ಬಿಜೆಪಿಯನ್ನು ಮಣಿಸಿ ಮುನ್ನುಗ್ಗುವುದೇ ವಿಪಕ್ಷ ಮೈತ್ರಿಕೂಟ?

Update: 2024-05-28 04:52 GMT
Editor : Ismail | Byline : ಆರ್.ಜೀವಿ

ಲೋಕಸಭಾ ಚುನಾವಣೆ ಘೋಷಣೆಯಲ್ಲಿಂದ ಈಗ ಆರು ಹಂತಗಳ ಮತದಾನ ಮುಗಿಯುವಾಗ ಚುನಾವಣಾ ಪ್ರಚಾರ ಹಾಗೂ ಅಖಾಡ ಏನೆಲ್ಲಾ ಪಲ್ಲಟಗಳನ್ನು ಕಂಡಿದೆ? ಪ್ರಮುಖ ನಾಯಕರಾದ ಪ್ರಧಾನಿ ಮೋದಿ ಹಾಗೂ ರಾಹುಲ್ ಗಾಂಧಿ ಜೊತೆಗೆ ಅಖಿಲೇಶ್, ತೇಜಸ್ವಿ ಅವರ ಚುನಾವಣಾ ಪ್ರಚಾರ, ಅವರಿಗೆ ಸಿಗುವ ಜನರ ಪ್ರತಿಕ್ರಿಯೆ ಹೇಗೆಲ್ಲ ಬದಲಾಗುತ್ತಾ ಹೋಗಿದೆ? ದೇಶದಲ್ಲಿನ ರಾಜಕೀಯ ವಾತಾವರಣ ಹೇಗೆಲ್ಲ ತಿರುವು ಪಡೆದುಕೊಂಡಿದೆ? ಇನ್ನೊಂದೇ ಹಂತದ ಮತದಾನ ಉಳಿದಿರುವಾಗ ಈ ಚುನಾವಣೆಯಲ್ಲಿ ಏನಾಗಬಹುದು ಎಂಬ ಸ್ಪಷ್ಟ ಚಿತ್ರಣ ಜನರೆದುರು ಬಂದಾಗಿದೆಯೇ? ಅಥವಾ ಇವೆಲ್ಲವನ್ನೂ ಮೀರಿದ ಬೇರೆಯೇ ಚುನಾವಣಾ ಆಟ ಈ ಬಾರಿ ನಡೆಯಲಿದೆಯೇ?

ದೇಶದಲ್ಲಿನ ಚುನಾವಣಾ ರಾಜಕೀಯ ಎಪ್ರಿಲ್‌ನಲ್ಲಿ ಕಾಣಿಸುತ್ತಿದ್ದುದಕ್ಕೂ ಮೇನಲ್ಲಿ ಕಾಣಿಸುತ್ತಿರುವುದಕ್ಕೂ ದೊಡ್ಡ ಅಂತರವನ್ನು ಗುರುತಿಸಲಾಗುತ್ತಿದೆ. ಜೂನ್‌ನಲ್ಲಿ ದೇಶದ ರಾಜಕೀಯದಲ್ಲಿ ಬಹುದೊಡ್ಡ ಪಲ್ಲಟ ಸಾಧ್ಯವೇ ಎಂಬ ಕುತೂಹಲ ಈಗ ಮೂಡಿದೆ.

೪೦೦ಕ್ಕೂ ಅಧಿಕ ಸೀಟುಗಳನ್ನು ಗೆಲ್ಲುತ್ತೇವೆ ಎನ್ನುತ್ತಿದ್ದವರು ೨೦೦ರ ಗಡಿ ದಾಟುವುದೇ ಕಷ್ಟ ಅಥವಾ ಮುನ್ನೂರು ತಲುಪುವುದೇ ಅಸಾಧ್ಯ ಎನ್ನುವಂತಹ ಸ್ಥಿತಿ ತಲೆದೋರಿರುವ ಸುಳಿವುಗಳಿವೆ. ವಿಶ್ವಗುರು, ಮೂರನೇ ದೊಡ್ಡ ಆರ್ಥಿಕತೆ ಎಂದೆಲ್ಲ ಚುನಾವಣೆಗೆ ಹೊರಟಿದ್ದ ಬಿಜೆಪಿ ಕ್ರಮೇಣ ಅದನ್ನೆಲ್ಲ ಬಿಟ್ಟು ಹಿಂದೂ-ಮುಸ್ಲಿಮ್ ವಿಚಾರಕ್ಕೇ ಇಳಿದುಬಿಡುವ ಅನಿವಾರ್ಯತೆ ಸೃಷ್ಟಿಯಾಯಿತು. ಮಂದಿರ ಮುಂದಿಟ್ಟುಕೊಂಡು ಮೋಡಿ ಮಾಡಬಹುದು ಎಂಬ ಭ್ರಮೆಯೂ ಕಳಚಿದ ಬಳಿಕ ಯಥಾ ಪ್ರಕಾರ ನಿರಂತರ ಮುಸ್ಲಿಮ್ ದ್ವೇಷದ ಅಸ್ತ್ರ ಝಳಪಿಸುವುದೂ ನಡೆಯಿತು. ಹತಾಶೆಯ ಪರಮಾವಧಿಯಲ್ಲಿ ಬಿಜೆಪಿಯ ಘಟಾನುಘಟಿ ನಾಯಕರು ಮಾನಸಿಕ ಸಮತೋಲವನ್ನೇ ಕಳೆದುಕೊಂಡದ್ದರ ಬಗ್ಗೆ ವಿಪಕ್ಷ ನಾಯಕರು ಆರೋಪಿಸಿದ್ದೂ ಆಗಿದೆ. ಈ ನಡುವೆ, ಚುನಾವಣೆ ಘೋಷಿಸುವಾಗ ‘ಲೆವೆಲ್ ಪ್ಲೇಯಿಂಗ್ ಫೀಲ್ಡ್’ ಎಂದು ಹಲವು ಬಾರಿ ಉಲ್ಲೇಖಿಸಿ ತನ್ನ ಬೆನ್ನು ತಾನೇ ತಟ್ಟಿಕೊಂಡಿತ್ತು ಚುನಾವಣಾ ಆಯೋಗ. ಆಮೇಲೆ ಲೆವೆಲ್ ಪ್ಲೇಯಿಂಗ್ ಫೀಲ್ಡ್ ಎಂದರೇನು ಎಂಬುದನ್ನೇ ಮರೆತಿರುವುದು ಮಾತ್ರವಲ್ಲ ತನ್ನ ಪತ್ತೆಯನ್ನೇ ಕಳೆದುಕೊಂಡು ತೆರೆಹಿಂದೆ ಸರಿದಂತಹ ನಡವಳಿಕೆ ತೋರಿಸಿದ್ದೂ ಚರ್ಚೆಗೆ ಒಳಗಾಯಿತು.

