರಿಯೆಗಳೇ ಅಪಾಯದಲ್ಲಿ ಸಿಲುಕಬಹುದು.

ವಿಶ್ವ ಆರ್ಥಿಕ ವೇದಿಕೆಯ (ಡಬ್ಲ್ಯುಇಎಫ್) ವ್ಯವಸ್ಥಾಪಕ ನಿರ್ದೇಶಕಿ ಸಾದಿಯಾ ಝಾಹಿದಿ ಹೇಳಿರುವ ಪ್ರಕಾರ, ತಪ್ಪು ಮಾಹಿತಿ ಮತ್ತು ಸುಳ್ಳು ಮಾಹಿತಿಯು ವಿಶೇಷವಾಗಿ ಚುನಾವಣೆಗಳ ಸಂದರ್ಭದಲ್ಲಿ ಅತ್ಯಂತ ದೊಡ್ಡ ಅಪಾಯವಾಗಲಿದೆ. ಕಳೆದ ವರ್ಷ ಅದು 16ನೇ ಸ್ಥಾನದಲ್ಲಿದ್ದ ಅಪಾಯಕಾರಿ ಅಂಶವಾಗಿತ್ತು. ಆದರೆ ಈ ಬಾರಿ ಅದೇ ಮೊದಲ ಅಪಾಯವಾಗಿ ಕಂಡುಬಂದಿದೆ. ಅಂದರೆ ಆ ಮಟ್ಟಿಗೆ ಅದರ ದುರ್ಬಳಕೆಯ ತೀವ್ರತೆ ಉಲ್ಬಣಗೊಂಡಿದೆ.

ಆರ್ಥಿಕತೆ, ಪರಿಸರ, ಭೌಗೋಳಿಕ, ಸಾಮಾಜಿಕ ಮತ್ತು ತಾಂತ್ರಿಕ ಹೀಗೆ 34 ಅಪಾಯಗಳನ್ನು ಗಮನದಲ್ಲಿರಿಸಿಕೊಂಡು ನಡೆಸಿರುವ ವಿಶ್ಲೇಷಣೆಯಲ್ಲಿ ತಪ್ಪು ಮಾಹಿತಿ ಮತ್ತು ಸುಳ್ಳು ಮಾಹಿತಿ ಅತ್ಯಂತ ಅಪಾಯಕಾರಿ ಎಂದು ಪರಿಗಣಿತವಾಗಿದೆ. ಭಾರತದಲ್ಲಿ ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದೆ. 2019ರ ಚುನಾವಣೆಯಲ್ಲಿಯೂ ನಕಲಿ ಸುದ್ದಿಗಳು ಹೆಚ್ಚಾಗಿದ್ದವು. ವಾಟ್ಸ್‌ಆ್ಯಪ್ ಮತ್ತು ಫೇಸ್‌ಬುಕ್‌ನಂಥ ವೇದಿಕೆಗಳನ್ನು ಬಳಸಿಕೊಂಡು ಜನರ ನಡುವೆ ಸುಳ್ಳು ಮಾಹಿತಿಗಳನ್ನು ಹರಡುವುದು ದೊಡ್ಡ ಮಟ್ಟದಲ್ಲಿ ನಡೆದಿತ್ತು. ಸತ್ಯಕ್ಕಿಂತಲೂ ಬಹುಬೇಗ ಇಂಥ ಸುಳ್ಳು ಮಾಹಿತಿಗಳು ಹರಡುವುದರಿಂದ ಅವು ಉಂಟುಮಾಡುವ ಅನಾಹುತಗಳ ತೀವ್ರತೆಯೂ ಹೆಚ್ಚು. ಸತ್ಯವೇನೆಂಬುದು ಗೊತ್ತಾಗುವ ಮೊದಲೇ ಹಿಂಸಾಚಾರದಂಥ ಘಟನೆಗಳು ನಡೆದುಹೋಗಲು, ಅಮಾಯಕರಿಗೆ ಹಾನಿಯುಂಟು ಮಾಡಲು, ಆ ಮೂಲಕ ಅವುಗಳ ಹಿಂದಿರುವವರ ನಿಗದಿತ ಉದ್ದೇಶ ಸಾಧಿತವಾಗಲು ಅವು ಕಾರಣವಾಗುತ್ತವೆ.

