ಆರೋಗ್ಯದಲ್ಲಿ ಮತ್ತೆ ಏರುಪೇರು: ಸಂಸದ ರಮೇಶ್ ಜಿಗಜಿಣಗಿ ಆಸ್ಪತ್ರೆಗೆ ದಾಖಲು
ವಿಜಯಪುರ, ಮಾ.3: ವಿಜಯಪುರ ಬಿಜೆಪಿ ಸಂಸದ ರಮೇಶ್ ಜಿಗಜಿಣಗಿ ಆರೋಗ್ಯದಲ್ಲಿ ಮತ್ತೆ ಏರುಪೇರಾಗಿದ್ದು, ಈ ಹಿನ್ನೆಲೆಯಲ್ಲಿ ಅವರು ಬೆಳಗಾವಿ ನಗರದ ಕೆ.ಎಲ್.ಇ. ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕಾರ್ಯಕ್ರಮದ ನಿಮಿತ್ತ ಶನಿವಾರ ಬೆಳಗಾವಿಗೆ ತೆರಳಿದ್ದ ರಮೇಶ್ ಜಿಗಜಿಣಗಿಯವರಿಗೆ ರಾತ್ರಿ ವೇಳೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಕೆ.ಎಲ್.ಇ. ಆಸ್ಪತ್ರೆಗೆ ದಾಖಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ ಎಂದು ತಿಳಿದುಬಂದಿದೆ.
ಕಳೆದ ಜನವರಿ 28ರಂದು ಸಹ ವಿಜಯಪುರದಿಂದ ಬಾಗಲಕೋಟೆ ಮಾರ್ಗವಾಗಿ ಸಂಚರಿಸುತ್ತಿದ್ದ ವೇಳೆ ರಮೇಶ್ ಜಿಗಜಿಣಗಿಯವರಿಗೆ ದಿಢೀರ್ ಉಸಿರಾಟ ಸಮಸ್ಯೆ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಬಾಗಲಕೋಟೆ ಕುಮಾರೇಶ್ವರ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ರಮೇಶ್ ಜಿಗಜಿಣಗಿಯವರಿಗೆ ಮೆದುಳಿನಲ್ಲಿ ರಕ್ತಸ್ರಾವ ಉಂಟಾಗಿದೆ. ಎನ್ನಲಾಗಿದೆ. ಅವರ ಆರೋಗ್ಯ ಚಿಂತಾಜನಕವಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಹೇಳಿಕೆ ನೀಡಿರುವ ಬಿಜೆಪಿ ರಾಜ್ಯ ಉಪಾಧ್ಯಕ್ಷ ಅನಿಲ್ ಬೆನಕೆ, ರಮೇಶ್ ಜಿಗಜಿಣಗಿಯವರನ್ನು ಶನಿವಾರ ತಡ ರಾತ್ರಿ ಬೆಳಗಾವಿಯ ಕೆಎಲ್ಇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.