ಚುನಾವಣೆ ಶುರುವಾದಾಗಿನಿಂದ ಈಗ ೬ನೇ ಹಂತ ಮುಗಿಯುತ್ತಿರುವ ಹೊತ್ತಿನವರೆಗಿನ ಕೆಲವು ಚಿತ್ರಗಳು ಬಿಂಬಿಸುತ್ತಿರುವ ವಾಸ್ತವವೇನು?

ಮೊದಲ ಹಂತದ ಮತದಾನಕ್ಕೆ ಒಂದೇ ದಿನ ಬಾಕಿಯಿದ್ದಾಗ, ಅಂದರೆ ಎಪ್ರಿಲ್ ೧೮ರಂದು ಬಿಜೆಪಿ ನಾಜೂಕಾಗಿ ತನ್ನ ಹಳೇ ಅಸ್ತ್ರ ಪ್ರಯೋಗಿಸಿತ್ತು. ಸೋಷಿಯಲ್ ಮೀಡಿಯಾದಲ್ಲಿನ ತನ್ನ ಪೋಸ್ಟ್‌ನಲ್ಲಿ ಬಿಜೆಪಿ, ಒಂದು ಮತದ ಶಕ್ತಿ ಎಂದು ಹೇಳುತ್ತ, ಅದರೊಂದಿಗೆ ರಾಮನ ವಿಗ್ರಹದ ಚಿತ್ರ ಬಳಸಿತ್ತು. ಬಿಜೆಪಿಯ ಆ ಟ್ವೀಟ್ ಚುನಾವಣೆಗೆ ಬಾಕಿಯಿರುವ ೪೮ ಗಂಟೆಗಳ ಅವಧಿಯಲ್ಲಿ, ಅಭ್ಯರ್ಥಿಗಳು ಮತ್ತು ಪಕ್ಷಗಳು ಯಾವುದೇ ರೂಪದಲ್ಲೂ ಪ್ರಚಾರ ಮಾಡದೆ ಇರಬೇಕಿರುವ ಅವಧಿಯಲ್ಲಿಯೇ ಬಂದಿತ್ತು. ಮಾದರಿ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದ್ದ ಆ ನಡವಳಿಕೆ ಬಗ್ಗೆ ಚುನಾವಣಾ ಆಯೋಗ ಯಾವುದೇ ಕ್ರಮ ಕೈಗೊಂಡ ಸುದ್ದಿಯಂತೂ ಇರಲಿಲ್ಲ.

ಮೊದಲ ಹಂತದ ಮತದಾನ ಮುಗಿದು, ಬಿಜೆಪಿಗೆ ಹಿನ್ನಡೆಯಾಗಲಿದೆ ಎಂಬ ಸೂಚನೆಗಳು ಸಿಗುತ್ತಿದ್ದ ಹಾಗೆಯೇ ಮೋದಿಯ ಅಸಲೀ ಮುಖ ಬಯಲಾಗತೊಡಗಿತ್ತು. ರಾಜಸ್ಥಾನದ ಬನ್‌ಸ್ವಾರಾದಲ್ಲಿನ ರ್ಯಾಲಿಯಲ್ಲಿ ಅಲ್ಪಸಂಖ್ಯಾತರ ವಿರುದ್ಧ ಅತ್ಯಂತ ಹೀನವಾಗಿ ಮಾತಾಡುವ ಮಟ್ಟಕ್ಕೆ ಮೋದಿ ಇಳಿದಿದ್ದರು. ಅದಕ್ಕೂ ಮೊದಲಿನ ಚುನಾವಣಾ ರ್ಯಾಲಿಯಲ್ಲಿ ಆಹಾರ ಪದ್ಧತಿ ಬಗ್ಗೆ ಮಾತಾಡಿ ಕೊಳಕು ಮನಃಸ್ಥಿತಿ ತೋರಿಸಿಕೊಂಡಿದ್ದ ಮೋದಿ, ಕಾಂಗ್ರೆಸ್ ಪ್ರಣಾಳಿಕೆಯನ್ನು ಟೀಕಿಸುವ ಭರದಲ್ಲಿ ಮುಸ್ಲಿಮ್ ಸಮುದಾಯದ ಬಗ್ಗೆ ಅಲ್ಲಸಲ್ಲದ ಮಾತಾಡಿದ್ದರು. ದೇಶದ ಜನರ ವೈಯಕ್ತಿಕ ಆಸ್ತಿಗಳನ್ನು ಕಸಿದು ಅದನ್ನು ಕಾಂಗ್ರೆಸ್ ಮುಸ್ಲಿಮರಿಗೆ ಹಂಚಲಿದೆ. ನಮ್ಮ ಹೆಣ್ಣು ಮಕ್ಕಳ ಮಂಗಳಸೂತ್ರ ಕೂಡ ಉಳಿಯುವುದಿಲ್ಲ ಎಂದುಬಿಟ್ಟರು. ಹೆಚ್ಚು ಮಕ್ಕಳನ್ನು ಹೊಂದಿರುವವರು, ನುಸುಳುಕೋರರು ಎಂದೆಲ್ಲ ಮುಸ್ಲಿಮ್ ಸಮುದಾಯವನ್ನು ಪರೋಕ್ಷವಾಗಿ ನಿಂದಿಸಿದ್ದರು ಮತ್ತು ಅವರ ಆ ಎಲ್ಲ ಮಾತುಗಳು ಪೂರ್ತಿಯಾಗಿ ಆಧಾರ ರಹಿತವಾಗಿದ್ದವು, ಸುಳ್ಳಾಗಿದ್ದವು.