ಭಾರತದಲ್ಲಿ ಕೋವಿಡ್ ಹೊತ್ತಿನಲ್ಲಿಯೂ ಇಂಥದೇ ಸುಳ್ಳು ಮಾಹಿತಿಗಳನ್ನು ಹಬ್ಬುವ ಮೂಲಕ ಸಮಸ್ಯೆ ಸೃಷ್ಟಿಯಾಗಿತ್ತು.

ಜಾಗತಿಕ ಅಪಾಯಗಳ ವರದಿ ಗಮನಿಸಿರುವಂತೆ, ಭಾರತದಲ್ಲಿ ಅಪಾಯಕ್ಕೆ ಕಾರಣವಾಗುವಲ್ಲಿ ತಪ್ಪು ಮತ್ತು ಸುಳ್ಳು ಮಾಹಿತಿಗಳೇ ಮೊದಲ ಸ್ಥಾನದಲ್ಲಿವೆ. ತಪ್ಪು ಮತ್ತು ಸುಳ್ಳು ಮಾಹಿತಿಯ ಪರಿಣಾಮಗಳ ಹೆಚ್ಚಿನ ಅಪಾಯವನ್ನು ಎದುರಿಸುತ್ತಿರುವ ಇತರ ದೇಶಗಳು - ಎಲ್ ಸಾಲ್ವಡಾರ್, ಸೌದಿ ಅರೇಬಿಯ, ಪಾಕಿಸ್ತಾನ, ರೊಮೇನಿಯಾ, ಐರ್‌ಲ್ಯಾಂಡ್, ಜೆಕಿಯಾ ಅಥವಾ ಜೆಕ್ ರಿಪಬ್ಲಿಕ್, ಅಮೆರಿಕ, ಸಿಯೆರಾ ಲಿಯೋನ್, ಫ್ರಾನ್ಸ್ ಮತ್ತು ಫಿನ್‌ಲ್ಯಾಂಡ್. ಈ ದೇಶಗಳಲ್ಲಿ ಮುಂಬರುವ ಎರಡು ವರ್ಷಗಳಲ್ಲಿ ತಪ್ಪು ಮಾಹಿತಿ ಮತ್ತು ಸುಳ್ಳು ಮಾಹಿತಿಗಳು ಅಪಾಯ ತರುವ 4ರಿಂದ 6ನೇ ಅಂಶಗಳಲ್ಲಿ ಒಂದಾಗಿರಲಿವೆ. ಇನ್ನು ಇಂಗ್ಲೆಂಡ್‌ನಲ್ಲಿ ತಪ್ಪು ಮಾಹಿತಿ ಮತ್ತು ಸುಳ್ಳು ಮಾಹಿತಿ ಅಪಾಯ ತರಬಲ್ಲ 11ನೇ ಅಂಶವಾಗಲಿದೆ.

ಚುನಾವಣಾ ಪ್ರಕ್ರಿಯೆಗಳಲ್ಲಿ ಈ ತಪ್ಪು ಮಾಹಿತಿ ಮತ್ತು ಸುಳ್ಳು ಮಾಹಿತಿಯ ಪರಿಣಾಮವಾಗಿ ರಾಜಕೀಯ ಅಶಾಂತಿ, ಹಿಂಸೆ ಮತ್ತು ಭಯೋತ್ಪಾದನೆ ತಲೆದೋರಬಹುದು ಮತ್ತು ಪ್ರಜಾ ಪ್ರಭುತ್ವ ಪ್ರಕ್ರಿಯೆಗಳ ಮೇಲೆ ದೀರ್ಘಕಾಲೀನ ದುಷ್ಪರಿಣಾಮಕ್ಕೆ ಎಡೆ ಮಾಡಿಕೊಡಬಹುದು ಎಂಬುದು ವರ್ಲ್ಡ್ ಇಕನಾಮಿಕ್ ಫೋರಮ್‌ನ ವಿಶ್ಲೇಷಕರ ಆತಂಕ.