ಅದಾದ ಬಳಿಕ ಬಿಜೆಪಿಯ ಪ್ರಜಾಪ್ರಭುತ್ವ ವಿರೋಧಿ ನಡವಳಿಕೆ ಇನ್ನಷ್ಟು ಢಾಳಾಗಿ ಕಂಡಿತ್ತು. ಗುಜರಾತಿನ ಸೂರತ್ ಲೋಕಸಭಾ ಕ್ಷೇತ್ರದಲ್ಲಿ ನಾಮಪತ್ರ ಹಿಂಪಡೆಯುವುದಕ್ಕೆ ಎಪ್ರಿಲ್ ೨೨ ಕೊನೆಯ ದಿನವಾಗಿದ್ದಾಗಲೇ ಕಾಂಗ್ರೆಸ್ ಅಭ್ಯರ್ಥಿ ನೀಲೇಶ್ ಕುಂಭಾನಿ ನಾಮಪತ್ರ ತಿರಸ್ಕೃತಗೊಳ್ಳುವಂತೆ ಮಾಡಲಾಯಿತು. ಜೊತೆಗೆ ಬಿಎಸ್‌ಪಿ ಅಭ್ಯರ್ಥಿ ಹಾಗೂ ಏಳು ಪಕ್ಷೇತರರು ನಾಮಪತ್ರ ಹಿಂಪಡೆಯುವುದರೊಂದಿಗೆ ಬಿಜೆಪಿಯ ಮುಕೆೇಶ್ ದಲಾಲ್ ಅವಿರೋಧ ಆಯ್ಕೆಗೆ ದಾರಿಯಾಯಿತು. ಆಮೇಲೆ ಮಧ್ಯ ಪ್ರದೇಶದ ಇಂದೋರ್‌ನಲ್ಲಿ ಮತದಾನಕ್ಕೆ ಎರಡು ವಾರ ಇರುವಾಗ ಇಂದೋರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಮ್ ಜೊತೆ ಬಿಜೆಪಿಯವರೇ ಖುದ್ದು ನಿಂತು ನಾಮಪತ್ರ ವಾಪಸ್ ತೆಗೆಸಿ ತಮ್ಮೊಂದಿಗೆ ಕರೆದೊಯ್ದ, ಪ್ರಜಾಪ್ರಭುತ್ವದ ಅಣಕದಂತಹ ವಿದ್ಯಮಾನ ನಡೆಯಿತು.

ಮೊದಲ ಹಂತದ ಮತದಾನದ ಬಳಿಕ ಪ್ರಧಾನಿ ಮೋದಿ ಒಂದರ ಮೇಲೊಂದು ಸುಳ್ಳು ಶುರು ಮಾಡಿದ್ದರು.

ಪ್ರತಿದಿನ ಎಂಬಂತೆ ಒಂದೋ ಸುಳ್ಳು ಹೇಳುತ್ತಿದ್ದರು ಅಥವಾ ದ್ವೇಷ ಹರಡುತ್ತಿದ್ದರು. ಮಂಗಳಸೂತ್ರ ವಿಚಾರದ ಬಳಿಕ ಅವರು, ಇಂದಿರಾ ಗಾಂಧಿ ಹತ್ಯೆ ಬಳಿಕ ಅವರಿಗೆ ಸೇರಿದ ಸ್ವತ್ತು ಸರಕಾರದ ವಶವಾಗುವುದನ್ನು ತಪ್ಪಿಸಲು ರಾಜೀವ್ ಗಾಂಧಿ ಅವರು ಪಿತ್ರಾರ್ಜಿತ ಕಾನೂನನ್ನೇ ರದ್ದು ಮಾಡಿದರು ಎಂದರು. ಮೋದಿಯ ಆ ಹೇಳಿಕೆ ಕೂಡ ಸುಳ್ಳು ಎಂದು ಕಾಂಗ್ರೆಸ್ ಹೇಳಿತು. ಆನಂತರ, ಉತ್ತರ ಪ್ರದೇಶದಲ್ಲೇ ಬಿಜೆಪಿ ಕೋಟೆ ಅಲುಗಾಡುತ್ತಿರುವ ಸುಳಿವು ಸಿಕ್ಕ ಕೂಡಲೇ ಆದಿತ್ಯನಾಥ್ ಮತ್ತು ಮೋದಿ ಭಗವಾಧ್ವಜ ಬದಿಗಿಟ್ಟು ಮೀಸಲಾತಿ ಮಾತು ಶುರು ಮಾಡಿದ್ದರು. ಹಿಂದುಳಿದವರು ಮತ್ತು ದಲಿತರ ಮೀಸಲಾತಿಯನ್ನು ಕಿತ್ತು ಮುಸ್ಲಿಮರಿಗೆ ನೀಡಲು ಕಾಂಗ್ರೆಸ್ ಹೊರಟಿದೆ ಎಂದು ಹೇಳುವ ಮೂಲಕ ಮೋದಿ ತಮ್ಮ ಸುಳ್ಳುಗಳ ಸರಣಿ ಮುಂದುವರಿಸಿದ್ದರು.

ಹಿಂದುತ್ವದ ಕೋಟೆಯಂತಿದ್ದ ಯುಪಿ, ಮಧ್ಯ ಪ್ರದೇಶ, ರಾಜಸ್ಥಾನಗಳಲ್ಲಿ ಬಿಜೆಪಿಗೆ ಸೀಟು ಖೋತಾ ಆಗುವ ಸಾಧ್ಯತೆಯೇ ಹೆಚ್ಚು ಎಂಬ ಅಭಿಪ್ರಾಯಗಳಿವೆ. ಬಿಹಾರದಲ್ಲೂ ಮತದಾರ ಕೈಕೊಡುವ ಪರಿಸ್ಥಿತಿ ಬಿಜೆಪಿಯನ್ನು ಆತಂಕಕ್ಕೆ ದೂಡಿದೆ. ಯುಪಿ. ಬಿಹಾರವನ್ನು ಗೆದ್ದವರು ಅಧಿಕಾರಕ್ಕೆ ಬರುವುದು ಖಚಿತ ಮತ್ತು ಅವೆರಡೂ ರಾಜ್ಯಗಳಲ್ಲಿ ಸೋತವರು ಅಧಿಕಾರ ಕಳೆದುಕೊಳ್ಳುವುದು ಈ ದೇಶದ ರಾಜಕೀಯ ಸಂದರ್ಭದಲ್ಲಿ ನಡೆದುಬಂದಿದೆ. ಯುಪಿ, ಬಿಹಾರ ಈ ಎರಡೂ ರಾಜ್ಯಗಳಲ್ಲಿ ಕೊನೆಯ ಹಂತದವರೆಗೂ ಚುನಾವಣೆಗಳು ನಡೆಯಲಿವೆ. ಈ ಎರಡೂ ರಾಜ್ಯಗಳಲ್ಲಿನ ಪ್ರಬಲ ದನಿಗಳಾಗಿ ಕೇಳಿಸುತ್ತಿರುವ ಅಖಿಲೇಶ್ ಯಾದವ್ ಮತ್ತು ತೇಜಸ್ವಿ ಯಾದವ್ ಅವರ ಕದನ ಆದಿತ್ಯನಾಥ್ ಅಥವಾ ನಿತೀಶ್ ಕುಮಾರ್ ವಿರುದ್ಧ ಅಲ್ಲವೇ ಅಲ್ಲ. ಅದು ನೇರವಾಗಿ ಮೋದಿ ವಿರುದ್ಧ. ಇಂತಹ ಸುಳಿವಿನ ಹಿನ್ನೆಲೆಯಲ್ಲಿಯೇ ಮೋದಿ ಪ್ರಚಾರ ಭಾಷಣಗಳು ಎರಡನೇ ಹಂತಕ್ಕೆ ಬರುವ ಹೊತ್ತಿಗೆ ದಿಕ್ಕನ್ನೇ ಬದಲಿಸಿದ್ದವು. ಅವು ವಿಭಜನೆ ಮತ್ತು ಕೋಮು ಧ್ರುವೀಕರಣದ ಕಡೆ ತಿರುಗಿದ್ದವು. ಸುಳ್ಳುಗಳ ಮೇಲೆ ಸುಳ್ಳುಗಳನ್ನು ಪೋಣಿಸುವುದು ನಡೆದಿತ್ತು.

ಇದರ ಜೊತೆಗೆ, ಕಡಿಮೆಯಾಗಿರುವ ಮತದಾನ, ಸಂಘ ಪರಿವಾರದ ಪ್ರಸಿದ್ಧ ಕಾರ್ಯಕರ್ತರ ಗೈರುಹಾಜರಿ, ಮೋದಿ ಪ್ರಚಾರ ನೀರಸವಾಗತೊಡಗಿರುವುದು ಇವೆಲ್ಲ ಎಲ್ಲವೂ ಸರಿಯಿಲ್ಲ ಎಂಬುದರ ಸೂಚನೆಯಾಗಿದೆ. ಒಡೆಯುವ ಧೋರಣೆ, ಕೋಮು ಧ್ರುವೀಕರಣವೇ ಮೋದಿಗೆ ಅನಿವಾರ್ಯವಾಗಿದೆ ಎನಿಸುವಂತೆ ಅವರ ಪ್ರಚಾರ ಭಾಷಣಗಳು ಕಾಣಿಸುತ್ತಿರುವುದು ಅವರ ಮತ್ತೊಂದು ಅವಧಿಯ ಲೆಕ್ಕಾಚಾರ ಎಲ್ಲೋ ತಪ್ಪಿದಂತಿದೆ ಎನ್ನಿಸುವುದಕ್ಕೆ ಕಾರಣ.

ಮೋದಿ ಪ್ರಚಾರ ಹೀಗೆ ಹತಾಶೆಯತ್ತ ಹೊರಳಿದಾಗ, ‘ಇಂಡಿಯಾ’ ಮೈತ್ರಿಕೂಟ ಬೆಳಗತೊಡಗಿದ್ದು ದೇಶದ ರಾಜಕೀಯದಲ್ಲಿನ ಗಮನಾರ್ಹ ಬೆಳವಣಿಗೆಯಾಗಿತ್ತು. ರಾಹುಲ್ ಗಾಂಧಿ, ಅಖಿಲೇಶ್ ಯಾದವ್, ತೇಜಸ್ವಿ ಯಾದವ್, ಉದ್ಧವ್ ಠಾಕ್ರೆ ಮೊದಲಾದ ವಿಪಕ್ಷ ನಾಯಕರು ಎತ್ತಿದ ಪ್ರಶ್ನೆಗಳು ಬಿಜೆಪಿ ಮತ್ತು ಮೋದಿಯ ಅಸಲಿ ಬಣ್ಣವನ್ನು ಬಯಲು ಮಾಡಿದ್ದವು. ನಮ್ಮ ಹೋರಾಟ ವೈಯಕ್ತಿಕವಾಗಿ ಮೋದಿ ವಿರುದ್ಧವಲ್ಲ, ಇದು ಎರಡು ಸಿದ್ಧಾಂತಗಳ ನಡುವಿನ ಹೋರಾಟವಾಗಿದೆ ಎಂದು ರಾಹುಲ್, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಬಹುತೇಕ ವಿಪಕ್ಷ ನಾಯಕರು ಪ್ರತಿಪಾದಿಸಿದ್ದರು. ಮೋದಿ ಮತ್ತೆ ಅಧಿಕಾರಕ್ಕೆ ಬಂದರೆ ಸಂವಿಧಾನವನ್ನೇ ಬದಲಿಸುತ್ತಾರೆ, ಮೀಸಲಾತಿಯನ್ನು ರದ್ದು ಮಾಡುತ್ತಾರೆ, ಸರ್ವಾಧಿಕಾರ ತರುತ್ತಾರೆ ಎಂದು ರಾಹುಲ್ ಗಾಂಧಿ ಸಹಿತ ಎಲ್ಲ ವಿಪಕ್ಷ ನಾಯಕರು ಜನರೆದುರು ಹೇಳತೊಡಗಿದರು. ಇದು ಬಿಜೆಪಿಯನ್ನು ವಿಚಲಿತಗೊಳಿಸಿತು. ಕೆಲವು ಬಿಜೆಪಿ ನಾಯಕರ ಹೇಳಿಕೆಗಳೂ ಈ ಆರೋಪಗಳಿಗೆ ಪೂರಕವಾಗಿಯೇ ಇದ್ದವು. ಹಾಗಾಗಿ ವಿಪಕ್ಷಗಳ ಈ ಆರೋಪಕ್ಕೆ ಸೂಕ್ತ ತಿರುಗೇಟು ನೀಡುವುದು ಬಿಜೆಪಿಗೆ ಸಾಧ್ಯವಾಗಲೇ ಇಲ್ಲ.