ಇಂಥ ಅಪಾಯಗಳನ್ನು ತಡೆಯುವ 

ದಾರಿ ಯಾವುದು?

ನಮ್ಮ ದೇಶದಲ್ಲಿ ಸುಳ್ಳು ಮಾಹಿತಿಗಳು ಅವನ್ನು ಯಾವ ವಿವೇಚನೆಯೂ ಇಲ್ಲದೆ ಫಾರ್ವರ್ಡ್ ಮಾಡುವವರ ಕಾರಣದಿಂದಾಗಿ ಬಲು ವೇಗದಲ್ಲಿ ಹರಡುತ್ತವೆ. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಇಲ್ಲಿ ಕಡಿವಾಣ ಹಾಕಲಾಗಿದೆಯೇ ಹೊರತು ಹಾಗೆ ಸುಳ್ಳುಗಳನ್ನು ಹರಡುವುದಕ್ಕೆ ಕಡಿವಾಣವಿಲ್ಲವಾಗಿದೆ. ಸುದ್ದಿವಾಹಿನಿಗಳು ಕೂಡ ಸುಳ್ಳನ್ನು ಹರಡುವ ಸಂಚಿನ ಭಾಗವಾಗಿಯೇ ಕೆಲಸ ಮಾಡುತ್ತಿರುವುದು ಅಪಾಯಕಾರಿ.

ಹಾಗಾಗಿ ಮೊದಲನೆಯದಾಗಿ, ಯಾವುದೇ ಮಾಹಿತಿಯನ್ನು ಫಾರ್ವರ್ಡ್ ಮಾಡುವವರು ಅದರ ಸತ್ಯಾಸತ್ಯತೆಯ ಬಗ್ಗೆ ಸಣ್ಣ ವಿವೇಚನೆಯನ್ನಾದರೂ ಮಾಡಬೇಕಿರುತ್ತದೆ. ಅದನ್ನು ತಾನು ಯಾಕೆ ಮತ್ತು ಯಾರಿಗಾಗಿ ಫಾರ್ವರ್ಡ್ ಮಾಡಬಯಸುತ್ತೇನೆ ಎಂಬುದನ್ನು, ಅದು ನಿಜವಾಗಿಯೂ ಸತ್ಯವಾದ ಮಾಹಿತಿಯೇ ಎಂಬುದನ್ನು ವಿವೇಚನೆಗೆ, ವಿಮರ್ಶೆಗೆ ಒಳಪಡಿಸದೆ ಹೋದರೆ ಅಥವಾ ಅದು ಬೀರಬಹುದಾದ ಪರಿಣಾಮಗಳು ಏನು ಎಂಬುದನ್ನು ಗ್ರಹಿಸದೇ ಹೋದರೆ ಸಂಚಿನ ಸರಪಳಿಗೆ ಮತ್ತೊಂದು ಕೊಂಡಿ ಸೇರಿದಂತಾಗುತ್ತದೆ. ಹಾಗಾಗದಂತೆ ವೈಯಕ್ತಿಕ ಮಟ್ಟದಲ್ಲಾದರೂ ತಡೆಯುವುದು ಫಾರ್ವರ್ಡ್ ಮಾಡುವುದಕ್ಕಿಂತ ಮೊದಲಿನ ವಿವೇಚನೆಯಿಂದ ಸಾಧ್ಯ. ಮಾಹಿತಿಯಿಂದ ಪ್ರಚೋದನೆಗೆ ಒಳಗಾಗದೆ, ಅದರ ಉದ್ದೇಶ ಏನಿರಬಹುದು ಮತ್ತು ಅದು ದ್ವೇಷ ಹರಡುವ ಉದ್ದೇಶದ್ದಾಗಿದ್ದರೆ ಅದರ ಹಿಂದಿನ ಸಾಮಾಜಿಕ, ಆರ್ಥಿಕ, ರಾಜಕೀಯ ಹಿತಾಸಕ್ತಿಗಳು ಎಂಥವಿರಬಹುದು ಎಂಬುದನ್ನು ಅವನ್ನು ಮತ್ತೊಬ್ಬರಿಗೆ ಶೇರ್ ಮಾಡುವ ಮೊದಲು ಚಿಂತಿಸುವುದು ಅತ್ಯಗತ್ಯ.