ಈ ನಡುವೆ ಮೋದಿ ಸತತವಾಗಿ ಮಡಿಲ ಮೀಡಿಯಾಗಳಿಗೆ ಕೊಟ್ಟಿದ್ದ ಸಂದರ್ಶನಗಳು ಬಿಜೆಪಿ ಪ್ರಚಾರದ ಭಾಗವೆಂಬಂತೆ ಇದ್ದವೇ ಹೊರತು ಮತ್ತೇನಿಲ್ಲ. ಡಝನ್ ಗಟ್ಟಲೆ ಸಂದರ್ಶನಗಳನ್ನು ಕೊಟ್ಟರೂ ಯಾವುದರಲ್ಲೂ ಹತ್ತು ವರ್ಷ ಅಧಿಕಾರ ನಡೆಸಿದ ಪ್ರಧಾನಿಗೆ ಕೇಳಬೇಕಾದ ಪ್ರಶ್ನೆಗಳು ಇರಲೇ ಇಲ್ಲ.

ಈ ಸಲದ ಚುನಾವಣೆಯಲ್ಲಿ ಮತದಾನ ಪ್ರಮಾಣದಲ್ಲಿ ದೊಡ್ಡ ಕುಸಿತ ಕಂಡಿದೆ. ಯೋಗೇಂದ್ರ ಯಾದವ್ ಅವರಂಥ ರಾಜಕೀಯ ವಿಶ್ಲೇಷಕರಿಗೆ ಇದು ಕೇಂದ್ರ ಸರಕಾರದ ಕಡೆಗಿನ ಮತದಾರನ ಉದಾಸೀನತೆ ಎಂಬಂತೆ ಕಾಣಿಸುತ್ತಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಪ್ರಭಾವವಿರುವ ಕ್ಷೇತ್ರಗಳಲ್ಲಿಯೇ ಮತದಾನದ ಕುಸಿತ ಹೆಚ್ಚಾಗಿದೆ ಎಂಬುದು ಅವರ ಪ್ರತಿಪಾದನೆ. ಇನ್ನೊಂದೆಡೆ, ಮೋದಿಯೇ ಈ ಸಲವೂ ಗೆಲ್ಲುವುದು ನಿಶ್ಚಿತ ಎಂದು ಮತದಾರರು ಆಗಲೇ ನಿರ್ಧರಿಸಿಬಿಟ್ಟಿದ್ದಾರೆ ಎಂಬ ವಾದಗಳೂ ಇವೆ.

ಪ್ರಮುಖವಾಗಿ ಕಾಣಿಸುತ್ತಿರುವ ಅಂಶಗಳು:

‘ದಿ ವೈರ್’ ಬರಹವೊಂದರಲ್ಲಿ ಉಲ್ಲೇಖವಾಗಿರುವಂತೆ,

೧.ವಿವಿಧ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ನಿರ್ಣಾಯಕ ಪಾತ್ರ ವಹಿಸುತ್ತಿರುವುದು ಖಚಿತವಾಗಿದೆ. ಮೋದಿ ಅಬ್ಬರಕ್ಕೆ ಕಡಿವಾಣ ಬಿದ್ದು, ಪ್ರಾದೇಶಿಕ ಪಕ್ಷಗಳು ಗೆಲುವಿನ ನಗೆ ಬೀರುವ ಸಾಧ್ಯತೆಯಿದೆ.

೨.ಸಂವಿಧಾನ ಬದಲಾಯಿಸಲು ಮತ್ತು ಮೀಸಲಾತಿ ತೆಗೆದುಹಾಕಲು ಬಿಜೆಪಿ ಬಯಸಿದೆ ಎಂಬ ಆತಂಕ ಸೃಷ್ಟಿಯಾಗಿದ್ದು, ‘ಚಾರ್ ಸೌ ಪಾರ್’ ಎಂಬ ಮೋದಿ ಸ್ಲೋಗನ್ ಅವರಿಗೇ ತಿರುಗುಬಾಣವಾಗಿದೆ.

೩.ಪ್ರತಿಪಕ್ಷಗಳ ಒಗ್ಗೂಡುವಿಕೆ ಹೆಚ್ಚಿನ ರಾಜ್ಯಗಳಲ್ಲಿ ಮತ ವಿಭಜನೆ ಆಗದಂತೆ ತಡೆಯಲಿದೆ.

೪.ಬಿಹಾರ ಮತ್ತು ಉತ್ತರ ಪ್ರದೇಶದಲ್ಲಿನ ಮೀಸಲಾತಿ ಪರ ಪ್ರಾದೇಶಿಕ ಪಕ್ಷಗಳು ತಮ್ಮಲ್ಲಿನ ಪ್ರಬಲವಲ್ಲದ ಜಾತಿಗಳ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ತಂತ್ರ ಅನುಸರಿಸಿರುವುದು ಪರಿಣಾಮಕಾರಿಯಾಗಲಿದೆ.

೫.ವಿವಿಧ ರಾಜ್ಯಗಳಲ್ಲಿ ಎನ್‌ಡಿಎ ಮಿತ್ರಪಕ್ಷಗಳ ವಿರುದ್ಧ ಆಡಳಿತ ವಿರೋಧಿ ಅಲೆ ಕಾಣಿಸಿದೆ. ಬಿಜೆಪಿಯ ಪ್ರಜಾಪ್ರಭುತ್ವ ವಿರೋಧಿ ಕುತಂತ್ರಗಳ ಬಗ್ಗೆಯೂ ಮತದಾರರು ಅಸಮಾಧಾನಗೊಂಡಿದ್ದಾರೆ.

ಇನ್ನೊಂದೆಡೆ, ತಮಿಳುನಾಡಿನಂಥ ರಾಜ್ಯಗಳಲ್ಲಿ ಪ್ರಮುಖ ಪ್ರಾದೇಶಿಕ ಪಕ್ಷಗಳೊಡನೆ ಮೈತ್ರಿ ಮಾಡಿಕೊಳ್ಳಲು ಅದಕ್ಕೆ ಸಾಧ್ಯವಾಗಿಲ್ಲ. ಅಲ್ಲದೆ, ಕರ್ನಾಟಕ, ಬಿಹಾರದಂತಹ ರಾಜ್ಯಗಳಲ್ಲಿ ಅದು ಮೈತ್ರಿ ಮಾಡಿಕೊಂಡಿರುವುದು ಕೂಡ ಈಗಾಗಲೇ ದುರ್ದೆಸೆಯಲ್ಲಿರುವ ಪಕ್ಷಗಳ ಜೊತೆಗೆ.

ಚುನಾವಣಾ ಲಾಭದ ಉದ್ದೇಶದಿಂದಲೇ ಅವಸರದಲ್ಲಿ ರಾಮಮಂದಿರ ಉದ್ಘಾಟನೆ ಮಾಡಿದ್ದ ಬಿಜೆಪಿ ನಿರೀಕ್ಷೆ ಹುಸಿಯಾಗಿದೆ. ಜನರು ನಿರುದ್ಯೋಗ, ಬೆಲೆಯೇರಿಕೆ, ಭ್ರಷ್ಟಾಚಾರ, ಭಯ, ಕೋಮುವಾದ, ಅಸಮಾನತೆ ಇತ್ಯಾದಿ ಸಮಸ್ಯೆಗಳ ಬಗ್ಗೆ ಹೆಚ್ಚು ಚಿಂತಿತರಾಗಿದ್ದಾರೆ. ಬಿಜೆಪಿಯ ಕೋಮುವಾದಿ ರಾಜಕೀಯ ಮಾದರಿಗೆ ಜನತೆ ಉತ್ಸಾಹ ತೋರಿಸಿಲ್ಲ. ಹಾಗಾಗಿ ಮೋದಿಯ ಚುನಾವಣಾ ಲೆಕ್ಕಾಚಾರ ಹುಸಿಗೊಂಡಿದೆ. ಮೋದಿ ದ್ವೇಷದ ಭಾಷಣಗಳು ಅಂಚಿನಲ್ಲಿರುವವರಿಗೆ ಬಗೆದಿರುವ ದ್ರೋಹ ಜನರ ಗ್ರಹಿಕೆಗೆ ಬಂದಿದೆ ಎಂಬಂತೆ ಕಾಣುತ್ತಿದೆ. ಬಿಜೆಪಿ ಪರವಾಗಿಯೇ ಮಾತಾಡುವ ಪ್ರಶಾಂತ್ ಕಿಶೋರ್‌ರಂತಹವರೂ ಬಿಜೆಪಿಗೆ ರಾಮ ಮಂದಿರದ ಹೆಸರಲ್ಲಿ ಒಂದೇ ಒಂದು ವೋಟು ಜಾಸ್ತಿಯಾಗಲ್ಲ ಎಂದಿದ್ದಾರೆ.

ಇನ್ನು ಕಾಂಗ್ರೆಸ್ ಮತ್ತು ಮೈತ್ರಿ ಪಕ್ಷಗಳು ನೀಡುತ್ತಿರುವಂತಹ ಗ್ಯಾರಂಟಿಗಳು ಜನರಲ್ಲಿ ಭರವಸೆ ಮೂಡಿಸುತ್ತಿವೆ.

ಅದು ತಿಂಗಳಿಗೆ ಸಾರ್ವಜನಿಕ ವಿತರಣಾ ವ್ಯವಸ್ಥೆ ಅಡಿಯಲ್ಲಿ ೩೫ ಕೆಜಿ ಅಕ್ಕಿಯ ಹೊರತಾಗಿ ಪ್ರತಿವ್ಯಕ್ತಿಗೆ ೧೦ ಕೆಜಿ ಉಚಿತ ಅಕ್ಕಿ ನೀಡುವ ಯೋಜನೆ, ಪ್ರತಿ ತಿಂಗಳು ಮನೆಯ ಒಬ್ಬ ಮಹಿಳೆಯ ಬ್ಯಾಂಕ್ ಖಾತೆಗೆ ೮,೫೦೦ ರೂ. ಹಾಕುವ ಯೋಜನೆ, ೩೦ ಲಕ್ಷ ಸರಕಾರಿ ಉದ್ಯೋಗ ನೇಮಕಾತಿ ಭರವಸೆ, ಅಗ್ನಿಪಥ ಯೋಜನೆಯನ್ನು ತೆಗೆದುಹಾಕುವ ಭರವಸೆ -ಇವುಗಳು ಬೆಲೆ ಏರಿಕೆ ಹಾಗೂ ನಿರುದ್ಯೋಗದಿಂದ ಕಂಗೆಟ್ಟ ಜನರನ್ನು ಆಕರ್ಷಿಸಿವೆ. ವಿಶೇಷವಾಗಿ ಮಹಿಳೆಯರು ಹಾಗೂ ಯುವಜನರು ಕಾಂಗ್ರೆಸ್‌ನ ಭರವಸೆಗಳಿಗೆ ದೊಡ್ಡ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ.

ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಹೇಳಿದ ಹಾಗೆ ಎಲ್ಲ ಗ್ಯಾರಂಟಿಗಳನ್ನು ಈಡೇರಿಸಿರುವುದೂ ಜನರಲ್ಲಿ ವಿಶ್ವಾಸ ಮೂಡಿಸಿದೆ.

ಉತ್ತರ ಪ್ರದೇಶ, ಬಿಹಾರಗಳಲ್ಲಿ ಕಾಂಗ್ರೆಸ್, ಆರ್‌ಜೆಡಿ ಹಾಗೂ ಎಸ್‌ಪಿ ಸಮಾವೇಶಗಳಲ್ಲಿ ಜನರು ಸ್ವಯಂಪ್ರೇರಿತರಾಗಿ ಬಂದು ಬಹುದೊಡ್ಡ ಸಂಖ್ಯೆಯಲ್ಲಿ ಸೇರಿದ್ದಾರೆ. ಇದು ‘ಇಂಡಿಯಾ’ ಒಕ್ಕೂಟದ ನಾಯಕರಲ್ಲಿ ಹೊಸ ಭರವಸೆ ಮೂಡಿಸಿದೆ. ಆದರೆ ಇದು ವೋಟಾಗಿ ಪರಿವರ್ತನೆ ಆಗಲಿದೆಯೇ ಎಂಬುದು ದೊಡ್ಡ ಪ್ರಶ್ನೆ.

ವಿಶ್ಲೇಷಕ ಹಾಗೂ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪತಿ ಡಾ. ಪರಕಾಲ ಪ್ರಭಾಕರ್ ಪ್ರಕಾರ, ಬಿಜೆಪಿಗೆ ಹೆಚ್ಚೆಂದರೆ ೨೩೦ ಸೀಟು ಬರಬಹುದು. ಎನ್‌ಡಿಎ ಮಿತ್ರಪಕ್ಷಗಳು ಒಟ್ಟಾರೆ ಗೆಲ್ಲುವ ಸೀಟುಗಳು ೩೫ ಇರಬಹುದು ಎಂದಾದರೆ, ಎನ್‌ಡಿಎ ಒಟ್ಟಾರೆ ೨೫೫ರಿಂದ ೨೬೫ ಸೀಟುಗಳನ್ನಷ್ಟೆ ಗೆಲ್ಲಲು ಸಾಧ್ಯ ಎಂದಿದ್ದಾರೆ ಅವರು. ಪರಕಾಲ ಪ್ರಕಾರ ಬಿಜೆಪಿ ಮತ್ತು ಎನ್‌ಡಿಎಯೇತರ ಸರಕಾರ ರಚನೆಯಾಗಲಿದೆ.

ಕಾಂಗ್ರೆಸ್ ಮಾಜಿ ವಕ್ತಾರ ಸಂಜಯ್ ಝಾ ಕೂಡ ‘ಇಂಡಿಯಾ’ ಮೈತ್ರಿಕೂಟದ ಗೆಲುವಿನ ನಿಚ್ಚಳ ಸಾಧ್ಯತೆಯ ಬಗ್ಗೆ ಹೇಳಿದ್ದಾರೆ. ಅವರ ಪ್ರಕಾರ, ಒಟ್ಟು ೫೩ ಸೀಟುಗಳನ್ನು ಬಿಜೆಪಿ ಕಳೆದುಕೊಳ್ಳಲಿದೆ. ಪರಿಣಾಮವಾಗಿ ಅದರ ಬಲ ೨೫೦ಕ್ಕೆ ಕುಸಿಯಲಿದೆ. ಇನ್ನು ಎನ್‌ಡಿಎ ಪಾಲುದಾರ ಪಕ್ಷಗಳು ಸ್ವತಂತ್ರವಾಗಿ ಬಲಶಾಲಿ ಪಕ್ಷಗಳಲ್ಲ. ಇದೇ ವೇಳೆ ಎನ್‌ಸಿಪಿ (ಶರದ್ ಪವಾರ್), ಉದ್ಧವ್ ಠಾಕ್ರೆಯ ಶಿವಸೇನೆ, ಸಮಾಜವಾದಿ ಪಕ್ಷ, ಆಮ್ ಆದ್ಮಿ ಪಕ್ಷ, ರಾಷ್ಟ್ರೀಯ ಜನತಾ ದಳ, ಜಾರ್ಖಂಡ್ ಮುಕ್ತಿ ಮೋರ್ಚಾ ಇತ್ಯಾದಿಗಳು ‘ಇಂಡಿಯಾ’ ಮೈತ್ರಿಕೂಟದ ಗೆಲುವಿನ ಸಾಧ್ಯತೆ ಹೆಚ್ಚಿಸಲಿವೆ.

ಈಗ ಬಹುಪಾಲು ಸೀಟುಗಳ ಮತದಾನ ಮುಗಿದಿದೆ. ೭ನೇ ಹಂತದಲ್ಲಿ ೫೭ ಸ್ಥಾನಗಳಿಗಷ್ಟೇ ಮತದಾನ ನಡೆಯಬೇಕಿದೆ. ಬೆದರಿಸಿಯೇ ಗೆಲ್ಲುತ್ತೇನೆ ಎಂಬ ಮೋದಿ ಭ್ರಮೆ ಕಳಚಿದೆ. ಫೆಬ್ರವರಿಯಲ್ಲಿ ಛಿದ್ರವಾಗುವ ಲಕ್ಷಣ ತೋರಿಸಿದ್ದ ‘ಇಂಡಿಯಾ’ ಒಕ್ಕೂಟ ಆಶ್ಚರ್ಯಕರ ರೀತಿಯಲ್ಲಿ ಪುಟಿದೆದ್ದಿದೆ. ಸುಳ್ಳುಗಳನ್ನು ಹೇಳಿಯೇ ಜನರನ್ನು ನಂಬಿಸುವ ಮೋದಿ ಯತ್ನ ಅಪಹಾಸ್ಯಕ್ಕೆ ತುತ್ತಾಗಿದೆ. ಯಾಕೆಂದರೆ ಜನರಿಗೆ ವಾಸ್ತವ ಏನೆಂಬುದು ತಿಳಿಯುತ್ತಿದೆ. ವಿಪಕ್ಷಗಳ ವಿರುದ್ಧದ ಅಪಪ್ರಚಾರವೂ ಮೋದಿ ಸುಳ್ಳುಗಳ ಮುಂದುವರಿಕೆಯೇ ಆಗಿದೆ ಎಂಬುದು ಬಯಲಾಗಿದೆ.