ಅಧ್ಯಯನಗಳು ಹೇಳುವ ಹಾಗೆ, ಪ್ರಚೋದನಾಕಾರಿ ಮತ್ತು ಅತಿರೇಕದಿಂದ ಕೂಡಿರುವ ಮಾಹಿತಿಗಳು ಸುಳ್ಳು ಮಾಹಿತಿಗಳೇ ಆಗಿರುತ್ತವೆ. ಹಾಗಾಗಿ ಈ ಸತ್ಯವನ್ನು ಮೊದಲು ಗ್ರಹಿಸಬೇಕು ಮತ್ತು ಅದರ ಅಧಿಕೃತತೆಯನ್ನು ದೃಢಪಡಿಸಿಕೊಳ್ಳಬೇಕು.

ಸಾಮಾಜಿಕ ಜಾಲತಾಣ ಬಳಕೆದಾರರನ್ನು, ತಪ್ಪು ಮಾಹಿತಿ ಮತ್ತು ಸುಳ್ಳು ಮಾಹಿತಿಗಳನ್ನು ಗುರುತಿಸಲು, ಇದರ ನಡುವೆ ನಿಜವಾಗಿಯೂ ಸತ್ಯ ಮತ್ತು ಅಧಿಕೃತ ಮಾಹಿತಿ ಯಾವುದೆಂಬುದನ್ನು ಕಂಡುಕೊಳ್ಳಲು ನಿಪುಣರನ್ನಾಗಿಸುವುದು, ಅವರನ್ನು ಸಮರ್ಥರನ್ನಾಗಿಸುವ ನಿಟ್ಟಿನ ಯತ್ನಗಳು ಇವುಗಳ ಅಪಾಯವನ್ನು ತಡೆಯಬಹುದಾದ ಮತ್ತೊಂದು ಮಾರ್ಗ.

ಮೂರನೆಯದಾಗಿ, ಶೈಕ್ಷಣಿಕ ಸಂಸ್ಥೆಗಳಲ್ಲಿ ಮಾಧ್ಯಮ ಸಾಕ್ಷರತೆ ಕೋರ್ಸ್‌ಗಳನ್ನು ಕಡ್ಡಾಯಗೊಳಿಸುವುದು ಇವತ್ತಿನ ಸನ್ನಿವೇಶದಲ್ಲಿ ತೀರಾ ನಿರ್ಣಾಯಕವಾಗಿದೆ.

ನಾಲ್ಕನೆಯದಾಗಿ, ಫ್ಯಾಕ್ಟ್ ಚೆಕಿಂಗ್ ಸೌಲಭ್ಯ ಒದಗಿಸುವುದು ಮತ್ತು ಅಪಾಯಕಾರಿ ಮಾಹಿತಿಗಳ ಬಗ್ಗೆ ಎಚ್ಚರಿಕೆ ನೀಡುವ ಯತ್ನಗಳೂ ಆಗಬೇಕಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಆರ್.ಜೀವಿ

contributor

Similar News