ಯಾವ ಸೋಶಿಯಲ್ ಮೀಡಿಯಾವನ್ನು ಬಳಸಿ ಕಳೆದ ಬಾರಿ ಬಿಜೆಪಿ ತನ್ನ ಪ್ರೊಪಗಂಡ ಹರಡಿತ್ತೋ, ಈ ಬಾರಿ ಅದೇ ಸೋಶಿಯಲ್ ಮೀಡಿಯಾ ಬಿಜೆಪಿಯ ಬಂಡವಾಳ ಬಯಲು ಮಾಡುತ್ತಿದೆ. ಎಲ್ಲಾ ಪ್ರಮುಖ ಟಿವಿ ಚಾನೆಲ್‌ಗಳು ಮೋದಿಯ ಗುಣಗಾನ ಮಾಡುತ್ತಿರುವಾಗ ರವೀಶ್ ಕುಮಾರ್, ಪುಣ್ಯ ಪ್ರಸೂನ್ ಬಾಜಪೇಯಿ, ಅಭಿಸಾರ್ ಶರ್ಮಾ, ಆಕಾಶ್ ಬ್ಯಾನರ್ಜಿ, ಮುಹಮ್ಮದ್ ಝುಬೇರ್‌ರಂತಹ ಹಿರಿಯ ಪತ್ರಕರ್ತರು ಸೇರಿದಂತೆ ಪ್ರಮುಖ ಮಡಿಲ ಮೀಡಿಯಾಗಳಿಂದ ಹೊರಬಂದ ನೂರಾರು ಪತ್ರಕರ್ತರು ಯೂಟ್ಯೂಬ್ ಮೂಲಕ ಕೋಟ್ಯಂತರ ಜನರಿಗೆ ಸತ್ಯ ತಲುಪಿಸಿದ್ದಾರೆ. ಧ್ರುವರಾಠಿ ಅವರಂತಹ ಯುಟ್ಯೂಬರ್‌ಗಳು ನಿರ್ಭೀತಿಯಿಂದ ಜನರ ಮುಂದೆ ವಾಸ್ತವ ಚಿತ್ರಣ ಇಟ್ಟಿದ್ದಾರೆ. ಕುನಾಲ್ ಕಾಮ್ರಾ, ಶ್ಯಾಮ್ ರಂಗೀಲಾ, ರಾಜೀವ್ ನಿಗಮ್‌ರಂತಹವರ ನೂರಾರು ಕಲಾವಿದರು, ಸಾಮಾಜಿಕ ಕಾರ್ಯಕರ್ತರೂ ಮೋದಿ ಆಡಳಿತದ ವಾಸ್ತವ ಏನು ಎಂದು ಹೇಳಿದ್ದಾರೆ.

ಇನ್ನು ಕಾಂಗ್ರೆಸ್ ಕೂಡ ಈ ಬಾರಿ ಸೋಷಿಯಲ್ ಮೀಡಿಯಾದಲ್ಲಿ ಭರ್ಜರಿಯಾಗಿಯೇ ಬಿಜೆಪಿಯನ್ನು ಕುಟುಕಿದೆ.

ಅದರ ಪೋಸ್ಟುಗಳು, ಸೃಜನಶೀಲ ಅನಿಮೇಷನ್ ವೀಡಿಯೋಗಳು, ಜಾಹೀರಾತುಗಳು ಜನರನ್ನು ಸೆಳೆದು ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದರೆ ಬಿಜೆಪಿಗೆ ಭಾರೀ ದುಬಾರಿಯಾದವು. ಉದ್ಧವ್ ಠಾಕ್ರೆಯ ಶಿವಸೇನೆಯಂತಹ ಪ್ರಾದೇಶಿಕ ಪಕ್ಷಗಳೂ ಈ ವಿಷಯದಲ್ಲಿ ಬಹಳ ಸಕ್ರಿಯವಾಗಿದ್ದವು.

ಒಟ್ಟಾರೆ ದೇಶದ ಇಡೀ ರಾಜಕೀಯ ವಾತಾವರಣವೇ ಬದಲಾದ ಹಾಗೆ ಕಾಣುತ್ತಿದೆ. ಈ ಚುನಾವಣೆ ಏಕಪಕ್ಷೀಯವಾಗಿ ನಡೆಯಲಿದೆ ಎಂಬ ಊಹೆಯಂತೂ ಸುಳ್ಳಾಗಿದೆ. ಆದರೆ ಸಂಚಲನ ಸೃಷ್ಟಿಸಿರುವ ರಾಹುಲ್ ಗಾಂಧಿ ಹಾಗೂ ‘ಇಂಡಿಯಾ’ ಒಕ್ಕೂಟ ನಿಜವಾಗಿಯೂ ಮತಗಳ ಮುನ್ನಡೆ ಪಡೆಯಲಿದೆಯೇ ಎಂಬುದು ದೊಡ್ಡ ಪ್ರಶ್ನೆ.

Writer - ವಾರ್ತಾಭಾರತಿ

contributor

Editor - Ismail

contributor

Byline - ಆರ್.ಜೀವಿ

contributor

Similar News